ಮಕ್ಕಳ ದಿನಚರಿಯು ಹೇಗಿರಬೇಕು ?

ಮಕ್ಕಳ ಪಾಲನೆಯನ್ನು ಮಾಡುವಾಗ ಸಂಕುಚಿತ ಸ್ವಭಾವ ಅಲ್ಲ,
ಸಾಧನೆಯ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು!

ನಮ್ಮ ಮಕ್ಕಳು ಆದರ್ಶ ಮತ್ತು ಸುಸಂಸ್ಕಾರಯುತರಾಗಬೇಕು ಎಂಬ ಇಚ್ಛೆಯು ಪ್ರತಿಯೊಬ್ಬ ಪಾಲಕರಲ್ಲಿ ಇರುತ್ತದೆ. ಈ ಧ್ಯೇಯ ಈಡೇರಿಸಲು ನಾವು ನಮ್ಮ ಮಕ್ಕಳಿಗೆ ಪ್ರತಿಯೊಂದು ಸೌಲಭ್ಯವನ್ನು ಒದಗಿಸುವ ಪ್ರಯತ್ನ ಮಾಡುತ್ತೇವೆ. ಆದರೆ, ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು, ಸಮಾಜದಲ್ಲಿ ಪ್ರತಿಷ್ಟಿತ ವ್ಯಕ್ತಿಯಾಗಬೇಕು ಎಂಬ ಸಂಕುಚಿತ ಧ್ಯೇಯ ನಮ್ಮದಾಗಿರುತ್ತದೆ. ಇದರಿಂದಾಗಿ ಮಗುವಿನ ಕ್ಷಮತೆ, ಇಷ್ಟ ಅನಿಷ್ಟಗಳು, ಅವರಲ್ಲಿರುವ ಗುಣ ಮತ್ತು ದೋಷಗಳ ಅಧ್ಯಯನವನ್ನು ನಾವು ಮಾಡದೆ ಅವರ ಮೇಲೆ ನಮ್ಮ ಆಸೆ ಆಕಾಂಕ್ಷೆಗಳನ್ನು ಹೇರುತ್ತೇವೆ. ಇದರಿಂದಾಗಿ ಈ ಪದ್ಧತಿಯಲ್ಲಿ ಇಬ್ಬರಿಗೂ ಸಮಾಧಾನ ಸಿಗುವುದಿಲ್ಲ. ಅದೇ, ನಾವು ಮಕ್ಕಳ ಪಾಲನೆಯನ್ನು ಮಾಡುವಾಗ ಸಾಧನೆಯ ದೃಷ್ಟಿಕೋನವನ್ನು ಇಟ್ಟುಕೊಂಡರೆ, ನಮಗೆ ಮತ್ತು ಮಕ್ಕಳಿಗೆ ಸಮಾಧಾನವಾಗುವುದಲ್ಲದೆ, ಅದರಿಂದ ಮಕ್ಕಳಲ್ಲಿ ಅವಶ್ಯಕವಿರುವ ಬದಲಾವಣೆಗಳು ಕೂಡ ನೋಡಲು ಸಿಗುತ್ತವೆ. ಆದುದರಿಂದ, ಸರ್ವೇಸಾಮಾನ್ಯವಾಗಿ ಮಕ್ಕಳ ದಿನಚರಿ ಹೇಗಿರಬೇಕು ಎಂದು ತಿಳಿದುಕೊಳ್ಳಲು ಈ ಲೇಖನವನ್ನು ನೀಡುತ್ತಿದ್ದೇವೆ.

ಮಕ್ಕಳ ಶಾಲೆಬೆಳಗ್ಗೆ ಬೇಗೆಇದ್ದಲ್ಲಿ ಮುಂದಿನಂತೆ ಆಯೋಜನೆ ಮಾಡಿ !

