ಅಧ್ಯಯನವನ್ನು ಹೇಗೆ ಮಾಡಬೇಕು !

ಮಕ್ಕಳೇ, ನೀವು ನೋಡಿದಂತೆ ಇಬ್ಬರು ಸಮಾನವಾಗಿ ಬುದ್ಧಿವಂತರಿದ್ದರೂ ಅವರಲ್ಲಿ ಒಬ್ಬರಿಗೆ ಒಳ್ಳೆಯ ಅಂಕಗಳು ಹಾಗೂ ಇನ್ನೊಬ್ಬರಿಗೆ ಕಡಿಮೆ ಅಂಕಗಳು ದೊರೆಯುತ್ತವೆ. ಅಧ್ಯಯನದಲ್ಲಿ ದೊರೆಯುವ ಯಶಸ್ಸು ಅಧ್ಯಯನ ಮಾಡುವ ಪದ್ಧತಿಯನ್ನುಅವಲಂಬಿಸಿರುತ್ತದೆ. ಮುಂದಿನ ಲೇಖನದಲ್ಲಿ ಈ ಬಗ್ಗೆ ಕೆಲವು ಅಂಶಗಳನ್ನು ನೀಡಲಾಗಿದೆ, ಅವುಗಳ ಅಭ್ಯಸವನ್ನು ಅವಶ್ಯವಾಗಿ ಮಾಡಿ !

ಅ. ಪ್ರತಿಯೊಂದು ವಿಷಯವನ್ನು ಇಷ್ಟಪಟ್ಟು ಹಾಗೂ ಮನಃಪೂರ್ವಕವಾಗಿ ಅಧ್ಯಯನ ಮಾಡಬೇಕು : ಯಾವ ವಿಷಯವನ್ನು ಅಧ್ಯಯನ ಮಾಡಬೇಕಿದೆಯೋ ಅಥವಾ ಯಾವ ಕಲೆಯನ್ನು ಕಲಿಯಬೇಕಿದೆಯೋ ಅದರ ಮಹತ್ವ ಹಾಗೂ ಲಾಭವನ್ನು ತಿಳಿದುಕೊಳ್ಳಬೇಕು. ಇಷ್ಟಪಟ್ಟು ಹಾಗೂ ಮನಃಪೂರ್ವಕವಾಗಿ ಅಧ್ಯಯನ ಮಾಡುವುದರಿಂದ ವಿಷಯವು ಬೇಗ ತಿಳಿಯುತ್ತದೆ. – ಕು. ಮಧುರಾ ಭೋಸಲೆ

ಆ. ಪ್ರಾತಃಕಾಲದ ಸಮಯದಲ್ಲಿ ವಾತಾವರಣವು ಶಾಂತವಿರುತ್ತದೆ, ಅಂತೆಯೇ ರಾತ್ರಿಯ ನಿದ್ದೆಯಿಂದ ಶರೀರ ಹಾಗೂ ಮನಸ್ಸು ತಾಜಾ ಇರುತ್ತದೆ; ಆದುದರಿಂದ ಆಗ ಕಷ್ಟವೆನಿಸುವ ವಿಷಯಗಳ ಅಧ್ಯಯನ ಮಾಡಬೇಕು. ಯಾವ ವಿಷಯವು ಅರ್ಥವಾಗುವುದಿಲ್ಲವೋ ಅಥವಾ ಕಷ್ಟವೆನಿಸುತ್ತದೆಯೋ ಅದಕ್ಕೆ ಹೆಚ್ಚಿನ ಸಮಯವನ್ನು ನೀಡಬೇಕು. ಆ ವಿಷಯ ಅಥವಾ ಪ್ರಶ್ನೋತ್ತರಗಳನ್ನು ೨ – ೩ ಬಾರಿ ಓದಬೇಕು. ಅನಂತರ ಅದರ ಬಗ್ಗೆ ತರಗತಿಯಲ್ಲಿ ಆ ವಿಷಯದಲ್ಲಿ ಬುದ್ಧಿವಂತರಿರುವ ವಿದ್ಯಾರ್ಥಿಗಳ ಹಾಗೂ ಆ ವಿಷಯ ಕಲಿಸುವ ಶಿಕ್ಷಕರೊಂದಿಗೆ ಚರ್ಚಿಸಬೇಕು.

ಇ. ಅಧ್ಯಯನದಲ್ಲಿ ಅರ್ಥವಾಗಿರುವ ಅಂಶಗಳ ಮೇಲೆ ಚಿಂತನೆ ಮಾಡಿ ಆ ಅಂಶಗಳನ್ನು ತನ್ನದೇ ವಾಕ್ಯಗಳಲ್ಲಿ ಬರೆಯಬೇಕು. ಅದಕ್ಕಾಗಿ ಮೊದಲು ಒಂದು ಪರಿಚ್ಛೇದವನ್ನು (paragraph) ಓದಿ ಅದರಲ್ಲಿನ ಮಹತ್ವದ ಅಂಶಗಳನ್ನು ಒಂದೆರಡು ಸಾಲಿನಲ್ಲಿ ಬರೆಯುವುದನ್ನು ಅಭ್ಯಾಸ ಮಾಡಬೇಕು. ನಂತರ ಪೂರ್ಣ ಪಾಠದಲ್ಲಿರುವ ಮಹತ್ವದ ಅಂಶಗಳನ್ನು ಬರೆಯಬೇಕು.

ಈ. ಒಂದು ವಿಷಯದ ಮೇಲೆ ಸಾಧಾರಣವಾಗಿ ೪೫ ನಿಮಿಷಗಳಿಗಿಂತ ಹೆಚ್ಚಿನ ಸಮಯದವರೆಗೆ ಮನಸ್ಸನ್ನು ಏಕಾಗ್ರಗೊಳಿಸುವುದು ಕಠಿಣವಿರುತ್ತದೆ. ಆದುದರಿಂದ ಆಗಾಗ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು. ವಿಶ್ರಾಂತಿಯ ಸಮಯದಲ್ಲಿ ೫ ನಿಮಿಷ ಪ್ರಾರ್ಥನೆ ಹಾಗೂ ನಾಮಜಪವನ್ನು ಮಾಡಬೇಕು.

ಉ. ಓದಿದ ನಂತರ ಬರೆಯುವುದು, ಬರೆದ ನಂತರ ಓದುವುದು ಅಥವಾ ಬಾಯಿಪಾಠ ಮಾಡುವುದು, ಬಾಯಿಪಾಠ ಮಾಡಿದ ನಂತರ ಓದುವುದು, ಮತ್ತೆ ಬರೆಯುವುದು ಹೀಗೆ ಪುನಃ ಪುನಃ ಅಭ್ಯಾಸ ಮಾಡಬೇಕು.

ಮೇಲಿನ ಅಂಶಗಳನ್ನು ಆದಷ್ಟು ಬೇಗ ಆಚರಣೆಯಲ್ಲಿ ತಂದು ಯಶಸ್ಸಿನತ್ತ ಮುನ್ನಡೆಯೋಣ !