ದೇವರ ಬಗ್ಗೆ ಭಾವವನ್ನು ನಿರ್ಮಿಸಿಕೊಳ್ಳಿ!

ಮನಸ್ಪೂರ್ವಕವಾಗಿ ದೇವರ ನೆನಪಾಗುವುದು ಮತ್ತು ದೇವರ ಬಗ್ಗೆ ಪ್ರೇಮವೆನಿಸುವುದೇ ‘ಭಾವ’.

ಅ. ಭಾವದ ಮಹತ್ವ

‘ಎಲ್ಲಿ ಭಾವವಿದೆಯೋ ಅಲ್ಲಿ ದೇವರಿದ್ದಾರೆ’ ಎಂಬ ಉಕ್ತಿಯಿದೆ. ಭಾವವಿದ್ದವರ ಮೇಲೆ ದೇವರು ಸದಾ ಪ್ರಸನ್ನರಾಗಿರುತ್ತಾರೆ. ಅವರಿಗೆ ಅಡೆತಡೆಗಳು ಅಥವಾ ಸಂಕಟಗಳು ಬಂದಾಗ ದೇವರು ಅವರ ಬಗ್ಗೆ ಕಾಳಜಿ ವಹಿಸಿ ಅವರನ್ನು ರಕ್ಷಿಸುತ್ತಾರೆ. ಭಾವ ನಿರ್ಮಾಣವಾದರೆ ಸತತ ಆನಂದದ ಅರಿವಾಗುತ್ತಾದೆ. ಮನಸ್ಸು ಸ್ಥಿರ ಮತ್ತು ಶಾಂತವಾಗುತ್ತದೆ.

ಆ. ಭಾವ ನಿರ್ಮಾಣವಾಗಲು ಏನು ಮಾಡಬೇಕು?

ಆ ೧. ಪ್ರಾರ್ಥನೆ :

ದೇವರಿಗೆ ಶರಣರಾಗಿ ನಮಗೆ ಬೇಕಾದ ವಿಷಯದ ಬಗ್ಗೆ ಆರ್ತತೆಯಿಂದ ಕೇಳಿಕೊಳ್ಳುವುದೇ ಪ್ರಾರ್ಥನೆ.

ಆ ೧ ಅ. ದೇವರಿಗೆ ಪ್ರಾರ್ಥನೆಯನ್ನು ಆಗಾಗ ಮಾಡುವುದು ಅಗತ್ಯವಾಗಿದೆ : ನಮಗೇನಾದರೂ ಬೇಕಿದ್ದರೆ ನಾವು ಹೇಗೆ ನಮ್ಮ ತಾಯಿಯನ್ನು ಪದೇ ಪದೇ ಕೇಳುತ್ತೇವೆ, ಅದೇ ರೀತಿ ನಾವು ದೇವರನ್ನು ಕೂಡ ನಮ್ಮ ತಾಯಿಯೆಂದು ಭಾವಿಸಬೇಕು. ಆರ್ತತೆಯಿಂದ ದೇವರನ್ನು ಪ್ರಾರ್ಥಿಸಿದರೆ ಅವರು ಖಂಡಿತವಾಗಿಯೂ ನಮ್ಮ ಕರೆಯನ್ನು ಆಲಿಸಿ ನಮ್ಮ ಸಹಾಯಕ್ಕೆ ಧಾವಿಸುತ್ತಾರೆ.

ಆ ೧ ಆ. ಪ್ರಾರ್ಥನೆಯ ಲಾಭಗಳು

೧. ಪ್ರಾರ್ಥನೆಯಿಂದ ಮನಸ್ಸಿನ ಚಿಂತೆಯು ದೂರವಾಗಿ ದೇವರ ಮೇಲಿರುವ ಶ್ರದ್ಧೆ ಹೆಚ್ಚಾಗುತ್ತದೆ ಮತ್ತು ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ.

೨. ಪ್ರಾರ್ಥನೆ ಮಾಡುವುದರಿಂದ ದೇವರ ಆಶಿರ್ವಾದ ಲಭಿಸುತ್ತದೆ.

ಆ ೧ ಇ. ಪ್ರತಿದಿನ ಮಾಡಬೇಕಾದ ಕೆಲವು ಪ್ರಾರ್ಥನೆಗಳು

೧. ಸ್ನಾನದ ಮುಂಚೆ : ಹೇ ಜಲದೇವತೆ, ನಿನ್ನ ಪವಿತ್ರ ನೀರಿನಿಂದ ನನ್ನ ಶರೀರ ಶುದ್ಧವಾಗುವುದಲ್ಲದೆ ಅಂತಃಕರಣ ನಿರ್ಮಲವಾಗಲಿ ಮತ್ತು ನಿನ್ನ ಚೈತನ್ಯ ಗ್ರಹಿಸುವಂತಾಗಲಿ.

