ನಮ್ರತೆಯ ಗುಣವನ್ನು ಹೇಗೆ ಬೆಳೆಸಿಕೊಳ್ಳುವುದು?

ಬಾಲಮಿತ್ರರೇ, ನೈತಿಕತೆಯನ್ನು ಹೆಚ್ಚಿಸಲು ನಮ್ಮಲ್ಲಿ ನಮ್ರತೆಯನ್ನು ಹೆಚ್ಚಿಸುವುದು ಏಕೆ ಮಹತ್ವದ್ದಾಗಿದೆ ಎಂಬುದನ್ನು ಕಲಿಯೋಣ.

ಬನ್ನಿ ಮೊದಲಿಗೆ ನಾವು ನಮ್ರತೆಯ ಮಹತ್ವವನ್ನು ತಿಳಿದುಕೊಳ್ಳೋಣ.

೧. ಮಕ್ಕಳೇ, ಒಂದು ಪ್ರಸಿದ್ಧ ಉಕ್ತಿಯಿದೆ ‘ಭಯಾನಕ ಪ್ರವಾಹದಲ್ಲಿ ದೊಡ್ಡ ದೊಡ್ಡ ಮರಗಳು ಹರಿದು ಹೋಗುತ್ತವೆ ಆದರೆ ಚಿಕ್ಕದಾದ ಹುಲ್ಲು ಉಳಿಯುತ್ತದೆ’. ಮಕ್ಕಳೇ ತಾವು ನೋಡಿರಬಹುದು, ಪ್ರವಾಹ ಬಂದಾಗ ನೀರು ನದಿಯ ದಡವನ್ನು ದಾಟಿ ಹರಿಯುತ್ತಿರುತ್ತದೆ. ದಂಡೆಯ ಮೇಲೆ ದೊಡ್ಡ ಮರಗಳಿರುತ್ತವೆ. ಅವುಗಳು ನೀರಿನ ತೀವ್ರ ಹರಿಯುವಿಕೆಯಿಂದ ಬಿದ್ದು ಹೋಗುತ್ತವೆ. ಹೀಗೆ ಏಕೆ ಆಗುತ್ತದೆ ಎಂಬುದು ತಿಳಿದಿದೆಯೇ ? ಏಕೆಂದರೆ ಅವುಗಳು ದೃಢವಾಗಿ ನಿಂತಿರುತ್ತವೆ ಹಾಗೂ ನೆರೆಯ ಪ್ರವಾಹದಲ್ಲಿ ಬಾಗುವುದಿಲ್ಲ. ಆದರೆ ಚಿಕ್ಕ ಹುಲ್ಲು ಹರಿದುಹೋಗುವುದಿಲ್ಲ; ಏಕೆಂದರೆ ನೆರೆ ಬಂದಾಗ ಅವು ನಮ್ರತೆಯಿಂದ ಬಾಗುತ್ತದೆ. ಕೇವಲ ನಮ್ರತೆಯಿಂದಲೇ ಅದಕ್ಕೆ ಯಾವುದೇ ಹಾನಿಯಾಗುವುದಿಲ್ಲ.

೨. ಸಂತ ತುಕಾರಾಮ ಮಹಾರಾಜರು `ಯಾರ ವ್ಯವಹಾರದಲ್ಲಿ ನಮ್ರತೆಯಿದೆ, ಅವನು ಭಗವಂತನಿಗೆ ಪ್ರಿಯನಾಗಿದ್ದಾನೆ’ ಎಂದು ಹೇಳಿದ್ದಾರೆ.

ಬಾಲಮಿತ್ರರೇ, ನಮ್ಮಲ್ಲಿ ನಮ್ರತೆಯ ಗುಣವನ್ನು ತರಲು ನಾವು ನಮ್ಮ ಆದರ್ಶ ರಾಷ್ಟ್ರಪುರುಷರಿಂದ ಕಲಿಯಬೇಕು. ಇಂತಹದೇ ಕೆಲವು ಉದಾಹರಣೆಗಳನ್ನು ನಾವು ನೋಡೋಣ.

