ಸ್ವಚ್ಛತೆಯ ರೂಢಿಯನ್ನು ಅಳವಡಿಸಿಕೊಳ್ಳಿರಿ

ಮಿತ್ರರೇ, ಎಲ್ಲಿ ಸ್ವಚ್ಛತೆಯಿರುತ್ತದೆಯೋ, ಅಲ್ಲಿ ವಾಸಿಸಲು ಎಲ್ಲರಿಗೂ ಒಳ್ಳೆಯದೆನಿಸುತ್ತದೆ. ಎಲ್ಲಿ ಸ್ವಚ್ಛತೆಯಿದೆಯೋ, ಅಲ್ಲಿ ಈಶ್ವರನ ವಾಸವಿರುತ್ತದೆ. ಅಸ್ವಚ್ಛ ಜಾಗದಲ್ಲಿ ಈಶ್ವರನು ಎಂದಿಗೂ ಇರುವುದಿಲ್ಲ. ಬಾಲಮಿತ್ರರೇ ಒಂದು ವೇಳೆ ನಿಮಗೆ ಈಶ್ವರನು ನಿಮ್ಮ ಮನೆಯಲ್ಲಿ ಇರಬೇಕು ಎಂದು ಅನಿಸಿದರೆ, ನೀವು ನಿಮ್ಮ ಕೋಣೆ, ಮನೆ, ಪಾಠಶಾಲೆಯ ಕೋಣೆ ಇತ್ಯಾದಿಗಳನ್ನು ಸ್ವಚ್ಛವಾಗಿ ಇಡುವುದನ್ನು ಕಲಿಯಿರಿ. ಈಗ ನಿಮ್ಮ ಮನಸ್ಸಿನಲ್ಲಿ ಸ್ವಚ್ಛತೆಯನ್ನು ಹೇಗೆ ಮಾಡಬೇಕು? ಎಂದು ಪ್ರಶ್ನೆ ಮೂಡಿರಬೇಕು.

ಎಲ್ಲಕ್ಕಿಂತ ಮೊದಲು ನಾವು ನಮ್ಮ ಸ್ವಚ್ಛತೆಯನ್ನು ಹೇಗೆ ಮಾಡಿಕೊಳ್ಳುತ್ತೇವೆ ಎಂದು ತಿಳಿದುಕೊಳ್ಳೋಣ.

  1. ಹಲ್ಲುಜ್ಜುವುದು, ಸ್ನಾನ ಮಾಡುವುದು, ಬಟ್ಟೆ ಒಗೆಯುವುದು ಇತ್ಯಾದಿಗಳನ್ನು ಮಾಡುವಾಗ ಗಡಿಬಿಡಿ ಮಾಡಬಾರದು. ಅವುಗಳನ್ನು ಶಾಂತವಾಗಿ ಹಾಗೂ ಸರಿಯಾಗಿ ಮಾಡಿರಿ.
  2. ಕೂದಲು ಬಾಚಿಕೊಳ್ಳುವಾಗ ಬಾಚಣಿಕೆಯನ್ನು ನಿಯಮಿತವಾಗಿ ಸಾಬೂನಿನ ನೀರಿನಿಂದ ಮತ್ತು ಬ್ರಶ್‌ನಿಂದ ಸ್ವಚ್ಛಗೊಳಿಸಬೇಕು.
  3. ಯಾವುದೇ ಪದಾರ್ಥವನ್ನು ತಿನ್ನುವ ಮೊದಲು ಹಾಗೂ ಊಟದ ಮೊದಲು ಎರಡೂ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು.
  4. ಹೊರಗಿನಿಂದ ಅಥವಾ ಆಟ ಆಡಿ ಮನೆಗೆ ಬಂದ ಬಳಿಕ ಕೈ ಕಾಲು ಹಾಗೂ ಮುಖವನ್ನು ಚೆನ್ನಾಗಿ ತೊಳೆಯಬೇಕು.