೨. ಅಧ್ಯಯನಕ್ಕೆ ಕುಳಿತುಕೊಳ್ಳುವ ಮುಂಚೆ : ಹೇ ವಿಘ್ನಹರ್ತಾ ಬುದ್ಧಿದಾತಾ ಶ್ರೀ ಗಣೇಶಾ, ಅಧ್ಯಯನದಲ್ಲಿ ಬರುವ ಅಡಚಣೆಗಳು ದೂರವಾಗಲಿ. ನನ್ನ ಅಧ್ಯಯನ ಒಳ್ಳೆಯ ರೀತಿಯಲ್ಲಿ ಆಗಲು ನೀನೇ ನನಗೆ ಸದ್ಬುದ್ಧಿ ಮತ್ತು ಶಕ್ತಿ ನೀಡು.

ಆ ೨. ಕೃತಜ್ಞತೆ

ಆ ೨ ಅ. ಕೃತಜ್ಞತೆ ಎಂದರೇನು? : ‘ದೇವರ ಕೃಪೆಯಿಂದ ನನಗೇನಾದರೂ ದೊರೆಯಿತು’ ಅಥವಾ ‘ದೇವರು ನನಗೋಸ್ಕರ ಏನೆಲ್ಲ ಮಾಡುತ್ತಾರೆ’ ಹೀಗನಿಸುವುದು, ಅದರಿಂದ ದೇವರ ಬಗ್ಗೆ ಮನಸ್ಸಿನಲ್ಲಿ ಆದರ ಮತ್ತು ಪ್ರೇಮ ನಿರ್ಮಾಣವಾಗುವುದಕ್ಕೆ ಕೃತಜ್ಞತೆ ಎನ್ನುತ್ತಾರೆ.

ಆ ೨ ಆ. ಕೃತಜ್ಞತೆಯ ಮಹತ್ವ

೧. ಮಕ್ಕಳೇ, ನೀವು ನಿಮ್ಮ ಲೇಖನಿಯನ್ನು (ಪೆನ್) ಮನೆಯಲ್ಲಿ ಬಿಟ್ಟು ಶಾಲೆಗೆ ಹೋಗಿದ್ದರೆ ನಿಮ್ಮ ಮಿತ್ರನು ನಿಮಗೆ ಲೇಖನಿ ನೀಡಿದರೆ, ಅದನ್ನು ಹಿಂದಿರುಗಿಸುವಾಗ ನೀವು ‘ಧನ್ಯವಾದ’ ಎಂದು ಹೇಳುತ್ತೀರಲ್ಲವೇ? ದೇವರು ನಮಗೆ ಜನ್ಮ ನೀಡಿ, ಉಸಿರಾಡಲು ಗಾಳಿ, ಸೇವಿಸಲು ನೀರು, ಅನ್ನ, ಜೀವನಕ್ಕೆ ಆವಶ್ಯಕವಾಗಿರುವ ವಸ್ತುಗಳು, ಗಟ್ಟಿಮುಟ್ಟಾದ ಶರೀರ ಮತ್ತು ಬುದ್ಧಿಯನ್ನು ನೀಡಿದ್ದಾರೆ; ಆದುದರಿಂದ ಇವೆಲ್ಲವುಗಳ ಬಗ್ಗೆ ನಾವು ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

೨. ‘ದೇವರೇ ಎಲ್ಲವನ್ನು ಮಾಡುತ್ತಾರೆ’ ಎಂದು ಮನಸ್ಸಿನಲ್ಲಿಟ್ಟುಕೊಂಡು, ದೇವರ ಚರಣಗಳಲ್ಲಿ ಕೃತಜ್ಞರಾದರೆ ನಮ್ಮ ಮನಸ್ಸಿನಲ್ಲಿ ಯಾವುದೇ ವಿಷಯದ ಬಗ್ಗೆ ಅಹಂ ನಿರ್ಮಾಣವಾಗುವುದಿಲ್ಲ.

ಆ ೩. ದೇವರೊಂದಿಗೆ ಮಾತನಾಡುವುದು (ಆತ್ಮನಿವೇದನೆ)

ಆ ೩ ಅ. ಆತ್ಮನಿವೇದನೆ ಎಂದರೇನು? : ಮಕ್ಕಳೇ, ಭಾವವೃದ್ಧಿಗಾಗಿ ಮನಸ್ಪೂರ್ವಕವಾಗಿ ದೇವರೊಂದಿಗೆ ಮಾತನಾಡಿ. ಮನಸ್ಸಿನಲ್ಲಿರುವ ಒಳ್ಳೆ-ಕೆಟ್ಟ ವಿಚಾರಗಳು, ಜೀವನದ ಒಳ್ಳೆಯ-ಕೆಟ್ಟ ಘಟನೆಗಳು, ಮತ್ತು ಅಡಚಣೆಗಳನ್ನು ಮುಕ್ತ ಮನಸ್ಸಿನಿಂದ ದೇವರಿಗೆ ತಿಳಿಸಿ. ಈ ರೀತಿಯಲ್ಲಿ ದೇವರೊಂದಿಗೆ ಮಾತನಾಡುವುದು ‘ಆತ್ಮನಿವೇದನೆ’ಯಾಗಿದೆ.