ಬೆಳಗ್ಗೆ ಎದ್ದ ತಕ್ಷಣ ಭೂ ದೇವತೆಗೆ ಪ್ರಾರ್ಥನೆ ಮಾಡಬೇಕು. ಸ್ನಾನ ಮಾಡಿ ದೇವರಿಗೆ, ತಂದೆ ತಾಯಿಗೆ ಮತ್ತು ಮನೆಯಲ್ಲಿರುವ ಹಿರಿಯರಿಗೆ ನಮಸ್ಕಾರ ಮಾಡಬೇಕು. ತಿಂಡಿ ತಿಂದು ಶಾಲೆಗೆ ಹೋಗಬೇಕು. ಮನೆಯಿಂದ ಹೊರಡುವ ಮುಂಚೆ ತಾಯಿಗೆ ತಿಳಿಸಿ ಮತ್ತು ದೇವರಿಗೆ ಪ್ರಾರ್ಥನೆ ಮಾಡಿಯೇ ಹೋರಡಬೇಕು.

ಶಾಲೆಗೆ ಹೋಗುವಾಗ ಮನಸ್ಸಿನಲ್ಲಿಯೇ ಕುಲದೆವತೆಯ ನಾಮಜಪವನ್ನು ಮಾಡಬೇಕು.

ಪ್ರತಿಯೊಂದು ವಿಷಯದ ತರಗತಿ ಪ್ರಾರಂಭವಾಗುವ ಮೊದಲು ಮತ್ತು ನಂತರ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

ದಿನದ ತರಗತಿಗಳು ಮುಗಿದ ನಂತರ ಶಾಲೆಯ ವಾಸ್ತುದೇವತೆ, ಸ್ಥಾನದೇವತೆ, ಸರಸ್ವತೀ ದೇವಿ ಮತ್ತು ಗಣಪತಿಗೆ ಕೃತಜ್ಞತೆ ಅರ್ಪಿಸಬೇಕು

ಶಾಲೆಯಿಂದ ಮನೆಗೆ ಮರಳಿದ ನಂತರ ಕೈ ಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆದುಕೊಂಡು, ಬಟ್ಟೆಗಳನ್ನು ಬದಲಾಯಿಸಬೇಕು. ದೇವರಿಗೆ ಕೃತಜ್ಞತೆಯನ್ನು ಅರ್ಪಿಸಬೇಕು.

ಊಟ, ತಿಂಡಿ ಅಥವಾ ಶಾಲೆಯ ಡಬ್ಬಿಯಿಂದ ತಿನ್ನುವಾಗ ದೇವರಿಗೆ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ಅರ್ಪಿಸಬೇಕು.

ಊಟ ಮಾಡಿದ ನಂತರ ಸ್ವಲ್ಪ ಸಮಯ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ವಾರ್ತಾಪತ್ರಿಕೆಗಳನ್ನು ಓದಬಹುದು.

ಅಧ್ಯಯನಕ್ಕೆ ಕುಳಿತುಕೊಳ್ಳುವ ಮೊದಲು ೫ರಿಂದ ೧೦ ನಿಮಿಷ ನಾಮಜಪವನ್ನು ಮಾಡಬೇಕು. ಪ್ರಾರ್ಥನೆ ಮಾಡಿ, ಅಂದು ಮಾಡಬೇಕಾದ ಅಧ್ಯಯನದ ರೂಪರೇಖೆಯನ್ನು ಬರೆಯಬೇಕು.

