ಸ್ವಯಂಸೂಚನಾ ಪದ್ಧತಿ ೨

ಯೋಗ್ಯ ಪ್ರತಿಕ್ರಿಯೆ

ಅ. ಸ್ವಯಂಸೂಚನಾ ಪದ್ಧತಿಯ ಉಪಯುಕ್ತತೆ : ಅನೇಕ ಪ್ರಸಂಗಗಳಲ್ಲಿ ಮಕ್ಕಳಿಂದ ಯಾವುದಾದರೊಂದು ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಅಥವಾ ಅವರ ಮನಸ್ಸಿನಲ್ಲಿ ಪ್ರತಿಕ್ರಿಯೆ ಬರುತ್ತದೆ. ಅಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ದೋಷಗಳಿಂದ ಬರುತ್ತವೆ ಮತ್ತು ಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ಗುಣಗಳಿಂದಾಗಿ ಬರುತ್ತವೆ. ಸತತವಾಗಿ ಕೆಲವು ವಾರಗಳ ಕಾಲ ಸ್ವಯಂಸೂಚನೆಗಳನ್ನು ಕೊಡುವುದರಿಂದ ಮನಸ್ಸಿನಲ್ಲಿ ಅಯೋಗ್ಯ ಪ್ರತಿಕ್ರಿಯೆಗಳ ಬದಲು ಯೋಗ್ಯ ಪ್ರತಿಕ್ರಿಯೆಗಳು ಬರುತ್ತವೆ. ಇದರಿಂದ ಅಂತರ್ಮನಸ್ಸಿನಲ್ಲಿರುವ ದೋಷಗಳ ಸಂಸ್ಕಾರಗಳು ಕಡಿಮೆಯಾಗುತ್ತವೆ ಮತ್ತು ಗುಣಗಳ ಸಂಸ್ಕಾರಗಳು ನಿರ್ಮಾಣವಾಗಿ ಸ್ವಭಾವದಲ್ಲಿ ಒಳ್ಳೆಯ ಬದಲಾವಣೆಯಾಗುತ್ತದೆ. ಒಂದೆರಡು ನಿಮಿಷಗಳಿಗಿಂತ ಕಡಿಮೆ ಸಮಯ ಉಳಿಯುವ ಪ್ರಸಂಗಗಳಲ್ಲಿ ಅಯೋಗ್ಯ ಪ್ರತಿಕ್ರಿಯೆಯ ಬದಲಿಗೆ ಯೋಗ್ಯ ಪ್ರತಿಕ್ರಿಯೆ ಬರಬೇಕೆಂದು, ಈ ಸ್ವಯಂಸೂಚನೆಯ ಪದ್ಧತಿಯನ್ನು ಉಪಯೋಗಿಸುತ್ತಾರೆ.

ಆ. ಸ್ವಯಂಸೂಚನೆಯ ವಾಕ್ಯರಚನೆ : ‘ಯಾವಾಗ … ಪ್ರಸಂಗದಲ್ಲಿ ನಾನು … ಕೃತಿ / ವಿಚಾರವನ್ನು ಮಾಡುತ್ತಿರುವೆನೋ, ಆಗ … ಇಂತಹ ಯೋಗ್ಯ ಕೃತಿ / ವಿಚಾರವನ್ನು ಮಾಡುವುದರ ಮಹತ್ವವು ನನ್ನ ಗಮನಕ್ಕೆ ಬರುವುದು ಮತ್ತು … ಇಂತಹ ಯೋಗ್ಯ ಕೃತಿ /ವಿಚಾರವನ್ನು ನಾನು ಮಾಡುವೆನು.’

ಇ. ಸ್ವಯಂಸೂಚನಾ ಪದ್ಧತಿಯಿಂದ ದೂರಗೊಳಿಸಬಹುದಾದ ಸ್ವಭಾವದೋಷಗಳು : ಇತರರನ್ನು ಟೀಕಿಸುವುದು, ಕಿರಿಕಿರಿಯಾಗುವುದು, ಸಿಟ್ಟು ಬರುವುದು, ಜಗಳವಾಡುವುದು, ಪಶ್ಚಾತ್ತಾಪವೆನಿಸದಿರುವುದು, ಹಠಮಾರಿತನ, ಸಂಶಯವೃತ್ತಿ ಇತ್ಯಾದಿ.

ಈ. ಸ್ವಯಂಸೂಚನೆಗಳ ಉದಾಹರಣೆಗಳು :

ಪ್ರಸಂಗ ೧ – ಕು. ರಾಮದಾಸನು ಬಹಳ ಸಮಯ ಹೊರಗೆ ಆಟವಾಡುತ್ತಿದ್ದನು, ಇದರಿಂದ ಅವನ ಅಧ್ಯಯನವು ಆಗಿರಲಿಲ್ಲ. ಆದುದರಿಂದ ಅವನ ತಂದೆ, ‘ರಾಮದಾಸ, ಆಟ ಸಾಕು, ಇನ್ನು ಅಧ್ಯಯನ ಮಾಡು’ ಎಂದು ಹೇಳಿದರು. ರಾಮದಾಸನಿಗೆ ಆಡಬೇಕಾಗಿತ್ತು; ಅಧ್ಯಯನ ಬೇಡವಾಗಿತ್ತು. ಆದುದರಿಂದ ಅವನ ತಂದೆ ಅವನಿಗೆ ಅಧ್ಯಯನ ಮಾಡಲು ಹೇಳಿದಾಗ ಅವನಿಗೆ ಬೇಜಾರಾಯಿತು.

