ಮನಸ್ಸಿನಲ್ಲಿರುವ ಪರೀಕ್ಷೆಯ ಚಿಂತೆಯನ್ನು ದೂರ ಮಾಡುವ ಕೆಲವು ಉಪಾಯಗಳು

ಪರೀಕ್ಷೆಯೆಂದರೆ ಎಲ್ಲರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಹತ್ತನೆಯ ಹಾಗೂ ಹದಿನೆರಡನೆಯ ತರಗತಿಯಲ್ಲಿರುವ ಮಕ್ಕಳಿಗಷ್ಟೇ ಅಲ್ಲದೇ ಅವರ ಪಾಲಕರಿಗೂ ಪರೀಕ್ಷೆಯ ಚಿಂತೆಯಾಗುತ್ತಿರುತ್ತದೆ. ಪ್ರೌಢ ಶಿಕ್ಷಣ ಪರೀಕ್ಷೆಯಲ್ಲಿ ಶೇ. ೮೦ ರಷ್ಟು ಅಂಕಗಳನ್ನುಗಳಿಸಿದರೂ ಉತ್ತಮ ಮಹಾವಿದ್ಯಾಲಯದಲ್ಲಿ, ಹಾಗೂ ಪದವಿಪೂರ್ವ ಪರೀಕ್ಷೆಯಲ್ಲಿ ಶೇ. ೯೫ ರಷ್ಟು ಅಂಕಗಳನ್ನುಗಳಿಸಿದರೂ ವಿಶ್ವವಿದ್ಯಾಲಯದಲ್ಲಿ ತಮಗೆ ಬೇಕಾದ ವಿಷಯದಲ್ಲಿ ಪದವಿ ಪಡೆಯುವುದು ಹಾಗೂ ಉತ್ತಮ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆಯುವುದು ಕಠಿಣವಾಗಿದೆ. ಆದುದರಿಂದ ಪರೀಕ್ಷೆಯು ಸಮೀಪಿಸಿದಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಸ್ವಲ್ಪವಾದರೂ ಪರೀಕ್ಷೆಯ ಚಿಂತೆಯನ್ನು ಅನುಭವಿಸುತ್ತಾನೆ. ಈ ಭಾರದಿಂದಲೇ ವಿದ್ಯಾರ್ಥಿಗಳು ರಾತ್ರಿ ಎಚ್ಚರವಿದ್ದು ಅಧ್ಯಯನ ಮಾಡುತ್ತಾರೆ ಹಾಗೂ ಅವರ ಗಮನವು ಅಧ್ಯಯನದ ಮೇಲೆ ಕೇಂದ್ರೀಕೃತವಾಗುತ್ತದೆ; ಆದರೆ ಈ ಭಾರವು ಮಿತಿ ಮೀರಿದರೆ ಪರೀಕ್ಷೆಯ ಚಿಂತೆಯಿಂದಲೇ ವಿದ್ಯಾರ್ಥಿಗಳ ಅಧ್ಯಯನವಾಗುವುದಿಲ್ಲ. ಅವರ ನಿದ್ದೆ ಹಾರಿ ಹೋಗುತ್ತದೆ ಹಾಗೂ ಅವರು ನಿರಾಶರಾಗುತ್ತಾರೆ. ಪರೀಕ್ಷೆಯು ಸಮೀಪಿಸಿದಂತೆ ವಿದ್ಯಾರ್ಥಿಗಳು ರಾತ್ರಿಯ ಸಮಯದಲ್ಲಿ ಅಧ್ಯಯನ ಮಾಡುವುದಕ್ಕಿಂತಲೂ ಶಿಕ್ಷಕರ ಸಲಹೆಯಂತೆ ಮೊದಲಿನಿಂದ ಸರಿಯಾಗಿ ಅಧ್ಯಯನ ಮಾಡಬೇಕು.

