ತಂದೆ ತಾಯಿಯ ಸೇವೆಯನ್ನು ಮನಃಪೂರ್ವಕವಾಗಿ ಮಾಡಿ!

ತಾಯಿ ತಂದೆ ಹಾಗು ಮನೆಯಲ್ಲಿನ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡಬೇಕು.

ತಾಯೀ ತಂದೆ ಹಾಗು ಮನೆಯಲ್ಲಿರುವ ಹಿರಿಯರಿಗೆ ಬಗ್ಗಿ ಅಂದರೆ ಕಾಲು ಮುಟ್ಟಿ ನಮಸ್ಕರಿಸಬೇಕು.
ಮಾತೃ ದೇವೋಭವ | ಪಿತೃ ದೇವೋಭವ | ಎಂದರೆ ತಂದೆ-ತಾಯಂದಿರು ದೇವರ ಸಮಾನ ಎಂದು ನಮ್ಮ ಮಹಾನ್ ಹಿಂದೂ ಸಂಸ್ಕೃತಿ ಕಲಿಸುತ್ತದೆ.

ತಾಯಿ- ತಂದೆಯರ ಮಹತ್ವ ತಿಳಿದುಕೊಂಡು ಅವರ ಸೇವೆ ಮಾಡಿದ ಕೆಲವು ಮಹಾಪುರುಷರು

ಶ್ರವಣ ಕುಮಾರ : ವಯೋವೃದ್ಧ ಅಂಧ ತಾಯಿ-ತಂದೆಯರ ಸೇವೆಯನ್ನು ಯಾವುದೇ ಬೇಸರವಿಲ್ಲದೆ ಶ್ರವಣನು ಮಾಡಿದನು. ವೃಧ್ದ ತಂದೆ ತಾಯಿಯರು ಕಾಶಿ ಯಾತ್ರೆಗೆ ಹೋಗುವ ಇಚ್ಚೆಯನ್ನು ವ್ಯಕ್ತ ಮಾಡಿದಾಗ ಕೂಡಲೇ ಅವರನ್ನು ಕರೆದೊಯ್ಯಲು ತಕ್ಕಡಿಯ ಸಿದ್ದತೆ ಮಾಡಿದನು. ಶ್ರವಣ ಕುಮಾರನು ಅವರನ್ನು ದೊಡ್ಡದಾದ ತಕ್ಕಡಿಯಲ್ಲಿ ಕುಳ್ಳರಿಸಿಕೊಂಡು ಹೆಗಲ ಮೇಲೆ ಆ ತಕ್ಕಡಿಯನ್ನು ಹೊತ್ತುಕೊಂಡು ಅವರನ್ನು ಕಾಶಿ ಯಾತ್ರೆಗೆ ಕರೆದುಕೊಂಡು ಹೋದನು.

ಪ್ರಭು ಶ್ರೀರಾಮಚಂದ್ರ : ಚಿಕ್ಕವನಾದ ಭರತನಿಗೆ ಪಟ್ಟಾಭಿಷೇಕ ಮತ್ತು ಶ್ರೀ ರಾಮನಿಗೆ ೧೪ ವರ್ಷ ವನವಾಸ ಎಂಬ ಮಾತೆ ಕೈಕೇಯಿಯ ಆಜ್ಞೆಯನ್ನು ರಾಮನು ಮನಃಪೂರ್ವಕವಾಗಿ ಪಾಲಿಸಿದನು ಮತ್ತು ತಂದೆಯ ವಚನದ ಮಾನವನ್ನೂ ಪಾಲಿಸಿದನು.

ಭಕ್ತ ಪುಂಡಲೀಕ : ಇವನು ಮಾಡಿದ ತಾಯಿ ತಂದೆಯರ ಸೇವೆ ಒಂದು ತಪಶ್ಚರ್ಯವೇ ಆಗಿದೆ. ಅವನ ಈ ತಪಸ್ಸಿನಿಂದ ಪ್ರಸನ್ನನಾಗಿ ಶ್ರೀ ವಿಠ್ಠಲನು ಅವನ ಭೇಟಿಗೆ ಬಂದನು. ಆ ಸಮಯದಲ್ಲಿ ಸಹ ತನ್ನ ತಾಯಿ ತಂದೆಯರ ಸೇವೆಯಲ್ಲಿ ಅಡಚಣೆ ಉಂಟಾಗಬಾರದೆಂದು ಪುಂಡಲೀಕನು ಶ್ರೀ ವಿಠ್ಠಲನತ್ತ ಒಂದು ಇಟ್ಟಿಗೆಯನ್ನು ಎಸೆದು ಅದರ ಮೇಲೆ ನಿಲ್ಲಲು ಹೇಳಿದನು.
ಛತ್ರಪತಿ ಶಿವಾಜಿ ಮಹಾರಾಜರು: ಜೀಜಾಮಾತೆಯನ್ನು ಭೇಟಿಯಾದ ತಕ್ಷಣ ಶಿವರಾಯರು ಪ್ರಥಮವಾಗಿ ಅವರಿಗೆ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದರು. ಮಹಾರಾಜರು ಜಿಜಾಮಾತೆಯು ಹೇಳಿದ ಪ್ರತಿಯೊಂದು ಮಾತನ್ನೂ ಕೇಳುತ್ತಿದ್ದರು ಮತ್ತು ಅದರಂತೆ ನಡೆಯುತ್ತಿದ್ದರೂ ಕೂಡ.

