ಸಂತ ಶಿರೋಮಣಿ – ಮಹಾಕವಿ ತುಲಸೀದಾಸ

ಸಂತನ ಬದುಕು ಸಂತನಿಗಲ್ಲಎನ್ನುತ್ತಾರೆ. ದೇಶವು ಮೊಗಲರ ಅಳ್ವಿಕೆಯ ಗುಲಾಮಗಿರಿಯಲ್ಲಿ ತೊಳಲಾಡುತ್ತಿದ್ದಾಗ, ತಮ್ಮ ವಿದ್ವತ್ಪೂರ್ಣವೂ ಬಹು ಜನಪ್ರಿಯವೂ ಆಗಿರುವ ರಾಮಚರಿತಮಾನಸವನ್ನು ರಚಿಸಿದ ಸಂತ ತುಲಸೀದಾಸರು ಬಾಲ್ಯದಲ್ಲಿ ಮನೆಯಿಂದ ಹೊರಹಾಕಲ್ಪಟ್ಟು, ಭಿಕ್ಷಾಟನೆಯಿಂದ ಬದುಕುತ್ತಿದ್ದರು. ರೂಪವತಿ, ವಿದುಷಿಯಾಗಿದ್ದ ಅವರ ಪತ್ನಿಯು ತನ್ನ ಬಗೆಗಿನ ಪತಿಯ ಅಪಾರ ಆಸಕ್ತಿಯನ್ನು ಭಗವಂತನ ಬಗ್ಗೆ ತೋರಿಸಿರೆಂದು ಪ್ರೇರಣೆ ನೀಡಿದ ಅಸಾಮಾನ್ಯ ಮಹಿಳೆ.

ಇಂದಿನ ಐನೂರು ವರ್ಷ ಹಿಂದೆ ನಮ್ಮ ದೇಶವು ಮಹಾ ವಿಪತ್ತುಗಳ ಸರಣಿಯನ್ನು ಎದುರಿಸುತ್ತಿತ್ತು. ಹಿಂದೂ ಧರ್ಮ, ಸಂಸ್ಕೃತಿ ಮತ್ತು ಸಮಾಜದ ಮೇಲೂ ಘೋರ ವಿಪತ್ತುಗಳ ಕಾರ್ಮೋಡ ಕವಿದಿತ್ತು. ದೇಶವಿಡೀ ಮೊಗಲ್ ಆಕ್ರಮಣಕಾರಿ ಅತ್ಯಾಚಾರಗಳ ಹಾವಳಿಗೀಡಾಗಿತ್ತು. ಕತ್ತಿಯಲಗಿನಿಂದ ಹಿಂದುಗಳು ತಮ್ಮ ಧರ್ಮ ತ್ಯಜಿಸಿ ಇಸ್ಲಾಂ ಸ್ವೀಕರಿಸುವಂತೆ ಬಾಧ್ಯಗೊಳಿಸಲಾಗುತ್ತಿತ್ತು. ಅತ್ತ ಹಿಂದೂ ಸಮಾಜವು ಅಸ್ಪೃಶ್ಯತೆ, ಜಾತಿಪಂಥ ಮತ್ತು ಉಚ್ಚನೀಚ ಭಾವನೆಯಿಂದ ದುರಂತ ಸ್ಥಿತಿಯಲ್ಲಿತ್ತು. ಸಾಮಾಜಿಕ ಏಕತೆಯು ಅಳಿದು ಹೋದಂತಿತ್ತು. ಇಂತಹ ವಿಪತ್ಕಾಲದಲ್ಲಿ ಗೋಸ್ವಾಮಿ ತುಲಸೀದಾಸರು ಶ್ರೀರಾಮ ನಾಮ ಮತ್ತು ರಾಮಚರಿತರೂಪಿ ಕವಚದಿಂದ ಹಿಂದೂ ಧರ್ಮ, ಸಮಾಜ ಮತ್ತು ಸಂಸ್ಕೃತಿಯನ್ನು ರಕ್ಷಿಸಿದರು.