ಆರಂಭದಿಂದಲೇ ನಿಯಮಿತವಾಗಿ ಅಧ್ಯಯನ ಮಾಡದ ಮಕ್ಕಳಿಗೆ ಪರೀಕ್ಷೆಯು ಸಮೀಪಿಸಿದಂತೆ ಪರೀಕ್ಷೆಯ ಭಯ ಹಾಗೂ ಚಿಂತೆಯು ಹೆಚ್ಚುವುದು ಸ್ವಾಭಾವಿಕವಾಗಿದೆ; ಆದರೆ ಹೆಚ್ಚಿನ ಸಂದರ್ಭದಲ್ಲಿ ಉತ್ತಮವಾಗಿ ಹಾಗೂ ನಿಯಮಿತವಾಗಿ ಅಧ್ಯಯನ ಮಾಡುವ ಬುದ್ಧಿವಂತ ವಿದ್ಯಾರ್ಥಿಯ ಮನಸ್ಸಿನಲ್ಲಿಯೂ ಪರೀಕ್ಷೆಯ ಭಯ ಕಂಡುಬರುತ್ತದೆ; ಏಕೆಂದರೆ ಅವರ ಮನಸ್ಸಿನಲ್ಲಿ ‘ನನಗೆ ಶೇ. ೯೫ ರಷ್ಟು ಅಂಕಗಳು ದೊರೆಯದಿದ್ದರೆ ಅಥವಾ ನನಗೆ ಮೊದಲನೇಯ ಕ್ರಮಾಂಕವು ಲಭಿಸದಿದ್ದರೆ ನನ್ನ ತಂದೆ, ತಾಯಿ ಹಾಗೂ ಸಂಬಂಧಿಕರಿಗೆ ಹೇಗೆ ಅನಿಸಬಹುದು‘ ಎಂಬ ಭಯ ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ‘ನೀನು ಯೋಗ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ನಿಯಮಿತವಾಗಿ ಹಾಗೂ ಒಳ್ಳೆಯ ರೀತಿಯಲ್ಲಿ ಅಧ್ಯಯನ ಮಾಡಬೇಕು, ಇದೇ ನಮ್ಮ ಅಪೇಕ್ಷೆಯಾಗಿದೆ. ಹೆಚ್ಚಿನ ಪ್ರಯತ್ನವನ್ನು ಮಾಡಿಯೂ ನಿನಗೆ ಕಡಿಮೆ ಅಂಕಗಳು ದೊರೆತರೆ ಅಥವಾ ದುರ್ದೈವದಿಂದ ನೀನು ಅನುರ್ತ್ತೀಣನಾದರೆ ನಮಗೆ ಏನೂ ಅನಿಸುವುದಿಲ್ಲ‘ ಎಂದು ಹೇಳಬೇಕು. ಅವರಿಗೆ ಗೀತೆಯಲ್ಲಿನ ಶ್ರೀಕೃಷ್ಣನ ವಚನ ಅಂದರೆ ‘ಫಲಾಪೇಕ್ಷೆ ಮಾಡದೇ ಕರ್ಮ ಮಾಡುವುದು (ಅಧ್ಯಯನ ಮಾಡುವುದು) ನಿನ್ನ ಕರ್ತವ್ಯವಾಗಿದೆ‘, ಎಂಬುದನ್ನು ನೆನಪಿಸಬೇಕು.
ಪಾಲಕರು ತಮ್ಮ ಮನೆಯಲ್ಲಿ ಅಧ್ಯಯನಕ್ಕೆ ಯೋಗ್ಯ, ಶಾಂತ ಹಾಗೂ ಆನಂದೀ ವಾತಾವರಣವನ್ನು ನಿರ್ಮಿಸುವ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು.

ಮಕ್ಕಳ ಗಮನವನ್ನು ಅಧ್ಯಯನದಲ್ಲಿ ತೊಡಗಿಸಿ ಅವರ ಏಕಾಗ್ರತೆಯನ್ನು ಹೆಚ್ಚಿಸಲು ಕೆಳಗಿನ ಅಂಶಗಳು ಉಪಯುಕ್ತವಾಗಿವೆ.

