ಧೈರ್ಯಶಾಲಿ ಹಾಗೂ ಸಾಹಸಿಗಳಾಗಿ!

ನಮ್ಮ ಜೀವನದಲ್ಲಿ ಬರುವಂತಹ ಕಠಿಣ ಪ್ರಸಂಗಗಳನ್ನು ಎದುರಿಸಲು ನಮ್ಮಲ್ಲಿ ಧೈರ್ಯ ಹಾಗೂ ಸಾಹಸದ ಆವಶ್ಯಕತೆಯಿದೆ. ಬನ್ನಿ, ಭಾರತಮಾತೆಯ ಕೆಲವು ಆದರ್ಶ ಧೈರ್ಯಶಾಲಿ ಪುತ್ರರ ಉದಾಹರಣೆಯನ್ನು ಇಂದು ತಿಳಿದುಕೊಳ್ಳೋಣ.

ಸ್ವಾಮಿ ವಿವೇಕಾನಂದ

೧. ಒಮ್ಮೆ ಸ್ವಾಮಿ ವಿವೇಕಾನಂದರು ವಾರಣಾಸಿಗೆ ಹೋಗಿದ್ದರು. ಹಾಗೂ ದುರ್ಗಾಮಾತೆಯ ದರ್ಶನವನ್ನು ಮಾಡಿ ಮರಳುತ್ತಿದ್ದರು. ಅವರು ಯಾವ ರಸ್ತೆಯಲ್ಲಿ ನಡೆಯುತ್ತಿದ್ದರೋ, ಆ ರಸ್ತೆಯ ಬದಿಯಲ್ಲಿ ಸರೋವರವಿತ್ತು. ಮತ್ತೊಂದು ಬದಿಯಲ್ಲಿ ಒಂದು ಎತ್ತರದ ಗೋಡೆಯಿತ್ತು. ಸ್ವಾಮೀಜಿಯವರು ನಡೆಯುತ್ತಿದ್ದಾಗ, ಅಕಸ್ಮಿಕವಾಗಿ ಎಲ್ಲಿಂದಲೋ ಕೆಲವು ಮಂಗಗಳು ಬಂದು ಅವರ ಬೆನ್ನು ಹತ್ತಿದವು. ಆಗ ಸ್ವಾಮೀಜಿಯವರು ಮಂಗಗಳು ತಮ್ಮ ಬೆನ್ನು ಹತ್ತಿರುವುದನ್ನು ನೋಡಿ ಓಡತೊಡಗಿದರು. ಮಂಗಗಳೂ ಅವರ ಹಿಂದೆ ಓಡತೊಡಗಿದವು. ಮತ್ತು ಮುಂದೆ ಬಂದು ಕಚ್ಚಲು ಪ್ರಯತ್ನಿಸುತ್ತಿದ್ದವು. ಸ್ವಾಮೀಜಿಯವರಿಗೆ ಈ ಮಂಗಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ತಿಳಿಯದಂತಾಗಿತ್ತು.

