ಸದ್ಗುಣಗಳ ಸಹಾಯದಿಂದ ಶಿಕ್ಷಣಪದ್ಧತಿಯ ದುಷ್ಪರಿಣಾಮದ ಮೇಲೆ ವಿಜಯ ಸಾಧಿಸಿ ಗುಣಸಂಪನ್ನರಾಗೋಣ!

೧. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಂದ ಅಲ್ಲ, ವಿದ್ಯಾರ್ಥಿಯು ಸದ್ಗುಣಗಳಿಂದ ಆದರ್ಶನೆನಿಸಿಕೊಳ್ಳುತ್ತಾನೆ

ವಿದ್ಯಾರ್ಥಿ ಮಿತ್ರರೇ, ಇಂದಿನ ಶಿಕ್ಷಣ ಪದ್ಧತಿಯು ಸಂಪೂರ್ಣವಾಗಿ ‘ಪರೀಕ್ಷಾ ಪದ್ಧತಿ’ಯಾಗಿದೆ. ಒಬ್ಬ ಹುಡುಗ ಎಷ್ಟು ಅಂಕಗಳನ್ನು ಪಡೆದಿದ್ದಾನೆ ಎಂಬುದರ ಮೇಲೆ ಅವನ ಕ್ಷಮತೆ ಏನು ಎಂದು ನಿರ್ಧರಿಸಲ್ಪಡುತ್ತದೆ. ನಿಜವಾದ ಶಿಕ್ಷಣವೆಂದರೆ ತನ್ನಲ್ಲಿರುವ ದೋಷಗಳ (ಕೆಟ್ಟ ಗುಣಗಳ) ನಿರ್ಮೂಲನೆ ಮತ್ತು ಸದ್ಗುಣಗಳ ಸಂವರ್ಧನೆ ಮಾಡುವ ಒಂದು ಪ್ರಕ್ರಿಯೆ! ವಿದ್ಯಾರ್ಥಿಯು ೯೯ ಶೇ. ಅಂಕಗಳನ್ನು ಪಡೆದಿದ್ದಾನೆ; ಆದರೆ ಅವನಲ್ಲಿ ಅನೇಕ ದೋಷಗಳಿವೆ. ಆಗ ಅವನ ಸರ್ವಾಂಗೀಣ ವಿಕಾಸ ಆಗಿದೆಯೇ? ಅಂದರೆ ಅವನು ಪಡೆಯುತ್ತಿರುವ ಅಂಕಗಳ ಜೊತೆಗೆ ಅವನ ದೋಷಗಳು ಕಡಿಮೆಯಾಗುತ್ತಿವೆಯೇ ಎಂಬುದು ಬಹಳ ಮಹತ್ವದ್ದಾಗಿದೆ. ಒಬ್ಬ ಹುಡುಗ ತುಂಬಾ ಒಳ್ಳೆಯ ಅಂಕಗಳನ್ನು ಪಡೆದಿದ್ದಾನೆ. ಆದರೆ ಅವನಲ್ಲಿ ಉದ್ಧಟತನದಿಂದ ಮಾತಾಡುವುದು, ಸುಳ್ಳು ಹೇಳುವುದು, ಇತರರಿಗೆ ದುಃಖವಾಗುವಂತೆ ಮಾತಾಡುವುದು ಇಂತಹ ದೋಷಗಳಿದ್ದರೆ ಅವನನ್ನು ‘ಜಾಣ’ ಎಂದು ಕರೆಯಬಹುದೇ? ಮೇಲಿನ ಎರಡೂ ಸನ್ನಿವೇಶಗಳಲ್ಲಿ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗಷ್ಟೇ ಮಹತ್ವವನ್ನು ಕೊಡುವುದು ಅಗತ್ಯವಾಗಿದೆ. ಹೀಗಾಗದಿರುವುದರಿಂದ ಮಕ್ಕಳ ಸರ್ವಾಂಗೀಣ ವಿಕಾಸ ಆಗುತ್ತಿಲ್ಲ. ಅದರಿಂದಾಗಿ ವಿಚಿತ್ರವಾಗಿ ವರ್ತಿಸುವ ಮಕ್ಕಳು ನಮಗೆ ಸಮಾಜದಲ್ಲಿ ಕಾಣಸಿಗುತ್ತಾರೆ.