ಪ್ರತಿಯೊಂದು ವಿಷಯದ ಅಧ್ಯಯನ ಆದ ನಂತರ ಅದನ್ನು ಪುಸ್ತಕದಲ್ಲಿ ನೋಂದಾಯಿಸಬೇಕು. (ಹೀಗೆ ಮಾಡುವುದರಿಂದ ಮಕ್ಕಳಿಗೆ ಏನು ಕಲಿತು ಆಗಿದೆ ಮತ್ತು ಇನ್ನೆಷ್ಟು ಇದೆ ಎಂಬುದರ ಅರಿವಾಗುವುದಲ್ಲದೆ, ತಮ್ಮ ಅಧ್ಯಯನಕ್ರಮದ ಬಗ್ಗೆ ಜವಾಬ್ದಾರಿ ಬರಲು ಸಹಾಯವಾಗುತ್ತದೆ. ಪ್ರಾರಂಭದ ಕೆಲವು ದಿನಗಳು ಪಾಲಕರು 'ಅಧ್ಯಯನ ಕ್ರಮವನ್ನು' ಬರೆಯುವಲ್ಲಿ ಸಹಾಯ ಮಾಡಬೇಕಾಗಬಹುದು, ಮುಂದೆ ಮಕ್ಕಳು ತಾವಾಗಿಯೇ ಬರೆಯುತ್ತಾರೆ)

ಸಾಯಂಕಾಲ ಸ್ವಲ್ಪ ಸಮಯವನ್ನು ಆಟಕ್ಕಾಗಿ ಮೀಸಲಿಡಬೇಕು. ಆಟಗಳು ಮೈದಾನದ ಆಟಗಳಾಗಿದ್ದರೆ ದೇಹ ಮತ್ತು ಮನಸ್ಸಿನ ವಿಕಾಸಕ್ಕಾಗಿ ಪೂರಕವಾಗುತ್ತವೆ.

ಮುಸ್ಸಂಜೆಯ ಸಮಯದಲ್ಲಿ ದೇವರ ಮುಂದೆ ದೀಪ ಹಚ್ಚಿ 'ಶುಭಂ ಕರೋತಿ', ಸ್ತೋತ್ರ ಪಠಣ ಮತ್ತು ಭಜನೆಗಳನ್ನು ಹಾಡಬೇಕು. ನಂತರ ಸ್ವಲ್ಪ ಸಮಯ ಏಕಾಗ್ರತೆಯಿಂದ ನಾಮಜಪವನ್ನು ಮಾಡಬೇಕು.

ಮಕ್ಕಳ ಇಷ್ಟಕ್ಕನುಸಾರ ಓದಲು, ಚಿತ್ರ ಬಿಡಿಸಲು, ಇತರ ಒಳ್ಳೆಯ ಹವ್ಯಾಸಗಳಿಗೆ ಸ್ವಲ್ಪ ಸಮಯ ನೀಡಬೇಕು. ನಂತರ ಅಧ್ಯಯನಕ್ಕೆ ಏನಾದರೂ ಉಳಿದಿದ್ದರೆ ಅದನ್ನು ಪೂರ್ಣಗೊಳಿಸಬೇಕು.

ನಿಮ್ಮ ಮಕ್ಕಳೊಂದಿಗೆ ಅವರ ದಿನದ ಬಗ್ಗೆ ಮಾತನಾಡಿ!

ರಾತ್ರಿ ೮.೩೦ರಿಂದ ೯ರ ಒಳಗೆ ಊಟವನ್ನು ಮುಗಿಸಿ, ಪಾಲಕರು ಮಕ್ಕಳ ಜೊತೆ ಸ್ವಲ್ಪ ಮಾತನಾಡಬೇಕು. ಮುಖ್ಯವಾಗಿ ಮುಂದಿನ ವಿಷಯಗಳತ್ತ ಗಮನ ಹರಿಸಬೇಕು –

ಅ. ಇಂದು ದಿನವಿಡೀ ಶಾಲೆಯಲ್ಲಿ ಏನು ಕಲಿಯಲು ಸಿಕ್ಕಿತು?

ಆ. ದಿನವಿಡೀ ಇತರರನ್ನು ನೋಡಿ ಏನು ಕಲಿಯಲು ಸಿಕ್ಕಿತು?

ಇ. ದಿನವಿಡೀ ಏನೆಲ್ಲ ತಪ್ಪುಗಳಾಯಿತು?