ಅದೇ ರಸ್ತೆಯ ಮೂಲೆಯಲ್ಲಿ ಒಬ್ಬ ಸಾಧು ಕುಳಿತಿದ್ದರು. ಅವರು ಸ್ವಾಮೀಜಿ ಓಡುತ್ತಿರುವುದನ್ನು ನೋಡಿ, ಕೂಗಿ ‘ಓಡಬೇಡ, ಮಂಗಗಳಿಗೆ ಮುಖಮಾಡಿ ನಿಂತುಕೊಳ್ಳುವಂತೆ’ ಎಂದು ಹೇಳಿದರು. ಅವರ ಮಾತು ಕೇಳಿ ಸ್ವಾಮೀಜಿಯವರು ಹಿಂದೆ ತಿರುಗಿದರು ಮತ್ತು ಮಂಗಗಳಿಗೆ ಮುಖಮಾಡಿ ನಿಂತುಕೊಂಡರು. ಹೀಗೆ ಮಾಡಿದ್ದರಿಂದ ಮಂಗಗಳು ಮೊದಲು ಹಿಂದೆ ಸರಿದವು ಮತ್ತು ತದನಂತರ ಅಲ್ಲಿಂದ ಓಡಿ ಹೋದವು.
ಇದರ ಬಳಿಕ ಒಂದು ಸಭೆಯಲ್ಲಿ ಸ್ವಾಮೀಜಿಯವರು ಈ ಘಟನೆಯನ್ನು ಹೇಳಿದರು. ಅವರು ‘ಈ ಘಟನೆಯಿಂದ ನಾನು ನನ್ನ ಜೀವನದಲ್ಲಿ ‘ಸಂಕಟದ ಸಮಯದಲ್ಲಿ ಓಡಿ ಹೋಗಬಾರದು. ಬದಲಾಗಿ ಅದನ್ನು ಎದುರಿಸಬೇಕು, ಹಾಗೂ ಹೋರಾಡಬೇಕು’ ಎನ್ನುವ ಬಹಳ ದೊಡ್ಡ ಪಾಠವನ್ನು ಕಲಿತೆ’ ಎಂದು ಹೇಳಿದರು.

ಬಾಲಕ ವಲ್ಲಭನ ಕಥೆ

೨. ಸ್ವಾತಂತ್ರ್ಯದ ಮೊದಲಿನ ಕಥೆಯಿದು. ವಲ್ಲಭ ಹೆಸರಿನ ಒಬ್ಬ ಸಾಹಸಿ ವಿದ್ಯಾರ್ಥಿಯಿದ್ದನು. ಒಮ್ಮೆ ಅವನಿಗೆ ಕಂಕುಳಿನಲ್ಲಿ ಆಗುವ ಒಂದು ದೊಡ್ಡ ಹುಣ್ಣು ಆಯಿತು. ಅಂದಿನ ದಿನಗಳಲ್ಲಿ ಈಗಿನಂತೆ ಡಾಕ್ಟರರು ಇರಲಿಲ್ಲ. ಹಾಗೂ ಈಗಿನಂತೆ ಶಲ್ಯಚಿಕಿತ್ಸೆ (ಆಪರೇಷನ್) ಆಗುತ್ತಿರಲಿಲ್ಲ. ಉದಾ: ಈಗ ಎಲ್ಲಿಯಾದರೂ ಬಹಳ ಪೆಟ್ಟಾದರೆ, ಅದನ್ನು ಸರಿಪಡಿಸಲು ಆ ಜಾಗದಲ್ಲಿ ಅರಿವಳಿಕೆ ಇಂಜೆಕ್ಷನ್ ಕೊಡುತ್ತಾರೆ ಮತ್ತು ಬಳಿಕ ಶಲ್ಯಚಿಕಿತ್ಸೆ ಮಾಡುತ್ತಾರೆ. ಇಂತಹ ಸೌಲಭ್ಯ ಆ ಕಾಲದಲ್ಲಿ ಇರಲಿಲ್ಲ. ಆ ಸಮಯದಲ್ಲಿ ಕಂಕುಳಿನ ಹುಣ್ಣನ್ನು ಒಡೆಯಲು ಕಾದಿರುವ ಕಬ್ಬಿಣದ ಸಲಾಕೆಯನ್ನು ಉಪಯೋಗಿಸುತ್ತಿದ್ದರು. ಹೀಗೆ ಮಾಡಿಸಿಕೊಳ್ಳಲು ವಲ್ಲಭನು ಊರಿನ ಒಬ್ಬ ವೈದ್ಯನ ಬಳಿಗೆ ಹೋದನು. ವಲ್ಲಭ ಬಹಳ ಚಿಕ್ಕ ವಯಸ್ಸಿನವನಾಗಿದ್ದನು. ವಲ್ಲಭನ ವಯಸ್ಸನ್ನು ನೋಡಿ ವೈದ್ಯನಿಗೆ ಕಾದ ಕಬ್ಬಿಣದ ಸಲಾಕೆಯಿಂದ ಕಂಕುಳಿನ ಹುಣ್ಣನ್ನು ಸುಡಲು ಧೈರ್ಯ ಸಾಲುತ್ತಿರಲಿಲ್ಲ.

