ಭಕ್ತೆ ಸಂತ ಸಖುಬಾಯಿಯ ನೆರವಿಗೆ ಅವಳ ಮನೆಯಲ್ಲಿ ವಾಸಿಸುವ ಶ್ರೀ ವಿಠಲ

ಮಿತ್ರರೇ, ಕೃಷ್ಣಾ ನದಿಯ ತೀರದಲ್ಲಿ ಕರವೀರ ಎಂಬ ಹೆಸರಿನ ತೀರ್ಥಕ್ಷೇತ್ರವಿದೆ. ಅನೇಕ ವರ್ಷಗಳ ಹಿಂದೆ ಅಲ್ಲಿ ಸಂತ ಸಖುಬಾಯಿಯ ಮನೆಯಿತ್ತು. ಸಂತ ಸಖುಬಾಯಿಯ ಪತಿಯ ಹೆಸರು ದಿಗಂಬರ. ಅವರ ಜೊತೆಗೆ ಅವರ ಅತ್ತೆಯೂ ವಾಸಿಸುತ್ತಿದ್ದಳು. ಅತ್ತೆಯ ಸ್ವಭಾವ ಬಹಳ ಕಠೋರವಾಗಿತ್ತು. ಮುಗ್ಧ-ಪ್ರಾಮಾಣಿಕ ಸಂತ ಸಖುಬಾಯಿಯನ್ನು ಸತಾಯಿಸುತ್ತಿದ್ದಳು. ಅವಳನ್ನು ಬರಿಹೊಟ್ಟೆಯಲ್ಲಿ ಇರಿಸಿ ಹೊಡೆಯುತ್ತಿದ್ದಳು ಮತ್ತು ಬೆಳಗ್ಗೆಯಿಂದ ರಾತ್ರಿ ತನಕ ಸಖುಬಾಯಿಗೆ ತುಂಬಾ ಕೆಲಸ ನೀಡುತ್ತಿದ್ದಳು. ಇಡೀ ದಿನ ಕೆಲಸ ಮಾಡಿದರೂ ಸಂತ ಸಖುಬಾಯಿಯು ಬೈಗುಳವನ್ನೇ ಕೇಳಬೇಕಾಗುತ್ತಿತ್ತು. ಸಖುಬಾಯಿಯು ಇದೆಲ್ಲವನ್ನು ಮೌನವಾಗಿ ಸಹಿಸಿಕೊಂಡು, ಸದಾಕಾಲ ‘ಪಾಂಡುರಂಗ, ಪಾಂಡುರಂಗ’ ಎಂದು ಜಪ ಮಾಡುತ್ತಿದ್ದಳು. ಪಾಂಡುರಂಗ ಯಾರು ಗೊತ್ತೇ? ಶ್ರೀವಿಷ್ಣುವಿನ ಒಂದು ಹೆಸರೆಂದರೆ ಶ್ರೀವಿಠಲ. ಶ್ರೀ ವಿಠಲನಿಗೆ ಪಾಂಡುರಂಗ ಎಂಬ ಹೆಸರು ಕೂಡ ಇದೆ.