೧. ಮಕ್ಕಳಿಗೆ ಅಧ್ಯಯನಕ್ಕಾಗಿ ಬೇರೆ ಕೋಣೆಯನ್ನು ನೀಡಬೇಕು ಅಥವಾ ಸಾಧ್ಯವಾಗದಿದ್ದಲ್ಲಿ ಕೋಣೆಯಲ್ಲಿನ ಒಂದು ಭಾಗದಲ್ಲಿ ಚಿಕ್ಕ ವಿಭಾಗ (ಪಾರ್ಟೀಶನ್) ಮಾಡಿಕೊಡಬೇಕು.
೨. ಮನೆಯಲ್ಲಿ ದೂರದರ್ಶನ ಹಾಗೂ ಆಕಾಶವಾಣಿಯನ್ನು ಹಾಕಬಾರದು.
೩. ಮನೆಯಲ್ಲಿ ತಂದೆ ತಾಯಿಯರ ಅಥವಾ ಮಕ್ಕಳ ಜಗಳವಾಗದಂತೆ ನೋಡಿಕೊಳ್ಳಬೇಕು.
೪. ಮನೆಯಲ್ಲಿನ ಕಲಹಗಳನ್ನು ಮಕ್ಕಳ ಎದುರು ಇಡಬಾರದು.
೫. ತಮ್ಮ ಮಿತ್ರರನ್ನು ಅಥವಾ ತಮ್ಮ ಮಕ್ಕಳ ಮಿತ್ರರನ್ನು ಮನೆಗೆ ಕರೆಯಬಾರದು.
೬. ಮಕ್ಕಳು ರಾತ್ರಿಯ ಸಮಯದಲ್ಲಿ ಅಧ್ಯಯನಕ್ಕಾಗಿ ಎಚ್ಚರವಿರುತ್ತಿದ್ದರೆ ತಾವೂ ತತ್ತ್ವಜ್ಞಾನ ಅಥವಾ ತಮ್ಮ ಇಷ್ಟದ ವಿಷಯದ ವಾಚನ ಮಾಡಿ ಅವರ ಜೊತೆಗೆ ಕುಳಿತುಕೊಳ್ಳಬಹುದು.

ಪರೀಕ್ಷೆಯ ವಿಷಯವು ಒಳ್ಳೆಯ ರೀತಿಯಲ್ಲಿ ತಿಳಿಯಲು ಹಾಗೂ ಪರೀಕ್ಷೆಯಲ್ಲಿ ಉತ್ತರಗಳನ್ನು ಉತ್ತಮವಾಗಿ ಹೇಗೆ ಬರೆಯುವುದು ಎಂದು ತಿಳಿಯಲು ತಜ್ಞ ಶಿಕ್ಷಕರ ಆಯೋಜನೆ ಮಾಡಬೇಕು. ಈ ತಜ್ಞ ಶಿಕ್ಷಕರಿಗೆ ಕಲಿಸುವ ಆಸಕ್ತಿಯಿರಬೇಕು ಹಾಗೂ ಕಠಿಣ ವಿಷಯವನ್ನು ಸುಲಭಗೊಳಿಸಿ ಹೇಳುವ ನೈಪುಣ್ಯತೆಯಿರಬೇಕು. ವಿದ್ಯಾರ್ಥಿಗಳ ಅಡಚಣೆಯನ್ನು ತಿಳಿದು ಅವರ ಎಲ್ಲ ಸಂದೇಹಗಳನ್ನು ಪ್ರೇಮದಿಂದ ಅವರಿಗೆ ಅರ್ಥವಾಗುವವರೆಗೆ ತಿಳಿಸಿ ಹೇಳಬೇಕು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಂದ ಹಳೆಯ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಿಕೊಳ್ಳಬೇಕು. ಪರೀಕ್ಷೆಯ ನಿರ್ಧರಿತ ಕಾಲಾವಧಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಲು ಮಕ್ಕಳಿಗೆ ಅವಶ್ಯಕ ಮಾರ್ಗದರ್ಶನ ಮಾಡಬೇಕು. ಪ್ರತಿಯೊಂದು ವಿಷಯದ ಪ್ರಶ್ನೆ ಪತ್ರಿಕೆಯನ್ನು ಬಿಡಿಸುವುದರಿಂದ ಮಕ್ಕಳ ಮನಸ್ಸಿನಲ್ಲಿರುವ ಪರೀಕ್ಷೆಯ ಭಯ ಓಡಿಹೋಗುತ್ತದೆ ಹಾಗೂ ಅವರ ಆತ್ಮವಿಶ್ವಾಸವು ಹೆಚ್ಚುತ್ತದೆ. ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆಯನ್ನು ಬಿಡಿಸಲು ಬೇಕಾದಷ್ಟು ಸಮಯವಿಲ್ಲದಿದ್ದರೆ ಮನಸ್ಸಿನಲ್ಲಿರುವ ಪರೀಕ್ಷೆಯ ಭಯವನ್ನು ಓಡಿಸಲು ಕೆಳಗಿನ ಉಪಕ್ರಮಗಳು ಉಪಯುಕ್ತವಾಗುವವು.

ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಮುಂದಿನಂತೆ ಸಹಾಯ ಮಾಡಬೇಕು.

ವಿದ್ಯಾರ್ಥಿಯು ಒಂದು ಆಸನದ ಮೇಲೆ ಒರಗಿ ಕುಳಿತುಕೊಂಡು ಕಣ್ಮುಚ್ಚಿ ಶರೀರದಲ್ಲಿನ ಎಲ್ಲ ಅವಯವಗಳನ್ನು ಸಡಿಲಗೊಳಿಸಿ ಸ್ವಸ್ಥ ಹಾಗೂ ಶಾಂತ ಮನಸ್ಸಿನಿಂದ ಮುಂದಿನ ಸೂಚನೆಗಳನ್ನು ಗಮನವಿಟ್ಟು ಓದಬೇಕು ಹಾಗೂ ಸೂಚನೆಯೊಂದಿಗೆ ಮನಸ್ಸಿನಿಂದ ಏಕರೂಪವಾಗಬೇಕು. 'ನಿನ್ನಿಂದ ಪರೀಕ್ಷೆಯ ಎಲ್ಲ ವಿಷಯಗಳ ಸಂಪೂರ್ಣ ಸಿದ್ಧತೆಯಾಗಿದೆ, ನಾಳೆ ಪರೀಕ್ಷೆಯಿದೆ. ರಾತ್ರಿ ಶಾಂತ ನಿದ್ದೆ ಬಂದಿದ್ದರಿಂದ ನೀನು ಬೆಳಗ್ಗೆ ತಾಜಾತನದಿಂದ ಎದ್ದಿರುವೆ. ನಿನ್ನ ಇಂದಿನ ವಿಷಯದ ಪುನರಾವಲೋಕನವಾಗಿದೆ. ಈಗ ಯಾವುದೇ ಪ್ರಶ್ನೆಯ ಉತ್ತರವನ್ನು ಉತ್ತಮವಾಗಿ ಬರೆಯಬಲ್ಲೆನು' ಎಂದು ನಿನಗೆ ಅನಿಸುತ್ತಿದೆ. ಸ್ವಲ್ಪ ಅಲ್ಪಾಹಾರವನ್ನು ತೆಗೆದುಕೊಂಡು ನೀನು ಪರೀಕ್ಷಾ ಕೊಠಡಿಗೆ ಹೋಗಿರುವೆ. ಮೊದಲನೆಯ ಗಂಟೆ ಹೊಡೆದಿದೆ. ನಿನ್ನ ಜಾಗದಲ್ಲಿ, ಕಣ್ಣು ಮುಚ್ಚಿ, ನಿರ್ವಿಚಾರ ಅವಸ್ಥೆಯಲ್ಲಿ ಶಾಂತ ಚಿತ್ತದಿಂದ ಕುಳಿತಿರುವೆ. ಈಗ ಇನ್ನೊಂದು ಗಂಟೆ ಹೊಡೆದಿದೆ. ನಿನ್ನ ಕೈಯಲ್ಲಿ ಪ್ರಶ್ನೆಪತ್ರಿಕೆ ಬಂದಿದೆ. ಪ್ರತಿಯೊಂದು ಪ್ರಶ್ನೆಯನ್ನು ಓದಿ ಹಾಗೂ ಅಂಕಗಳನ್ನು ನೋಡಿ ನೀನು ಯಾವ ಪ್ರಶ್ನೆಗೆ ಉತ್ತರಿಸಬೇಕು ಎಂಬುದರ ವಿಚಾರ ಮಾಡಿರುವೆ. ಪರೀಕ್ಷೆಯ ಎಲ್ಲ ಪ್ರಶ್ನೆಗಳೂ ಸುಲಭವಾಗಿವೆ. ಎಲ್ಲ ಪ್ರಶ್ನೆಗಳಿಗೂ ನಿನ್ನಿಂದ ಸಮಾಧಾನಕರವಾಗಿ ಉತ್ತರಗಳು ಬರೆಯಲ್ಪಟ್ಟಿವೆ. ಕೊನೆಗೆ ೧೦ ನಿಮಿಷ ಇರುವುದರ ಗಂಟೆಯಾಗುತ್ತಿದೆ. ನೀನು ತಕ್ಷಣ ಎಲ್ಲ ಪುಟಗಳನ್ನು ನೋಡಿ ಎಲ್ಲ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿರುವವುದನ್ನು ಖಚಿತ ಮಾಡಿಕೊಂಡಿರುವೆ. ಕೊನೆಯ ಗಂಟೆಯಾಗಿದೆ ಹಾಗೂ ನೀನು ನಿನ್ನ ಉತ್ತರಪತ್ರಿಕೆಯನ್ನು ಪರಿವೀಕ್ಷಕರಿಗೆ ನೀಡುತ್ತಿರುವೆ. ಈಗ ನೀನು ಮನೆಗೆ ಬಂದಿರುವೆ ಹಾಗೂ ಮನೆಯಲ್ಲಿರುವ ಎಲ್ಲರಿಗೂ 'ಪ್ರಶ್ನೆಪತ್ರಿಕೆಯು ಸುಲಭವಿತ್ತು' ಎಂದು ಹೇಳುತ್ತಿರುವೆ. ಈಗ ನೀನು ಊಟ ಮಾಡಿ ಸ್ವಲ್ಪ ಹೊತ್ತು ಮಲಗಲಿರುವೆ ಹಾಗೂ ನಂತರ ನಾಳೆಯ ಪರೀಕ್ಷೆಯ ಸಿದ್ಧತೆಯನ್ನು ಮಾಡಲಿರುವೆ. ಎಲ್ಲ ಪಾಠಗಳ ಸಾರಾಂಶವನ್ನು ಓದಿ ಆಗಿದೆ ಹಾಗೂ ಈಗ ನೀನು ಶಾಂತವಾಗಿ ಮಲಗುತ್ತಿರುವೆ'.
ಈ ರೀತಿ ೫-೬ ಬಾರಿ ಸೂಚನೆಯ ಮಾಧ್ಯಮದಿಂದ ಮನಸ್ಸಿನಲ್ಲೇ ಪರೀಕ್ಷೆಯ ಸಭಾಗೃಹದಲ್ಲಿ ಪ್ರಶ್ನೆಪತ್ರಿಕೆಯನ್ನು ಬಿಡಿಸಿ ಬಂದಿರುವುದರಿಂದ ವಿದ್ಯಾರ್ಥಿಗಳ ಪರೀಕ್ಷೆಯ ಭಯವು ಕಡಿಮೆಯಾಗುತ್ತದೆ.