ಮಕ್ಕಳೇ, ಮಿತವ್ಯಯದ ಲಾಭಗಳನ್ನು ಅರಿತುಕೊಳ್ಳಿ !

ದೇವರ ಕೃಪೆಯಿಂದ ಇಂದು ಮನುಷ್ಯರ ಉಪಯೋಗಕ್ಕೆಅನೇಕ ವಸ್ತುಗಳು ಲಭ್ಯವಾಗಿವೆ. ಇಂತಹ ವಸ್ತುಗಳ ದುಂದು ವೆಚ್ಚ ಮಾಡದೆ ಅಗತ್ಯಕ್ಕೆ ತಕ್ಕಷ್ಟು ಉಪಯೋಗ ಮಾಡುವುದೇ ಮಿತವ್ಯಯವಾಗಿದೆ.

ಮಕ್ಕಳೇ, ತಂದೆ ತಾಯಂದಿರು ನಿಮಗೆ ಬೇಕಾದ ವಸ್ತುಗಳನ್ನು ತಂದು ಕೊಡುತ್ತಾರೆ; ಆದುದರಿಂದ ನಿಮಗೆ ದುಡ್ಡಿನ ನಿಜವಾದ ಬೆಲೆಯು ಅಷ್ಟು ಗೊತ್ತಾಗುವುದಿಲ್ಲ; ಆದರೆ ನೀವು ದೊಡ್ಡವರಾಗಿ ಸ್ವತಃ ಸಂಪಾದಿಸುವಾಗ ದುಡ್ಡಿನ ಬೆಲೆಯನ್ನು ಅರಿತುಕೊಳ್ಳುವಿರಿ. ಆದುದರಿಂದ ಈಗಿನಿಂದಲೇ ನಿಮ್ಮ ಮನಸ್ಸಿನಮೇಲೆ ಮಿತವ್ಯಯದ ಸಂಸ್ಕಾರ ಆಗಬೇಕಲ್ಲವೇ?

ಅ. ಮಿತವ್ಯಯದ ಲಾಭಗಳು

೧. ರಾಷ್ಟ್ರೀಯ ಸಂಪತ್ತಿನ ರಕ್ಷಣೆ: ರಾಷ್ಟ್ರೀಯ ಸಂಪತ್ತು ಅಂದರೆ ನೀರು, ವಿದ್ಯುತ್ ಶಕ್ತಿ, ಪೆಟ್ರೋಲ್, ಡೀಸೆಲ್ ಮುಂತಾದ ಸಂಪನ್ಮೂಲಗಳು. ಇವುಗಳ ಮಿತವ್ಯಯದಿಂದ ರಾಷ್ಟ್ರೀಯ ಸಂಪತ್ತಿನ ರಕ್ಷಣೆಯಾಗುತ್ತದೆ.

೨. ಪ್ರಕೃತಿಯಲ್ಲಿ ಸಮತೋಲನದ ಜೋಪಾಸನೆ: ಈಗ ಅವ್ಯವಸ್ಥಿತ ಅರಣ್ಯನಾಶದಿಂದ ನಿಸರ್ಗದಲ್ಲಿ ಅಸಮತೋಲನವು ಕಂಡುಬರುತ್ತಿದೆ. ಪರಿಣಾಮವಾಗಿ ಅನಾವೃಷ್ಟಿ, ಜಾಗತಿಕ ತಾಪಮಾನದಲ್ಲಿ ಹೆಚ್ಚಳ ಇತ್ಯಾದಿ ಸಮಸ್ಯೆಗಳು ನಿರ್ಮಾಣವಾಗಿವೆ. ಕಾಗದದಂತಹ ವಸ್ತುಗಳ ಮಿತವ್ಯಯದಿಂದ ವನ ಸಂಪತ್ತಿನ ಸಂರಕ್ಷಣೆಯು ಆಗಿ ನಿಸರ್ಗದ ಸಮತೋಲನವನ್ನೂ ಪಾಲಿಸಿಬಹುದು.

ಆ. ನಮ್ಮಲ್ಲಿ ಮಿತವ್ಯಯದ ಗುಣವನ್ನು ಬೆಳೆಸಲು ಮುಂದೆ ಸೂಚಿಸಿದಂತೆ ಮಾಡಬಹುದು

ಆ ೧. ನೀರು

೧. ಮುಖ ತೊಳೆಯುವುದು, ಬಟ್ಟೆಗಳನ್ನು ಒಗೆಯುವುದು, ಸ್ನಾನ ಮಾಡುವುದು, ಪಾತ್ರೆಗಳನ್ನು ತೊಳೆಯುವುದು, ಮುಂತಾದ ಕಾರ್ಯಗಳನ್ನು ಮಾಡುವಾಗ ಅವಶ್ಯಕತೆ ಇದ್ದಷ್ಟು ನೀರನ್ನು ಉಪಯೋಗಿಸಿ, ಉಳಿದ ಸಮಯದಲ್ಲಿ ನಲ್ಲಿಯನ್ನು ಮುಚ್ಚಿಡಬೇಕು.