ಸ್ವಭಾವದೋಷ – ಬೇಜಾರೆನಿಸುವುದು

ಸ್ವಯಂಸೂಚನೆ – ಯಾವಾಗ ನನಗೆ ತಂದೆಯವರು ಆಟವನ್ನು ನಿಲ್ಲಿಸಿ ಅಧ್ಯಯನ (ಅಭ್ಯಾಸ) ಮಾಡಲು ಹೇಳಿದಾಗ ಬೇಜಾರಾಗುವುದೋ, ಆಗ ‘ನಾನು ಅಧ್ಯಯನ ಮಾಡಿ ಉತ್ತಮ ಅಂಕಗಳಿಂದ ಉತ್ತೀರ್ಣನಾಗಬೇಕೆಂದು ತಂದೆಯವರು ನನಗೆ ಆಟವನ್ನು ನಿಲ್ಲಿಸಲು ಹೇಳುತ್ತಿದ್ದಾರೆ’, ಎಂಬುದು ಅರಿವಾಗುವುದು ಮತ್ತು ನಾನು ಕೂಡಲೇ ಅಧ್ಯಯನಕ್ಕೆ ಕುಳಿತುಕೊಳ್ಳುವೆನು.

ಪ್ರಸಂಗ ೨ – ಕು. ಸಮರ್ಪಣನಿಗೆ ಶಿಕ್ಷಕರು ವರ್ಗಪ್ರಮುಖನಾಗಲು ಹೇಳಿದರು. ಆಗ ಅವನ ಮನಸ್ಸಿನಲ್ಲಿ ‘ನನಗೆ ಅಧ್ಯಯನವನ್ನು ಸಂಭಾಳಿಸಿ ವರ್ಗಪ್ರಮುಖನಾಗುವುದು ಸಾಧ್ಯವಿಲ್ಲ; ಏಕೆಂದರೆ ಇಷ್ಟು ಜನ ಮಕ್ಕಳನ್ನು ಸಂಭಾಳಿಸುವುದು ನನ್ನ ಕ್ಷಮತೆಗೆ ಮೀರಿದೆ’, ಎಂಬ ಪ್ರತಿಕ್ರಿಯೆ ಬಂದಿತು ಮತ್ತು ಅವನು ಶಿಕ್ಷಕರಿಗೆ ‘ನನಗೆ ವರ್ಗಪ್ರಮುಖನಾಗುವುದು ಸಾಧ್ಯವಿಲ್ಲ’, ಎಂದು ಹೇಳಿದನು.

ಸ್ವಭಾವದೋಷ – ಆತ್ಮವಿಶ್ವಾಸದ ಕೊರತೆ

ಸ್ವಯಂಸೂಚನೆ – ಯಾವಾಗ ಶಿಕ್ಷಕರು ನನಗೆ ವರ್ಗಪ್ರಮುಖನೆಂದು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೇಳುವರೋ, ಆಗ ‘ನನ್ನ ವ್ಯಕ್ತಿತ್ವದ ವಿಕಾಸವಾಗಲು ಇದೊಂದು ಉತ್ತಮ ಅವಕಾಶವಾಗಿದೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಹೇಳಿದ್ದನ್ನು ಒಪ್ಪಿಕೊಳ್ಳುವೆನು.

ಪ್ರಸಂಗ ೩ – ಹೊರಗೆ ಆಡುತ್ತಿರುವುದರಿಂದ ನಿಗದಿಪಡಿಸಿದ ಸಮಯಕ್ಕಿಂತ ತಡವಾಗಿ ಮನೆಗೆ ತಲುಪಿದ್ದರಿಂದ ಕು. ಪ್ರೇಮಾನಂದನಿಗೆ ಅವನ ತಂದೆ ‘ಎಲ್ಲಿ ಹೋಗಿದ್ದೆ’, ಎಂದು ಕೇಳಿದರು. ಆಗ ಅವನು ಅಪ್ಪನಿಗೆ ಸಿಟ್ಟಿನಿಂದ ಉತ್ತರಿಸಿದನು.