೧. ವೀರಸಾವರಕರರು ಪುಣೆಯ ‘ಫರ್ಗ್ಯುಸನ್ ಕಾಲೇಜಿ’ನಲ್ಲಿ ಓದುತ್ತಿರುವಾಗ ವ್ರ್ಯಾಂಗ್ಲರ್ ಪರಾಂಜಪೆಯವರು ಅಲ್ಲಿನ ಪ್ರಾಚಾರ್ಯರಾಗಿದ್ದರು. ಆ ಸಮಯದಲ್ಲಿ ದೇಶದಲ್ಲಿ ಆಂಗ್ಲರ ಅಧಿಕಾರವಿತ್ತು. ಅಲ್ಲಿ ಆಂಗ್ಲರನ್ನು ವಿರೋಧಿಸಲು ವಿದೇಶಿ ಬಟ್ಟೆಗಳನ್ನು ಸುಡಲಾಗುತ್ತಿತ್ತು. ಈ ಆಂದೋಲನದಲ್ಲಿ ಸಾವರಕರರೂ ಭಾಗವಹಿಸಿದ್ದರು. ಆಗ ಪ್ರಾಚಾರ್ಯರಾದ ವ್ರ್ಯಾಂಗ್ಲರ್ ಪರಾಂಜಪೆಯವರು ಸಾವರಕರರನ್ನು ವಿದ್ಯಾರ್ಥಿನಿಲಯದಿಂದ ಹೊರಗೆ ಹಾಕಿದರು. ಮುಂದೆ ಪುಣೆಯಲ್ಲಿ ನಡೆಯುತ್ತಿದ್ದ ಒಂದು ಕಾರ್ಯಕ್ರಮದಲ್ಲಿ ಸಾವರಕರರು ವ್ಯಾಸಪೀಠದ ಮೇಲೆ ಕುಳಿತಿದ್ದರು. ಸಾವರಕರರು ವ್ರ್ಯಾಂಗ್ಲರ್ ಪರಾಂಜಪೆಯವರು ಸಭೆಯಲ್ಲಿ ಕೆಳಗೆ ಕುಳಿತಿರುವುದನ್ನು ನೋಡಿದರು. ಅವರನ್ನು ನೋಡುತ್ತಲೇ ಸಾವರಕರರು ವ್ಯಾಸಪೀಠದಿಂದ ಇಳಿದು ಅವರ ಬಳಿ ಹೋಗಿ ಅವರ ಕಾಲಿಗೆ ನಮಸ್ಕರಿಸಿದರು. ಹಾಗೂ ಅವರಿಗೆ ‘ಗುರುಗಳೇ, ತಾವು ಇಲ್ಲಿ ಕೆಳಗೆ ಕುಳಿತರೆ ತಮ್ಮ ಶಿಷ್ಯನು ವ್ಯಾಸಪೀಠದ ಮೇಲೆ ಹೇಗೆ ಕುಳಿತುಕೊಳ್ಳಬಹುದು ? ದಯಮಾಡಿ ತಾವೂ ವ್ಯಾಸಪೀಠದ ಮೇಲೆ ಬನ್ನಿ’ ಎಂದು ಹೇಳಿ ಕೈ ಹಿಡಿದು ಅವರನ್ನು ವ್ಯಾಸಪೀಠದ ಮೇಲೆ ಕರೆತಂದರು ಹಾಗೂ ತಮ್ಮ ಬಳಿ ನಮ್ರತೆಯಿಂದ ಕುರ್ಚಿಯ ಮೇಲೆ ಕುಳ್ಳಿಸಿದರು. ಮಕ್ಕಳೇ, ನಮಗೂ ನಮ್ಮಲ್ಲಿ ಇಂತಹ ನಮ್ರತೆಯನ್ನು ತರಬೇಕಿದೆ.

