ಮಕ್ಕಳೇ, ಆಯೋಜನ ಕೌಶಲ್ಯ ಕಲಿಯಿರಿ ಮತ್ತು ಜೀವನವನ್ನು ಆನಂದಮಯ ಮಾಡಿಕೊಳ್ಳಿ

೧ ಆಯೋಜನೆ: ಆಯೋಜನೆಯ ಮಹತ್ತ್ವವನ್ನು ತಿಳಿದುಕೊಳ್ಳುವ ಸಲುವಾಗಿ ಆಯೋಜನೆಯ ಅಭಾವ ಮತ್ತು ಯೋಗ್ಯ ಆಯೋಜನೆಗೆ ಕ್ರಮವಾಗಿ ನಾವು ಶಾಮ್ ಮತ್ತು ರಾಮ್ ಎಂಬ ಮಕ್ಕಳ ಉದಾಹರಣೆಗಳನ್ನು ನೋಡೋಣ'

೧ ಅ. ಆಯೋಜನೆಯ ಅಭಾವದಿಂದಾದ ಶಾಮ್.ನ ಸ್ಥಿತಿ : ಶಾಮ್ ಮನಸ್ಸಿಗೆ ಬಂದಹಾಗೆ ಕೃತಿಗಳನ್ನು ಮಾಡುತ್ತಾನೆ, ಅಂದರೆ ಅಲ್ಲಿ ಆಯೋಜನೆ ಇರುವುದಿಲ್ಲ. ಹಾಗಾಗಿ ಅವನಿಗೆ ಕಾರ್ಯಗಳನ್ನು ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಪರಿಣಾಮವಾಗಿ ಅವನ ಸಮಯ ವ್ಯರ್ಥವಾಗುತ್ತದೆ. 'ದಿನದಲ್ಲಿ ನಾನು ಏನೆಲ್ಲ ಮಾಡಬಹುದು' ಎಂಬುವುದರ ಚಿಂತನೆ ಅವನಿಂದ ಆಗುವುದಿಲ್ಲ. ಯಾವ ಕಾರ್ಯವನ್ನು ಎಷ್ಟು ಸಮಯದಲ್ಲಿ ಪೂರ್ಣಗೊಳಿಸಬಹುದು ಎಂದು ಸ್ವಂತದ ಕ್ಷಮತೆಯನ್ನು ಅವನು ಅಳೆಯುವುದಿಲ್ಲ. ಪೂರ್ಣ ಕ್ಷಮತೆಯ ಉಪಯೋಗವಾಗದಿರುವುದರಿಂದ ಅವನು ಅಪಯಶಸನ್ನು ಅನುಭವಿಸುತ್ತಾನೆ.

೧ ಆ. ಆಯೋಜನೆಗಳನ್ನು ಮಾಡುವ ರಾಮನ ಸ್ಥಿತಿ : ರಾಮನು ಹಿಂದಿನ ದಿವಸವೇ ಮುಂದಿನ ದಿವಸ ಮಾಡಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಿ ಆಯೋಜನೆಯನ್ನು ಮಾಡುತ್ತಾನೆ. ಆದುದರಿಂದ ಪ್ರತಿಯೊಂದೂ ಕಾರ್ಯವನ್ನು ಅವನು ಕ್ಲಪ್ತ ಸಮಯದಲ್ಲಿ ಮಾಡುತ್ತಾನೆ. ಅವನ ಸಮಯದ ಯೋಗ್ಯ ಉಪಯೋಗವಾಗಿ ಸಮಯದ ಉಳಿತಾಯವೂ ಆಗುತ್ತದೆ. ಪ್ರತಿಯೊಂದು ಕ್ರತಿಯನ್ನು ಉತ್ತಮ ರೀತಿಯಲ್ಲಿ ಹೇಗೆ ಮಾಡಬಹುದು ಎಂಬುವುದರ ಚಿಂತನೆಯನ್ನು ಅವನು ಮಾಡುತ್ತಾನೆ. ಎಷ್ಟು ಸಮಯದಲ್ಲಿ ಎಷ್ಟು ಕಾರ್ಯಗಳನ್ನು ಮಾಡಿದೆ ಎಂದು ಸ್ವಂತ ಕ್ಷಮತೆಯ ಅಧ್ಯಯನ ಮಾಡುತ್ತಾನೆ. ಅವನು ಕರ್ಯಕ್ಷಮತೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡುತ್ತಾನೆ. ಅವನು ಎಲ್ಲರ ಪ್ರೀತಿಪಾತ್ರನಾಗುತ್ತಾನೆ.