ಆಗ ಏನಾಯಿತು ಗೊತ್ತೇ? ಆ ಚಿಕ್ಕ ಬಾಲಕ ವಲ್ಲಭನು ಆ ಕಾದ ಸಲಾಕೆಯನ್ನು ತನ್ನ ಕೈಯಲ್ಲಿ ತೆಗೆದುಕೊಂಡನು ಮತ್ತು ತನ್ನ ಕೈಯಿಂದಲೇ ಕಂಕುಳಿನ ಆ ಹುಣ್ಣನ್ನು ಸುಟ್ಟನು. ಸ್ವಲ್ಪವೂ ಕೂಗದೇ ಅವನು ವೇದನೆ ಸಹಿಸಿದನು. ವಲ್ಲಭನ ಧೈರ್ಯವನ್ನು ನೋಡಿ ವೈದ್ಯನಿಗೂ ಆಶ್ಚರ್ಯಚಕಿತನಾದನು. ಮಕ್ಕಳೇ, ಇದೇ ಬಾಲಕನು ಮುಂದೆ ಹಿಂದೂಸ್ಥಾನದ ‘ಉಕ್ಕಿನ ಮನುಷ್ಯ’ ಸರದಾರ ವಲ್ಲಭಭಾಯಿ ಪಟೇಲ ಎಂದು ಪ್ರಖ್ಯಾತಿ ಪಡೆದನು.

ಮಕ್ಕಳೇ, ನೀವೂ ಕೂಡ ಸಾಹಸಿಗಳಾಗಲು ಯಾವ ರೀತಿ ಪ್ರಯತ್ನಿಸಬಹುದು ಎಂದು ತಿಳಿದುಕೊಳ್ಳೋಣ.

೧.ಮಕ್ಕಳೇ, ಒಂದು ವೇಳೆ ನೀವು ಕತ್ತಲೆಗೆ ಹೆದರುತ್ತಿದ್ದರೆ, ಆ ಹೆದರಿಕೆಯನ್ನು ಹೇಗೆ ದೂರಗೊಳಿಸಬಹುದು? ನೀವು ರಾತ್ರಿಯಲ್ಲಿ ಒಬ್ಬರೇ ನಾಮಜಪವನ್ನು ಮಾಡುತ್ತ, ಕತ್ತಲೆಯಲ್ಲಿ ಕೋಣೆಗೆ ಹೋಗಿರಿ ಮತ್ತು ದೀಪವನ್ನು ಉರಿಸಿ ಹೊರಗೆ ಬನ್ನಿರಿ. ಐದು ನಿಮಿಷಗಳ ಬಳಿಕ ಪುನಃ ಆ ಕೋಣೆಗೆ ನಾಮಜಪವನ್ನು ಮಾಡುತ್ತ ಹೋಗಿರಿ ಮತ್ತು ದೀಪವನ್ನು ಆರಿಸಿರಿ. ಮರುದಿನ ರಾತ್ರಿಯೂ ಇದೇ ರೀತಿ ಪ್ರಯತ್ನಿಸಿರಿ. ಎರಡು ಮೂರು ದಿನಗಳ ಬಳಿಕ ನೀವು ಆ ಕೋಣೆಗೆ ನಾಮಜಪವನ್ನು ಮಾಡುತ್ತ ಹೋಗಿರಿ; ಆದರೆ ದೀಪವನ್ನು ಉರಿಸದೇ, ಕತ್ತಲೆಯಲ್ಲಿ ಕೆಲವು ಸಮಯ ನಿಲ್ಲಿರಿ. ಬಳಿಕ ದೀಪವನ್ನು ಹಚ್ಚಿರಿ. ಹೀಗೆ ಮಾಡುವುದರಿಂದ ನಿಧಾನವಾಗಿ ನಿಮ್ಮ ಕತ್ತಲೆಯ ಹೆದರಿಕೆ ದೂರವಾಗುವುದು.