ತಾಯಿ ತಂದೆಯ ಸೇವೆಯನ್ನು ಮನಃಪೂರ್ವಕವಾಗಿ ಮಾಡುವುದರ ಫಲ

‘ತಾಯಿ ತಂದೆಯರ ಹಾಗೂ ಗುರುಗಳ ಸೇವೆ ಮಾಡುವುದು, ಸರ್ವೋತ್ತಮ ತಪಶ್ಚರ್ಯೆ ಆಗಿದೆ’, ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.

ತಾಯಿ-ತಂದೆಯರನ್ನು ಎಂದಿಗೂ ನೋಯಿಸಬಾರದು

ತುಷ್ಟಯಾಂ ಮಾತರಿ ಶಿವೆ ತುಷ್ಟೇ ಪಿತರೀ ಪಾರ್ವತಿ |
ತವ ಪ್ರೀತಿರ್ಭವೇದೇವಿ ಪರಬ್ರಹ್ಮ ಪ್ರಸೀದತಿ ||

ಮಹಾನಿರ್ವಾಣ ತಂತ್ರ, ಉಲ್ಲಾಸ ೮, ಶ್ಲೋಕ ೨೬

ಅರ್ಥ : ಭಗವಾನ್ ಶಂಕರನು ಪಾರ್ವತಿ ದೇವಿಯನ್ನು ಸಂಬೋಧಿಸಿ, ‘ಹೇ ಪಾರ್ವತಿ, ತಂದೆ ತಾಯಿಯರನ್ನು ಸಂತುಷ್ಟಗೊಳಿಸುವ ಜೀವದ ಮೇಲೆ ನಿನ್ನ ಕೃಪೆ ಆಗುತ್ತದೆ. ಇಂತಹ ಜೀವಗಳ ಮೇಲೆ ಪರಬ್ರಹ್ಮನೂ ಪ್ರಸನ್ನನಾಗುತ್ತಾನೆ’ ಎಂದು ಹೇಳಿದ್ದಾರೆ.

ತಂದೆ ತಾಯಿಯರು ಮಕ್ಕಳಿಗಾಗಿ ಬಹಳ ಕಷ್ಟಗಳನ್ನು ಸಹಿಸಿರುತ್ತಾರೆ. ಮಕ್ಕಳ ಬಾಲ್ಯ ಚೆನ್ನಾಗಿರಬೇಕು, ಅವರಿಗೆ ಒಳ್ಳೆಯ ಶಿಕ್ಷಣ ಸಿಗಬೇಕೆಂದು ಪ್ರಯತ್ನಿಸುತ್ತಾರೆ; ಆದರೆ ಅನೇಕ ಮಕ್ಕಳು ತಂದೆ ತಾಯಿಯರಿಗೆ ಎದುರುತ್ತಾರೆ ನೀಡುತ್ತಾರೆ. ಅದರಿಂದ ತಂದೆ ತಾಯಿಯರ ಮನಸ್ಸಿಗೆ ನೋವಾಗುತ್ತದೆ. ತಂದೆ ತಾಯಿಯರಿಗೆ ಈ ರೀತಿ ಮಾತಾಡಿ ಮನಸ್ಸು ನೋಯಿಸಿದರೆ ದೇವರ ಮನಸ್ಸನ್ನೇ ನೋಯಿಸಿದಂತಾಗುತ್ತದೆ. ಮಕ್ಕಳೇ, ಇದನ್ನು ತಪ್ಪಿಸುವುದಕ್ಕಾಗಿ ತಂದೆ ತಾಯಿಯರ ಜೊತೆ ಪ್ರೀತಿಯಿಂದ ವ್ಯವಹರಿಸಬೇಕು ಮತ್ತು ಅವರ ಬಗ್ಗೆ ಕೃತಜ್ಞರಾಗಿರಬೇಕು.