ಒಂದು ಸಲ ಏನಾಯಿತು, ಆಷಾಢ ಏಕಾದಶಿಯಂದು ಪಂಢರಪುರಕ್ಕೆ ಹೋಗುವ ಕೀರ್ತನಕಾರರ ಗುಂಪು (ಅವರನ್ನು ವಾರಕರಿ ಎನ್ನುತ್ತಾರೆ) ಸಖುಬಾಯಿಯ ಊರಿಗೆ ಬಂದು ತಲುಪಿತು. ಎಲ್ಲ ವಾರಕರಿಗಳು ಕೃಷ್ಣಾ ನದಿಯ ತೀರದಲ್ಲಿ ಬೀಡುಬಿಟ್ಟಿದ್ದರು. ಅಲ್ಲಿ ಒಬ್ಬ ಮಹಾರಾಜರು ಕೀರ್ತನೆ ಮಾಡತೊಡಗಿದರು. ಅದೇ ಸಮಯದಲ್ಲಿ ಕೃಷ್ಣಾ ನದಿಯ ತೀರಕ್ಕೆ ನೀರು ತರಲು ಸಖುಬಾಯಿಯು ಬಂದಿದ್ದಳು. ತಮ್ಮ ಕೀರ್ತನೆಯಲ್ಲಿ ಮಹಾರಾಜರು ಪಂಢರಪುರದ ಶ್ರೀವಿಠಲನ ಮಹಿಮೆಯನ್ನು ಹೇಳುತ್ತಿದ್ದರು. ವಿಠಲನ ಹೆಸರನ್ನು ಕೇಳುತ್ತಲೇ ಸಖುಬಾಯಿಯು ಆ ಕೀರ್ತನೆಯಲ್ಲಿ ಕುಳಿತುಕೊಂಡು ಮಹಾರಾಜರ ಕೀರ್ತನೆಯನ್ನು ಕೇಳತೊಡಗಿದಳು. ಎಲ್ಲ ವಾರಕರಿಗಳನ್ನು ನೋಡಿ ಸಖುಬಾಯಿಗೂ ಪಂಢರಪುರಕ್ಕೆ ಹೋಗಿ ಶ್ರೀವಿಠಲ ದರ್ಶನ ಪಡೆಯಬೇಕೆಂಬ ಇಚ್ಛೆಯು ತೀವ್ರವಾಗಿ ಜಾಗೃತವಾಯಿತು ಮತ್ತು ಅವಳು ಮನಸ್ಸಿನಲ್ಲಿಯೇ, ‘ಏನು ಬೇಕಾದರೂ ಆಗಲಿ, ನಾನು ಖಂಡಿತವಾಗಿಯೂ ಪಂಢರುಪುರಕ್ಕೆ ಹೋಗುವೆನು’ ಎಂದು ನಿರ್ಧರಿಸಿದಳು. ಅವಳು ತನ್ನ ನೀರಿನ ಗಡಿಗೆಯನ್ನು ನೆರೆಮನೆಯವಳ ಬಳಿ ಕೊಟ್ಟು ಮನೆಗೆ ಕೊಡಲು ಹೇಳಿದಳು ಮತ್ತು ವಾರಕರಿಗಳೊಂದಿಗೆ ಹೋಗಿಬಿಟ್ಟಳು. ಶ್ರೀವಿಠಲನ ಜಯಘೋಷ ಮಾಡುತ್ತಾ ಸಖುಬಾಯಿಯು ಅತ್ಯಂತ ಆನಂದದಿಂದ ಯಾತ್ರೆ ಪ್ರಾರಂಭಿಸಿದಳು.

ನೆರೆಮನೆಯವಳು ಮನೆಗೆ ಬಂದು ಸಖುಬಾಯಿಯು ಗಡಿಗೆಯನ್ನು ನೀಡಿದಳು ಮತ್ತು ಅತ್ತೆಯು ಸಖುಬಾಯಿಯ ಬಗ್ಗೆ ಕೇಳಿದಾಗ ಅವಳು ವಾರಕರಿಗಳೊಂದಿಗೆ ಹೋದುದನ್ನು ತಿಳಿಸಿದಳು. ಆಗ ಸಿಟ್ಟಿನಿಂದ ಅತ್ತೆಯು ತನ್ನ ಮಗನನ್ನು ಕರೆದು ಸಖುಬಾಯಿಯನ್ನು ಮನೆಗೆ ವಾಪಾಸ್ಸು ಕರೆತರಲು ಹೇಳುತ್ತಾಳೆ. ದಿಗಂಬರನು ತಕ್ಷಣ ಕೀರ್ತನಕಾರರ ಗುಂಪಿನ ಹಿಂದೆ ಹೋಗಿ, ಸಖುಬಾಯಿಯನ್ನು ಎಳೆದುಕೊಂಡು ಮನೆಗೆ ಕರೆತರುತ್ತಾನೆ. ಅತ್ತೆ-ಮಗ ಸೇರಿ ಅವಳನ್ನು ಕೋಣೆಯಲ್ಲಿ ಕೂಡಿ ಹಾಕುತ್ತಾರೆ ಮತ್ತು ಅವಳಿಗೆ ನೀರು-ತಿಂಡಿ ಏನ್ನನ್ನೂ ನೀಡುವುದಿಲ್ಲ.

ಸಖುಬಾಯಿಯು ತನಗೆ ಪಾಂಡುರಂಗನ ದರ್ಶನವಾಗುವುದಿಲ್ಲ ಎಂದು ತುಂಬಾ ದುಃಖ ಪಡುತ್ತಾಳೆ ಮತ್ತು ಅವಳು ಪಾಂಡುರಂಗನ ನಾಮಸ್ಮರಣೆ ಮಾಡತೊಡಗುತ್ತಾಳೆ, ತಳಮಳದಿಂದ ಪಾಂಡುರಂಗನನ್ನು ಕರೆಯುತ್ತಾಳೆ.
‘ಹೇ ನಾಥಾ, ಪಾಂಡುರಂಗಾ, ಈಗ ನೀವು ನನಗೆ ಯಾವಾಗ ಸಿಗುವಿರಿ? ನಿಮ್ಮನ್ನು ಬಿಟ್ಟು ನಾನು ಅನಾಥಳಾಗಿದ್ದೇನೆ. ನಿಮ್ಮನ್ನು ಬಿಟ್ಟರೆ ನನಗೆ ಬೇರೆ ಯಾರೂ ಮಿತ್ರರಿಲ್ಲ. ನಿಮ್ಮ ಚರಣಗಳಲ್ಲಿಯೇ ಲೀನಳಾಗಬೇಕು ಎಂದು ನನಗೆ ಅನಿಸುತ್ತಿದೆ. ನನ್ನ ಶರೀರವನ್ನು ನಿಮ್ಮ ಚರಣಗಳಿಗೆ ಅರ್ಪಿಸಬೇಕೆಂದು ಅನಿಸುತ್ತಿದೆ. ಆಗ ಮಾತ್ರ ನನಗೆ ನಿಮ್ಮ ದರ್ಶನವಾಗಬಹುದು’.