೨. ಅಂಕಗಳನ್ನು ಪಡೆಯುವುದು ಮಾತ್ರವಲ್ಲದೆ, ಸದ್ಗುಣಗಳ ಸಂವರ್ಧನೆಯಾಗುವುದೇ ನಿಜವಾದ ಶಿಕ್ಷಣ!

ತಂದೆ ತಾಯಿಯರ ಜೊತೆ ಉಧ್ಧಟತನದಿಂದ ಮಾತಾಡುವುದು, ಬೈಗುಳು/ ಅವಾಚ್ಯ ಶಬ್ಧಗಳನ್ನು ಉಪಯೋಗಿಸುವುದು, ತಿರುಗುತ್ತರ ಕೊಡುವುದು, ಸುಳ್ಳು ಮಾತಾಡುವುದು, ಇತರರಿಗೆ ತೊಂದರೆ ಕೊಡುವುದು ಇತ್ಯಾದಿ ಅನೇಕ ದುರ್ಗುಣಗಳ ಪ್ರಭಾವ ಮಕ್ಕಳಲ್ಲಿ ಇಂದು ಕಾಣಿಸುತ್ತದೆ. ಅದರ ದುಷ್ಪರಿಣಾಮ ಸಮಾಜ, ಕುಟುಂಬ ಮತ್ತು ಆ ಹುಡುಗನ ಮೇಲೆಯೂ ಆಗುತ್ತದೆ. ಯಾವುದೇ ಒಂದು ಹುಡುಗನಲ್ಲಿ ‘ಸಿಟ್ಟು ಬರುವುದು’ ಎಂಬ ದೋಷ ಇದ್ದರೆ ಅವನು ಸಂತೋಷದಿಂದ ಇರಲು ಸಾಧ್ಯವೇ? ಇಲ್ಲವಲ್ಲಾ? ಅಂದರೆ ‘ಸಿಟ್ಟು’ ಎಂಬ ದೋಷವನ್ನು ತೆಗೆಯಲು ಪ್ರಯತ್ನಿಸುವುದೇ ನಿಜವಾದ ಶಿಕ್ಷಣವಾಗಿದೆ. ಮಕ್ಕಳೇ, ತಂದೆ-ತಾಯಂದಿರಿಗೆ ಹಾಗೆಯೇ ಸಮಾಜಕ್ಕೆ ಆನಂದ ನೀಡುವಂತ ವರ್ತನೆ ನಮ್ಮದಾಗಿರಬೇಕು. ಇಲ್ಲದಿದ್ದರೆ, ನಮ್ಮಲ್ಲಿ ಬದಲಾವಣೆ ತಂದುಕೊಳ್ಳಲು ಪ್ರಯತ್ನಿಸಬೇಕು. ಕೇವಲ ‘ಅಂಕ’ಗಳನ್ನು ಪಡೆದುಕೊಂಡು ನಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ.

