ಮಿತ್ರರು – ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಬಲ್ಲರು?

ಒಳ್ಳೆಯೇ ಮಿತ್ರರ ಸಹವಾಸವಿದ್ದಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿಯಾಗುವುದು

ನಮ್ಮ ಜೀವನದಲ್ಲಿ ಮಿತ್ರರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಶಾಲೆಯ ದಿನಗಳಿಂದ ನಮಗೆ ಅನೇಕ ಮಿತ್ರರಿರುತ್ತಾರೆ. ಅವರ ಅಭ್ಯಾಸಗಳು, ಅವರು ಮಾಡುವ ಕೃತಿಗಳು ನಮ್ಮ ಮನಸ್ಸಿನ ಮೇಲೆ ಒಂದಲ್ಲ ಒಂದು ಪರಿಣಾಮವನ್ನು ಬೀರುತ್ತವೆ.

ಒಳ್ಳೆಯ ಅಭ್ಯಾಸಗಳುಳ್ಳ ಮಕ್ಕಳ ಸಂಖ್ಯೆಯು ಅಲ್ಪವಾಗಿದೆ

ಈಗೀಗ ಒಳ್ಳೆಯ ಅಭ್ಯಾಸ, ಸಂಸ್ಕಾರಗಳಿರುವ ಮಕ್ಕಳು ಕಾಣಲು ಸಿಗುವುದೇ ಒಂದು ಸಮಸ್ಯೆ ಆಗಿದೆ; ಏಕೆಂದರೆ ಅನುಚಿತ ಸಂಸ್ಕಾರಗಳು ಹೊಂದಿರುವ, ಅದರಂತೆ ಕೆಟ್ಟ ಅಭ್ಯಾಸಗಳುಳ್ಳ ಮಕ್ಕಳೇ ಅನೇಕ ಕಡೆಗಳಲ್ಲಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ.

ಒಂಟಿತನ ಮತ್ತು ‘ಇತರ ಮಕ್ಕಳು ಕುಚೇಷ್ಟೆ ಮಾಡಬಹುದು’ ಎಂಬ ಅಂಜಿಕೆಯಿಂದ ಅನೇಕ ಒಳ್ಳೆಯ ಮಕ್ಕಳು ದುರಭ್ಯಾಸಗಳ ಮೊರೆಹೋಗುತ್ತಾರೆ

ದುರಭ್ಯಾಸಗಳುಳ್ಳ ಮಕ್ಕಳು ಯಾವಾಗಲೂ ಒಳ್ಳೆಯ ಅಭ್ಯಾಸಗಳನ್ನು ಹೊಂದಿರುವ ಮಕ್ಕಳನ್ನು ಚುಡಾಯಿಸುತ್ತಾರೆ. ಪರಿಣಾಮವಾಗಿ ಕೆಲ್ಲವು ಮಕ್ಕಳಿಗೆ ‘ನಾನು ಪ್ರಾಮಾಣಿಕನಾಗಿದ್ದರೆ, ಒಳ್ಳೆಯವನಾಗಿದ್ದರೆ ನನ್ನನ್ನು ಮೂಲೆ ಗುಂಪು ಮಾಡಿದರೆ?; ನನ್ನ ಜೊತೆ ಯಾರೂ ಮಾತನಾಡದಿದ್ದರೆ? ನನ್ನ ಜೊತೆ ಆಟವಾಡದಿದ್ದರೆ?’ ಎಂದು ಅನಿಸಬಹುದು. ಒಂಟಿತನದ ಹೆದರಿಕೆಯಿಂದ ಕೆಲವು ಮಕ್ಕಳು ಅಡ್ಡ ದಾರಿಯನ್ನು ಹಿಡಿಯುತ್ತಾರೆ. ಕೆಟ್ಟ ಬುದ್ಧಿಯ ಮಕ್ಕಳು ಒಳ್ಳೆಯ ಮಕ್ಕಳನ್ನು ಚುಡಾಯಿಸುವಾಗ ‘ನಿನಗಿಂತ ನಾನು ಶ್ರೇಷ್ಠ’ ಎಂಬುದನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಾರೆ. ಆದುದರಿಂದ ಒಳ್ಳೆಯ ಮಕ್ಕಳು ‘ನಿಮಗಿಂತ ನಾವೇನು ಕಮ್ಮಿ ಇಲ್ಲ’ ಎಂದು ತೋರಿಸಲು, ಮಿತ್ರರ ಕುಚೇಷ್ಟೆಯಿಂದ ಪಾರಾಗಲು ದುರಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ.