ತಂದೆ ತಾಯಿಯರು ಹೇಳಿದ್ದನ್ನು ಮನಃಪೂರ್ವಕವಾಗಿ ಆಲಿಸಬೇಕು

ತಾಯಿಯು ಮಕ್ಕಳಿಗೆ ಇಷ್ಟವಾದಂತಹ ತಿಂಡಿ ತಿನಿಸುಗಳನ್ನು ಮಾಡುತ್ತಾಳೆ, ಹಾಗೆಯೇ ಮಕ್ಕಳಿಗೆ ಏನು ಬೇಕು ಬೇಡ ಎನ್ನುವುದನ್ನೂ ಗಮನಿಸುತ್ತಾಳೆ. ಅನಾರೋಗ್ಯವಿದ್ದಾಗ ಹಗಲು ರಾತ್ರಿ ಎಚ್ಚರವಿದ್ದು ಅವರ ಕಾಳಜಿ ತೆಗೆದುಕೊಳ್ಳುತ್ತಾಳೆ. ಇದೆಲ್ಲವನ್ನೂ ಮಾಡುತ್ತಿರುವಾಗ ತಾಯಿಯು ತನ್ನ ಕಡೆಗೆ ಎಳ್ಳಷ್ಟೂ ಗಮನ ಹರಿಸುವುದಿಲ್ಲ. ಅವಳ ಮನಸ್ಸಿನಲ್ಲಿ ಸತತವಾಗಿ ಮಕ್ಕಳ ಚಿಂತೆಯೇ ಇರುತ್ತದೆ. ತಂದೆಯೂ ಸಹ ಮಕ್ಕಳ ಎಲ್ಲ ಅವಶ್ಯಕತೆಗಳನ್ನು ಪೂರೈಸಲು ಮತ್ತು ಕುಟುಂಬದ ಪಾಲನೆ ಪೋಷಣೆ ಮಾಡಲು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ಮಕ್ಕಳಿಗೆ ಬೇಕಾದ್ದನ್ನು ತಂದು ಕೊಡುತ್ತಾರೆ. ಹೀಗಿರುವಾಗ ನಾವು ತಂದೆ ತಾಯಿಯರ ಮಾತನ್ನು ಕೇಳುತ್ತೇವೆಯೇ ಎಂದು ಮಕ್ಕಳು ಯೋಚಿಸಬೇಕು.
ಮಕ್ಕಳೇ, ನಿಜವಾಗಿ ನೋಡಿದರೆ ತಂದೆ ತಾಯಿಯರ ಸೇವೆಯನ್ನು ಎಷ್ಟು ಮಾಡಿದರೂ ಅವರ ಋಣವನ್ನು ತೀರಿಸಲಾಗುವುದಿಲ್ಲ, ಆದರೂ ತಂದೆ ತಾಯಿಯರ ಋಣದಿಂದ ಸ್ವಲ್ಪವಾದರೂ ಮುಕ್ತವಾಗಲು ಅವರು ಹೇಳಿದ್ದನ್ನು ಮನಃಪೂರ್ವಕವಾಗಿ ಕೇಳಬೇಕು, ಹಾಗೆಯೇ ಸತತವಾಗಿ ಅವರ ಜೊತೆಗೆ ಆದರದಿಂದ ನಡೆದುಕೊಳ್ಳಬೇಕು.

ತಂದೆ ತಾಯಿಯರ ಮೇಲಿನ ಪ್ರೀತಿಯನ್ನು ಕೃತಿಯ ಮೂಲಕ ವ್ಯಕ್ತಪಡಿಸಿ

ಮಕ್ಕಳಿಗೆ ತಾಯಿ ತಂದೆಯರ ಮೇಲೆ ಪ್ರೀತಿ ಇದ್ದೇ ಇರುತ್ತದೆ; ಆದರೆ ಆ ಪ್ರೀತಿಯು ಕೃತಿಯಲ್ಲಿಯೂ ವ್ಯಕ್ತವಾಗಬೇಕು. ಮಕ್ಕಳು ತಮ್ಮ ಪ್ರೀತಿಯನ್ನು ಕೃತಿಯಿಂದ ವ್ಯಕ್ತಪಡಿಸಿದರೆ ತಂದೆ ತಾಯಿಯರಿಗೂ ಸಂತೋಷವಾಗುತ್ತದೆ. ಉದಾಹರಣೆಯೆಂದು ಕೆಲವು ಕೃತಿಗಳನ್ನು ಮುಂದೆ ನೀಡುತ್ತಿದ್ದೇವೆ.