೨. ನಿಮಗೆ ಯಾರ ಎದುರಿನಲ್ಲಿಯಾದರೂ ಮಾತನಾಡಬೇಕಾಗಿದ್ದರೆ, ಶಾಲೆಯಲ್ಲಿ ಭಾಷಣವನ್ನು ಮಾಡುವುದಿದ್ದರೆ, ಆಗ ಒಂದು ವೇಳೆ ಹೆದರಿಕೆಯಾಗುತ್ತಿದ್ದರೆ, ಅದನ್ನು ದೂರಗೊಳಿಸಲು ಮಾತನಾಡುವ ಅಭ್ಯಾಸವನ್ನು ಮಾಡಿ. ಮೊದಲು ಕನ್ನಡಿಯ ಎದುರಿಗೆ ನಿಂತುಕೊಂಡು ಮಾತನಾಡಲು ಪ್ರಯತ್ನಿಸಿರಿ. ಅದರ ಬಳಿಕ ನಿಮ್ಮ ಮನೆಯವರ ಎದುರಿಗೆ ನಿಂತುಕೊಂಡು, ಬಳಿಕ ನಿಮ್ಮ ಸ್ನೇಹಿತರ ಎದುರಿಗೆ ಮಾತನಾಡಲು ಪ್ರಯತ್ನಿಸಿರಿ. ಇದರಿಂದ ನಿಮ್ಮ ಹೆದರಿಕೆ ದೂರವಾಗಿ ನಿಮ್ಮಲ್ಲಿ ಆತ್ಮವಿಶ್ವಾಸ ನಿರ್ಮಾಣವಾಗುತ್ತದೆ.

೩.ಕರಾಟೆ, ಲಾಠಿ ಬೀಸುವುದು ಇತ್ಯಾದಿ ಪ್ರಶಿಕ್ಷಣವನ್ನು ಪಡೆದುಕೊಂಡು ನಿಮ್ಮನ್ನು ರಕ್ಷಿಸಿಕೊಳ್ಳಲು ಸಕ್ಷಮರಾಗಿರಿ. ಇದರಿಂದ ಕಳ್ಳರಿಂದ ಹೆದರಿಕೆಯಾಗುವುದಿಲ್ಲ. ಸ್ವರಕ್ಷಾ ಪ್ರಶಿಕ್ಷಣ ಕಲಿಯುವುದರಿಂದ ನಿಮ್ಮ ಶರೀರದ ಶಕ್ತಿ ಹೆಚ್ಚಾಗುವುದು. ಇದರೊಂದಿಗೆ ಮನೋಬಲವೂ ಹೆಚ್ಚಾಗುವುದು.

೪.ಇದರೊಂದಿಗೆ ನಿಮಗೆ ಯಾವ ಯಾವ ವಿಷಯಗಳಿಂದ ಭಯವೆನಿಸುತ್ತದೆಯೋ, ಅವುಗಳ ಮೇಲೆ ಜಯಗಳಿಸಲು ಯಾವ ರೀತಿ ಪ್ರಯತ್ನಿಸಬೇಕು, ಎನ್ನುವ ಬಗ್ಗೆ ನಿಮ್ಮ ತಂದೆ-ತಾಯಿ ಅಥವಾ ಹಿರಿಯ ಸಹೋದರ ಸಹೋದರಿಯರನ್ನು ಕೇಳಿರಿ.

ಮಕ್ಕಳೇ, ಧೈರ್ಯದೊಂದಿಗೆ ನಾವು ಸಾಹಸಿಗಳೂ ಆಗಿರಬೇಕು.