  5. ನೀವು ಬಟ್ಟೆಯನ್ನು ಧರಿಸಿದ ಬಳಿ ಅವುಗಳು ಕೊಳಕಾಗದಂತೆ ಗಮನದಲ್ಲಿಟ್ಟುಕೊಳ್ಳಬೇಕು. ಬಟ್ಟೆಯ ಮೇಲೆ ಮಣ್ಣು, ಶಾಯಿ ಅಥವಾ ಚಿತ್ರಗಳ ಬಣ್ಣ ತುಂಬುವಾಗ ಬಣ್ಣವು ಬಟ್ಟೆಯ ಮೇಲೆ ಅಥವಾ ಶರೀರದ ಮೇಲೆ ಬೀಳದಂತೆ ಎಚ್ಚರಿಕೆಯಿಂದಿರಬೇಕು.
  6. ಊಟ ಮಾಡುವಾಗ ಅಥವಾ ಬಡಿಸುವಾಗ ಪದಾರ್ಥಗಳು ಬಟ್ಟೆಯ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಬೇಕು.
  7. ರಾತ್ರಿ ಕಾಲು ತೊಳೆದುಕೊಂಡು ಮಲಗಬೇಕು. ಹಾಸಿಗೆಯ ಮೇಲೆ ಅಥವಾ ತಲೆದಿಂಬಿನ ಮೇಲೆ ಕಾಲು ಇಡಬಾರದು.
  8. ಪ್ರತಿದಿನ ಬೆಳಗ್ಗೆ ನಿಮ್ಮ ಕೋಣೆಯಲ್ಲಿ ಕಸ ಗುಡಿಸಬೇಕು. ಅದಕ್ಕಿಂತ ಮೊದಲು ಕೋಣೆಯ ಮೇಲ್ಛಾವಣಿಯ ಮೂಲೆಯಲ್ಲಿ ಜೇಡರ ಬಲೆಯ ಇದ್ದರೆ ಅದನ್ನು ಕೂಡ ತೆಗೆಯಬೇಕು.
  9. ಕೋಣೆಯಲ್ಲಿ ಕಸ ಗುಡಿಸುವಾಗ ಸೊಂಟವನ್ನು ಬಗ್ಗಿಸಿ ಕೋಣೆಯ ಒಳಗಿನಿಂದ ಹೊರಗಿನ ದಿಕ್ಕಿಗೆ ಕಸವನ್ನು ತೆಗೆಯಬೇಕು.
  10. ವಾರದಲ್ಲಿ ಒಂದು ದಿನ ಸ್ವಚ್ಛ ಬಟ್ಟೆಯಿಂದ ಕೋಣೆಯ ಬಾಗಿಲು, ಕಿಡಕಿ, ಫ್ಯಾನ್, ಟ್ಯೂಬಲೈಟ್, ಟಿ.ವಿ. ಕುರ್ಚಿ, ಟೇಬಲ, ಕಪಾಟು ಇತ್ಯಾದಿ ಒರೆಸಿರಿ.
  11. ಕೋಣೆಯಲ್ಲಿ ಕಸ ಗುಡಿಸಿದ ಬಳಿಕ ನೆಲವನ್ನು ನೀರಿನಿಂದ ಒರೆಸಿರಿ. ನೆಲವನ್ನು ಒರೆಸುವಾಗ ಜಲದೇವತೆಗೆ ‘ಹೇ ಜಲದೇವತೆ, ಈ ಸ್ವಚ್ಛ ನೀರಿನಿಂದ ಈ ಭೂಮಿಯಲ್ಲಿ ಬಂದಿರುವ ಕಷ್ಟದಾಯಕ ಆವರಣ ನಷ್ಟವಾಗಲಿ ಹಾಗೂ ಕೋಣೆಯು ನಿಮ್ಮ ಚೈತನ್ಯದಿಂದ ತುಂಬಲಿ’ ಎಂದು ಪ್ರಾರ್ಥನೆ ಮಾಡಬೇಕು. ನೆಲ ಒರೆಸುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಹಿಂಡಬೇಕು. ಈಗ ತುದಿಗಾಲಿನಲ್ಲಿ ಕುಳಿತುಕೊಂಡು ಬಲಗೈಯಲ್ಲಿ ಬಟ್ಟೆಯನ್ನು ತೆಗೆದುಕೊಂಡು ನೆಲವನ್ನು ಒರೆಸಿರಿ. ನೆಲವನ್ನು ಒಳಗಿನಿಂದ ಹೊರಗಿನ ದಿಕ್ಕಿಗೆ ಒರೆಸಬೇಕು. ಒರೆಸುವ ಬಟ್ಟೆಯನ್ನು ಸ್ವಚ್ಛ ನೀರಿನಲ್ಲಿ ಆಗಾಗ ನೆನೆಸಿ ಹಿಂಡಿರಿ. ನೆಲ ಒರೆಸಿ ಆದ ಬಳಿಕ ಬಟ್ಟೆಯನ್ನು ತೊಳೆದು ಒಣಗಿಸಿರಿ.