೨. ನಾವು ಇನ್ನೊಂದು ಉದಾಹರಣೆಯನ್ನು ನೋಡೋಣ. ಪುಣೆಯ ಫರ್ಗ್ಯುಸನ್ ಕಾಲೇಜಿನ ೧೯೪೯ರಲ್ಲಿ ಅಮೃತಮಹೋತ್ಸವವಿತ್ತು. ಅಂದರೆ ಫರ್ಗ್ಯುಸನ್ ಕಾಲೇಜು ಸ್ಥಾಪನೆಯಾಗಿ ೭೫ ವರ್ಷಗಳು ಪೂರ್ಣವಾಗಿದ್ದವು. ಅದಕ್ಕೆ ಭಾರತದ ಪ್ರಥಮ ರಾಷ್ಟ್ರಪತಿಗಳಾದ ಡಾ. ರಾಜೇಂದ್ರಪ್ರಸಾದರು ಉಪಸ್ಥಿತರಿದ್ದರು. ಅವರು ಕಾರ್ಯಕ್ರಮಕ್ಕಾಗಿ ವ್ಯಾಸಪೀಠಕ್ಕೆ ಬಂದಾಗ ಅವರಿಗೆ ಎದುರು ಮಹರ್ಷಿ ಅಣ್ಣಾ ಕರ್ವೆಯವರು ಕುಳಿತಿರುವುದು ಕಾಣಿಸಿತು. ಡಾ. ರಾಜೇಂದ್ರ ಪ್ರಸಾದರು ತಕ್ಷಣ ವ್ಯಾಸಪೀಠದಿಂದ ಕೆಳಗಿಳಿದು ಮಹರ್ಷಿ ಅಣ್ಣಾ ಕರ್ವೆಯವರ ಬಳಿ ಹೋದರು. ಮಹರ್ಷಿ ಅಣ್ಣಾರವರಿಗೆ ನತಮಸ್ತಕರಾಗಿ ನಮಸ್ಕರಿಸಿ ಅವರು ಪುನಃ ವ್ಯಾಸಪೀಠಕ್ಕೆ ಹೋದರು. ಡಾ. ರಾಜೇಂದ್ರಪ್ರಸಾದರು ರಾಷ್ಟ್ರಪತಿಗಳಾಗಿದ್ದರು ಹಾಗೂ ಜ್ಞಾನಿಗಳಾಗಿದ್ದರು, ಆದರೆ ಅವರಲ್ಲಿದ್ದ ನಮ್ರತೆಯಿಂದಾಗಿ ಅವರು ವ್ಯಾಸಪೀಠದಿಂದ ಕೆಳಗಿಳಿದು ಮಹರ್ಷಿ ಕರ್ವೆಯವರನ್ನು ನಮಸ್ಕರಿಸಿದರು.

ಮಕ್ಕಳೇ, ಈಗ ತಮ್ಮ ಮನಸ್ಸಿನಲ್ಲಿ ಇಂತಹ ನಮ್ರತೆಯನ್ನು ನಮ್ಮಲ್ಲಿ ತರಲು ನಾವೇನು ಮಾಡಬೇಕು ? ಎಂದು ಪ್ರಶ್ನೆ ಬಂದಿರಬಹುದು.

೧. ಇದಕ್ಕಾಗಿ ಮೊತ್ತಮೊದಲಿಗೆ ನಮ್ಮ ನಡೆ-ನುಡಿಗಳಲ್ಲಿ ನಮ್ರತೆಯನ್ನು ಇಡಬೇಕು. ಯಾವ ಮಕ್ಕಳು ನಮ್ರತೆಯಿಂದ ಮಾತನಾಡುತ್ತಾರೆ ಹಾಗೂ ವ್ಯವಹರಿಸುತ್ತಾರೆ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ. ತಾವು ನಿಲ್ಲುವ, ಮಾತನಾಡುವ ಹಾಗೂ ವ್ಯವಹರಿಸುವ ರೀತಿಯಲ್ಲಿ ತಮ್ಮ ನಮ್ರತೆಯು ಕಂಡುಬರುತ್ತದೆ. ಇದರ ಒಂದು ಉದಾಹರಣೆಯನ್ನು ನೋಡೋಣ.

ತಾವು ಸ್ವಾವಲಂಬನೆಯ ಗುಣದಿಂದ ಪ್ರತಿದಿನ ಶಾಲೆಗೆ ಒಯ್ಯುವ ಊಟದ ಡಬ್ಬಿಯನ್ನು ಸ್ವತಃ ತುಂಬಿಸುತ್ತೀರಿ. ಆದರೆ ಕೆಲವು ದಿನ ನಿಮಗೆ ಸೈಕಲಿಗೆ ಗಾಳಿ ಹಾಕಲು ಅಥವಾ ಇತರ ಕೆಲಸಗಳಿಂದ ಅಮ್ಮನಿಗೆ ಡಬ್ಬಿ ತುಂಬಿಸಲು ಹೇಳುತ್ತೀರಿ. ಈ ಸಮಯದಲ್ಲಿ ದೂರದಲ್ಲಿ ನಿಂತು ಬೊಬ್ಬೆ ಹೊಡೆದು ಡಬ್ಬಿ ತುಂಬಿಸಲು ಹೇಳದೇ ಅಮ್ಮನ ಬಳಿ ಹೋಗಿ ನಮ್ರತೆಯಿಂದ ‘ಅಮ್ಮ ನೀವು ನನ್ನ ಡಬ್ಬಿಯನ್ನು ತುಂಬಿಸಿ ಕೊಡಬಹುದಾ ? ನನಗೆ ಶಾಲೆಗೆ ಹೋಗಲು ತಡವಾಗುತ್ತಿದೆ ಹಾಗೂ ಸೈಕಲಿಗೆ ಗಾಳಿ ಹಾಕಿಸಬೇಕು’ ಎಂದು ಕೇಳಿರಿ. ಹೀಗೆ ನೀವು ನಮ್ರತೆಯಿಂದ ಕೇಳುವುದರಿಂದ ಅಮ್ಮ ಡಬ್ಬಿಯನ್ನು ತುಂಬಿಸಿ ಕೊಡುತ್ತಾರೆ, ಹಾಗೂ ನಿಮ್ಮ ನಮ್ರತೆಯಿಂದ ಕೂಡಿದ ಮಾತುಗಳಿಂದ ಸಂತುಷ್ಟರಾಗುತ್ತಾರೆ.