ಸ್ವಭಾವದೋಷ – ಸಿಟ್ಟು ಬರುವುದು ಮತ್ತು ಉದ್ಧಟತನ

ಸ್ವಯಂಸೂಚನೆ – ಮನೆಗೆ ತಡವಾಗಿ ತಲುಪಿದಾಗ ಯಾವಾಗ ತಂದೆ ನನಗೆ ‘ಎಲ್ಲಿ ಹೋಗಿದ್ದೆ’, ಎಂದು ಕೇಳಿದಾಗ ನನಗೆ ಸಿಟ್ಟು ಬರುವುದೋ, ಆಗ ‘ಅವರು ಅದನ್ನು ನನ್ನ ಒಳ್ಳೆಯದಕ್ಕಾಗಿ ಮತ್ತು ಅವರಿಗೆ ನನ್ನ ಬಗ್ಗೆ ಕಾಳಜಿಯಿದ್ದುದರಿಂದ ಕೇಳುತ್ತಿದ್ದಾರೆ’ ಎಂಬುದು ನನ್ನ ಗಮನಕ್ಕೆ ಬರುವುದು ಮತ್ತು ನಾನು ಅವರಿಗೆ ನಮ್ರವಾಗಿ ‘ಆಡುತ್ತಿದ್ದೆ’ ಎಂದು ಉತ್ತರಿಸುವೆನು.

ಪ್ರಸಂಗ ೪ – ಕು. ಶಿವಾನಂದನಿಗೆ ಪರೀಕ್ಷೆಯಲ್ಲಿ ಅಪೇಕ್ಷಿತವಿದ್ದಷ್ಟು ಅಂಕಗಳು ಸಿಗದಿದ್ದರಿಂದ ಅವನ ಮನಸ್ಸಿನಲ್ಲಿ ಕೀಳರಿಮೆ ನಿರ್ಮಾಣವಾಗಿತ್ತು, ಅವನಿಗೆ ‘ನನ್ನ ಬುದ್ಧಿಯೇ ಕಡಿಮೆಯಿದೆ. ನಾನು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ; ಹಾಗಾದರೆ ಬಹಳ ವಿದ್ಯಾಭ್ಯಾಸ ಮಾಡಿ ಏನು ಉಪಯೋಗ ?’ ಎಂಬ ವಿಚಾರ ಬಂತು.

ಸ್ವಭಾವದೋಷ – ಕೀಳರಿಮೆ

ಸ್ವಯಂಸೂಚನೆ – ಪರೀಕ್ಷೆಯಲ್ಲಿ ಅಪೇಕ್ಷಿತವಿರುವಷ್ಟು ಅಂಕಗಳು ಸಿಗದಿದ್ದರಿಂದ ಯಾವಾಗ ನನ್ನ ಮನಸ್ಸಿನಲ್ಲಿ ‘ನಾನು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ; ಹಾಗಾದರೆ ಬಹಳ ವಿದ್ಯಾಭ್ಯಾಸ ಮಾಡಿ ಏನು ಉಪಯೋಗ ?’, ಎಂಬ ಕೀಳರಿಮೆಯ ಭಾವನೆಯು ನಿರ್ಮಾಣವಾಗುವುದೋ, ಆಗ ನಾನು ‘ಸೋಲೇ ಗೆಲುವಿನ ಮೊದಲ ಮೆಟ್ಟಿಲು’, ಎಂಬ ಸುವಚನವನ್ನು ನೆನಪಿಸಿಕೊಂಡು ಉತ್ಸಾಹದಿಂದ ಪುನಃವಿದ್ಯಾಭ್ಯಾಸವನ್ನು ಆರಂಭಿಸುವೆನು.

(ಟಿಪ್ಪಣಿ : ಸ್ವಯಂಸೂಚನೆಯೊಂದಿಗೆ ಮನಸ್ಸಿಗೆ ಯೋಗ್ಯ ದೃಷ್ಟಿಕೋನವನ್ನು ಕೊಟ್ಟು ತಿಳಿಸಿ ಹೇಳಲೂ ಸಾಧ್ಯವಾಗುತ್ತದೆ. ಪರೀಕ್ಷೆಯಲ್ಲಿ ಅಪಯಶಸ್ಸು ಬಂದಾಗ ಕೀಳರಿಮೆ ನಿರ್ಮಾಣವಾದ ವಿದ್ಯಾರ್ಥಿಯು, ‘ವಿಜ್ಞಾನಿಗಳು ವಿಜ್ಞಾನದಲ್ಲಿನ ಹೊಸಹೊಸ ಸಂಶೋಧನೆಗಳನ್ನು ಮಾಡುತ್ತಾರೆ. ಅವರೆಲ್ಲರಿಗೂ ಪ್ರಾರಂಭದಲ್ಲಿ ಅಪಯಶಸ್ಸು ಸಿಗುತ್ತದೆ; ಆದರೆ ಅವರು ಅದರಿಂದ ಕೀಳರಿಮೆಗೆ ಒಳಪಡದೇ ಜಿಗುಟುತನದಿಂದ ಸಂಶೋಧನೆಯನ್ನು ಮುಂದುವರಿಸುತ್ತಲೇ ಇರುತ್ತಾರೆ. ಆದುದರಿಂದ ಅವರು ಕೊನೆಗೆ ಸಫಲರಾಗುತ್ತಾರೆ, ಹೀಗೆ ವಿಚಾರ ಮಾಡಬಹುದು.)