೩. ಪರೀಕ್ಷಾ ಪಧ್ಧತಿಯಿಂದಾಗಿ ನಕಲು (ಕಾಪಿ) ಮಾಡುವ ಪ್ರಮಾಣ ಹೆಚ್ಚಾಗಿರುವುದು

ಈಗಿನ ಪರೀಕ್ಷಾ ಪದ್ಧತಿಯಿಂದಾಗಿ ಮಕ್ಕಳಿಗೆ ಕೇವಲ ಅಂಕಗಳನ್ನು ಪಡೆಯುವುದೇ ಸರ್ವಸ್ವ ಎಂದೆನಿಸುತ್ತದೆ. ಅದರಿಂದಾಗಿ ನಕಲು ಅಂದರೆ ‘ಅಂಕಗಳನ್ನು ಕದಿಯುವ’ ವಿಕೃತಿ ನಿಧಾನವಾಗಿ ಮಕ್ಕಳ ಮನದಲ್ಲಿ ಬೆಳೆಯುತ್ತಿರುವುದು ಕಾಣಿಸುತ್ತಿದೆ. ನಕಲು ಮಾಡುವುದು ಯೋಗ್ಯ ಅಥವಾ ಅಯೋಗ್ಯವೇ? ಒಂದು ಹುಡುಗನು ನಕಲು ಮಾಡಿ ಅಂಕಗಳನ್ನು ಪಡೆದರೆ ಅವನನ್ನು ಜಾಣ ಅಥವಾ ಆದರ್ಶ ವಿದ್ಯಾರ್ಥಿ ಎಂದು ಪರಿಗಣಿಸಲು ಸಾಧ್ಯವೇ? ಇದರಿಂದಾಗಿ ಮುಂದೆ ಮಕ್ಕಳಲ್ಲಿ ಕಳ್ಳತನ ಮಾಡುವ ವೃತ್ತಿ ನಿರ್ಮಾಣವಾಗುತ್ತದೆ.

೪. ಪರಸ್ಪರ ಪ್ರೇಮಭಾವವನ್ನು ವೃದ್ಧಿಸಿ, ದ್ವೇಷ ಮತ್ತು ಮತ್ಸರಗಳ ನಿರ್ಮೂಲನೆ ಮಾಡುವುದೇ ನಿಜವಾದ ಶಿಕ್ಷಣ !

ಇತ್ತೀಚೆಗೆ ‘ಇತರರಿಗಿಂತ ಹೆಚ್ಚು ಅಂಕಗಳನ್ನು’ ಪಡೆಯುವುದೇ ಯಶಸ್ಸಿನ ಮಾನದಂಡವಾಗಿರುವುದರಿಂದ ಅದರ ಜೊತೆಗೆ ಸ್ಪರ್ಧೆಯ ಮನೋವೃತ್ತಿಯೂ ಬೆಳೆಯುತ್ತದೆ. ಸ್ಪರ್ಧೆಯಿಂದಾಗಿ ಪರಸ್ಪರ ಪ್ರೇಮದ ಭಾವನೆ ಬೆಳೆಯದೇ ದ್ವೇಷದ ಭಾವನೆ ಬೆಳೆಯುತ್ತದೆ. ನಿಜವಾದ ಶಿಕ್ಷಣವೆಂದರೆ ದ್ವೇಷ ನಿರ್ಮೂಲನೆ ಮತ್ತು ಇತರರ ಬಗ್ಗೆ ಪ್ರೇಮಭಾವ ನಿರ್ಮಾಣ ಮಾಡುವುದಾಗಿದೆ.

೫.ಈಗಿನ ಶಿಕ್ಷಣ ಪಧ್ಧತಿಯಿಂದ ಮಕ್ಕಳಲ್ಲಿ ನಿರ್ಭಯತೆ ಬಾರದೆ, ಆತ್ಮಹತ್ಯೆಯಂತಹ ಪ್ರಕರಣಗಳು ಘಟಿಸುತ್ತಿರುವುದು

ಪರೀಕ್ಷಾ ಪಧ್ಧತಿಯಿಂದಾಗಿ ಮಕ್ಕಳಲ್ಲಿ ‘ಅಂಕಗಳೇ ಸರ್ವಸ್ವ, ಹೆಚ್ಚಿನ ಅಂಕಗಳು ಸಿಗದೇ ಇದ್ದಲ್ಲಿ ತನ್ನ ಜೀವನ ನಿರರ್ಥಕವಾಗಿದೆ’, ಎಂಬ ಅಯೋಗ್ಯ ಸಂಸ್ಕಾರ ನಿರ್ಮಾಣವಾಗಿದೆ. ಅದರಿಂದಾಗಿ ಮಕ್ಕಳ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗಿ ಅವರು ನಿರಾಶರಾಗುತ್ತಾರೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಶಿಕ್ಷಣವೆಂದರೆ ಮಕ್ಕಳಲ್ಲಿ ನಿರ್ಭಯತೆಯ ಗುಣ ನಿರ್ಮಿಸುವುದು. ಸಣ್ಣ ಸೋಲಿನಿಂದ ನಿರಾಶರಾಗದೇ, ಅದಕ್ಕೆ ಸಮರ್ಪಕ ಉಪಾಯವನ್ನು ಹುಡುಕಿ ಜೀವನ ನಡೆಸಲು ಕಲಿಯಬೇಕಾಗಿದೆ.

