ಮಾಯೆಯೊಳಗಿನ ಮಾಯೆ : ಗಣಕೀಯ ಆಟಗಳು (Computer Games)

‘ಗಣಕಯಂತ್ರ ಹಾಗೂ ಇದರಿಂದ ನಿರ್ಮಾಣವಾದ ವ್ಯವಸ್ಥೆಯನ್ನು ನೋಡಿದರೆ ವಿಶ್ವಾಮಿತ್ರನ ಪರ್ಯಾಯ ಸೃಷ್ಟಿಯನ್ನು ನಿರ್ಮಿಸುವ ಪ್ರಯತ್ನಗಳು ನೆನಪಾಗುತ್ತವೆ’ ಎಂದು ಹೇಳಿದರೆ ಅತಿಶಯೋಕ್ತಿಯಾಗದು. ಕೆಲವು ದಶಕಗಳ ಹಿಂದೆ ಸಂಶೋಧಕರ ಬಳಿ ಇರುತ್ತಿದ್ದ ಹಾಗೂ ಭೋಗದ ವಸ್ತುಗಳಲ್ಲಿ ಒಂದೆನಿಸಿಕೊಂಡಿದ್ದ ಗಣಕಯಂತ್ರವು, ಇಂದು ಅತ್ಯಾವಶ್ಯಕ ಹಾಗೂ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾನವನಿಗೆ ಅದರಿಂದ ಆಗುವ ಲಾಭಗಳನ್ನು ಗಮನಿಸಿದರೂ ಅದರಿಂದ ಆಗುವ ಹಾನಿಯನ್ನು ದುರ್ಲಕ್ಷಿಸುವಂತಿಲ್ಲ. ಇಂತಹ ಕೆಲವು ಪರಿಣಾಮಗಳ ಬಗ್ಗೆ ವಿಚಾರ ಮಾಡಲು ಈ ಲೇಖನವನ್ನು ಪ್ರಸ್ತುತಪಡಿಸುತ್ತಿದ್ದೇವೆ.

೧. ಸಂಗಣಕೀಯ ಆಟದಿಂದ ಶರೀರ ಹಾಗೂ ಮನಸ್ಥಿತಿಯ ಮೇಲಾಗುವ ವಿಪರೀತ ಪರಿಣಾಮ

ದಿನೇದಿನೇ ನಗರಗಳಲ್ಲಿ ಹೆಚ್ಚುತ್ತಿರುವ ಭೂಮಿಯ ಬೆಲೆಯನ್ನು ಗಣನೆಗೆ ತೆಗೆದುಕೊಂಡರೆ ವಿಶಾಲವಾಗಿರುವ ಮೈದಾನಗಳ ಮಹತ್ವವು ಕಡಿಮೆಯಾಗಿದೆ. ಸಹಜವಾಗಿ ಮೈದಾನದ ಆಟಗಳ ಸ್ಥಾನವನ್ನು ಕುಳಿತಲ್ಲಿಯೇ ಆಡುವ ಆಟಗಳು ಆವರಿಸಿವೆ. ಅದರಲ್ಲಿಯೂ ಸಂಗಣಕೀಯ ತಂತ್ರಜ್ಞಾನವು ಸುಲಭವಾಗಿ ಲಭ್ಯವಾಗಿರುವುದರಿಂದ, ಕುಳಿತಲ್ಲಿಯೇ ಆಡುವ ಆಟಗಳಲ್ಲಿ ಸಂಗಣಕೀಯ ಆಟಗಳ ಉಪಯೋಗದ ಪ್ರಮಾಣವು ಹೆಚ್ಚಿದೆ. ಇದರಿಂದ ಶರೀರ ಹಾಗೂ ಮನಸ್ಥಿತಿಯ ಮೇಲೆ ವಿಪರೀತ ಪರಿಣಾಮವಾಗಿದೆ.