ಒಂದು ಕೊಳೆತ ಹಣ್ಣು ಇಡಿ ಬುಟ್ಟಿಯನ್ನು ಹೇಗೆ ಕೆಡಿಸುತ್ತದೆಯೋ, ಕೆಟ್ಟ ಸಂಗಡಿಗರ ಪ್ರಭಾವವು ಅದೇ ರೀತಿಯಿರುತ್ತದೆ

ಒಂದೂರಿನಲ್ಲಿ ಒಬ್ಬ ಹಣ್ಣಿನ ವ್ಯಾಪಾರಿಯಿದ್ದನು. ಅವನ ಹತ್ತಿರ ಒಂದು ಮಾವಿನ ಹಣ್ಣಿನ ಬುಟ್ಟಿ ಇತ್ತು. ಅದರಲ್ಲಿರುವ ಎಲ್ಲ ಮಾವಿನ ಹಣ್ಣುಗಳು ಉತ್ತಮವಾಗಿದ್ದವು, ಒಂದನ್ನು ಬಿಟ್ಟು. ಆ ಒಂದು ಹಣ್ಣು ಕೊಳೆಯುತಿತ್ತು. ‘ಒಳ್ಳೆಯ ಹಣ್ಣುಗಳೊಟ್ಟಿಗೆ ಈ ಹಣ್ಣನ್ನು ಇಟ್ಟರೆ ಅದು ಕೂಡ ಒಳ್ಳೆಯದಾಗಬಹುದು’ ಎಂದು ಆ ವ್ಯಾಪಾರಿಯು ಯೋಚಿಸಿ ಆ ಬುಟ್ಟಿಯನ್ನು ಹಾಗೆ ಮುಚ್ಚಿಟ್ಟನು. ಸ್ವಲ್ಪ ದಿನಗಳ ನಂತರ ಬುಟ್ಟಿಯನ್ನು ತೆರೆದು ನೋಡಿದಾಗ ಎಲ್ಲ ಮಾವಿನ ಹಣ್ಣುಗಳು ಕೊಳೆತು ಹೋಗಿದ್ದವು. ಈ ಮಾವಿನ ಹಣ್ಣುಗಳಂತೆ ಒಳ್ಳೆಯ ಮಕ್ಕಳು ಕೆಟ್ಟ ಸಹವಾಸದಲ್ಲಿ ಕೆಟ್ಟವರಾಗುತ್ತಾರೆ. ಇದನ್ನು ನೆನಪಿನಲ್ಲಿಟ್ಟುಕೊಂಡು ನಾವು ಕೂಡ ಒಳ್ಳೆಯ ಮಾಕ್ಕಳ ಸಹವಾಸದಲ್ಲಿರಲು ಪ್ರಯತ್ನಿಸಬೇಕು.

ಕೆಟ್ಟ ಸಹವಾಸದಿಂದ ಕಳ್ಳತನ, ಮಾದಕ ವಸ್ತುಗಳ ಸೇವನೆಯ ವ್ಯಸನಗಳಿಗೆ ಬಲಿಯಾಗುವುದು

ಕಷ್ಟ ಪಟ್ಟು ದುಡ್ಡು ಸಂಪಾದಿಸುವವನಿಗೆ ಕಳ್ಳಕಾಕರ ಸಹವಾಸವಿದ್ದರೆ, ಕ್ರಮೇಣ ‘ಕಷ್ಟ ಪಟ್ಟು ದುಡ್ಡು ಏಕೆ ಸಂಪಾದಿಸಬೇಕು? ಕಳ್ಳತನದಿಂದ ನನಗೆ ಬೇಕಾದಷ್ಟು ದುಡ್ಡು, ಒಡವೆ ಮತ್ತು ದುಬಾರಿ ವಸ್ತುಗಳು ಸುಲಭವಾಗಿ ಸಿಗುತ್ತದೆ’ ಎಂಬ ಲೋಭ ಬರಬಹುದು. ಈ ಲೋಭದಿಂದ ಅವನು ಕಳ್ಳತನಕ್ಕೂ ಹಿಂಜರಿಯುವುದಿಲ್ಲ. ಇತ್ತೀಚೆಗೆ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಸೇವನೆಯ ವ್ಯಸನವೂ ಶೀಘ್ರಗತಿಯಿಂದ ಹರಡುತ್ತಿದೆ. ಇದು ಕೂಡ ಕೆಟ್ಟ ಸಹವಾಸದ ಪರಿಣಾಮವಾಗಿದೆ. ಆದುದರಿಂದ ನಾವು ಯಾರನ್ನೇ ಮಿತ್ರತೆಂದು ಸ್ವೀಕರಿಸುವಾಗ ಅವರ ಸ್ವಭಾವವನ್ನು ಚೆನ್ನಾಗಿ ಪರಿಶೀಲಿಸಿ ನೋಡಬೇಕು. ನಮ್ಮ ಸಮಯವನ್ನು ಒಳ್ಳೆಯ ವ್ಯಕ್ತಿಗಳೊಡನೆ ಕಳೆದರೆ ನಾವೂ ಒಳ್ಳೆಯರಾಗಿರಬಹುದು. ಇದಕ್ಕೆ ಪೂರಕವಾದ ಒಂದು ಉದಾಹರಣೆಯನ್ನು ನೋಡೋಣ.

