ಮಾಹೂರ – ದತ್ತನ ವಿಶ್ರಾಂತಿಯ ಸ್ಥಾನ

ಈ ತೀರ್ಥಕ್ಷೇತ್ರವು ಮಹಾರಾಷ್ಟ್ರದ ಮರಾಠವಾಡಾದಲ್ಲಿ ಇದೆ. ಪುರಾಣದಲ್ಲಿ ಇದು ದತ್ತನ ವಿಶ್ರಾಂತಿಯ ಸ್ಥಾನವೆಂದು ಉಲ್ಲೇಖವಿದೆ. ಹದಿನೆರಡನೆಯ ಶತಕದಲ್ಲಿನ ದತ್ತಭಕ್ತ ಚಾಂಗದೇವ ರಾಊಳ ಇಲ್ಲಿಯೇ ದತ್ತನ ಸಾಕ್ಷಾತ್ಕಾರವಾಯಿತು. ಇದಕ್ಕಿಂತ ಮೊದಲು ಕೂಡ ಈ ಸ್ಥಳವು ಪ್ರಸಿದ್ಧವಾಗಿತ್ತು ಎಂದು ತಿಳಿದುಬರುತ್ತದೆ. ಇದೊಂದು ಶಕ್ತಿಪೀಠವೂ ಆಗಿದೆ. ವಿಷ್ಣು ಅವತಾರ ಪರಶುರಾಮನ ತಾಯಿ ರೆಣುಕಾ ಇಲ್ಲಿ ಸತಿಸಹಗಮನ ಮಾಡಿದಳು ಎಂದು ಪುರಾಣದಲ್ಲಿ ಇದೆ. ಗುರುಚರಿತ್ರೆ ಗ್ರಂಥದಲ್ಲಿಯೂ ಈ ಸ್ಥಳದ ಉಲ್ಲೇಖವಿದೆ.

ಮಾಹೂರಿನ ಸ್ತ್ರೀಯೋರ್ವಳ ಪತಿಯನ್ನು ಶ್ರೀಗುರುಗಳು ಬದುಕಿಸಿದರು ಎಂಬ ಕಥೆಯು ಗುರುಚರಿತ್ರದಲ್ಲಿ (ಅಧ್ಯಾಯ ೩೦) ಇದೆ. ಮಹಾನುಭಾವ ಸಂಪ್ರದಾಯದಲ್ಲಿ ಮಾಹೂರಿನ ಮಹಿಮೆಯು ವಿಶೇಷ ಸ್ಥಾನ ಪಡೆದಿದೆ. ‘ಸ್ಥಾನಪೆಥಿ’ಯ ಕೆಲವು ಪ್ರತಿಗಳಲ್ಲಿ ೧೩ನೆಯ ಶತಕದ ಮಾಹೂರ ಬಗ್ಗೆ ಸವಿಸ್ತಾರ ವರ್ಣನೆಯಿದೆ. ದಾಸೊಪಂತರು ಹನ್ನೆರಡು ವರ್ಷಗಳ ಕಾಲ ತಪಸ್ಸನ್ನು ಆಚರಿಸಿ ದತ್ತಗುರುವನ್ನು ಪ್ರಸನ್ನಗೊಳಿಸಿದ್ದರು. ಮಾಹೂರ ತೀರ್ಥ ಮಹಿಮೆಯಲ್ಲಿ ದೇವದೇವೇಶ್ವರ, ರೇಣುಕಾದೇವಿ, ಅನುಸೂಯಾ, ದತ್ತಾತ್ರೇಯ ಈ ದೇವರ ದೇವಸ್ಥಾನಗಳು ಮತ್ತು ಅಮೃತಕುಂಡ, ಸರ್ವತೀರ್ಥ, ಶಿಖರ ಈ ಸ್ಥಾನಗಳು ಮಹತ್ವಪೂರ್ಣ ಎನ್ನಲಾಗುತ್ತವೆ. ಮಾಹೂರಿಂದ ೬ ಮೈಲುಗಳ ಅಂತರದಲ್ಲಿ ಒಂದು ಗಿರಿಯ ಮೇಲೆ ದತ್ತಾತ್ರೇಯನ ದೇವಸ್ಥಾನವಿದೆ. ಮುಕುಂದಭಾರತಿ ಹೆಸರಿನ ಮಹಂತರು ಪ್ರಸ್ತುತ ದೇವಸ್ಥಾನವನ್ನು ೧೨೯೭ರಲ್ಲಿ ಕಟ್ಟಿದರು. ಮೂಲ ದೇವಸ್ಥಾನವು ಕೇವಲ ೧೦ x ೧೨ ಆಕಾರದ್ದಾಗಿದೆ. ಅದರ ನಂತರ ಮೆಟ್ಟಿಲು ಮತ್ತು ಸುತ್ತಲಿನ ಸ್ಥಳವನ್ನು ಕಟ್ಟಲಾಗಿದೆ.