ಆದಿ ಶಂಕರಾಚಾರ್ಯರ ಶಿಷ್ಯ ಪದ್ಮಪಾದಾಚಾರ್ಯರು

ಇದು ಆದಿ ಶಂಕರಾಚಾರ್ಯರು ಕಾಶಿಯಲ್ಲಿದ್ದಾಗಿನ ವಿಷಯವಾಗಿದೆ. ಮಕ್ಕಳೇ ನಿಮಗೆಲ್ಲ ಗೊತ್ತಿರುವಂತೆ ಕಾಶಿ ಅರ್ಥಾತ್ ವಾರಾಣಸಿಯಲ್ಲಿ ಪವಿತ್ರ ಪೂಜನೀಯಳಾದ ಗಂಗಾಮಾತೆಯು ನದಿರೂಪದಲ್ಲಿ ಪ್ರವಹಿಸುತ್ತಾಳೆ. ಆದಿ ಶಂಕರಾಚಾರ್ಯರು ಕಾಶಿಯಲ್ಲಿ ಪ್ರತಿದಿನ ಬೆಳಗ್ಗೆ ಗಂಗಾತೀರದಲ್ಲಿ ವಾಯುವಿಹಾರಕ್ಕಾಗಿ ಹೋಗುತ್ತಿದ್ದರು. ಆ ನದಿಯ ಇನ್ನೊಂದು ತೀರದಲ್ಲಿ ಒಂದು ಊರು ಇತ್ತು.

ಒಂದು ದಿನ ಆ ಊರಿನಲ್ಲಿದ್ದ ಓರ್ವ ತೇಜಸ್ವಿಯಾದ ಯುವಕನು ಆದಿ ಶಂಕರಾಚಾರ್ಯರನ್ನು ನೋಡಿದನು. ಅವನ ಮನಸ್ಸಿನಲ್ಲಿ ಅವರ ಬಗ್ಗೆ ಗೌರವಾದರಗಳು ಮೂಡಿದವು ಮತ್ತು ಅವನು ನಿಂತಲ್ಲೇ ಅವರಿಗೆ ನಮಸ್ಕಾರ ಮಾಡಿದನು. ಏಕೆಂದರೆ ಅವನು ಶ್ರೀಮತ್ ಆದಿ ಶಂಕರಾಚಾರ್ಯರನ್ನೇ ಹುಡುಕಿ ಬಂದಿದ್ದನು. ಅವನ ಪ್ರಣಾಮವನ್ನು ಶಂಕರಾಚಾರ್ಯರು ಸ್ವೀಕರಿಸಿ ಆತನನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸಿದರು. ಆ ಯುವಕನಿಗೆ ಸನಂದನ ಎಂದು ಸನ್ಯಾಸಾಶ್ರಮದ ಹೆಸರನ್ನಿಟ್ಟರು.