  12. ನೆಲ ಒರೆಸಿದ ಬಳಿಕ ಕೋಣೆಯಲ್ಲಿ ಅಗರಬತ್ತಿಯನ್ನು ಹಚ್ಚಿ ವಾಸ್ತುದೇವತೆಯಲ್ಲಿ ‘ಹೇ ವಾಸ್ತುದೇವತೆ, ಈ ವಾಸ್ತುವಿನಲ್ಲಿ ಸಾತ್ವಿಕತೆ ನಿರಂತರವಾಗಿರಲಿ’ ಎಂದು ಪ್ರಾರ್ಥಿಸಿರಿ.
  13. ಶೌಚಾಲಯವನ್ನು ಉಪಯೋಗಿಸಿದ ಬಳಿಕ ಒಂದು ವೇಳೆ ಶೌಚಾಲಯದಲ್ಲಿ ಕಾಲುಗಳ ಗುರುತು ಮೂಡಿದ್ದರೆ ಅದನ್ನು ನೀರಿನಿಂದ ತೊಳೆಯಿರಿ.
  14. ಸ್ನಾನ ಅಥವಾ ಬಟ್ಟೆಯನ್ನು ತೊಳೆದ ಬಳಿಕ ಸ್ನಾನದ ಕೋಣೆಯನ್ನು ಬ್ರಶ್‌ನಿಂದ ಸ್ವಚ್ಛಗೊಳಿಸಿರಿ.
  15. ಸ್ನಾನದ ಕೋಣೆಯಲ್ಲಿ ನೀರು ಹರಿದು ಹೋಗುವ ತೂಂಬಿನ ಮೇಳೆ ಶೇಖರಣೆಯಾಗುವ ಕೂದಲನ್ನು ರದ್ದಿ ಕಾಗದದ ತುಂಡಿನಿಂದ ತೆಗೆದು ಕಸದ ಡಬ್ಬಿಗೆ ಎಸೆಯಬೇಕು.
  16. ಸ್ನಾನದ ಕೋಣೆ ಹಾಗೂ ಶೌಚಾಲಯವನ್ನು ಬ್ರಶ್, ಸಾಬೂನಿನ ದ್ರಾವಣ ಹಾಗೂ ನೀರಿನಿಂದ ಪ್ರತಿದಿನ ಸ್ವಚ್ಛಗೊಳಿಸಬೇಕು.
  17. ಚಾಕಲೇಟ್ ಕಾಗದ, ಕಾಗದದ ತುಂಡು, ರಬ್ಬರಿನಿಂದ ಒರೆಸಿದ ಬಳಿಕ ಪುಸ್ತಕದ ಮೇಲೆ ಹರಡುವ ರಬ್ಬರಿನ ಕಣಗಳನ್ನು, ಪೆನ್ಸಿಲನ್ನು ಕೆತ್ತಿದ ಬಳಿಕ ಬರುವ ಕಟ್ಟಿಗೆಯ ತುಂಡು, ಹಣ್ಣಿನ ಸಿಪ್ಪೆ ಇತ್ಯಾದಿಗಳನ್ನು ನೆಲದ ಮೇಲೆ ಎಸೆಯದೇ ತಕ್ಷಣವೇ ಮನೆಯ ಕಸದ ಡಬ್ಬಿಗೆ ಹಾಕಬೇಕು.
