Due to a software update, our website may be briefly unavailable on Saturday, 18th Jan 2020, from 10.00 AM IST to 11.30 PM IST

ಕೃಷ್ಣಾ ನದಿ ತೀರದ ಔದುಂಬರ

ಶ್ರೀನೃಸಿಂಹ ಸರಸ್ವತೀಯವರ ಚಾತುರ್ಮಾಸ-ನಿವಾಸದಿಂದಾಗಿ ಈ ಕ್ಷೇತ್ರವು ನಿರ್ಮಾಣವಾಗಿದೆ. ಪುಣೆಯಿಂದ ಹುಬ್ಬಳ್ಳಿಗೆ ಹೋಗುವಾಗ ಮಾರ್ಗದಲ್ಲಿ ಕಿರ್ಲೊಸ್ಕರವಾಡಿಯ ಆಚೆ ಭಿಲವಡಿಯಿಂದ ನಾಲ್ಕು ಮೈಲುಗಳಲ್ಲಿ ಕೃಷ್ಣಾ ನದಿಯ ತೀರದಲ್ಲಿ ಈ ಕ್ಷೇತ್ರವಿದೆ. ಕೃಷ್ಣಾ ನದಿಯ ಒಂದು ತೀರದಲ್ಲಿ ಭಿಲವಡಿಯಿದೆ ಮತ್ತು ಇನ್ನೊಂದು ತೀರದಲ್ಲಿ ಔದುಂಬರವಿದೆ. ಭಿಲವಡಿಯ ಸಮೀಪ ಭುನೇಶ್ವರದ ಪ್ರಾಚೀನ ಶಕ್ತಿಪೀಠವಿದೆ. ಅದರಿಂದ ಈ ಸ್ಥಾನದಲ್ಲಿ ಯಾವಾಗಲೂ ತಪಸ್ವೀ ಜನರು ಸೇರಿರುತ್ತಾರೆ.

ಕೃಷ್ಣೆಯ ತೀರದಲ್ಲಿ ವೃಕ್ಷಗಳ ದಟ್ಟಣೆಯಿಂದಾಗಿ ಇಲ್ಲಿ ತನ್ನಿಂತಾನೆ ಏಕಾಂತಮಯ ತಪೋವನ ನಿರ್ಮಾಣವಾಗಿತ್ತು. ಅದರಿಂದ ಈ ನಿಸರ್ಗಸಿದ್ಧ ತಪೋವನದಲ್ಲಿ, ಔದುಂಬರದ ದಟ್ಟ ಶೀತಲ ಛಾಯೆಯಲ್ಲಿ ಕ್ರಿ.ಶ. ೧೩೪೪ರ ಸುಮಾರಿಗೆ ಶ್ರೀನರಸಿಂಹ ಸರಸ್ವತೀಯವರು ಚಾತುರ್ಮಾಸದ (ನಾಲ್ಕು ತಿಂಗಳುಗಳ) ಕಾಲವನ್ನು ಕಳೆದರು ಮತ್ತು ಈ ಕ್ಷೇತ್ರಕ್ಕೆ ಚಿರಂತನ ಪವಿತ್ರತೆ ಪ್ರಾಪ್ತ ಮಾಡಿಕೊಟ್ಟರು. ಇಲ್ಲಿನ ಕಷ್ಣೆಯ ಘಟ್ಟವು ಪ್ರಶಾಂತ ಮತ್ತು ಪ್ರಶಸ್ತವಾಗಿದೆ. ಈ ಘಟ್ಟದಲ್ಲಿಯೇ ದತ್ತ ಪಾದುಕೆಗಳ ದೇವಸ್ಥಾನವಿದೆ. ಘಟ್ಟದಲ್ಲಿರುವ ದತ್ತ ಪಾದುಕಾ ಇರುವ ಮಂದಿರವನ್ನು ಇಲ್ಲಿನ ಬ್ರಹ್ಮಾನಂದಸ್ವಾಮೀಗಳ ಶಿಷ್ಯ ಸಹಜಾನಂದಸ್ವಾಮೀ ಕಟ್ಟಿದ್ದಾರೆ.

