ಹ್ಯಾರಿ ಪಾಟರ್ ಬದಲು ದೇವತೆಗಳ ಮತ್ತು ವೀರರ ಕಥೆಗಳಿರುವ ಪುಸ್ತಕಗಳನ್ನು ಓದಿರಿ !

ಮಕ್ಕಳೇ, ಹ್ಯಾರಿ ಪಾಟರ್.ನಕಥೆಯು ವಾಸ್ತವಿಕತೆಯ ಆಧಾರವಿಲ್ಲದ ಕಾಲ್ಪನಿಕ ಕಥೆಯಾಗಿದೆ. ಎಂದಿಗಾದರೂ ಈ ಕಾಲ್ಪನಿಕ ಸಾಹಸಕಥೆಯು ಸತ್ಯವಾಗಬಹುದೇ? ಕೇವಲ ಅವನ ಗುಂಗಿನಲ್ಲಿ ನಮ್ಮ ಸಂಸ್ಕೃತಿಯಲ್ಲಿರುವ ಅಮೂಲ್ಯ ಸಂಪತ್ತನ್ನು ಮರೆಯಬೇಡಿರಿ! ನಮ್ಮಲ್ಲಿ 'ಅಮರ್ ಚಿತ್ರ ಕಥೆಗಳು' ಹಾಗೂ ‘ಪಂಚತಂತ್ರ’ ಇವುಗಳಿವೆ. ಇಷ್ಟೇ ಏಕೆ ನಿಜವಾದ ಅದ್ವೀತಿಯ ಪರಾಕ್ರಮವನ್ನು ಮೆರೆದ ರಾಷ್ಟ್ರಪುರುಷರು ಹಾಗೂ ಕ್ರಾಂತಿಕಾರರಿದ್ದಾರೆ; ಯುಗಪುರುಷರಿದ್ದಾರೆ. ಶಿವಛತ್ರಪತಿಯ ಸಂಪೂರ್ಣ ಜೀವನವು ಯಾವುದೇ ಚಿತ್ತರಂಜಕ ಪ್ರಸಂಗಕ್ಕಿಂತಲೂ ಕಡಿಮೆ ಏನಿಲ್ಲ! ಶಿವಾಜಿಯು ತಮ್ಮ ೧೬ನೇ ವಯಸ್ಸಿನಲ್ಲಿಯೇ ಮೋಘಲರನ್ನು ಹೇಗೆ ಸೋಲಿಸಿದರು ಎಂಬುದನ್ನು ಓದಿರಿ! ಚಿಕ್ಕವಯಸ್ಸಿನಲ್ಲಿ ‘ಜ್ಞಾನೇಶ್ವರಿ’ಯಂತಹ ಮಹಾನ್ ಗ್ರಂಥವನ್ನು ಬರೆದ ಜ್ಞಾನೇಶ್ವರರು ಹೇಗೆ ಸಂತರಾದರು ಎಂಬುದನ್ನು ಅಧ್ಯಯನ ಮಾಡಿರಿ! ಭಕ್ತ ಕನಕದಾಸರು ತಮ್ಮ ಅನನ್ಯ ಭಕ್ತಿಯಿಂದ ಶ್ರೀ ಕೃಷ್ಣನ ಕೃಪೆಯನ್ನು ದರ್ಶನದ ಭಾಗ್ಯವನ್ನು ಹೇಗೆ ಪಡೆದರು ಎಂದು ತಿಳಿದುಕೊಳ್ಳಿ! ಭಕ್ತಿ ಮತ್ತು ಸೇವೆಗಾಗಿ ಆಕಾಶದಲ್ಲಿ ಜಿಗಿಯುವ ಮಾರುತಿಯ ಕಥೆಯು ಹೆಚ್ಚು ಸಂಸ್ಕಾರದಾಯಕವಾಗಿದೆಯಲ್ಲವೇ?