ಸಖುಬಾಯಿಯ ಭಕ್ತಿ ಮತ್ತು ಮುಗ್ಧಭಾವವನ್ನು ನೋಡಿ ಪಾಂಡುರಂಗನು ಬಹಳ ಪ್ರಸನ್ನನಾಗುತ್ತಾನೆ. ಪಾಂಡುರಂಗನು ತನ್ನ ಪತ್ನಿ ರುಕ್ಮಿಣಿಗೆ ಎಲ್ಲವನ್ನೂ ಹೇಳುತ್ತಾನೆ ಮತ್ತು ಸ್ತ್ರೀ ವೇಷವನ್ನು ಧರಿಸಿ ಭಕ್ತೆ ಸಖುಬಾಯಿಯ ಮನೆಗೆ ಬರುತ್ತಾರೆ. ಸಖುಬಾಯಿಯನ್ನು ಕೂಡಿಟ್ಟಿರುವ ಕೋಣೆಗೆ ಹೋಗಿ ಅವಳ ಬಳಿ ಅವಳ ಸ್ಥಿತಿ-ಗತಿಯನ್ನು ವಿಚಾರಿಸುತ್ತ, ‘ನಾನು ಸಹ ವಾರಕರಿಯಾಗಿದ್ದೇನೆ’ ಎನ್ನುತ್ತಾನೆ. ಆಗ ಸಖುಬಾಯಿಯು ತನ್ನ ತಳಮಳವನ್ನೆಲ್ಲ ಅವರೆದುರು ವ್ಯಕ್ತ ಪಡಿಸುತ್ತಾಳೆ. ಆಗ ಆ ಸ್ತ್ರೀಯು, ‘ನೀನು ಪಂಢರಾಪುರಕ್ಕೆ ಹೋಗು. ಪಾಂಡುರಂಗನ ದರ್ಶನ ಪಡೆದು ಬಾ. ಅಲ್ಲಿಯ ತನಕ ನಾನು ಇಲ್ಲಿರುತ್ತೇನೆ’ ಎಂದು ಹೇಳುತ್ತಾರೆ. ಇದನ್ನು ಕೇಳಿ ಸಖುಬಾಯಿಗೆ ಬಹಳ ಆನಂದವಾಗುತ್ತದೆ.

ಸಖುಬಾಯಿಯು ಪಂಢರಾಪುರಕ್ಕೆ ತಲುಪುತ್ತಾಳೆ. ಪಾಂಡುರಂಗನ ರೂಪವನ್ನು ನೋಡಿ ಅವಳಿಗೆ ಶಾಂತಿಯು ಸಿಗುತ್ತದೆ ಮತ್ತು ಅವಳು ಅಲ್ಲಿಯೇ ತನ್ನ ಪ್ರಾಣವನ್ನು ತ್ಯಜಿಸುತ್ತಾಳೆ. ವಾರಕರಿಯವರ ಜೊತೆಗೆ ಬಂದಿದ್ದ ಸಖುಬಾಯಿಯ ಊರಿನವರು ಅವಳ ಅಂತ್ಯಸಂಸ್ಕಾರವನ್ನು ಮಾಡುತ್ತಾರೆ.

ಅತ್ತ ಮನೆಯಲ್ಲಿ ಆಷಾಢ ಏಕಾದಶಿಯ ಮರುದಿನ ದಿಗಂಬರನು ಸಖುಬಾಯಿಯಿದ್ದ ಕೋಣೆಯ ಬಾಗಿಲನ್ನು ತೆರೆಯುತ್ತಾನೆ. ಸಖುಬಾಯಿಯ ರೂಪದಲ್ಲಿ ಪಾಂಡುರಂಗನು ಸಖುಬಾಯಿಯ ಮನೆಯ ಎಲ್ಲ ಕೆಲಸಗಳನ್ನು ಮಾಡತೊಡಗುತ್ತಾನೆ. ಸಖುಬಾಯಿಯ ಅತ್ತೆಯು ಹೇಳಿದ ಎಲ್ಲ ಕೆಲಸಗಳನ್ನು ಯಾವುದೇ ವಿರೋಧವನ್ನು ವ್ಯಕ್ತಪಡಿಸದೇ ಭಗವಂತನು ಮಾಡುತ್ತಾನೆ.