ಆ ೩ ಆ. ದೇವರೊಂದಿಗೆ ಮಿತ್ರತ್ವ ಭಾವವನ್ನಿಟ್ಟು ಮಾತನಾಡಬೇಕು : ಪ್ರಾರಂಭದಲ್ಲಿ ಮನಸ್ಸಿನಲ್ಲಿ ದೇವರೊಂದಿಗೆ ಮಾತನಾಡಲು ಕಷ್ಟವೆನಿಸಿದರೆ ನಿಮ್ಮ ಇಷ್ಟ ದೇವತೆ ಅಥವಾ ಉಪಾಸ್ಯ ದೇವತೆಯ ಚಿತ್ರವನ್ನು ಮುಂದೆ ಇಟ್ಟುಕೊಂಡು ಅವರೊಂದಿಗೆ ಎಲ್ಲ ವಿಷಯಗಳನ್ನೂ ಮಾತನಾಡಬೇಕು. ಹೇಗೆ ನಾವು ನಮ್ಮ ಗೆಳೆಯ ಅಥವಾ ಗೆಳತಿಯೊಂದಿಗೆ ಅತ್ಯಂತ ಸಹಜವಾಗಿ ಮತ್ತು ಆತ್ಮೀಯವಾಗಿ ಮಾತನಾಡುತ್ತೇವೆ, ಅದೇ ರೀತಿ ನಾವು ದೇವರನ್ನೂ ನಮ್ಮ ಮಿತ್ರನೆಂದು ಪರಿಗಣಿಸಿ ಅವರೊಂದಿಗೆ ಮಾತನಾಡಬೇಕು. ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ದೇವರೇ, ಈ ಕೃತಿಯನ್ನು ನಾನು ಹೇಗೆ ಮಾಡಲಿ? ನಿನಗೆ ಹೇಗೆ ಮಾಡಿದರೆ ಇಷ್ಟವಾಗುವುದು?’ ಎಂದು ವಿಚಾರಿಸಬೇಕು.

ಆ ೩ ಇ. ದೇವರೊಂದಿಗೆ ಮಾತನಾಡುವುದರಿಂದ ಆಗುವ ಲಾಭ

೧. ಮನಃಪೂರ್ವಕವಾಗಿ ದೇವರೊಂದಿಗೆ ಮಾತನಾಡುವುದರಿಂದ ಅವರೊಂದಿಗೆ ಆತ್ಮೀಯತೆ ಬೆಳೆದು, ದೇವರ ಬಗ್ಗೆ ಪ್ರೇಮ ಬೆಳೆದು ಮನಸ್ಸು ಹಗುರವಾಗುತ್ತದೆ.

೨. ದೇವರು ಸದಾ ನಮ್ಮೊಂದಿಗೆ ಇದ್ದಾರೆ ಎಂಬುವುದರ ಅರಿವು ಆಗುತ್ತದೆ.

೩. ನಾವು ದೇವರೊಂದಿಗೆ ಮಾತನಾಡುತ್ತಾ ಇದ್ದರೆ, ಅದೆಲ್ಲವನ್ನೂ ಅವರು ಕೇಳಿಸಿಕೊಂಡು ನಮಗೆ ಅಡಚಣೆಗಳು ಬಂದಾಗ ಯೋಗ್ಯ ಮಾರ್ಗದರ್ಶನ ದೊರೆಯುತ್ತದೆ.

ಮಕ್ಕಳೇ, ಇದೇ ರೀತಿಯಲ್ಲಿ ಪ್ರಾರ್ಥನೆ, ಕೃತಜ್ಞತೆ ಮತ್ತು ಆತ್ಮನಿವೇದನೆ ಸತತವಾಗಿ ಆಗಲು ಪ್ರಾರಂಭವಾದರೆ ನಿಮ್ಮಲ್ಲಿರುವ ಭಾವವು ವೃದ್ಧಿಯಾಗುವುದು ಮತ್ತು ದೇವರು ನಿಮ್ಮ ಕರೆಗೆ ಓಗೊಟ್ಟು ನಿಮ್ಮ ರಕ್ಷಣೆಗೆ ತಕ್ಷಣ ಧಾವಿಸಿ ಬರುವರು.