ಮಕ್ಕಳ ವಿಷಯದಲ್ಲಿ ಧರ್ಮವನ್ನು ಎಲ್ಲಿ ತರುವುದು ಎಂದು ಯಾರಿಗಾದರೂ ಅನಿಸಬಹುದು? ಸಾಹಿತ್ಯವು ಸಾಹಿತ್ಯವೇ ಆಗಿದೆ, ಅದಕ್ಕೆ ದೇಶದ, ಧರ್ಮದ ಬಂಧನಗಳಿರುವುದಿಲ್ಲ. ಪಾಲಕರೇ, ಮಕ್ಕಳಲ್ಲಿ ಕಥೆಗಳಲ್ಲಿರುವ ಸಂಸ್ಕಾರವೇ ಬರುತ್ತದೆ ಎಂಬುದನ್ನು ಗಮನದಲ್ಲಿಡಿರಿ. ಪಾಶ್ಚಾತ್ಯ ಕಥೆಗಳಲ್ಲಿ ಪಾಶ್ಚಾತ್ಯ ರೂಢಿ ಪರಂಪರೆಗಳು, ಪಾಶ್ಚಾತ್ಯ ಆದರ್ಶಗಳು ಬರುತ್ತವೆ ಮತ್ತು ಅವೇ ನಮ್ಮ ಆದರ್ಶವಾಗುತ್ತಿವೆ. ಇತ್ತೀಚೆಗೆ ಪಾಲಕರು ಹಾಗೂ ಶಿಕ್ಷಕರಿಗೂ ಹ್ಯಾರಿಯ ರಹಸ್ಯಕಥೆಗಳು ನಿಜವಾಗಿಯೂ ರೋಚಕವಾಗಿವೆ ಎಂದು ಅನಿಸುತ್ತಿದೆ. ಈಗ ಪಾಲಕರಿಗೆ ‘ನಮ್ಮ ಬಾಲಕೃಷ್ಣನ ಬಾಲಲೀಲೆಗಳು ಕೇವಲ ರೋಚಕವಾಗಿರದೇ ಸಾಹಸಯುಕ್ತ, ರಹಸ್ಯಮಯ, ಚಿತ್ತರಂಜಕವೂ, ಸಂಸ್ಕಾರ ನಿರ್ಮಾಣ ಮಾಡುವಂತಹದ್ದೂ ಆಗಿವೆ ಮತ್ತು ಮುಖ್ಯ ವಿಷಯವೆಂದರೆ ಇವು ಸತ್ಯವಾಗಿವೆ‘ ಎಂಬುದನ್ನು ಮನವರಿಕೆ ಮಾಡಿಕೊಡುವ ಸಮಯ ಬಂದಿದೆ. ಈ ಪ್ರಶ್ನೆಯು ಕೇವಲ ಒಂದು ಕಥೆಗೆ ಅಥವಾ ಮಕ್ಕಳ ಕಥೆಗೆ ಸಂಬಂಧಿಸದೆ ಅದು ಭಾಷೆ, ಸಂಸ್ಕೃತಿ, ಧರ್ಮದಷ್ಟು ದೊಡ್ಡದಾಗಿದೆ. ನಾವು ಎಷ್ಟು ಆಂಗ್ಲರಂತೆ ಆಗಿದ್ದೇವೆ ಎಂದರೆ ನಮಗೆ ಆಂಗ್ಲ ಶಬ್ಧಗಳು, ಆಹಾರ ಪದ್ಧತಿ ಹಾಗೂ ಉಡುಪುಗಳು ಅನಿವಾರ್ಯವಾಗಿವೆ. ಇದು ಹೀಗೆಯೇ ನಡೆಯುತ್ತಿದ್ದರೆ ನಾಳೆ ಎಲ್ಲರಿಗೂ ಅವರಲ್ಲಿನ ಅತ್ಯಂತ ಕೆಟ್ಟ ಸಂಗತಿಗಳೂ ಅನಿವಾರ್ಯವಾಗದೇ ಇರುವುದಿಲ್ಲ.

‘ಕಾರ್ಟೂನ್’ ನೋಡುವುದಕ್ಕಿಂತಲೂ
ಪಂಚತಂತ್ರದಲ್ಲಿನ ಬೋಧಪ್ರದ ಕಥೆಗಳನ್ನು ಓದಬೇಕು.

ಇಂದಿನ ಮಕ್ಕಳು ಗಂಟೆಗಟ್ಟಲೆ ಪಾಶ್ಚಾತ್ಯರು ತಯಾರಿಸಿದ ‘ಟಾಮ್ ಎಂಡ್ ಜೆರ್ರಿ’ಯಂತಹ ನಿರರ್ಥಕ ಮತ್ತು ಕೇವಲ ಮೋಜಿಗಾಗಿ ಇರುವ ಕಿರುಚಿತ್ರಗಳನ್ನು ನೋಡುತ್ತಿರುತ್ತಾರೆ. ಆ ಕಿರುಚಿತ್ರಗಳಲ್ಲಿ ಕೇವಲ ಪರಸ್ಪರರ ಮೈಮೇಲೆ ಏರಿಹೋಗುವುದನ್ನು ಮತ್ತು ಥಳಿಸುವುದನ್ನೇ ತೋರಿಸುವುದರಿಂದ ಅದರಿಂದ ಯಾವುದೇ ನೀತಿ ದೊರೆಯುವುದಿಲ್ಲ. ಇದರ ಬದಲಾಗಿ ಮಕ್ಕಳು ಪಂಚತಂತ್ರದಲ್ಲಿರುವ ಕಥೆಗಳನ್ನು ಓದಿದರೆ ಅದರಿಂದ ಅವರಿಗೆ ನೀತಿಶಾಸ್ತ್ರ ಮತ್ತು ವ್ಯವಹಾರದಲ್ಲಿ ಯಶಸ್ವಿಯಾಗುವುದರ ಜ್ಞಾನ ದೊರೆಯುವುದು. ಪಂಚತಂತ್ರದಲ್ಲಿನ ಕಥೆಗಳಿಂದ ಸಂಸ್ಕೃತ ಸುಭಾಷಿತಗಳನ್ನೂ ಕಲಿಸಲಾಗಿದೆ. ಅನೇಕ ಪಾಶ್ಚಾತ್ಯ ಕಥಾಲೇಖಕರು ಪಂಚತಂತ್ರದಿಂದಲೇ ಪ್ರೇರಣೆಯನ್ನು ಪಡೆದು ‘ಇಸಾಪ ನೀತಿ’ ಮುಂತಾದ ಕಥೆಗಳನ್ನು ಬರೆದರು!