ಮಳೆಗಾಲದಲ್ಲಿ ಶ್ರೀಗಳ ಪಾದುಕೆಗಳು ಕೃಷ್ಣಾ ನದಿಯ ನೆರೆಯಲ್ಲಿ ಮುಳುಗಿ ಹೋಗುತ್ತಿದ್ದವು ಮತ್ತು ಅದರಿಂದ ನಿತ್ಯೋಪಾಸನೆ ಮತ್ತು ದರ್ಶನ ಅಸಾಧ್ಯವಾಗುತ್ತಿತ್ತು. ಈ ಅಡಚಣೆಯನ್ನು ದೂರ ಮಾಡಲು ಕ್ರಿ. ಶ. ೧೯೨೬ರಲ್ಲಿ ಎತ್ತರದ ಸ್ಥಳದಲ್ಲಿ ಒಂದು ಪೂಜಾಮಂಟಪವನ್ನು ಕಟ್ಟಿದ್ದಾರೆ. ಮಳೆಗಾಲದಲ್ಲಿ ದೇವರನ್ನು ಅಲ್ಲಿ ಕೊಂಡೊಯ್ಯುತ್ತಾರೆ ಮತ್ತು ಅಲ್ಲಿಯೇ ಪೂಜೆ-ಅರ್ಚನೆಯಾಗುತ್ತದೆ.

ದೇವಸ್ಥಾನದ ಪರಿಸರದಲ್ಲಿ ಔದುಂಬರ ವೃಕ್ಷಗಳ ದಟ್ಟವಾದ ಛಾಯೆಯಿದೆ. ಆಕಾಶದಲ್ಲಿ ಸೂರ್ಯ ಹೊಳೆಯುತ್ತಿರುವಾಗ ಭೂಮಿಯಲ್ಲಿ ನೆರಳು – ಬೆಳಕಿನ ರಂಗೋಲಿ ಹೊಳೆಯುತ್ತಿರುತ್ತದೆ. ಈ ಕ್ಷೇತ್ರದಲ್ಲಿ ಬ್ರಹ್ಮಾನಂದಸ್ವಾಮೀಗಳ ಮಠವಿದೆ. ಈ ಸತ್ಯಪುರುಷರು ೧೮೨೬ರ ಸುಮಾರಿಗೆ ಗಿರನಾರದಿಂದ ಔದುಂಭರ ಕ್ಷೇತ್ರದಲ್ಲಿ ಬಂದರು ಮತ್ತು ಇಲ್ಲಿಯೇ ಒಂದು ಮಠವನ್ನು ಸ್ಥಾಪಿಸಿ ಅವರು ತಪಸ್ಸು ಆಚರಿಸಿದರು. ಇಲ್ಲಿನ ಶಾಂತ, ಪ್ರಸನ್ನ ಮತ್ತು ಪವಿತ್ರ ವಾತಾವರಣದಲ್ಲಿ ಅವರ ತಪಸ್ಸಿಗೆ ಸಿದ್ಧಿಯ ಯಶವು ಪ್ರಾಪ್ತವಾಯಿತು ಮತ್ತು ಕೊನೆಗೆ ಇಲ್ಲಿಯೇ ಅವರು ಸಮಾಧಿ ಹೊಂದಿದರು. ಕೊಲ್ಲಾಪುರದ ಮಂದಬುದ್ಧಿ ಬ್ರಾಹ್ಮಣನಿಗೆ ಶ್ರೀಗುರುಗಳು ಜ್ಞಾನದಾನ ಮಾಡಿದ್ದರ ಬಗ್ಗೆ ಗುರುಚರಿತ್ರೆಯಲ್ಲಿ ಬರುವ ಪಸಂಗ ಇದೇ ಕ್ಷೇತ್ರದಲ್ಲಿ ಘಟಿಸಿದೆ.