೨. ಜಾಗತೀಕರಣದ ದುಷ್ಪರಿಣಾಮ – ಪಾಲಕರ ವ್ಯಾಪಾರೀಕರಣ

ಇಂದು, ‘ವಿಭಕ್ತ ಕುಟುಂಬ’ ಪದ್ಧತಿಯಲ್ಲಿ ತಂದೆ ತಾಯಿ ಇವರಿಬ್ಬರೂ ದುಡಿಯುತ್ತಾರೆ. ಮನೆಯಲ್ಲಿ ಮಕ್ಕಳು ಒಂಟಿಯಾಗಿ ಇರುತ್ತಾರೆ. ಮಗುವಿನ ಕಡೆಗೆ ಗಮನ ಹರಿಸಲು ಸಮಯವಿಲ್ಲದಿದ್ದರೆ, ಅದರ ಬದಲಾಗಿ ಆ ಮಗುವಿನ ಯಾವುದೇ ಒಳ್ಳೆಯ-ಕೆಟ್ಟ ಹಟಕ್ಕೆ ಬಾಲಮನಶಾಸ್ತ್ರದಂತೆ ಮಾನ್ಯತೆ ನೀಡಲಾಗುತ್ತದೆ. ಮಕ್ಕಳಿಗೆ ಗಣಕಯಂತ್ರ, ಭ್ರಮಣಸಂಗಣಕ, ವಿಡಿಯೋ ಗೇಮ್ಸ್, ಸಂಚಾರಿವಾಣಿ, ಡಿಜಿಟಲ ಛಾಯಾಚಿತ್ರಗ್ರಾಹಕ, ದ್ವಿಚಕ್ರ ಹಾಗೂ ಚತುಶ್ಚಕ್ರ ವಾಹನದಂತಹ ದುಬಾರಿ ಉಪಕರಣಗಳು ಅನಾಯಾಸವಾಗಿ, ಕೆಲವೊಮ್ಮೆ ಹಟ ಮಾಡದಿದ್ದರೂ ದೊರೆಯುತ್ತವೆ.

೩. ಮಕ್ಕಳು, ಕೃತಿಯ ಸ್ತರದಲ್ಲಿ ಗಣಕೀಯ ಆಟಗಳ ಪ್ರವಾಹದಲ್ಲಿ ಕೊಚ್ಚಿಹೋಗುತ್ತಾರೆ

ಗಣಕೀಯ ಆಟಗಳಿಂದ ಮಕ್ಕಳು ಗಂಟೆಗಟ್ಟಲೆ ಅಲ್ಲ ದಿನಗಟ್ಟಲೆ ಗಣಕಯಂತ್ರದ ಮುಂದೆ ಕುಳಿತುಕೊಳ್ಳುತ್ತಾರೆ. ಆ ಆಟದ ವಿವಿಧ ಹಂತ(ಲೆವೆಲ್)ಗಳನ್ನು ಪಾರು ಮಾಡುವ ಹಾಗೂ ಮುಂದಿನ ಹಂತಕ್ಕೆ ಹೋಗುವ ವಿಚಾರವು ಎಷ್ಟು ಪ್ರಬಲವಾಗುತ್ತದೆ ಎಂದರೆ ಶಾಲೆ ಹಾಗೂ ಮಹಾವಿದ್ಯಾಲಯದ ಅಧ್ಯಯನ, ಪರೀಕ್ಷೆ, ಇತರ ಕರ್ತವ್ಯಗಳು, ಸಂಬಂಧಗಳು ಮರೆತುಹೋಗಲು ಪ್ರಾರಂಭವಾಗುತ್ತವೆ. ಹಗಲು ರಾತ್ರಿ ಎನ್ನದೆ ಮನಸ್ಸಿನಲ್ಲಿ ಆಟದ ವಿಚಾರವೇ ಇರುತ್ತದೆ. ಸಮವಯಸ್ಕರೊಂದಿಗೆ ಮಾತು ಕೂಡ ಇಂತಹ ಆಟಗಳ ಬಗ್ಗೆ, ಸದ್ಯದ ತಂತ್ರಜ್ಞಾನ ಹಾಗೂ ಗಣಕದ ಸಾಫ್ಟವೇರಗಳ ಬಗ್ಗೆಯೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಇಂತಹ ಆಟಗಳನ್ನು ಕೇವಲ ಮನೋರಂಜನೆ ಎಂದು ನೋಡುವ ದೃಷ್ಟಿಕೋನವು ಕೇವಲ ಕೆಲವೇ ಮಕ್ಕಳಲ್ಲಿ ಇರುತ್ತದೆ. ಬಹಳಷ್ಟು ಮಕ್ಕಳು ವಿಚಾರ ಹಾಗೂ ಕೃತಿಯ ಸ್ತರದಲ್ಲಿ ಗಣಕೀಯ ಆಟಗಳ ಪ್ರವಾಹದಲ್ಲಿ ಕೊಚ್ಚಿಹೋಗುತ್ತಾರೆ.