ತಂದೆ ತಾಯಿಯರು ಹೊರಗಿನಿಂದ ಬಂದ ಕೂಡಲೆ ಅವರಿಗೆ ಕುಡಿಯಲು ನೀರು ತಂದು ಕೊಡುವುದು : ಮಕ್ಕಳೇ ತಂದೆ ತಾಯಿಯರು ಹೊರಗಿನಿಂದ ಬಂದಾಗ ನಿಮ್ಮಲ್ಲಿ ಎಷ್ಟು ಜನ ಅವರು ಕೇಳದೆಯೇ ನೀರು ತಂದು ಕೊಡುತ್ತೀರಿ? ನೀರು ಕೇಳಿದರು ಸಹ ನಿಮ್ಮಲ್ಲಿ ಎಷ್ಟು ಜನ ತಾಯಿಗೆ ‘ನಿನಗೆ ನೀರು ಬೇಕಾದರೆ ನೀನೇ ತೆಗೆದುಕೊ’ ಎಂದು ಹೇಳ್ತೀರಿ? ಮಕ್ಕಳೇ, ಹೀಗೆ ಮಾತಾಡುವುದು ಅಯೋಗ್ಯವಾಗಿದೆ. ಅವರು ಹೊರಗಿನಿಂದ ದಣಿದು ಬಂದಿರುತ್ತಾರೆ. ಇಂತಹ ಸಮಯದಲ್ಲಿ ನೀವು ಅವರಿಗೆ ನೀರು ತಂದು ಕೊಟ್ಟರೆ ಅವರಿಗೂ ಒಳ್ಳೆಯದೆನಿಸುತ್ತದೆ.

ತಾಯಿ ತಂದೆಯರಿಗೆ ಅವರ ಕೆಲಸಗಳಲ್ಲಿ ಸಹಾಯ ಮಾಡುವುದು : ತಾಯಿಗೆ ಗಿರಣಿಯಿಂದ ಹಿಟ್ಟು ತಂದುಕೊಡುವುದು, ಮಾರುಕಟ್ಟೆಯಿಂದ ತರಕಾರಿ ತಂದುಕೊಡುವುದು ಇತ್ಯಾದಿ ಕೆಲಸಗಳನ್ನು ಮಾಡಬೇಕು. ಇದಕ್ಕಾಗಿ ಅವಳಿಂದ ಚಾಕೊಲೇಟ್ ಕೇಳಬಾರದು.

ತಾಯಿ ತಂದೆಯರು ಮಲಗಿದ್ದಾಗ ತನ್ನ ಕೆಲಸ ತಾನೇ ಮಾಡಿಕೊಳ್ಳುವುದು !

ತಾಯಿ ಮಲಗಿದ್ದಾಗ ತಾನೇ ಬಡಿಸಿಕೊಂಡು ಊಟ ಮಾಡುವ ಕು. ಮೃಣಾಲ್ : ‘ ಕು. ಮೃಣಾಲ್ ೮ ವರ್ಷದವಳಿದ್ದಾಗ ಅವಳು ಶಾಲೆಯಿಂದ ಬರುವ ವೇಳೆಗೆ ನಾನು ಮಲಗಿರುತ್ತಿದ್ದೆ. ಆಗ ಅವಳು ನನ್ನನ್ನು ಎಬ್ಬಿಸದೇ ತಾನೇ ಬಡಿಸಿಕೊಂಡು ಊಟ ಮಾಡುತ್ತಿದ್ದಳು. ’ – ಸೌ. ಶುಭದಾ ದಾಣಿ (ಕು. ಮೃಣಾಲಳ ತಾಯಿ), ಸಾತಾರ ಮಾರ್ಗ, ಪುಣೆ. (೨೦೧೧)

ಮನೆಯ ಇತರ ಕೆಲಸಗಳನ್ನು ಮಾಡಬೇಕು :
೧. ಊಟದ ಮೊದಲು ಎಲ್ಲರ ತಟ್ಟೆ, ಲೋಟಗಳು, ನೀರು, ಮಣೆಗಳನ್ನು ಇಡಬೇಕು. ಊಟದ ನಂತರ ಎಲ್ಲವನ್ನು ತೆಗೆದಿಡುವುದು, ಸ್ವಚ್ಚಗೊಳಿಸುವುದು ಮಾಡಬೇಕು.
೨.ರಾತ್ರಿ ಎಲ್ಲರ ಹಾಸಿಗೆ ಹಾಸಿಡಬೇಕು.
.ತಂದೆ ತಾಯಿಯರ ಕಾಲು ಒತ್ತಬಹುದು.

Leave a Comment