೧. ಮಕ್ಕಳೇ, ಜೀವನದಲ್ಲಿ ಯಶಸ್ವಿಯಾಗಲು, ಮನಸ್ಸಿನಲ್ಲಿ ಬಲವಾದ ಆತ್ಮವಿಶ್ವಾಸವಿರಬೇಕು. ಒಂದು ವೇಳೆ ನಮ್ಮಲ್ಲಿ ಸಾಹಸವಿದ್ದರೆ, ‘ಸಾಹಸ’ದಿಂದ ಆತ್ಮವಿಶ್ವಾಸ ಉತ್ಪನ್ನವಾಗಲು ಸಹಾಯಕವಾಗುತ್ತದೆ.

೨.ಜೀವನದಲ್ಲಿ ಕೆಲವೊಮ್ಮೆ ದುರ್ಘಟನೆ, ನೆರೆಹಾವಳಿ, ಭೂಕಂಪದಂತಹ ಸಂಕಟಗಳನ್ನು ಎದುರಿಸಬೇಕಾದರೆ, ಇಂತಹ ಸಮಯದಲ್ಲಿ ಮನೋಬಲ ಆವಶ್ಯಕವಿದೆ. ‘ಸಾಹಸ’ದಿಂದ ಮನೋಬಲದ ಹೆಚ್ಚಳವಾಗುತ್ತದೆ.

ಅದರೊಂದಿಗೆ ಸಹಸಿ ಕಾರ್ಯವನ್ನು ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

೧.ನಿಮ್ಮ ಶಕ್ತಿ ಮತ್ತು ಮಿತಿಯನ್ನು ಅರಿತುಕೊಂಡೇ ಸಾಹಸವನ್ನು ತೋರಿಸಬೇಕು.

೨.ಪ್ರಾಣವನ್ನು ಸಂಕಟದಲ್ಲಿ ಹಾಕುವಂತಹ ಸಾಹಸವನ್ನು ಮಾಡಬಾರದು. ಉದಾ. ಒಂದು ಸ್ಥಾನದಲ್ಲಿ ‘ಅಪಾಯಕಾರಿ ಸ್ಥಳ, ಇಲ್ಲಿಗೆ ಬರಬೇಡಿರಿ’ ಎಂದು ಬರೆದಿದ್ದರೆ, ಅದನ್ನು ಓದಿಯೂ ಅಲ್ಲಿಗೆ ಹೋಗುವುದು, ಪ್ರಾಣವನ್ನು ಸಂಕಟಕ್ಕೆ ತಳ್ಳಿದಂತಾಗುತ್ತದೆ.

೩. ನಿಮ್ಮ ಪ್ರಾಣವನ್ನು ಕಾಪಾಡಿಕೊಂಡು, ಇನ್ನೊಬ್ಬರ ಪ್ರಾಣವನ್ನು ರಕ್ಷಿಸಲು ಸಾಹಸ ಮಾಡಬೇಕು.

೪. ರಾಷ್ಟ್ರ ಅಥವಾ ಧರ್ಮ ರಕ್ಷಣೆಗಾಗಿ ಸಾಹಸವನ್ನು ಅವಶ್ಯ ಮಾಡಬೇಕು. ಇದನ್ನು ಮಾಡುವಾಗ ವಿವೇಕ ಬುದ್ಧಿಯನ್ನು ಸಮರ್ಪಕವಾಗಿ ಉಪಯೋಗಿಸಬೇಕು.

ಮಕ್ಕಳೇ, ಇಂದಿನಿಂದ ನಾವು ಭಾರತಮಾತೆಯ ಧೈರ್ಯಶಾಲಿ ಮತ್ತು ಸಾಹಸಿ ಸುಪುತ್ರರಾಗಲು ನಿಶ್ಚಯಿಸೋಣ. ನಾವು ಯಾವುದೇ ಮಾತಿಗೂ ಹೆದರುವುದಿಲ್ಲ. ನಾವು ಯಾವುದೇ ಸಂಕಟವನ್ನು ಧೈರ್ಯದಿಂದ ಎದುರಿಸುತ್ತೇವೆ ಎಂಬ ಆತ್ಮವಿಶ್ವಾಸವನ್ನು ಬೆಳೆಸೋಣ.

Leave a Comment