ಶಾಲೆಯಿಂದ ಮನೆಗೆ ಮರಳುವಾಗ ಹೀಗೆ ಮಾಡಿ!

ಅ. ಶಾಲೆಯಲ್ಲಿ ದಿನದ ತರಗತಿಗಳು ಮುಗಿದ ತಕ್ಷಣ ಮನೆಗೆ ಹಿಂದಿರುಗಿ. ದಾರಿಯಲ್ಲಿ ಅಡ್ಡಾಡಬೇಡಿ. ಯಾವುದಾದರೂ ಕಾರಣದಿಂದ ನಿಮಗೆ ಮನೆಗೆ ಹೋಗಲು ತಡವಾಗುವುದಾದರೆ ತಾಯಿಗೆ ತಿಳಿಸಲು ವ್ಯವಸ್ಥೆ ಮಾಡಿ, ಇಲ್ಲದಿದ್ದರೆ ನೀವು ಬರಲಿಲ್ಲವೆಂದು ಆತಂಕವಾಗಬಹುದು.

ಆ. ಶಾಲೆಯಿಂದ ಮನೆಗೆ ಬರುವ ಹಾದಿಯಲ್ಲಿ ಕುಚೇಷ್ಟೆ ಆಥವಾ ತಳ್ಳಾಟ ನಡೆಸಬಾರದು.

ಇ. ಶಾಲೆಯಿಂದ ಮರಳುವಾಗ ‘ಚಿಪ್ಸ್’ ‘ಚಾಕಲೇಟ್’ ಇತ್ಯಾದಿ ಪದಾರ್ಥಗಳನ್ನು ತಿನ್ನುತ್ತಾ ನಡೆಯಬೇಡಿ.

ಈ. ಮನೆಗೆ ಹೋಗುವ ದಾರಿಯಲ್ಲಿ ಅಂಗಡಿಗಳಿದ್ದರೆ ಹಾಲು, ತರಕಾರಿ ಇತ್ಯಾದಿ ಮನೆಯಲ್ಲಿ ಉಪಯೋಗಿಸುವ ವಸ್ತುಗಳನ್ನು ತಂದು ಅಮ್ಮನಿಗೆ ಸಹಾಯ ಮಾಡಿ.

ಉ. ಮನೆಗೆ ಬಂದ ಮೇಲೆ ಪಾದರಕ್ಷೆಗಳನ್ನು (ಚಪ್ಪಲ್, ಶೂ) ಅಲ್ಲಿ ಇಲ್ಲಿ ಬಿಸಾಡದೆ, ವ್ಯವಸ್ಥಿತವಾಗಿ ಒಂದೆಡೆ ಇಡಬೇಕು. ನಿಮ್ಮ ಪುಸ್ತಕಗಳನ್ನು ನಿಗದಿತ ಸ್ಥಳದಲ್ಲಿಡಬೇಕು. ಕೈ ಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

ಊ. ಶಾಲೆಯ ಸಮವಸ್ತ್ರವನ್ನು ಕಳಚಿ, ನಿಗದಿತ ಸ್ಥಳದಲ್ಲಿಡಬೇಕು. ಮನೆಯಲ್ಲಿ ಹಾಕಿಕೊಳ್ಳುವ ವಸ್ತ್ರಗಳನ್ನು ಧರಿಸಬೇಕು.

ಎ. ತಾಯಿಯನ್ನು ವಿಚಾರಿಸಿ ಸಂಜೆಯ ತಿಂಡಿಯನ್ನು ತಿನ್ನಬೇಕು.

ಏ. ಶಾಲೆಯಲ್ಲಿ ತಿನ್ನಲು ಕೊಂಡುಹೋದ ಡಬ್ಬಿಯನ್ನು ನೀವೇ ತೊಳೆದು, ಒಣಗಿಸಿ ಮುಂದಿನ ದಿನಕ್ಕೆ ಉಪಯೋಗಿಸಲು ಅಮ್ಮನಿಗೆ ಕೊಡಬೇಕು.

ಐ. ಆ ದಿನದ ಗೃಹಪಾಠವನ್ನು ಮಾಡಲು ಕುಳಿತುಕೊಳ್ಳಬೇಕು.

ಮಕ್ಕಳೇ, ಮೇಲೆ ನೀಡಿರುವ ಚಿಕ್ಕ ಚಿಕ್ಕ ವಿಷಯಗಳನ್ನು ಆಚರಣೆಗೆ ತಂದು ನಿಮ್ಮ ತಂದೆ ತಾಯಿಯ ‘ಗುಣವಂತ ಮಗು’ವಾಗಿ!

Leave a Comment