೨. ನೀರನ್ನು ಶೇಖರಿಸಿದ ನಂತರ ನಲ್ಲಿಯನ್ನು ಸರಿಯಾಗಿ ಬಂದ್ ಮಾಡಿರುವುದನ್ನು ಖಾತರಿಗೊಳಿಸಬೇಕು.

೩. ಕೆಲವರು ಕುಡಿಯಲು ನೀರು ತೆಗೆದುಕೊಳ್ಳುವಾಗ ಲೋಟ ಪೂರ್ತಿ ನೀರು ತೆಗೆದುಕೊಳ್ಳುತ್ತಾರೆ, ಆದರೆ ಅದರಲ್ಲಿ ಸ್ವಲ್ಪವೇ ನೀರು ಕುಡಿದು ಉಳಿದ ನೀರನ್ನು ಚೆಲ್ಲುತ್ತಾರೆ. ಇದರಿಂದ ನೀರಿನ ವ್ಯಯ ಆಗುತ್ತಾದೆ. ಆದುದರಿಂದ ಬಾಯಾರಿಕೆ ಆದಾಗ ಅವಶ್ಯಕವಿದ್ದಷ್ಟು ನೀರನ್ನು ತೆಗೆದುಕೊಳ್ಳಬೇಕು.

ಆ ೨. ವಿದ್ಯುತ್ ಶಕ್ತಿ

೧. ಕೋಣೆಯನ್ನು ಯಾರೂ ಉಪಯೋಗಿಸದೆ ಇದ್ದಾಗ ಅಲ್ಲಿರುವ ಫ್ಯಾನ್ ಮತ್ತು ದೀಪಗಳನ್ನು ಆರಿಸಬೇಕು.

೨. ಕೋಣೆಯಲ್ಲಿದ್ದರೆ, 'ಫ್ಯಾನ್ ಮತ್ತು ದೀಪಗಳನ್ನು ಉರಿಸುವುದು ಅವಶ್ಯಕವಾಗಿದೆಯೆ' ಎಂದು ಯೋಚಿಸಿ ಮತ್ತೆ ಉಪಯೋಗಿಸಬೇಕು.

೩. ಸ್ನಾನಗೃಹ ಮತ್ತು ಶೌಚಾಲಯದಿಂದ ಹೊರಬಂದಮೇಲೆ ಅಲ್ಲಿರುವ ದೀಪಗಳನ್ನು ಆರಿಸಲು ನೆನಪಿಟ್ಟುಕೊಳ್ಳಿ.

೪. ದೂರದರ್ಶನ (ಟಿ.ವಿ.), ರೇಡಿಯೋ, ಸಂಗಣಕ (ಕಂಪ್ಯೂಟರ್) ಮುಂತಾದ ವಿದ್ಯುತ್ ಚಾಲಿತ ಉಪಕಾರಗಳನ್ನು ವಿನಾಕಾರಣ ಚಾಲ್ತಿಯಲ್ಲಿಡಬಾರದು.

ಆ ೩. ಸಾಬೂನು

೧. ಬಟ್ಟೆ ಒಗೆಯುವ, ಪಾತ್ರೆಗಳನ್ನು ತೊಳೆಯಲು ಮತ್ತು ಸ್ನಾನ ಮಾಡಲು ಉಪಯೋಗಿಸುವ ಸಾಬೂನುಗಳನ್ನು ಮಿತವಾಗಿ ಬಳಸಬೇಕು.

೨. ಸಾಬೂನನ್ನು ಉಪಯೋಗಿಸಿದ ನಂತರ ಅದನ್ನು ಗೋಡೆಗೆ ಊರಿ ನಿಲ್ಲಿಸಬೇಕು. ಇದರಿಂದ ಸಾಬೂನಿನ ಮೇಲೆ ಇರುವ ನೀರು ಇಳಿಯುತ್ತದೆ ಮತ್ತು ಸಾಬೂನಿನ ಬಳ್ವಿಕೆಯು ಹೆಚ್ಚಾಗುತ್ತದೆ.

೩. ಕೊನೆಗೆ ಉಳಿದುಕೊಳ್ಳುವ ಸಾಬೂನಿನ ತುಣುಕುಗಳನ್ನು ಒಂದೆಡೆ ಒಟ್ಟು ಮಾಡಿ ಅವುಗಳನ್ನು ಕೈ ತೊಳೆಯುವಾಗ, ನೆಲ ಒರೆಸಲು ನೀರನ್ನು ತಯಾರಿಸುವಾಗ ಉಪಯೋಗಿಸಬಹುದು.

ಆ ೪. ಕಾಗದ

೧. ಶಾಲೆಯ ಪುಸ್ತಕಗಳ (ವಹಿ) ಪುಟಗಳನ್ನು ಹರಿಯುವುದು, ಪುಟಗಳ ಮೇಲೆ ಅಡ್ಡ ಗೆರೆಗಳನ್ನು ಎಳೆಯುವುದು, ಪುಸ್ತಕದ ಮಧ್ಯದ ಪುಟಗಳನ್ನು ಉಪಯೋಗಿಸದಿರುವುದು ಇವುಗಳನ್ನು ಮಾಡಬಾರದು.

