ಶಾಲೆಯನ್ನು ವಿದ್ಯೆಯ ದೇಗುಲವೆಂದು ತಿಳಿದು ಆದರ್ಶವಾಗಿ ವರ್ತಿಸಿ !

ವಿದ್ಯಾರ್ಥಿ ದೆಸೆಯಲ್ಲಿರುವಾಗ ನಮ್ಮ ಹೆಚ್ಚಿನ ಸಮಯವು ಶಾಲೆ ಹಾಗೂ ಶಿಕ್ಷಣದೊಂದಿಗೆ ಹೊಂದಿಕೊಂಡಿರುತ್ತದೆ. ಶಾಲೆಯು ವಿದ್ಯೆಯ ದೇಗುಲವಾಗಿದ್ದು ಸಂಸ್ಕಾರದ ಒಂದು ಮಹತ್ವದ ಮಾಧ್ಯಮವಾಗಿದೆ; ಆದುದರಿಂದಲೇ ಮಕ್ಕಳು ಈ ಕಾಲಾವಧಿಯಲ್ಲಿ ಪ್ರತಿಯೊಂದು ಅಂಶವನ್ನು ವ್ಯವಸ್ಥಿತವಾಗಿ ಪಾಲಿಸಿದರೆ ನಿಮ್ಮ ಮುಂದಿನ ಜೀವನವು ಶಿಸ್ತುಬದ್ಧವಾಗಿ ನೀವು ಆದರ್ಶ ವ್ಯಕ್ತಿಗಳಾಗುತ್ತೀರಿ !

ಶಾಲೆಯಲ್ಲಿ ವರ್ತನೆಯು ಹೀಗಿರಬೇಕು !

೧. ಸೈಕಲ್‌ನ್ನು ನಿಗದಿತ ಸ್ಥಳದಲ್ಲಿ ಸಾಲಿನಲ್ಲಿ ನಿಲ್ಲಿಸಿ ಚೀಲವನ್ನು ತರಗತಿಯಲ್ಲಿ ಇಡಬೇಕು.

೨. ಶಾಲೆಯ ಮೈದಾನದಲ್ಲಿ ಪ್ರಾರ್ಥನೆಗಾಗಿ ಸೇರುವಾಗ ತರಗತಿಯಿಂದ ಸಾಲಿನಲ್ಲಿ ಬರಬೇಕು ಹಾಗೂ ಸಾಲಿನಲ್ಲಿ ನಿಲ್ಲಬೇಕು. ಪ್ರಾರ್ಥನೆಯ ನಂತರವೂ ತರಗತಿಗೆ ಸಾಲಿನಲ್ಲಿಯೇ ಹೋಗಬೇಕು.

೩. ತರಗತಿಗೆ ಹೋದ ನಂತರ ವಾಸ್ತುದೇವತೆ, ಸ್ಥಾನದೇವತೆ ಅಂತೆಯೇ ವಿದ್ಯಾದೇವರಾದ ಶ್ರೀ ಗಣೇಶ ಹಾಗೂ ಶ್ರೀ ಸರಸ್ವತೀ ದೇವಿಯನ್ನು ಮನಸ್ಸಿನಲ್ಲಿಯೇ ವಂದಿಸಿ ‘ನಿಮ್ಮ ಕೃಪೆಯಿಂದ ನನಗೆ ಈ ವಾಸ್ತುವಿನಲ್ಲಿ ಜ್ಞಾನಗ್ರಹಣ ಮಾಡುವ ಅವಕಾಶ ದೊರೆತಿದೆ. ಇಂದು ಕಲಿಸಲಾಗುವ ಎಲ್ಲ ವಿಷಯಗಳನ್ನು ಏಕಾಗ್ರತೆಯಿಂದ ಗ್ರಹಿಸುವಂತಾಗಲಿ‘ ಎಂದು ಪ್ರಾರ್ಥಿಸಬೇಕು.

೪. ಪ್ರತಿಯೊಂದು ವಿಷಯದ ಅವಧಿಯು (period) ಪ್ರಾರಂಭವಾಗುವಾಗ ಕುಲದೇವತೆ ಅಥವಾ ಉಪಾಸ್ಯದೇವತೆಗೆ, ‘ನನಗೆ ನಿಮ್ಮ ರೂಪವು ಶಿಕ್ಷಕರಲ್ಲಿ ಕಂಡು ಬರಲಿ ಹಾಗೂ ಈಗ ಅವರು ತರಗತಿಯಲ್ಲಿ ಏನು ಕಲಿಸುವವರಿದ್ದಾರೆಯೋ ಅದು ನನಗೆ ಸರಿಯಾಗಿ ಅರ್ಥವಾಗಲಿ‘ ಎಂದು ಪ್ರಾರ್ಥಿಸಬೇಕು.

೫. ತರಗತಿಯು ನಡೆಯುತ್ತಿರುವಾಗ ಶಿಕ್ಷಕರಲ್ಲಿ ಏನಾದರೂ ಕೇಳುವುದಿದ್ದರೆ ದೊಡ್ಡ ಧ್ವನಿಯಲ್ಲಿ ಕೇಳದೇ ಕೈ ಮೇಲೆ ಮಾಡಬೇಕು. ಶಿಕ್ಷಕರು ಕೇಳಲು ಹೇಳಿದಾಗ ಆ ಪ್ರಶ್ನೆಯನ್ನು ನಮ್ರತೆಯಿಂದ ಕೇಳಬೇಕು.