  18. ಸ್ನಾನ ಮಾಡುವ ಹಾಗೂ ಬಟ್ಟೆ ತೊಳೆಯುವ ಬಕೀಟುಗಳನ್ನು ಪ್ರತ್ಯೇಕವಾಗಿ ಇಡಬೇಕು. ಸ್ನಾನ ಮಾಡುವ ಬಕೀಟಿನಲ್ಲಿ ಬಟ್ಟೆಗಳನ್ನು ತೊಳೆಯಬೇಡಿರಿ.
  19. ಸೈಕಲ್ ಉಪಯೋಗಿಸುತ್ತಿದ್ದರೆ ಅದನ್ನು ಪ್ರತಿದಿನ ಬಟ್ಟೆಯಿಂದ ಒರೆಸಿರಿ.
  20. ಲೋಟವನ್ನು ನೀರಿನ ಕೊಡದಲ್ಲಿ ಮುಳುಗಿಸಬೇಡಿರಿ. ನಳವಿಲ್ಲದ ನೀರಿನ ಕೊಡದಿಂದ ಕುಡಿಯಲು ನೀರನ್ನು ತೆಗೆದುಕೊಳ್ಳಲು ಉದ್ದನೆಯ ಹಿಡಿಕೆಯಿರುವ ಸೌಟು ಉಪಯೋಗಿಸಿರಿ. ನೀರಿನ ಲೋಟವನ್ನು ಹಿಡಿದುಕೊಳ್ಳುವಾಗ ಅದರಲ್ಲಿ ಬೆರಳನ್ನು ಅದ್ದಬೇಡಿರಿ.
  21. ಪ್ರವಾಸಕ್ಕೆ ಹೋಗುವ ಸಮಯದಲ್ಲಿ ಮಾರ್ಗದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಚಾಕಲೇಟ್ ಕಾಗದ, ಪ್ಲಾಸ್ಟಿಕ್ ಚೀಲಗಳು, ಹಣ್ಣುಗಳ ಸಿಪ್ಪೆ ಇತ್ಯಾದಿ ಕಸ ಎಸೆಯಬೇಡಿರಿ. ಅದನ್ನು ಸಾರ್ವಜನಿಕ ಕಸದ ಡಬ್ಬಿಯಲ್ಲಿ ಹಾಕಿರಿ.
  22. ಇದರೊಂದಿಗೆ ನಮ್ಮ ಮನಸ್ಸನ್ನು ಸ್ವಚ್ಛಗೊಳಿಸಿಕೊಳ್ಳುವುದು ಆವಶ್ಯಕವಿದೆ. ಅದನ್ನು ಹೇಗೆ ಮಾಡುವುದು?
    ನಮ್ಮ ಮನಸ್ಸು ಯಾವಾಗ ಶುದ್ಧ, ನಿರ್ಮಲ ಹಾಗೂ ಪವಿತ್ರವಾಗುವುದೋ, ಆಗಲೇ ಅದು ಸ್ವಚ್ಛವೆಂದು ಹೇಳಬಹುದು. ಮನಸ್ಸಿನಿಂದ ಸ್ವಚ್ಛವಾಗಿರುವ ವ್ಯಕ್ತಿ ಎಲ್ಲರಿಗೂ ಹಾಗೂ ಭಗವಂತನಿಗೂ ಇಷ್ಟವಾಗುತ್ತಾನೆ. ಮನಸ್ಸನ್ನು ಸ್ವಚ್ಛಗೊಳಿಸಲು ಸ್ವಭಾವದೋಷವನ್ನು ದೂರಗೊಳಿಸುವುದು ಹಾಗೂ ತನ್ನಲ್ಲಿ ಗುಣಗಳನ್ನು ಹೆಚ್ಚಿಸಿಕೊಳ್ಳುವುದು ಆವಶ್ಯಕವಾಗಿದೆ. ಇದಕ್ಕಾಗಿ ನಿಯಮಿತವಾಗಿ ಭಗವಂತನ ನಾಮಜಪವನ್ನು ಮಾಡಬೇಕು.

Leave a Comment