೪. ಪಾಲಕರು ಅಥವಾ ಶಿಕ್ಷಕರು ಈ ಬಗ್ಗೆ ಅರಿವು ಮೂಡಿಸಿದರೂ ಅದರ ಬಗ್ಗೆ ದುರ್ಲಕ್ಷವಿರುವುದು

ಅಂದರೆ, ಹೆಚ್ಚಿನ ಪಾಲಕರಿಗೆ ಅವರ ಮಕ್ಕಳ ಮೇಲೆ ಸೂಕ್ಷ್ಮ ದೃಷ್ಟಿ ಇಡುವಷ್ಟು ಸಮಯವಿರುವುದಿಲ್ಲ, ’ಅರಿವು ಮಾಡಿಕೊಟ್ಟ ತಕ್ಷಣ ಕರ್ತವ್ಯ ಮುಗಿಯಿತು’ ಎಂದು ಅವರಿಗೆ ಅನಿಸುತ್ತದೆ.

೫. ಗಣಕೀಯ ಆಟಗಳ ಬಗ್ಗೆಚರ್ಚಿಸುವ ಮುನ್ನ, ಅವುಗಳ ವರ್ಗಗಳನ್ನು ತಿಳಿದುಕೊಳ್ಳೋಣ

ಅ. ಹಿಂಸಾತ್ಮಕ ಆಟ (Arcade type)
ಆ. ಧೋರಣಾತ್ಮಕ ಆಟ (Strategy type)
ಇ. ಸ್ಪರ್ಧಾತ್ಮಕ ಆಟ ಹಾಗೂ ಇತರ (Competitive games)

೫ ಅ. ಹಿಂಸಾತ್ಮಕ ಆಟಗಳಿಂದ ಮಕ್ಕಳಲ್ಲಿ ಅದೇ ರೀತಿಯ ಪ್ರವೃತ್ತಿ ಬೆಳೆಯಲು ಪ್ರಾರಂಭವಾಗುವುದು
ಮೊದಲ ಪ್ರಕಾರದ ಆಟದಲ್ಲಿ ಪ್ರತಿಸ್ಪರ್ಧಿಗಳೊಂದಿಗೆ ಹೋರಾಡಲು ಹಿಂಸಾಚಾರ ಹಾಗೂ ರಕ್ತಪಾತವನ್ನು ಸ್ವೇಚ್ಛೆಯಿಂದ ಉಪಯೋಗಿಸಲಾಗುತ್ತದೆ. ಇಂತಹ ಆಟವನ್ನು ಚಿಕ್ಕಂದಿನಿಂದ (ಇತ್ತೀಚೆಗೆ ೩-೭ ವರ್ಷದ ಮಕ್ಕಳೂ ಕೂಡ ಇಂತಹ ಆಟಗಳಲ್ಲಿ ನಿಪುಣರಾಗಿದ್ದಾರೆ) ಆಡಿರುವುದರಿಂದ ಮಕ್ಕಳ ಮನಸ್ಸಿನಲ್ಲಿ ಕ್ರೋಧ, ಮತ್ಸರ, ತಮಗೆ ಯಾವುದಾದರೂ ವಸ್ತು ಸರಳವಾಗಿ ದೊರೆಯದಿದ್ದರೆ ಹಿಂಸಾತ್ಮಕ ಮಾರ್ಗವನ್ನು ಅವಲಂಬಿಸುವುದು, ಸತತ ಸ್ವಾರ್ಥ, ಸ್ವಕೇಂದ್ರಿತ, ನಕಾರಾತ್ಮಕ ವಿಚಾರ ಮಾಡುವುದು, ಒಂಟಿತನ ಇತ್ಯಾದಿಗಳು ಮಿತಿ ಮೀರಿ ಹೆಚ್ಚಿವೆ.