ಒಂದು ಸಲ ಏನಾಯಿತು ಎಂದರೆ, ಆದಿ ಶಂಕರಾಚಾರ್ಯರು ಗಂಗೆಯ ಒಂದು ದಡದಲ್ಲಿದ್ದರು ಮತ್ತು ಇನ್ನೊಂದು ದಡದಲ್ಲಿ ಸನಂದನನು ನಿಂತಿದ್ದನು. ಆಗ ಆದಿ ಶಂಕರಾಚಾರ್ಯರು ತಮ್ಮ ಕೈಯಿಂದ ಸನ್ನೆ ಮಾಡಿ ತಮ್ಮ ಬಳಿಗೆ ಬರುವಂತೆ ಕರೆದರು. ಆ ಸನ್ನೆಯನ್ನು ನೋಡಿದ ಸನಂದನನ ಮನಸ್ಸಿನಲ್ಲಿ ‘ನನ್ನ ಗುರುಗಳು ನನಗೆ ಅಲ್ಲಿಗೆ (ಅವರಿದ್ದಲ್ಲಿಗೆ) ಬಂದು ಭೇಟಿಯಾಗಲು ಆದೇಶ (ಆಜ್ಞೆ) ನೀಡಿದ್ದಾರೆ. ಅವರ ಆಜ್ಞೆಯನ್ನು ಉಲ್ಲಂಘಿಸುವುದು ಯೋಗ್ಯವಲ್ಲ. ಆದರೆ ಆ ದಡಕ್ಕೆ ತಲುಪಿಸಲು ಇಲ್ಲಿ ಯಾವುದೇ ದೋಣಿ ಅಥವಾ ಅಂಬಿಗನಿಲ್ಲ (ನಾವಿಕ). ನನಗೂ ಈಜಲು ಬರುವುದಿಲ್ಲ. ಈಗ ನಾನು ಏನು ಮಾಡಲಿ ?’ ಎಂದು ವಿಚಾರಮಗ್ನನಾಗಿ ಸ್ವಲ್ಪ ಹೊತ್ತು ದೋಣಿಗಾಗಿ ಕಾಯುತ್ತಾ ನಿಂತನು. ಹೀಗೆ ಕಾಯುತ್ತಿರುವಾಗ ಅವನ ಮನಸ್ಸಿನಲ್ಲಿ ಇನ್ನೊಂದು ವಿಚಾರ ಬಂತು, ‘ಹೇಗೂ ಕಳೆದ ಜನ್ಮಗಳಲ್ಲಿ ಬಹಳ ಸಲ ಸತ್ತುಹೋಗಿದ್ದೇನೆ. ಈ ಜನ್ಮದಲ್ಲಿ ಸಹ ಯಾವತ್ತಾದರೊಮ್ಮೆ ಸಾಯಲಿಕ್ಕೆ ಇದೆ. ಅದರ ಬದಲು ಗುರುಗಳ ಆಜ್ಞೆಯನ್ನು ಪಾಲನೆ ಮಾಡುವ ಪ್ರಯತ್ನದಲ್ಲಿ ನನಗೆ ಮೃತ್ಯು ಬಂದಲ್ಲಿ ಅದರಿಂದ ನನಗೇನೂ ಹಾನಿಯಾಗಲಾರದು, ಬದಲಾಗಿ ನನ್ನ ಜೀವನದ ಉದ್ಧಾರವೇ ಆಗುವುದು’ ಎಂಬ ವಿಚಾರ ಸಹ ಬಂತು.

ಇದೆಲ್ಲವನ್ನು ಯೋಚಿಸಿ ಸನಂದನನು ಗಂಗಾನದಿಯ ನೀರಿನಲ್ಲಿ ತನ್ನ ಕಾಲನ್ನಿಟ್ಟನು.

ಅತ್ತ ಇನ್ನೊಂದು ದಡದಲ್ಲಿದ್ದ ಮಹಾನ್ ಗುರುಗಳಾದ ಆದಿ ಶಂಕರಾಚಾರ್ಯರು ಅವನತ್ತ ನೋಡಿ ಅವನ ಮನಸ್ಸಿನ ವಿಚಾರಗಳನ್ನು ಅರಿತುಕೊಂಡರು. ಅವರು ತಮ್ಮ ಶಿಷ್ಯನ ಪರೀಕ್ಷೆಯನ್ನು ಮಾಡುತ್ತಿದ್ದರು. ಅವನು ಗುರುವನ್ನು ಭೇಟಿಯಾಗಲು, ಅವರ ಆಜ್ಞೆಯನ್ನು ಪಾಲಿಸಲು ಎಷ್ಟು ತಳಮಳಿಸುತ್ತಿದ್ದನು ಮತ್ತು ಅದಕ್ಕಾಗಿ ಎನೇನು ಪ್ರಯತ್ನಗಳನ್ನು ಮಾಡುವನು? ಎಂದು ವೀಕ್ಷಿಸುತ್ತಿದ್ದರು.