ಮಕ್ಕಳೇ, ಸಂತರ ಚರಿತ್ರೆಗಳನ್ನು ಓದಿರಿ
ಮತ್ತು ಭಾರತ ದೇಶದ ಆದರ್ಶ ನಾಗರೀಕರಾಗಿರಿ !

ಹಿಂದೂಸ್ಥಾನವು ಸಂತರ ಭೂಮಿಯಾಗಿದೆ. ಹಿಂದೂಸ್ಥಾನದಲ್ಲಿ ಸಂತ ಜ್ಞಾನೇಶ್ವರ, ಸಂತ ಜನಾಬಾಯಿ, ಭಕ್ತ ಪುರಂದರದಾಸರು, ಭಕ್ತ ಕನಕದಾಸರು, ಸಂತ ಮೀರಾಬಾಯಿ, ಸಮರ್ಥ ರಾಮದಾಸಸ್ವಾಮೀ, ರಾಮಕೃಷ್ಣ ಪರಮಹಂಸ, ಸ್ವಾಮೀ ವಿವೇಕಾನಂದ ಮುಂತಾದ ಅನೇಕ ಸಂತರು ಆಗಿಹೋಗಿದ್ದಾರೆ. ಈ ಸಂತರ ಚರಿತ್ರೆಗಳನ್ನು ಓದುವುದರಿಂದ ಯಾವ ಲಾಭಗಳಾಗುತ್ತವೆ ಎಂಬುದನ್ನು ಮುಂದಿನ ಲೇಖನದಲ್ಲಿ ನೋಡೋಣ.

ಸಂತರ ಚರಿತ್ರೆಗಳನ್ನು ಓದುವುದರಿಂದ ಆಗುವ ಲಾಭ

ಅ. ಸಂತರ ಚರಿತ್ರೆಯಿಂದ ಆದರ್ಶ ದೊರಕುವುದು : ಸದ್ಯದ ಸ್ಥಿತಿಯಲ್ಲಿಸಮಾಜದ ಎದುರು ಹೆಚ್ಚಿನ ಆದರ್ಶಗಳಿಲ್ಲ. ಇದರಿಂದಾಗಿ ಸಮಾಜವು ದಿಶಾಹೀನವಾಗಿದೆ. ಸಮಾಜಕ್ಕೆ ‘ತಾವು ಯಾರನ್ನು ಅನುಕರಿಸಬೇಕು’ ಎಂಬ ಪ್ರಶ್ನೆ ಎದುರಾಗಿದೆ. ಕೆಲವರು ಲೇಖಕರು, ಸಂಗೀತಕಾರರು, ಗಾಯಕರನ್ನು ಆದರ್ಶವೆಂದು ತಿಳಿದರೆ ಇನ್ನೂ ಕೆಲವರು ಶಿಕ್ಷಣಕ್ಷೇತ್ರದಲ್ಲಿನ ವ್ಯಕ್ತಿ, ಉದ್ಯೋಗಪತಿಯನ್ನು ಆದರ್ಶವೆಂದು ತಿಳಿಯುತ್ತಾರೆ. ಚಿಕ್ಕ ಮಕ್ಕಳು ಚಲನಚಿತ್ರ ಕಲಾವಿದರು, ಆಟಗಾರರನ್ನು ಆದರ್ಶವೆಂದು ತಿಳಿದು ಅವರಂತೆಯೇ ವರ್ತಿಸಲು ಪ್ರಯತ್ನಿಸುತ್ತಾರೆ; ಆದರೆ ಸಂತಚರಿತ್ರೆಯಿಂದಲೇ ಎಲ್ಲರೆದುರು ಯೋಗ್ಯ ಆದರ್ಶಗಳು ನಿಲ್ಲುತ್ತವೆ. ಸಂತರ ಚರಿತ್ರೆಗಳನ್ನು ಓದಿ ಅವರನ್ನು ಹೇಗೆ ಅನುಕರಿಸುವುದು ಎಂಬುದೂ ತಿಳಿಯುತ್ತದೆ.