ಬಾಲ್ಯದಿಂದಲೇ ರಾಮನ ಆಸರೆ

ವಿಕ್ರಮ ಸಂವತ್ಸರದ ೧೫೫೪ (೧೪೯೭ ನೇ ಇಸವಿ) ಶ್ರಾವಣ ಶುದ್ಧ ಸಪ್ತಮಿಯಂದು ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ರಾಜಾಪುರ ಗ್ರಾಮದಲ್ಲಿ ತುಲಸೀದಾಸರು ಜನಿಸಿದರು. ಅವರ ತಂದೆ ಪಂ. ಮುರಾರೀಲಾಲ್ ಮಿಶ್ರರು ಸರಯೂಪಾರೀಯ ಬ್ರಾಹ್ಮಣರು. ತಾಯಿ ಹುಲಸೀಯು ಶೀಘ್ರವೇ ಸ್ವರ್ಗಸ್ಥಳಾದುದರಿಂದ, ಮೂಲ ನಕ್ಷತ್ರದಲ್ಲಿ ಜನಿಸಿದ್ದ ಬಾಲಕನು ಅಶುಭವೆಂದು ತಂದೆಯು ಅವನನ್ನು ಮನೆಯಿಂದ ಹೊರಹಾಕಿದರು. ಹೀಗಾಗಿ ತುಲಸೀದಾಸರ ಬಾಲ್ಯವು ಅನಾಥ ಬಾಲಕನಂತೆ ಭಿಕ್ಷಾಟನೆಯಿಂದಲೇ ಕಳೆಯಿತು. ಆದರೆ ಸಂಕಟ ಪರಿಸ್ಥಿತಿಯಲ್ಲಿ ದೇವರ ಮೇಲೆ ಅವರ ಶ್ರದ್ಧೆಭಕ್ತಿಗಳು ಮತ್ತಷ್ಟು ದೃಢಗೊಳ್ಳುತ್ತಾ ಹೋದವು. ಅವರು ರಾಮನಾಮ ಸ್ಮರಿಸುತ್ತಲೇ ತಮ್ಮ ಜೀವನ ನಿರ್ವಹಣೆ ಮಾಡತೊಡಗಿದರು. ‘ಸೂಕರ ಕ್ಷೇತ್ರದಲ್ಲಿ ಸ್ವಾಮಿ ನರಹರಿದಾಸರನ್ನು ತಮ್ಮ ಗುರುವಾಗಿ ಸ್ವೀಕರಿಸಿದರು. ಅಲ್ಲಿ ಉಳಿದುಕೊಂಡು, ಮುಂದೆ ಅವರು ಅಲ್ಲಿಂದ ಕಾಶಿಗೆ ಹೊರಟು ಹೋದರು. ಇಪ್ಪತ್ತೆಂಟರ ಹರೆಯದಲ್ಲಿ ಅವರ ವಿವಾಹವಾಯಿತು.

ಪತ್ನಿಯ ಪ್ರೇರಣೆಯಿಂದ ಸಂನ್ಯಾಸ

ತುಲಸೀದಾಸರ ಪತ್ನಿ ರತ್ನಾವಲಿಯು ರೂಪವತಿ ಮತ್ತು ವಿದುಷಿ ಮಹಿಳೆಯಾಗಿದ್ದಳು. ಅವರಿಗೆ ತಮ್ಮ ಪತ್ನಿಯ ಬಗ್ಗೆ ತುಂಬಾ ಪ್ರೀತಿಯಿತ್ತು. ಒಮ್ಮೆ ಆಕೆ ತನ್ನ ತವರಿಗೆ ಹೋಗಿದ್ದಳು. ತುಲಸೀದಾಸರು ಮಧ್ಯರಾತ್ರಿ ಭಾರೀ ಮಳೆಯಲ್ಲಿ ಉಕ್ಕಿ ಹರಿಯುತ್ತಿದ್ದ ನದಿಯನ್ನು ಈಜಿಕೊಂಡು ಪತ್ನಿಯನ್ನು ಭೇಟಿಯಾಗಲು ಹೋದರು. ರತ್ನಾವಲಿಯು ತನ್ನ ಪತಿಯ ಅದಮ್ಯ ಸಾಹಸವನ್ನು ಕಂಡು ವಿನಯದಿಂದ ಹೇಳಿದಳು, “ನಿಮಗೆ ಇಂತಹದೇ ಆಸಕ್ತಿಯು ಪ್ರಭು ರಾಮಚಂದ್ರನ ಮೇಲೆ ಉಂಟಾದರೆ, ನಾವು ಭವ ಸಾಗರವನ್ನು ಖಂಡಿತ ದಾಟಿ ಹೋಗುವುದರಲ್ಲಿ ಸಂದೇಹವಿಲ್ಲ."