ಇಲ್ಲಿ ದೇವಿ ರುಕ್ಮಿಣಿಗೆ ಚಿಂತೆಯಾಗತೊಡಗುತ್ತದೆ. ಒಂದು ವೇಳೆ ಸಖುಬಾಯಿಯು ವಾಪಾಸ್ಸು ಬರದಿದ್ದರೆ ವಿಠಲನು ಅಲ್ಲಿಯೇ ಸಿಲುಕಿಕೊಳ್ಳಬಹುದು. ದೇವಿ ರುಕ್ಮಿಣಿಯು ಸಖುಬಾಯಿಯ ದೇಹದ ಬೂದಿ ಮತ್ತು ಅಸ್ತಿಗಳನ್ನು ಒಟ್ಟುಗೂಡಿಸಿ ಸಖುಬಾಯಿಯನ್ನು ಜೀವಂತಗೊಳಿಸುತ್ತಾಳೆ ಮತ್ತು ಮನೆಗೆ ವಾಪಾಸ್ಸು ಕಳಿಸುತ್ತಾಳೆ. ಸಖುಬಾಯಿಯು ಮನೆಗೆ ಬರುವಾಗ ದಾರಿಯಲ್ಲಿ ಅವಳಿಗೆ ತನ್ನ ರೂಪದಲ್ಲಿ ತನ್ನ ಮನೆಯಲ್ಲಿ ವಾಸಿಸುತ್ತಿದ್ದ ಪಾಂಡುರಂಗನು ಭೇಟಿಯಾಗುತ್ತಾನೆ.

ಯಾರು ಸಖುಬಾಯಿಯ ಅಂತ್ಯಸಂಸ್ಕಾರವನ್ನು ಮಾಡಿದ್ದರೋ ಅವರು ಸಖುಬಾಯಿಯ ಮನೆಗೆ ಬರುತ್ತಾರೆ. ಅಲ್ಲಿ ನೋಡಿದಾಗ ಅವರಿಗೆ ಸಖುಬಾಯಿಯು ಕೆಲಸ ಮಾಡುತ್ತಿರುವುದು ಕಾಣಿಸುತ್ತದೆ. ಅವರಿಗೆ ಆಶ್ಚರ್ಯವಾಗುತ್ತದೆ. ಅವರು ಸಖುಬಾಯಿಯ ಪತಿ ಹಾಗೂ ಅತ್ತೆಗೆ ನಡೆದ ವಿಷಯವನ್ನು ತಿಳಿಸುತ್ತಾರೆ. ಅವರು ಸಖುಬಾಯಿಯ ಬಳಿ ಕೇಳಿದಾಗ ಅವಳು ಎಲ್ಲವನ್ನೂ ಹೇಳುತ್ತಾಳೆ. ಇದನ್ನು ಕೇಳಿ ಊರಿನವರಿಗೆ ಬಹಳ ಆಶ್ಚರ್ಯವಾಗುತ್ತದೆ ಮತ್ತು ಅವಳ ಪತಿ ಹಾಗೂ ಅತ್ತೆಗೆ ಬಹಳ ಪಶ್ಚಾತ್ತಾಪವಾಗುತ್ತದೆ.

ಮಿತ್ರರೇ, ನಿಮಗೆ ಗಮನಕ್ಕೆ ಬಂದಿರಬಹುದಲ್ಲವೇ, ಸಂತ ಸಖುಬಾಯಿಗೆ ಈಶ್ವರನಲ್ಲಿರುವ ಅಪಾರ ಭಕ್ತಿ ಮತ್ತು ದೇವರನ್ನು ಭೇಟಿಯಾಗಬೇಕೆಂಬ ತೀವ್ರ ತಳಮಳದಿಂದ ಪ್ರತ್ಯಕ್ಷ ದೇವರೇ ಅವಳನ್ನು ಭೇಟಿಯಾಗಲು ಬಂದರು ಮತ್ತು ಮನೆಯಲ್ಲಿ ಸಹ ವಾಸಿಸಿದರು. ನಾವು ಸಹ ಮನಸ್ಸಿನಲ್ಲಿ ದೇವರ ಸ್ಮರಣೆಯನ್ನು ಮಾಡೋಣ ಮತ್ತು ಅಂತಹ ಭಕ್ತರಾಗೋಣ.

Leave a Comment