೬. ಅವಧಿಯು ಮುಗಿಯುವಾಗ ದೇವತೆಯ ಚರಣದಲ್ಲಿ ‘ನಿಮ್ಮ ಕೃಪೆಯಿಂದ ನನಗೆ ಶಿಕ್ಷಕರು ಕಲಿಸಿದ ವಿಷಯವು ತಿಳಿಯಿತು. ಅದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ‘ ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

೭. ಕಾಗದದ ತುಂಡು, ಸೀಸದ ತುದಿಯನ್ನು ಮೊನಚುಗೊಳಿಸಿದ ನಂತರ ಬರುವ ಕಸ, ರಬ್ಬರ್‌ನಿಂದ ಒರೆಸಿದಾಗ ಬರುವ ಕಸ ಅಥವಾ ಇತರ ಕಸವನ್ನು ತರಗತಿಯಲ್ಲಿ ಎಲ್ಲಿಯೂ ಹಾಕದೇ ಕಸದ ಬುಟ್ಟಿಯಲ್ಲಿ ಹಾಕಬೇಕು. ತರಗತಿ ಹಾಗೂ ಶಾಲೆಯ ಆವರಣವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು.

೮. ಮಿತ್ರರೊಂದಿಗೆ ಆತ್ಮೀಯತೆಯಿಂದ ಹಾಗೂ ಪ್ರೇಮದಿಂದ ವರ್ತಿಸಬೇಕು. ಅವರಿಗೆ ಯಾವಾಗಲೂ ಸಹಾಯ ಮಾಡಬೇಕು.

೯. ಶಾಲೆಯ ಎಲ್ಲ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ, ಅಂತೆಯೇ ಕಾವಲುಗಾರರೊಂದಿಗೆ ಗೌರವದಿಂದ ವರ್ತಿಸಬೇಕು.

ಶಾಲೆಯಲ್ಲಿನ ವರ್ತನೆಯು ಹೀಗಿರಬಾರದು !

೧. ಅನುಪಸ್ಥಿತರಿರುವ ಮಿತ್ರರ ಹಾಜರಿಯನ್ನು ಹೇಳಬಾರದು.

೨. ತರಗತಿಯು ನಡೆಯುತ್ತಿರುವಾಗ ಚಾಕಲೇಟ್ ಅಥವಾ ಇತರ ಪದಾರ್ಥಗಳನ್ನು ತಿನ್ನಬಾರದು.

೩. ಎರಡು ಅವಧಿಯ ನಡುವೆ ಇರುವ ಸಮಯದಲ್ಲಿ ಗಲಾಟೆ ಮಾಡಬಾರದು.

೪. ತರಗತಿಯಲ್ಲಿನ ಮಕ್ಕಳನ್ನು ಪೀಡಿಸುವುದು, ಹೊಡೆಯುವುದು, ಅವರ ಬಟ್ಟೆಗಳ ಮೇಲೆ ಶಾಯಿಯ ಗೆರೆ ಎಳೆಯುವಂತಹ ತೊಂದರೆ ಕೊಡಬಾರದು.

೫. ಶಿಕ್ಷಕರ ಬಳಿ ಯಾರ ಬಗ್ಗೆಯೂ ಸುಳ್ಳು ದೂರುಗಳನ್ನು ಹೇಳಬಾರದು.

೬. ಪಠ್ಯ ಪುಸ್ತಕಗಳ ಮೇಲೆ ಶಾಯಿಯ ಕಲೆ ಬೀಳಬಾರದು. ಅಂತೆಯೇ ಪಠ್ಯಗಳ ಹಾಗೂ ಪುಸ್ತಕಗಳಲ್ಲಿನ ಚಿತ್ರಗಳ ಮೇಲೆ ಮೀಸೆ ಗಡ್ಡ ಬಿಡಿಸಿ ವಿದ್ರೂಪಗೊಳಿಸಬಾರದು.

೭. ತರಗತಿಯ ಗೋಡೆಗಳ ಮೇಲೆ, ಮೇಜಿನ ಮೇಲೆ ಹೆಸರು ಬರೆಯುವುದು ಅಥವಾ ಗೆರೆ ಎಳೆಯುವಂತಹ ಕೃತಿಗಳನ್ನು ಮಾಡಬಾರದು.

೮. ದೈಹಿಕ ತರಬೇತಿ (ಪಿ.ಟಿ) ತಪ್ಪಿಸಲು ಅನಾರೋಗ್ಯದ ಸುಳ್ಳು ಕಾರಣ ಹೇಳಬಾರದು.

ಮಕ್ಕಳೇ, ‘ಶಾಲೆಯು ವಿದ್ಯಾದೇವತೆಯಾದ ಶ್ರೀ ಸರಸ್ವತೀ ದೇವಿಯ ದೇವಸ್ಥಾನವಾಗಿದೆ’ ಎಂಬ ಭಾವವಿಟ್ಟು ಈ ವಿದ್ಯಾಮಂದಿರದ ಪಾವಿತ್ರ್ಯವನ್ನು ರಕ್ಷಿಸಿರಿ. ಇದರಿಂದ ಸರಸ್ವತೀ ದೇವಿಯು ಪ್ರಸನ್ನರಾಗುವರು ಹಾಗೂ ನಿಮಗೆ ಉತ್ತಮ ವಿದ್ಯೆಯು ಲಭಿಸುವುದು !