ಈ. ಇವತ್ತು ಮಾಡಿದ ತಪ್ಪು ಪುನಃ ಆಗದಿರಲು ಏನೆಲ್ಲ ಪ್ರಯತ್ನ ಆಯಿತು?

ಉ. ದಿನವಿಡೀ ತನ್ನಲ್ಲಿರುವ ಯಾವ ದೋಷಗಳ ಅರಿವಾಯಿತು?

ಮೇಲೆ ನೀಡಿರುವ ೫ ಮುಖ್ಯ ವಿಷಯಗಳ ಬೆಗ್ಗೆ ಮಕ್ಕಳೊಂದಿಗೆ ಆತ್ಮೀಯತೆಯಿಂದ ಮಾತನಾಡಿ ಅವರಿಗೆ ಮಾರ್ಗದರ್ಶನ ಮಾಡಬೇಕು.

ಮಕ್ಕಳ ದಿನಚರಿಯಲ್ಲಿ ಮುಂದಿನ ವಿಶಯಕ್ಕ ಸಮಯ ಮೀಸಲಿಡಬೇಕು!

ಪಾಲಕರು ಒಂದು ನೋಂದಣಿ ಪುಸ್ತಕವನ್ನು ತಯಾರಿಸಿ ಮಕ್ಕಳಿಗೆ ನೀಡಬೇಕು. ಅದರಲ್ಲಿ ದಿನಾಂಕ, ದಿನವಿಡೀ ತನ್ನಿಂದ ಆದ ಒಳ್ಳೆಯ ಕೃತಿ, ತನ್ನಿಂದ ಆದ ತಪ್ಪುಗಳು, ಎಷ್ಟು ಬಾರಿ ಪ್ರಾರ್ಥನೆ ಮತ್ತು ಕೃತಜ್ಞತೆ ವ್ಯಕ್ತವಾಯಿತು, ಎಷ್ಟು ಸಮಯ ನಾಮಜಪ ಮಾಡಿದೆ- ಎಂಬ ಸ್ತಂಭಗಳನ್ನು ಮಾಡಬೇಕು. ಈ ಕೋಷ್ಟಕಗಳನ್ನು ಮಕ್ಕಳು ಪ್ರತಿದಿನ ತುಂಬುತ್ತಿದ್ದಾರೆಯೇ ಎಂದು ಪಾಲಕರು ಪರಿಶೀಲಿಸಬೇಕು. ಪ್ರಾರಂಭದಲ್ಲಿ ಮಕ್ಕಳಿಗೆ ಇದನ್ನು ಬರೆಯಲು ಕಷ್ಟವಾದರೆ, ನೀವು ಸಹಾಯ ಮಾಡಬೇಕು. ಈ ಪದ್ಧತಿಯು ರೂಢಿಯಾದ ಮೇಲೆ ಮಕ್ಕಳಿಗೆ ಅದರಿಂದ ಆನಂದ ಸಿಗಲು ಪ್ರಾರಂಭವಾಗುತ್ತದೆ, ಏಕೆಂದರೆ ಅವರ ತಪ್ಪುಗಳು, ದೋಷಗಳು ಪ್ರತಿದಿನ ಕಾಣಸಿಗುವುವು, ಮತ್ತು ಅವುಗಳನ್ನು ಕಮ್ಮಿ ಮಾಡಿಕೊಳ್ಳಲು ಅವರಿಂದ ಪ್ರಯತ್ನಗಳೂ ಆಗುವುದು.

(ಟಿಪ್ಪಣಿ : ತಡವಾಗಿ ಶಾಲೆಯಿರುವ ಮಕ್ಕಳ ಸಂದರ್ಭದಲ್ಲಿ ಇದೇ ದಿನಚರಿಯನ್ನು ಸೂಕ್ತ ಬದಲಾವಣೆಗಳನ್ನು ಅಳವಡಿಸಿ ಉಪಯೋಗಿಸಬಹುದು)