೨. ನಾವೆ ಅಥವಾ ವಿಮಾನವನ್ನು ಮಾಡಲು ಪುಸ್ತಕಗಳ ಖಾಲಿ ಪುಟಗಳನ್ನು ಉಪಯೋಗಿಸದೆ ನಿರುಪಯೋಗಿ (ರದ್ದೀ) ಕಾಗದವನ್ನು ಉಪಯೋಗಿಸಬೇಕು.

೩. ಬರೆಯದೆ (ಉಪಯೋಗಿಸದಿರುವ ಖಾಲಿ) ಕಾಗದಗಳನ್ನು ಒಂದೆಡೆ ಒಟ್ಟು ಮಾಡಿ ರಫ್ ವರ್ಕ್ ಮಾಡಲು ಉಪಯೋಗಿಸಬಹುದು.

೪. ಮುಂದಿನ ತರಗತಿಯನ್ನು ಪ್ರವೇಶಿಸುವಾಗ ಹಿಂದಿನ ತರಗತಿಯ ಪುಸ್ತಕಗಳಿಂದ ಖಾಲಿ ಪುಟಗಳನ್ನು ಒಟ್ಟು ಮಾಡಿ ಹೊಸ ಪುಸ್ತಕವನ್ನು ಮಾಡಬಹುದು. ಇಂತಹ ಪುಸ್ತಕಗಳನ್ನು ವೈಯಕ್ತಿಕ ಬರವಣಿಗೆಗೋಸ್ಕರ ಉಪಯೋಗಿಸಬಹುದು.

ಆ ೫. ಹಣ

೧. ಲೇಖನಿ, ಪೆನ್ಸಿಲ್, ರಬ್ಬರ್, ವರ್ಣಪೆಟ್ಟಿಗೆ (ಕಲರಿಂಗ್ ಬಾಕ್ಸ್), ಪಾದರಕ್ಷೆಗಳನ್ನು ಕೊಂಡುಕೊಳ್ಳುವ ಮುಂಚೆ ನಮ್ಮ ಹತ್ತಿರುವ ವಸ್ತುಗಳ ಪೂರ್ಣ ಉಪಯೋಗ ಮಾಡಿ ಆಗಿದೆಯೇ ಎಂದು ನೋಡಬೇಕು. ಅವುಗಳನ್ನು ಉಪಯೋಗಿಸುವ ಹಾಗೆ ಇದ್ದರೆ ಹೊಸ ವಸ್ತುಗಳನ್ನು ಅನಾವಶ್ಯಕವಾಗಿ ಖರೀದಿಸಬಾರದು.

೨. ಬಟ್ಟೆಗಳಲ್ಲಿ ಹೊಲಿಗೆ ಬಿಟ್ಟಿದ್ದರೆ ಅವುಗಳನ್ನು ಒಳಗಿಡುವ ಬದಲು ಅವುಗಳನ್ನು ಸರಿಯಾಗಿ ಹೊಲಿದರೆ ಅಧಿಕ ಸಮಯ ಉಪಯೋಗಿಸಬಹುದು.

೩. ಹಳೆಯ ಬಟ್ಟೆಗಳ ಬಗ್ಗೆ ಅನಾಸಕ್ತಿ ಬಂದರೆ, ಅವುಗಳು ಇನ್ನೂ ಉಪಯೋಗಿಯಾಗಿದ್ದರೆ ಅವುಗಳನ್ನು ಬಡವರಿಗೆ ನೀಡಬಹುದು.

೪. ಅಳತೆ ಪಟ್ಟಿ, ಕಂಪಾಸ್ ಪೆಟ್ಟಿಗೆ, ಮತ್ತು ಇನ್ನಿತರ ವಸ್ತುಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಂಡರೆ ೪-೫ ವರ್ಷಗಳ ಕಾಲ ಉಪಯೋಗಿಸಬಹುದು. ಪ್ರತಿ ವರ್ಷ ಹೊಸ ಸಾಮಗ್ರಿಗಳನ್ನು ಕೊಂಡುಕೊಳ್ಳುವ ಅವಶ್ಯಕತೆ ಇರುವುದಿಲ್ಲ.

೫. ಪಠ್ಯ ಪುಸ್ತಕಗಳನ್ನು ಜೋಪಾನವಾಗಿ ಉಪಯೋಗಿಸಿ, ಮುಂದಿನ ವರ್ಷ ನಿಮ್ಮ ಬಾಂಧವರಿಗೆ ಅಥವಾ ಬಡ ಮಕ್ಕಳಿಗೆ ನೀಡಬಹುದು.

೬. ಹೊಸ ವಸ್ತುಗಳನ್ನು ಕೊಂಡುಕೊಳ್ಳುವಾಗ 'ಆ ವಸ್ತುವಿನ ಅವಶ್ಯಕತೆ ಎಷ್ಟಿದೆ' ಎಂದು ಆಲೋಚನೆ ಮಾಡಿ.