ಇವರಿಬ್ಬರಲ್ಲಿ 'ನಾನೂ ರಾಮನ ಹಾಗೆ ಆಗಬೇಕು' ಎಂದು ನಿಮಗೆನಿಸಿದರೆ, ನೀವು ಕೂಡ ಪ್ರತಿಯೊಂದು ಕಾರ್ಯದ ಪೂರ್ವ ಆಯೋಜನೆಯನ್ನು ಮಾಡುವುದು ಅವಶ್ಯಕವಾಗಿದೆ.

೨. ಆಯೋಜನೆ ಮಾಡುವ ಅವಶ್ಯಕತೆ : ಸಮಯವು ಅಮೂಲ್ಯವಾಗಿದೆ. ಕಳೆದು ಹೋದ ಸಮಯವು ಮರಳಿ ಬರುವುದಿಲ್ಲ. ದೇವರು ನಮಗೆ ಅಮೂಲ್ಯವಾದ ಮನುಷ್ಯ ಜನ್ಮವನ್ನು ನೀಡಿದ್ದಾರೆ. ಇಂದಿನ ಕಾಲದಲ್ಲಿ ಮನುಷ್ಯರ ಆಯುಷ್ಯ ಸರಾಸರಿ ೬೦ ರಿಂದ ೭೦ ವರ್ಷಗಳಷ್ಟು ಆಗಿರುತ್ತದೆ. ಇಷ್ಟೂ ವರ್ಷಗಳ ಸದುಪಯೋಗ ಮಾಡಬೇಕಾದರೆ ನಾವು ಸಮಯದ ಆಯೋಜನೆ ಮಾಡಬೇಕು. ಆಯುಷ್ಯವು ಸೀಮಿತವಾಗಿರುವುದರಿಂದ ಜೀವನದಲ್ಲಿ ಪ್ರತಿಯೊಂದು ಕೃತಿಯನ್ನೂ ಕ್ಲಪ್ತ ಸಮದಲ್ಲಿ ಮಾಡುವುದು ಅವಶ್ಯಕವಾಗಿದೆ.

೩. ಸಮಯದ ಆಯೋಜನೆಯನ್ನು ಮಾಡದೆ ಇರುವುದರಿಂದ ದಿನವಿಡೀ ತುಂಬಾ ಸಮಯ ವ್ಯರ್ಥವಾಗುತ್ತದೆ : ಸಮಯದ ಸರಿಯಾದ ಆಯೋಜನೆಯನ್ನು ಮಾಡದೆ ಇದ್ದ ಕಾರಣ ದಿನವಿಡೀ ನಾವು ಅನಾವಶ್ಯಕವಾಗಿ ಅಥವಾ ತಿಳಿಯದೆಯೇ ಸಮಯವನ್ನು ವ್ಯರ್ಥ ಮಾಡುತ್ತೇವೆ. ಒಂದು ಕಾರ್ಯವನ್ನು ಸಾಧಾರಣವಾಗಿ ಅರ್ಧ ತಾಸಿನಲ್ಲಿ ಮುಗಿಸಬಹುದಾದರೆ, ನಾವು ಒಂದರಿಂದ ಒಂದೂವರೆ ಗಂಟೆ ವ್ಯಯಿಸುತ್ತೇವೆ. ಕಾರಣ, ನಾವು ಆ ಕಾರ್ಯವನ್ನು ಕ್ಲಪ್ತ ಸಮಯದಲ್ಲಿ ಮಾಡಲು ಆಯೋಜನೆ ಮಾಡಿರುವುದಿಲ್ಲ. ಈ ರೀತಿ ದಿನವೊಂದರಲ್ಲಿ ನಾವು ಅತ್ಯಮೂಲ್ಯವಾದ ೩ ರಿಂದ ೫ ಗಂಟೆಗಳನ್ನು ವ್ಯರ್ಥ ಮಾಡುತ್ತೇವೆ. ರಜಾದಿನಗಳಲ್ಲಿ ಇದಕ್ಕಿಂತಲೂ ಹೆಚ್ಚು ಸಮಯ ವ್ಯರ್ಥ ಮಾಡುತ್ತೇವೆ.

೪. ಸಮಯದ ಆಯೋಜನೆಯನ್ನು ಹೇಗೆ ಮಾಡಬೇಕು? : ಸಮಯದ ಆಯೋಜನೆಯನ್ನು ಮಾಡುವಾಗ ನಾವು ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೆ ಯಾವ ಯಾವ ಕಾರ್ಯಗಳನ್ನು ಮಾಡಬೇಕು ಎಂದು ಪಟ್ಟಿ ಮಾಡಬೇಕು. ಇದಕ್ಕನುಸಾರ ಯಾವ ಕರ್ಯಕ್ಕಾಗಿ ಎಷ್ಟು ಸಮಯ ತಗುಲಬಹುದು ಎಂದು ನಿಶ್ಚಯಿಸಬೇಕು. ಇದಕ್ಕೆ 'ಆಯೋಜನೆ' ಎನ್ನುತ್ತಾರೆ.

೫. ಆಯೋಜನೆಗೆ ಬದ್ಧವಾಗಿ ಕಾರ್ಯ ಮಾಡುವುದು : ನಿಗದಿ ಪಡಿಸಿದ ಸಮಯದಲ್ಲಿಯೇ ಕಾರ್ಯವನ್ನು ಪೂರ್ಣಗೊಳಿಸುವುದೇ ಆಯೋಜನೆಗೆ ಬದ್ಧವಾಗಿ ಕಾರ್ಯ ಮಾಡುವುದರ ಅರ್ಥ. ಸಿದ್ಧಪಡಿಸಿದ ಆಯೋಜನೆಯಂತೆ ಪ್ರತಿಯೊಂದು ಕಾರ್ಯವನ್ನು ತತ್ ಕ್ಷಣ ಮಾಡುವ ಪ್ರಯತ್ನ ಮಾಡಿದರೆ ಸಮಯದ ಉಳಿತಾಯವಾಗಿ ಅಲ್ಪ ಸಮಯದಲ್ಲಿ ಅನೇಕ ಕಾರ್ಯಗಳನ್ನು ಮಾಡಲು ಸಹಾಯವಾಗುತ್ತದೆ. ಹೀಗೆ ಮಾಡಿ ಉಳಿದ ಸಮಯವನ್ನು ನಾವು ಸತ್ಕಾರ್ಯಗಳಲ್ಲಿ ತೊಡಗಿಸಬಹುದು.

ಮಕ್ಕಳೇ, ಈಶ್ವರನ ಗುಣಗಳಲ್ಲಿ ಒಂದಾದ 'ಆಯೋಜನೆ'ಯ ಕೌಶಲ್ಯ ನಮಗೆ ಜೀವನವಿಡೀ ಉಪಯುಕ್ತವಾಗುತ್ತದೆ. ನಮ್ಮ ಅತ್ಯಮೂಲ್ಯ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಆದುದರಿಂದ ನಿಯೋಜನ ಕೌಶಲ್ಯವನ್ನು ಕಲಿಯಿರಿ ಮತ್ತು ಜೀವನದಲ್ಲಿ ಆನಂದ ನಿಮ್ಮದಾಗಿಸಿಕೊಳ್ಳಿ.

Leave a Comment