೨. ಮಿತ್ರರೇ, ನಾವು ಕೇವಲ ತಂದೆ-ತಾಯಿ ಹಾಗೂ ಶಾಲೆಯ ಶಿಕ್ಷಕರೊಂದಿಗೆ ಮಾತ್ರವಲ್ಲ ಶಾಲೆಯಲ್ಲಿರುವ ಗುಮಾಸ್ತರು, ಹಾಗೂ ಎಲ್ಲ ವರ್ಗದ ವಿದ್ಯಾರ್ಥಿಗಳೊಂದಿಗೆ ನಮ್ರತೆಯಿಂದಲೇ ಮಾತನಾಡಬೇಕು ಹಾಗೂ ವ್ಯವಹಾರ ಮಾಡಲು ಕಲಿಯಬೇಕು.

೩. ಬಾಲಮಿತ್ರರೇ, ಎಲ್ಲರೊಂದಿಗೆ ಆದರದಿಂದ ವ್ಯವಹಾರ ಮಾಡುವುದು, ಚಿಕ್ಕವರು-ದೊಡ್ಡವರೊಂದಿಗೆ ಯೋಗ್ಯವಾಗಿ ಆದರದಿಂದ ವರ್ತಿಸುವುದು ನಮ್ಮ ಸಂಸ್ಕೃತಿಯಾಗಿದೆ. ಇದು ನಮ್ಮ ಸಂಸ್ಕಾರ ಹಾಗೂ ಸಭ್ಯತೆಯ ಲಕ್ಷಣವಾಗಿದೆ. ಈ ಆದರಭಾವವನ್ನು ಮುಂದೆ ಹೇಳಲಾದ ಆಚರಣೆಗಳಿಂದ ವ್ಯಕ್ತಪಡಿಸಿರಿ.
ಅ. ಪ್ರತಿದಿನ ಹಿರಿಯರಿಗೆ ತಲೆಬಾಗಿ ನಮಸ್ಕಾರ ಮಾಡಿ.
ಆ. ನಮ್ಮ ಮನೆಗೆ ಬಂದಿರುವ ಅತಿಥಿಗಳಿಗೆ ಹಾಗೂ ಅವರೊಂದಿಗೆ ಬಂದಿರುವ ಮಕ್ಕಳನ್ನು ನಗುಮುಖದಿಂದ ಸ್ವಾಗತಿಸಿ.
ಇ. ಕೇವಲ ಅಡಚಣೆಯ ಸಮಯದಲ್ಲಿ ಮಾತ್ರವಲ್ಲ, ಇತರ ಸಮಯದಲ್ಲಿಯೂ ನಮ್ರತೆಯಿಂದ ವ್ಯವಹಾರ ಮಾಡಬೇಕು.

ಬಾಲಮಿತ್ರರೇ, ನಮ್ರತೆಯು ಎಲ್ಲ ಗುಣಗಳ ರಾಜನಿದ್ದಾನೆ. ಆದುದರಿಂದ ಎಷ್ಟೇ ಅಧ್ಯಯನ ಮಾಡಿದರೂ ಅಥವಾ ಎಷ್ಟೇ ದೊಡ್ಡವರಾದರೂ ಎಂದಿಗೂ ನಮ್ರತೆಯನ್ನು ಬಿಡಬಾರದು !

Leave a Comment