೫ ಆ. ಮನಸ್ಸು ಹಾಗೂ ಬುದ್ಧಿಯ ಮೇಲೆ ಕೆಸರೆರೆಚುವ ಆಟ
ಎರಡನೇ ಪ್ರಕಾರದ ಆಟದಲ್ಲಿ ಮೋಸ ಕಾಣುವುದಿಲ್ಲ; ಏಕೆಂದರೆ ಈ ಆಟದಲ್ಲಿ ಮೇಲಿನಂತೆ ಹಿಂಸಾಚಾರವಿರುವುದಿಲ್ಲ; ಆದರೆ ಈ ಆಟದಲ್ಲಿ ಪೂರೈಸಲಾದ ಕಡಿಮೆ ಸೌಲಭ್ಯಗಳಲ್ಲಿ ತಮ್ಮ ಪಟ್ಟಣ, ಸಾಮ್ರಾಜ್ಯವನ್ನು ಕಟ್ಟಬೇಕಾಗಿರುತ್ತದೆ. ಅದರಲ್ಲಿ ಮಾಯಾವಿ ಆಯೋಜನೆಯು (Virtual Management) ಮನಸ್ಸು ಹಾಗೂ ಬುದ್ಧಿಯನ್ನು ಎಷ್ಟು ಸೆಳೆದುಕೊಂಡು ಮೈಮರೆಸುತ್ತದೆಯೆಂದರೆ, ಮೊದಲ ಪ್ರಕಾರದ ಆಟವು ಕೇವಲ ಕೆಲವು ಗಂಟೆಗಳವರೆಗೆ ನಡೆದರೆ ಎರಡನೆಯ ಪ್ರಕಾರದ ಆಟವು ಕೆಲವು ದಿನಗಳಿಂದ ಹಿಡಿದು ವಾರಗಳ ವರೆಗೆ ನಡೆಯುತ್ತದೆ.

೫ ಇ. ಸ್ಪರ್ಧಾತ್ಮಕ ಆಟಗಳಲ್ಲಿ ಮೋಸದಾಟದಿಂದ ಗೆಲ್ಲುವುದನ್ನು ಕಲಿಸಲಾಗುವುದು
ಮೂರನೇ ಪ್ರಕಾರದಲ್ಲಿ ದ್ವಿಚಕ್ರ ಹಾಗೂ ಚತುಶ್ಚಕ್ರ ವಾಹನದ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಇದರಲ್ಲಿ ಸರಳ ಮಾರ್ಗದಿಂದ ಪ್ರತಿಸ್ಪರ್ಧಿಯನ್ನು ಸೋಲಿಸಲು ಸಾಧ್ಯವಾಗದಿದ್ದಲ್ಲಿ ವಾಹನ ಚಾಲನೆಯ ನಿಯಮಗಳನ್ನು ಉಲ್ಲಂಘಿಸಿ, ಪ್ರಸಂಗಕ್ಕನುಗುಣವಾಗಿ ಇತರರಿಗೆ ತೊಂದರೆಕೊಟ್ಟು, ಕೇವಲ ತಾನು ಗೆಲ್ಲಲು ಆಟವನ್ನು ಆಡಲಾಗುತ್ತದೆ. ಇದರ ದುಷ್ಪರಿಣಾಮವೆಂದರೆ ಮಕ್ಕಳು ಸೈಕಲ್, ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಆಟದಂತೆ ಸ್ಪರ್ಧಾತ್ಮಕವಾಗಿ, ರಸ್ತೆಯಲ್ಲಿರುವ ಇತರ ವಾಹನಗಳನ್ನು, ನಿಯಮಗಳನ್ನು ಮುರಿದು ಮುಂದುವರಿಯಲು ಪ್ರಯತ್ನಿಸುತ್ತಾರೆ. ಇದು ಕೇವಲ ಅವರ ಜೀವದೊಂದಿಗೆ ಅಲ್ಲ, ಸಮಾಜ ವ್ಯವಸ್ಥೆಯ ದೃಷ್ಟಿಯಿಂದ ಹಾನಿಕಾರಕವಾಗಿದೆ.