ಒಳ್ಳೆ ಸಹವಾಸದಿಂದ ಒಳ್ಳೆಯ, ಕೆಟ್ಟ ಸಹವಾಸದಿಂದ ಕೆಟ್ಟ ಅಭ್ಯಾಸಗಳಾಗುವುದು

ಅರಣ್ಯವೊಂದರಲ್ಲಿ ಒಂದು ಗಿಳಿಯು ಮರಿಗಳನ್ನು ಜನ್ಮ ಕೊಟ್ಟು ಸತ್ತು ಹೋಯಿತು. ಅದರಲ್ಲಿ ಒಂದು ಮರಿಯು ಕಟುಕನ ಕೈಗೆ ಮತ್ತೊಂದು ಮರಿಯು ಋಷಿಯ ಕೈಗೆ ಸಿಕ್ಕಿತು. ಮುಂದೊಂದು ದಿನ ರಾಜನೊಬ್ಬನು ಆ ಅರಣ್ಯದಿಂದ ಚಲಿಸುತ್ತಿರುವಾಗ ಬಾಯಾರಿಕೆಯಿಂದ ನೀರನ್ನು ಹುಡುಕುತ್ತಾ ಆ ಕಟುಕನ ಮನೆಯನ್ನು ತಲುಪಿದನು. ಕಟುಕನು ಪೋಷಿಸಿದ ಗಿಳಿಯು ರಾಜನನ್ನು ನೋಡಿ ‘ಹಾ! ಹೊಡೆ, ಸಾಯಿಸು!’ ಎಂದು ಹೇಳಲಾರಂಭಿಸಿತು. ಅದನ್ನು ಕೇಳಿದ ರಾಜ, ಅಲ್ಲಿ ನೀರನ್ನು ಕುಡಿಯದೆ ಮುಂದೆ ಹೋದನು. ಹೀಗೆ ಮುಂದೆ ಹೋಗುತ್ತಾ ಅವನಿಗೆ ಋಷಿಯ ಆಶ್ರಮ ಕಂಡಿತು. ಅಲ್ಲಿದ್ದ ಗಿಳಿಯು ರಾಜನನ್ನು ನೋಡಿದಾಕ್ಷಣ ‘ಬನ್ನಿ ಬನ್ನಿ! ನಿಮಗೆ ಸುಸ್ವಾಗತ. ವಿಶ್ರಾಂತಿ ಪಡೆಯಿರಿ, ಹಾಲು-ಹಣ್ಣು ಸ್ವೀಕರಿಸಿ’ ಎಂದು ಹೇಳಿತು. ಇದನ್ನು ಕೇಳಿದ ರಾಜನಿಗೆ ಅಪಾರ ಆನಂದವಾಯಿತು.

ಇದರಿಂದ ಕಲಿಯಲು ಸಿಗುವುದೇನೆಂದರೆ, ನಾವು ಯಾರ ಸಹವಾಸದಲ್ಲಿ ಇರುತ್ತೇವೆಯೋ, ಅವರಂತೆಯೇ ವರ್ತಿಸುತ್ತೇವೆ. ಆದುದರಿಂದ ನಾವು ಒಳ್ಳೆಯವರ ಸಹವಾಸದಲ್ಲೇ ಇರಬೇಕು. ೮-೧೦ ಮಕ್ಕಳ ಗುಂಪಿನಲ್ಲಿ ಒಬ್ಬನೇ ಕೆಟ್ಟ ಹುಡುಗನಿದ್ದರೆ ಇತರ ಮಕ್ಕಳು ಹಾಳಾಗಲು ಹೆಚ್ಚು ಸಮಯ ತಗಲುವುದಿಲ್ಲ. ಯಾವಾಗಲೂ ಜಗಳವಾಡುವ, ಸುಳ್ಳು ಹೇಳುವವರ ಸಹವಾಸ ನಿಮಗೆ ಇಷ್ಟವಾಗುತ್ತದೆಯೋ, ಸರಳ, ಪ್ರಾಮಾಣಿಕ, ಸಜ್ಜನರ ಸಹವಾಸ ಇಷ್ಟವಾಗುತ್ತದೆಯೋ ಎಂದು ಆಲೋಚಿಸಿ? ನಿಸ್ಸಂದೇಹವಾಗಿ ಒಳ್ಳೆಯವರ ಸಹವಾಸ. ಇಂದು ಒಳ್ಳೆಯ ಸ್ವಭಾವದ ಮಿತ್ರರು ವಿರಳವಾಗಿದ್ದರೆ. ನಮಗೆ ಒಳ್ಳೆಯ ಮಕ್ಕಳ ಸಹವಾಸದಲ್ಲಿರಬೇಕಾದರೆ ನಾವು ಸಂಸ್ಕಾರವರ್ಗಗಳಿಗೆ ಭೇಟಿ ನೀಡಬೇಕು.