ಪತ್ನಿಯ ಪ್ರೇರಣೆಯಿಂದ ತುಲಸೀದಾಸರಿಗೆ ನಿಜವಾಗಿಯೂ ವೈರಾಗ್ಯ ಮೂಡಿ ಬಂದಿತು. ತಮ್ಮ ಪತ್ನಿಯನ್ನೂ ಗುರುವೆಂದು ಸ್ವೀಕರಿಸಿದ ಅವರು ಈಗ ಶ್ರೀ ರಾಮಚಂದ್ರರ ಭಕ್ತಿಯಲ್ಲಿ ತಲ್ಲೀನರಾದರು. ದ್ವಾರಕೆ, ರಾಮೇಶ್ವರಂ, ಜಗನ್ನಾಥ ಪುರಿ, ಬದ್ರಿನಾಥ ಇತ್ಯಾದಿ ತೀರ್ಥಕ್ಷೇತ್ರಗಳಿಗೆ ಅವರು ಹದಿನಾಲ್ಕು ವರ್ಷಗಳವರೆಗೆ ಯಾತ್ರೆಗಳನ್ನು ಮಾಡಿದರು. ಎಲ್ಲಾ ಕಡೆಯೂ ಶ್ರೀರಾಮ ಕೀರ್ತನೆಯನ್ನು ಮಾಡುವುದು ಅವರ ಪ್ರಿಯ ಕಾರ್ಯವಾಗಿತ್ತು. ಕೊನೆಗೆ ಚಿತ್ರಕೂಟದಲ್ಲಿದ್ದು ಅವರು ಶ್ರೀರಾಮನ ಗುಣಗಾನ ಮಾಡತೊಡಗಿದರು.ಇಲ್ಲಿ ವಿಕ್ರಮ ಸಂವತ್ಸರ ೧೬೦೭ರಲ್ಲಿ ಮೌನೀ ಅಮವಾಸ್ಯೆಯ ದಿನ ಅವರಿಗೆ ಭಗವಾನ್ ಶ್ರೀರಾಮಲಕ್ಷ್ಮಣರ ಸಾಕ್ಷಾತ್ಕಾರವಾಯಿತು. ಇಲ್ಲಿಯೇ ಹನುಮತ್ ಕೃಪೆಯಿಂದ ಅವರು ಶ್ರೀರಾಮಚರಿತ ಮಾನಸ ಮಹಾಕಾವ್ಯದ ಅಧಿಕಾಂಶ ಭಾಗವನ್ನು ಬರೆದರು.

ಸಮಾಜಕ್ಕೆ ದೃಢತೆ ನೀಡಿದರು

ತುಲಸೀದಾಸರು ಮಹಾಕಾವ್ಯ ರಾಮಚರಿತ ಮಾನಸದ ಮೂಲಕ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರು, ಚರಿತ್ರೆ ಮತ್ತು ಆದರ್ಶವನ್ನು ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲೂ ಜಾಗೃತಗೊಳಿಸಿದರು. ಭಗವಾನ್ ಶ್ರೀರಾಮನಂತೆ ಹಿಂದೂ ಸಮಾಜವೂ ಸಹ ಮೊಗಲ ಆಕ್ರಮಣಾಧಿಕಾರಿಗಳನ್ನು ಧೈರ್ಯ, ಸಾಹಸ ಮತ್ತು ಪರಾಕ್ರಮದಿಂದ ಎದುರಿಸಲು ಪ್ರೇರಣೆ ನೀಡಿದರು. ಧರ್ಮ, ಸಂಸ್ಕೃತಿ ಮತ್ತು ದೇಶವನ್ನು ನಾಶಗೊಳಿಸಲು ಹವಣಿಸುತ್ತಿರುವ ವಿಧರ್ಮಿಗಳೆದುರು ಸಮಾಜವು ದೃಢವಾಗಿ ನಿಲ್ಲಲು ಶ್ರೀರಾಮ ಚರಿತ್ರೆಯ ಮೂಲಕ ಪ್ರೇರೇಪಿಸಿದರು.