ಆ. ವಾಚಕರು ಸಂತರ ಬೋಧನೆಯನ್ನು ಓದಿ ಉತ್ತಮ ಮಾರ್ಗದೆಡೆಗೆ ಕ್ರಮಿಸುವುದು : ಸಂತರು ಆಗಾಗ ಸಮಾಜಕ್ಕೆ ಯೋಗ್ಯ ದಿಕ್ಕನ್ನು ನೀಡಿ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ. ಆ ಉದಾಹರಣೆಗಳನ್ನು ಓದಿ ನಾವೂ ಉತ್ತಮ ಮಾರ್ಗದೆಡೆಗೆ ಹೊರಳುತ್ತೇವೆ, ಉದಾ. ಸಂತ ಜ್ಞಾನೇಶ್ವರ ಮಹಾರಾಜರು ಕೋಣದಿಂದ ವೇದಗಳನ್ನು ಹೇಳಿಸಿ ‘ಎಲ್ಲ ಪ್ರಾಣಿಗಳಲ್ಲಿ ಈಶ್ವರನಿರುವುದರಿಂದ ಎಲ್ಲರನ್ನೂ ಪ್ರೀತಿಸಿರಿ’, ಎಂಬುದನ್ನು ಕಲಿಸಿದರು. ವಿಠ್ಠಲನ ಭಕ್ತಿಯಲ್ಲಿ ಸದಾ ರಮಿಸುವ ಸಂತ ತುಕಾರಾಮರು ‘ಸುಖ-ದು:ಖದ ಪ್ರಸಂಗದಲ್ಲಿ ದೇವರನ್ನು ನೆನೆಯಿರಿ’ ಎಂಬುದನ್ನು ಕಲಿಸಿದರು.

. ಸಂತರು ಬರೆದ ಗ್ರಂಥಗಳನ್ನು ಓದಬೇಕು : ಮಕ್ಕಳೇ, ಸಂತರ ಚರಿತ್ರೆಯೊಂದಿಗೆ ಸಂತರು ಬರೆದ ಗ್ರಂಥಗಳನ್ನು ಓದಬೇಕು. ಏಕೆಂದರೆ ಅದರಲ್ಲಿ ಈಶ್ವರೀ ಚೈತನ್ಯವಿರುವುದರಿಂದ ಅವುಗಳನ್ನು ಓದುವುದರಿಂದ ಜ್ಞಾನದೊಂದಿಗೆ ಆ ಚೈತನ್ಯದ ಲಾಭವೂ ಆಗುತ್ತದೆ.

ಮಕ್ಕಳೇ, ಸಂತರ ಆಚರಣೆಯು ಹೇಗಿರುತ್ತದೆ, ಅವರು ರಾಷ್ಟ್ರಕಾರ್ಯ, ಸಾಧನೆ ಮತ್ತು ಗುರುಸೇವೆಯನ್ನು ಹೇಗೆ ಮಾಡಿದರು ಎಂಬುದನ್ನು ಓದಿರಿ ಮತ್ತು ನೀವೂ ಅದರಂತೆ ಆಚರಣೆ ಮಾಡಿ ಭಾರತ ದೇಶದ ಆದರ್ಶ ನಾಗರಿಕರಾಗಿರಿ !

ಸಂತಚರಿತ್ರೆಗಳು ಮತ್ತು ಸಂತರು ಉಪದೇಶಿಸಿದ ವಿಚಾರಗಳ ಅಧ್ಯಯನ ಮಾಡುವುದರಿಂದ ಜೀವನದಲ್ಲಿ ಈಶ್ವರನ ಉಪಾಸನೆ ಮಾಡುವುದರ ಮಹತ್ವ ತಿಳಿಯುತ್ತದೆ. ಈಶ್ವರನ ಉಪಾಸನೆ ಮಾಡುವುದರಿಂದ ನಮ್ಮಲ್ಲಿರುವ ಸದ್ಗುಣಗಳು ಹೆಚ್ಚಾಗಿ ಜೀವನವು ಆನಂದಮಯವಾಗುತ್ತದೆ. ರಾಷ್ಟ್ರಪುರುಷರು ಮತ್ತು ಕ್ರಾಂತಿಕಾರರ ಚರಿತ್ರೆಗಳ ಅಧ್ಯಯನ ಮಾಡುವುದರಿಂದ ಧರ್ಮ ಮತ್ತು ರಾಷ್ಟ್ರದ ಬಗೆಗಿನ ಅಭಿಮಾನವು ಹೆಚ್ಚುತ್ತದೆ ಮತ್ತು ನಮ್ಮಿಂದ ರಾಷ್ಟ್ರ ಹಾಗೂ ಧರ್ಮಕಾರ್ಯವು ನೇರವೇರುತ್ತದೆ!