ಮಕ್ಕಳೇ, ಯಾವಾಗ ಸನಂದನನು ತನ್ನ ಗುರುಗಳನ್ನು ಭೇಟಿಯಾಗಲು ಗಂಗಾ ನದಿಯಲ್ಲಿ ತನ್ನ ಕಾಲಿಟ್ಟನೋ ಆಗ ಅಲ್ಲಿ ಒಂದು ಆಶ್ಚರ್ಯಕರ ಸಂಗತಿಯು ಘಟಿಸಿತು. ಮಕ್ಕಳೇ ಏನಾಯಿತು ಎಂದರೆ ಆ ಯುವಕನು ಗಂಗಾನದಿಯಲ್ಲಿ ಎಲ್ಲೆಲ್ಲಿ ಕಾಲನ್ನಿಡುತ್ತಿದ್ದನೋ ಅಲ್ಲಿ ಒಂದು ಕಮಲವು (ಪದ್ಮ) ಅರಳುತ್ತಿತ್ತು. ಆ ಯುವಕನಲ್ಲಿದ್ದ ತಳಮಳ ಹಾಗೂ ಶ್ರೀಮತ್ ಆದಿ ಶಂಕರಾಚಾರ್ಯರ ಕೃಪೆಯಿಂದ ಅವನು ಗಂಗಾ ನದಿಯಲ್ಲಿ ಮುಂದೆ ಮುಂದೆ ಸಾಗುತ್ತಿದ್ದನು ಮತ್ತು ಎಲ್ಲಿ ಆದಿ ಶಂಕರಾಚಾರ್ಯರು ನಿಂತಿದ್ದರೋ ಅಲ್ಲಿಯ ವರೆಗೆ ಬಂದು ತಲುಪಿದನು.

ಆದಿ ಶಂಕರಾಚಾರ್ಯರನ್ನು ಕಂಡ ತಕ್ಷಣ ಅವರ ಪಾದಕ್ಕೆರಗಿದ ಸನಂದನನ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಹರಿಯತೊಡಗಿತು. ಆದಿ ಶಂಕರಾಚಾರ್ಯರ ಚರಣಗಳನ್ನು ತನ್ನ ಅಶ್ರುಗಳಿಂದ ತೊಯ್ದು ಬಿಟ್ಟನು. ಆದಿ ಶಂಕರಾಚಾರ್ಯರು ಅವನ ತಳಮಳ ನೋಡಿ ಬಹಳ ಪ್ರಸನ್ನರಾಗಿ ಅವನನ್ನು ಅಪ್ಪಿಕೊಂಡರು. ಗಂಗೆಯಲ್ಲಿ ನಡೆದು ಬರುತ್ತಿರುವಾಗ ಅವನು ಎಲ್ಲೆಲ್ಲಿ ಕಾಲುಗಳನ್ನಿಡುತ್ತಿದ್ದನೋ ಅಲ್ಲೆಲ್ಲ ಕಮಲಗಳು ಅರಳುತ್ತಿದ್ದವು ಹಾಗಾಗಿ ಆದಿ ಶಂಕರಾಚಾರ್ಯರು ಅವನಿಗೆ ಪದ್ಮಪಾದಾಚಾರ್ಯ ಎಂದು ನಾಮಕರಣ ಮಾಡಿದರು. ಮುಂದೆ ಶ್ರೀಮತ್ ಆದಿ ಶಂಕರಾಚಾರ್ಯರ ನಾಲ್ಕು ಮುಖ್ಯ ಶಿಷ್ಯರಲ್ಲಿ ಪದ್ಮಪಾದಾಚಾರ್ಯರು ಒಬ್ಬ ಪ್ರಮುಖ ಶಿಷ್ಯರಾದರು.

ಗುರುಗಳ ಆಜ್ಞಾಪಾಲನೆಯಲ್ಲಿ ಪದ್ಮಪಾದಾಚಾರ್ಯರ ದೃಢತೆ ಮತ್ತು ತತ್ಪರತೆಯನ್ನು ನೋಡಿ ಸಾಕ್ಷಾತ ಗಂಗಾಮಾತೆಯೇ ಅವರಿಗಾಗಿ ಕಮಲಗಳನ್ನು ಉತ್ಪತ್ತಿ ಮಾಡಿದ್ದಳು. ಈ ಘಟನೆಯಿಂದ ದೃಢಪಡುವುದೇನೆಂದರೆ ಒಂದು ವೇಳೆ ಶಿಷ್ಯನು ದೃಢತೆ, ತತ್ಪರತೆ ಹಾಗೂ ಪ್ರಾಮಾಣಿಕವಾಗಿ ಗುರು-ಆಜ್ಞಾಪಾಲನೆಯನ್ನು ಮಾಡಿದರೆ ಪರಿಸ್ಥಿತಿ ಸಹ ಅವನಿಗೆ ಅನುಕೂಲವಾಗುತ್ತದೆ.

Leave a Comment