ಸಮಾಜಿಕ ಸಾಮರಸ್ಯದ ಸಂದೇಶ

ಉಚ್ಚನೀಚತೆ, ಅಸ್ಪೃಶ್ಯತೆ ಮತ್ತು ಜಾತಿಪಂಥಗಳಿಂದ ಹರಿದು ಹಂಚಿ ಹೋಗಿರುವ ಸಮಾಜವು ಪುನಃ ಸಂಘಟಿತವಾಗಬೇಕೆಂದು ಸಂದೇಶವನ್ನೂ ಅವರು ರಾಮಚರಿತ ಮಾನಸದ ಮೂಲಕ ಪ್ರಚಾರಗೊಳಿಸಿದರು. ಅವರ ಆರಾಧ್ಯದೈವ ಶ್ರೀರಾಮನು ನಿಷಾದರಾಜ, ಶಬರಿ ಮತ್ತು ಗಿಡುಗರಾಜ ಜಟಾಯುವನ್ನು ಸಮ್ಮಾನಿಸಿ, ನಿಮ್ಮ ಅಸ್ಪೃಶ್ಯರೆಂದು ಭಾವಿಸಲ್ಪಟ್ಟಿದ್ದ ವರ್ಗವನ್ನು ಸಮಗ್ರ ಸಮಾಜದೊಂದಿಗೆ ಬೆಸೆಯಲು ಪ್ರಯತ್ನಿಸಿದ್ದನು. ರಾಷ್ಟ್ರ ಕಟ್ಟುವ ವನವಾಸಿ, ಭೀಲ್, ನಿಷಾದ, ವಾನರ ಮುಂತಾದವರ ಮಹತ್ವಪೂರ್ಣ ಯೋಗದಾನದ ಸಂದೇಶವನ್ನೂ ಅವರು ರಾಮಚರಿತ ಮಾನಸದ ಮೂಲಕ ಹಿಂದೂ ಸಮಾಜಕ್ಕೆ ನೀಡಿದರು. ತುಲಸೀದಾಸರು ಸರಳ ಮತ್ತು ಸರಸವಾದ ಜನ ಭಾಷೆಯಲ್ಲಿ ರಚಿಸಿದ ವಿಶಾಲ ಸಾಹಿತ್ಯವು ಪ್ರತಿಯೊಬ್ಬ ಹಿಂದೂವಿನ ಮನಪಟಲದಲ್ಲಿ ಗಾಢವಾಗಿ ಅಚ್ಚೊತ್ತಿತು. ಅವರ ಪ್ರಯತ್ನಗಳಿಂದಾಗಿ ಶ್ರೀರಾಮನಾಮ ಮತ್ತು ರಾಮಚರಿತ ಮಾನಸವು ಹಿಂದೂ ಸಮಾಜದ ಗುರುತೆನಿಸಿತು. ಕಾಲವನ್ನು ಮೆಟ್ಟಿನಿಂತ ಅವನ ಸಾಹಿತ್ಯವು ಸಮಗ್ರ ಸಮಾಜವು ಸತ್ಯ ಮತ್ತು ಧರ್ಮದಲ್ಲಿ ದೃಢವಾಗಿ ನಿಲ್ಲುವಂತೆ ಪ್ರೇರಣೆ ನೀಡುತ್ತ ಬಂದಿದೆ. ಭವಿಷ್ಯದಲ್ಲೂ ಪ್ರೇರಣೆ ನೀಡುತ್ತಿರುವುದು. (ಹಿಂದೂ ಘರ್ಜನ)

ಆಧಾರ :ವಿಕ್ರಮ’, ಕನ್ನಡ ಸಾಪ್ತಾಹಿಕ (ಸಂಚಿಕೆ ಕ್ರಮಾಂಕ ಸಂಪುಟ ೬೧, ..೨೦೦೮) ಪುಟ ಸಂಖ್ಯೆ ೧೬.

Leave a Comment