ನಿಯಮಿತವಾಗಿ ಸಂಸ್ಕಾರವರ್ಗ ಅಥವಾ ಸತ್ಸಂಗಗಳಿಗೆ ಪಾಲ್ಗೊಳ್ಳುವ ಮಹತ್ವ

ಅ. ಒಳ್ಳೆಯ ಮಕ್ಕಳ ಪರಿಚಯವಾಗುತ್ತದೆ: ಸಂಸ್ಕಾರವರ್ಗಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ತಮ್ಮಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವ ದೃಷ್ಟಿಯಿಂದ ಬಂದಿರುತ್ತಾರೆ. ಆದುದರಿಂದ ಬರುವ ಎಲ್ಲರೂ ತಮ್ಮಲಿರುವ ದೋಷಗಳನ್ನು ತೆಗೆಯಲು ಪ್ರಯತ್ನ ಮಾಡುತ್ತಾರೆ. ‘ನಾನು ಒಳ್ಳೆಯವನಾಗಬೇಕು, ನನ್ನಲ್ಲಿ ಒಳ್ಳೆಯ ಬದಲಾವಣೆಗಳು ಬರಬೇಕು’ ಎಂದು ಯಾರಿಗೆ ಅನಿಸುತ್ತದೆಯೋ ಅಂತಹ ಮಕ್ಕಳು ಮಾತ್ರ ನಿಯಮಿತವಾಗಿ ಸಂಸ್ಕಾರವರ್ಗಕ್ಕೆ ಬರುತ್ತಾರೆ; ಯಾರಿಗೆ ‘ನನ್ನಲ್ಲಿರುವ ದೋಷಗಳು ದೂರವಾಗಬೇಕು’ ಎಂದು ಅನಿಸುವುದಿಲ್ಲವೋ, ಅಂಥವರು ಬರುವುದಿಲ್ಲ. ಸಂಸ್ಕಾರವರ್ಗದಲ್ಲಿ ಒಳ್ಳೆಯ ಧ್ಯೇಯವಿರುವ ಮಕ್ಕಳು ಮಾತ್ರವಿರುವುದರಿಂದ ಒಳ್ಳೆಯವರ ಮಿತ್ರತ್ವ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಆ. ಸಂಸ್ಕಾರವರ್ಗದಲ್ಲಿ ಒಳ್ಳೆಯ ಸಂಸ್ಕಾರಗಳಿರುತ್ತವೆ : ಸಂಸ್ಕಾರವರ್ಗದಲ್ಲಿ ನಮಗೆ – ಎದುರುತ್ತರ ನೀಡಬಾರದು, ಅಪಶಬ್ದ ನುಡಿಯಬಾರದು, ಹೊಡೆದಾಟ ಮಾಡಬಾರದು, ಆಲಸ್ಯವನ್ನು ಕಿತ್ತೊಗೆಯಬೇಕು ಎಂಬಿತ್ಯಾದಿ ವಿಷಯಗಳನ್ನು ಕಲಿಸಲಾಗುತ್ತದೆ. ಇಂತಹ ಒಳ್ಳೆಯ ವಿಚಾರಗಳನ್ನು ಕೇಳಿ ನಾವು ಪಾಲಿಸುತ್ತೇವೆ, ಅಂದರೆ ಒಳ್ಳೆಯದನ್ನು ಕೇಳಿ ನಾವು ಒಳ್ಳೆಯವರಾಗಲು ಪ್ರಯತ್ನಿಸುತ್ತೇವೆ; ಇದೆ ಸಂಸ್ಕಾರವರ್ಗಗಳ ಮಹತ್ವವಾಗಿದೆ.

– ಕು. ಗಾಯತ್ರೀ ಬುಟ್ಟೆ

Leave a Comment