ಮಿತ್ರರೇ, ಬನ್ನಿ ನಾವು ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯ ವ್ಯಾಖ್ಯೆಯನ್ನು ತಿಳಿದುಕೊಳ್ಳೋಣ

೧.ವ್ಯಾಖ್ಯೆ

‘ಸ್ವಭಾವದೋಷ-ನಿರ್ಮೂಲನೆ’ ಅಂದರೆ ಸ್ವಭಾವದೋಷವನ್ನು ದೂರಗೊಳಿಸುವುದು. ’ಸ್ವಭಾವದೋಷ-ನಿರ್ಮೂಲನಾ ಪ್ರಕ್ರಿಯೆ’ ಅಂದರೆ ಸ್ವಭಾವದೋಷವನ್ನು ದೂರಗೊಳಿಸಲು ಇರುವ ಪದ್ಧತಿ ಹಾಗೂ ನಿಯಮಿತವಾಗಿ ಅವಲಂಬಿಸಬೇಕಾದ ಒಂದು ವಿಶಿಷ್ಟವಾದ ಪ್ರಕ್ರಿಯೆಯಾಗಿದೆ.

೨. ಸ್ವಭಾವದೋಷ-ನಿರ್ಮೂಲನೆಯ ಮಹತ್ತ್ವ

೨ಅ. ಸುಖಿ ಮತ್ತು ಆದರ್ಶ ಜೀವನವನ್ನು ನಡೆಸಲು ಸಾಧ್ಯವಾಗುವುದು : ಈ ಹಿಂದೆ ಸ್ವಭಾವದೋಷಗಳಿಂದ ಯಾವ ಹಾನಿಗಳಾಗುತ್ತವೆ ಎಂಬುದು ತಮ್ಮ ಗಮನಕ್ಕೆ ಬಂದಿರಬಹುದು. ಸ್ವಭಾವದೋಷಗಳಿಂದ ಜೀವನವು ದುಃಖಕರ ಹಾಗೂ ನಿರಾಶಾಜನಕವಾಗುತ್ತದೆ. ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆಯಿಂದ ದೋಷಗಳ ಮೇಲೆ ನಿಯಂತ್ರಣ ಇಡಲು ಸಾಧ್ಯವಾಗುವುದರಿಂದ ನಮ್ಮಲ್ಲಿ ಗುಣಗಳ ವಿಕಾಸವಾಗುತ್ತದೆ; ಇದರಿಂದ ಜೀವನವು ಸುಖಿ ಮತ್ತು ಆದರ್ಶವಾಗುತ್ತದೆ.

೨ಆ. ಸ್ವಭಾವದೋಷವನ್ನು ದೂರಗೊಳಿಸಿದರೆ ವ್ಯಕ್ತಿತ್ವದ ನಿಜವಾದ ವಿಕಾಸವನ್ನು ಸಾಧಿಸಲು ಸಾಧ್ಯವಾಗುವುದು : ಅನೇಕ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ಆದರ್ಶವನ್ನಾಗಿಸಲು ಉಚ್ಚಶಿಕ್ಷಣ ಪಡೆಯುವುದು, ಇಷ್ಟವಿರುವ ಕ್ಷೇತ್ರದಲ್ಲಿ ಕೌಶಲ್ಯವನ್ನು ವೃದ್ಧಿಸುವುದು, ವಿವಿಧ ಭಾಷೆಗಳ ಅಧ್ಯಯನ, ಸ್ಪರ್ಧೆ- ಪರೀಕ್ಷೆಗಳನ್ನೂ ಎದುರಿಸುವುದು, ವ್ಯಾಯಮ ಹಾಗೂ ಆಟದಿಂದ ಶರೀರವನ್ನು ಸಕ್ಷಮಗೊಳಿಸುವುದು ಇಂತಹ ಅನೇಕ ಮಾರ್ಗಗಳನ್ನು ಅವಲಂಬಿಸುತ್ತಾರೆ. ಮಕ್ಕಳೇ, ಅನೇಕ ಸ್ವಭಾವದೋಷಗಳಿರುವ ವ್ಯಕ್ತಿತ್ವವು ಯಾರಿಗಾದರೂ ಇಷ್ಟವಾಗುವುದೇ? ನಿಜವಾಗಿ ನೋಡಿದರೆ, ನಮ್ಮಲ್ಲಿರುವ ಹೆದರಿಕೆ, ಅಂಜಿಕೆ, ಇತರರೊಂದಿಗೆ ಮಾತನಾಡದಿರುವುದು, ಇತರರ ಬಗ್ಗೆ ವಿಚಾರ ಮಾಡದಿರುವುದು ಇಂತಹ ಸ್ವಭಾವದೋಷಗಳನ್ನು ದೂರಗೊಳಿಸಿದಾಗಲೇ ವ್ಯಕ್ತಿತ್ವದ ನಿಜವಾದ ವಿಕಾಸವಾಗುತ್ತದೆ. ಇಂತಹ ದೋಷರಹಿತ ವ್ಯಕ್ತಿತ್ವವೇ ಎದುರಿನಲ್ಲಿರುವ ವ್ಯಕ್ತಿಯ ಮೇಲೆ ಅಥವಾ ಸಮಾಜದಲ್ಲಿ ಪ್ರಭಾವ ಬೀರಬಲ್ಲುದು. ವ್ಯಕ್ತಿತ್ವದ ವಿಕಾಸವಾಗಲು ಸ್ವಭಾವದೋಷಗಳನ್ನು ದೂರಗೊಳಿಸುವುದು ಅನಿವಾರ್ಯವಾಗಿದೆ.