೬. ಮಕ್ಕಳೇ, ಸಂಕುಚಿತ ಮನೋಭಾವವನ್ನು ಬಿಟ್ಟು ರಾಷ್ಟ್ರಾಭಿಮಾನವನ್ನು ಬೆಳೆಸಿರಿ!

ಇಂದಿನ ಮಕ್ಕಳಲ್ಲಿ ‘ಅಂಕ ಗಳಿಸಲು ಮಾತ್ರ ವಿಷಯವನ್ನು ಕಲಿಯುವುದು’, ಎಂಬ ಸಂಕುಚಿತ ಮನೋಭಾವ ನಿರ್ಮಾಣವಾಗಿದೆ, ಉದಾ: ಮಕ್ಕಳು ಕೇವಲ ಅಂಕಗಳಿಗಾಗಿ ಇತಿಹಾಸ ಕಲಿಯುತ್ತಾರೆ. ‘ನಾನೂ ಕೂಡ ರಾಷ್ಟ್ರಪುರುಷರಂತೆ ಆಗಬೇಕು, ಅವರಲ್ಲಿದ್ದಂತಹ ರಾಷ್ಟ್ರಾಭಿಮಾನ ನನ್ನಲ್ಲಿಯೂ ಬರಬೇಕು’, ಎಂಬ ವಿಚಾರ ಮಕ್ಕಳ ಮನಸ್ಸಿನಲ್ಲಿ ಬರುವುದೇ ಇಲ್ಲ. ಮಕ್ಕಳು ಈ ಸಂಕುಚಿತ ಮನೋಭಾವವನ್ನು ಬಿಟ್ಟು ತಮ್ಮಲ್ಲಿ ರಾಷ್ಟ್ರಾಭಿಮಾನ ನಿರ್ಮಿಸಲು ಪ್ರಯತ್ನಿಸಬೇಕು.

೭. ‘ವಿದ್ಯಾ ವಿನಯೇನ ಶೋಭತೇ !’

ಮಕ್ಕಳೇ, ಶಿಕ್ಷಣದಿಂದ ನಮ್ಮಲ್ಲಿ ವಿನಮ್ರತೆ ಬರಬೇಕು. ವಿನಮ್ರತೆಯಿಲ್ಲದೆ ನಾವು ಜ್ಞಾನ ಗ್ರಹಿಸಲು ಸಾಧ್ಯವಿಲ್ಲ. ನಾವು ಸತತವಾಗಿ, ಪ್ರತಿಯೊಂದು ಸಂದರ್ಭದಲ್ಲಿಯೂ ಕೂಡ ವಿನಮ್ರತೆಯಿಂದ ಇರಲು ಪ್ರಯತ್ನಿಸಬೇಕು. ವಿನಮ್ರತೆಯಿಂದ ಜ್ಞಾನದ ಆರಂಭವಾಗುತ್ತದೆ; ಆದರೆ ಈಗಿನ ಪರೀಕ್ಷಾ ಪಧ್ಧತಿಯಿಂದ ಮಕ್ಕಳಲ್ಲಿ ವಿನಮ್ರತೆ ಬರಲು ಸಾಧ್ಯವಿಲ್ಲ. ಆದುದರಿಂದ ನಾವು ಇವತ್ತಿನಿಂದ ವಿನಮ್ರತೆಯನ್ನು ಬೆಳೆಸಲು ಪ್ರಯತ್ನಿಸೋಣ.

– ಶ್ರೀ. ರಾಜೇಂದ್ರ ಪಾವಸ್ಕರ್ (ಗುರೂಜಿ), ಪನವೇಲ್

Leave a Comment