೬. ಅನೈತಿಕ ಕೃತ್ಯಗಳಿರುವ ಸಂಗಣಕೀಯ ಆಟಗಳಿಂದ ನೈತಿಕತೆಯ ಎಲ್ಲ ಸಂಕಲ್ಪನೆಗಳು ಮೂಲೆಗುಂಪಾಗುವುದು

ಮೇಲೆ ಉಲ್ಲೇಖಿಸಿರುವ ಆಟಗಳ ಹೊರತು ಇನ್ನೂ ಕೆಲವು ಪ್ರಕಾರದ ಆಟಗಳನ್ನು ಆಡಲಾಗುತ್ತದೆ. ಅದರಲ್ಲಿ ಜೂಜು, ಅನೈತಿಕ ಕೃತ್ಯಗಳು ಸಮಾವೇಶಗೊಂಡಿವೆ. ಈ ಆಟಗಳಲ್ಲಿ ಈ ಎಲ್ಲ ಅಂಶಗಳನ್ನು ‘ಅದು ಈ ನಿರೋಗಿ ಸಮಾಜದ ಒಂದು ಅವಿಭಾಜ್ಯ ಅಂಗವಾಗಿದೆ’ ಎಂಬಷ್ಟು ಸರಾಗವಾಗಿ ತೋರಿಸಲಾಗುತ್ತದೆ. ವಾರ ವಾರ ಇಂತಹ ಆಟಗಳನ್ನು ಆಡುವುದರಿಂದ ಮನಸ್ಸಿನ ಶೀಲ-ಅಶ್ಲೀಲತೆಯ, ಪರ್ಯಾಯವಾಗಿ ನೈತಿಕತೆಯ ಎಲ್ಲ ಸಂಕಲ್ಪನೆಗಳು ಮೂಲೆಗುಂಪಾಗುತ್ತವೆ.

೭. ತಂತ್ರಜ್ಞಾನದ ಭಸ್ಮಾಸುರನ ಅನುಭವವನ್ನು ತೆಗೆದುಕೊಳ್ಳುವುದಕ್ಕಿಂತ ಆಧ್ಯಾತ್ಮಿಕತೆಯ ಪಾಠ ಕಲಿಯಿರಿ

ಇಂದು, ಪಾಶ್ಚಾತ್ಯ ದೇಶಗಳು ಈ ತಂತ್ರಜ್ಞಾನದ ಭಸ್ಮಾಸುರನ ಪ್ರಕೋಪವನ್ನು ಅನುಭವಿಸುತ್ತಿದ್ದಾರೆ. ಉಚ್ಚತಂತ್ರಜ್ಞಾನದ ರುಚಿಯನ್ನು ಸವಿದಿರುವ ಸದ್ಯದ ಪೀಳಿಗೆಯು ನಿರಾಶೆ, ನಕಾರಾತ್ಮಕತೆ, ಅನೈತಿಕತೆ, ಹಿಂಸಾಚಾರಕ್ಕೆ ಬಲಿಯಾಗುತ್ತಿದೆ. ಇದರಿಂದ ಪಾಲಕ ಹಾಗೂ ಶಿಕ್ಷಕರನ್ನು ಗುಂಡೇಟಿನಿಂದ ಕೊಲ್ಲುವ ೬-೭ ವರ್ಷದ ಹುಡುಗರು, ನಗುವ-ಆಟವಾಡುವ ವಯಸ್ಸಿನಲ್ಲಿ ತಿಳಿಯದೇ ವಾಸನೋಪಭೋಗಕ್ಕೆ ಬಲಿಯಾದ ಕುಮಾರಿಯರು, ದಿಶಾಹೀನ ಯುವಕರು, ಅಸುರಕ್ಷಿತ ವೃದ್ಧರು ಪಾಶ್ಚಾತ್ಯ ಜಗತ್ತಿಗೆ ಉಚ್ಛ ತಂತ್ರಜ್ಞಾನದಿಂದ ದೊರೆತ ದೇಣಿಗೆ!

Leave a Comment