೨ಇ. ಜೀವನದಲ್ಲಿ ಉದ್ಭವಿಸುವ ಕಠಿಣ ಪ್ರಸಂಗಗಳನ್ನು ಸಹಜವಾಗಿ ಎದುರಿಸಲು ಸಾಧ್ಯವಾಗುವುದು : ಕಠಿಣ ಪ್ರಸಂಗಗಳಲ್ಲಿ ಬಹಳಷ್ಟು ಮಕ್ಕಳ ಮಾನಸಿಕ ಸಮತೋಲನವು ಕೆಡುತ್ತದೆ. ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆಯಿಂದ ಮನಸ್ಸು ಏಕಾಗ್ರ ಮತ್ತು ಗಂಭೀರವಾಗುವುದರೊಂದಿಗೆ ವಿವೇಕ ಬುದ್ಧಿಯೂ ಜಾಗೃತವಾಗುತ್ತದೆ. ಆದುದರಿಂದ ಕಠಿಣ ಪ್ರಸಂಗದಲ್ಲಿಯೂ ಸ್ಥಿರವಾಗಿರಲು ಸಾಧ್ಯವಾಗುವುದರ ಜೊತೆಗೆ ಅಯೋಗ್ಯ ಅಥವಾ ಕೆಟ್ಟ ವಿಚಾರ ಅಥವಾ ಕೃತಿ ಮಾಡುವುದರಿಂದ ಮನಸ್ಸನ್ನು ತಡೆಯಬಹುದು.

೨ಈ. ಸ್ಪರ್ಧಾತ್ಮಕ ಯುಗದಲ್ಲಿ ಅಗ್ರಸ್ಥಾನದಲ್ಲಿ ಇರಲು ಸಾಧ್ಯವಾಗುವುದು : ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯನ್ನು ಆಚರಣೆಯಲ್ಲಿ ತರುವುದರಿಂದ ಮನಸ್ಸಿನ ಶಕ್ತಿಯು ಅನಾವಶ್ಯಕ ವಿಷಯದಲ್ಲಿ ವ್ಯಯವಾಗುವುದಿಲ್ಲ. ಇದರಿಂದ ವ್ಯಕ್ತಿಯ ಕಾರ್ಯಕ್ಷಮತೆಯ ಪರಿಪೂರ್ಣವಾಗಿ ಉಪಯೋಗವಾಗುತ್ತದೆ ಹಾಗೂ ಸದ್ಯದ ಸ್ಪರ್ಧಾತ್ಮಕ ಯುಗದಲ್ಲಿ ಅಗ್ರಸ್ಥಾನದಲ್ಲಿ ಇರಲು ಸಾಧ್ಯವಾಗುತ್ತದೆ.

ಬಾಲಮಿತ್ರರೇ, ನಮ್ಮ ಜೀವನದಲ್ಲಿ ಸ್ವಭಾವದೋಷ-ನಿರ್ಮೂಲನೆಯ ಅನನ್ಯಸಾಧಾರಣವಾದ ಮಹತ್ತ್ವವನ್ನು ಗಮನದಲ್ಲಿಟ್ಟು ಸ್ವಭಾವದೋಷ – ನಿರ್ಮೂಲನೆಗಾಗಿ ಧೃಢ ನಿರ್ಧಾರವನ್ನು ಮಾಡೋಣ.