ಶ್ರೀಮದ್ ಆದಿ ಶಂಕರಾಚಾರ್ಯರು

ಭಾರತದ ಪ್ರಾಚೀನ ಹಾಗೂ ಅರ್ವಾಚೀನ ಇತಿಹಾಸದಲ್ಲಿ ಶ್ರೀಮದ್ ಆದಿ ಶಂಕರಾಚಾರ್ಯರಂತಹ ಓರ್ವ ಮಹಾಜ್ಞಾನಿ ಹಾಗೂ ತತ್ವಜ್ಞ ವ್ಯಕ್ತಿತ್ವವು ಆಗಿ ಹೋಗಿದೆ. ಅಖಿಲ ಭಾರತದ ಐಕ್ಯದ ಮೂರ್ತಿಯನ್ನು ನಿರ್ಮಿಸುವ ಅದ್ವೈತವಾದಿ ವೈದಿಕ ತತ್ವಜ್ಞಾನಿ ಶ್ರೀ ಶಂಕರಾಚಾರ್ಯರು ಭರತಖಂಡದ ನಾಲ್ಕೂ ದಿಕ್ಕುಗಳಲ್ಲಿ ವೈದಿಕ ಧರ್ಮದ ಧ್ವಜವನ್ನು ಸ್ಥಾಪಿಸಿದರು. ಅವರು ತಮ್ಮ ಹೊಸ ತತ್ವಜ್ಞಾನವನ್ನು ವೇದಗಳ ಆಧಾರದಿಂದ ಹಾಗೂ ವೇದಾಂತ ಸೂತ್ರಗಳ ಅಡಿಪಾಯದ ಮೇಲೆ ಉಪದೇಶಿಸಿದರು. ಅವರು ಭಾರತದಲ್ಲಿ ಧಾರ್ಮಿಕ ವ್ಯೂಹವನ್ನು ನಿಲ್ಲಿಸುವ ಐತಿಹಾಸಿಕ ಕಾರ್ಯವನ್ನು ಮಾಡಿ ತೋರಿಸಿದರು.

'ಡಿಸ್ಕವರಿ ಆಫ್ ಇಂಡಿಯಾ'ದಲ್ಲಿ ಆದಿ ಶಂಕರಾಚಾರ್ಯರ ಬಗ್ಗೆ ಉದ್ಗಾರ !

ಜವಾಹರಲಾಲ ನೆಹರು ಇವರು ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ ಗ್ರಂಥದಲ್ಲಿ ಶ್ರೀ ಶಂಕರಾಚಾರ್ಯರ ಬಗ್ಗೆ ಅತ್ಯಂತ ಗೌರವಪೂರ್ಣವಾಗಿ ಉದ್ಗರಿಸಿದ್ದಾರೆ. ಅವರು 'ಆಚಾರ್ಯರು ವಿವಿಧ ಪ್ರಕಾರದ ಮತಾಂತರದಿಂದ ತತ್ತರಿಸಿದ್ದ ಭಾರತೀಯರಲ್ಲಿ ಸಮನ್ವಯ ಸಾಧಿಸಿ ಭಾರತೀಯ ಮನಸ್ಸಿಗೆ ಭೇದದಲ್ಲಿ ಅಭೇದವನ್ನು ನೋಡಲುಕಲಿಸಿದರು. ಅವರು ತಮ್ಮ ಅದ್ವೈತ ಸಿದ್ಧಾಂತದ ಮೂಲಕ ಭಾರತೀಯರಲ್ಲಿ ಈ ಪಾಠವು ಮನಸ್ಸಿಗೆ ನಾಟುವಂತೆ ಪ್ರಯತ್ನಿಸಿದರು. ಅನೇಕ ಪೀಳಿಗೆಗಳ ವರೆಗೆ ಪ್ರಯತ್ನಿಸಿದರೂ ಅಸಾಧ್ಯವಾದ ಪ್ರಚಂಡ ಕಾರ್ಯವನ್ನು ಶಂಕರಾಚಾರ್ಯರು ಕೇವಲ ಮುವತ್ತೆರಡು ವರ್ಷದ ತಮ್ಮ ಜೀವನದಲ್ಲಿ ಸಾಧಿಸಿದರು! ಅವರ ವಿಚಾರಗಳ ಪ್ರಭಾವವು ಆಧುನಿಕ ಭಾರತದಲ್ಲೂ ಅಷ್ಟೇ ತೇಜೋಮಯವಾಗಿರುವುದು ಕಂಡುಬರುತ್ತದೆ. ಅವರು ಮಹಾನ ತತ್ವಜ್ಞರು, ಮಹಾಪಂಡಿತರು, ಪ್ರತಿಭಾವಂತ ಕವಿಗಳು, ಸಮಾಜಸುಧಾರಕರಲ್ಲಿ ಅಗ್ರಗಣ್ಯರು ಹಾಗೂ ಚತುರ ಸಂಘಟಕರಾಗಿದ್ದರು. ಶಂಕರಾಚಾರ್ಯರು ತಮ್ಮ ಕಾರ್ಯವನ್ನು ಬೌದ್ಧಿಕ, ತಾತ್ತ್ವಿಕ ಹಾಗೂ ಧಾರ್ಮಿಕ ಈ ಮೂರೂ ಮಟ್ಟದಲ್ಲಿ ಮಾಡಿ ವಿಭಿನ್ನ ವಿಚಾರಧಾರೆಯಲ್ಲಿ ಐಕ್ಯತೆಯನ್ನು ತರಲು ಪ್ರಯತ್ನಿಸಿದರು. ಜನಜೀವನದಲ್ಲಿ ರೂಢಿಯಲ್ಲಿರುವ ಪಂಥ-ಭೇದವನ್ನು ನಷ್ಟಗೊಳಿಸಿ ಎಲ್ಲರಿಗೂ ಜ್ಞಾನದಿಂದ ಮೋಕ್ಷವನ್ನು ಪಡೆಯಬಹುದು ಎಂದು ತಿಳಿಸಿ ಹೇಳಿದರು ಹಾಗೂ ಜ್ಞಾನೋಪಾಸನೆಯ ಮಾರ್ಗವನ್ನು ತೋರಿಸಿದರು' ಎಂದು ಹೇಳಿದ್ದಾರೆ.

ಶಂಕರಾಚಾರ್ಯರ ಜನನ ಮತ್ತು ಬಾಲ್ಯ

ಕೇರಳ(ಮಲಬಾರ) ಪೂರ್ಣಾ ನದಿಯ ತೀರದಲ್ಲಿರುವ ಕಾಲಡಿ ಎಂಬ ಗ್ರಾಮದಲ್ಲಿ ಕ್ರಿ.ಶ. ೭೮೮ ರಲ್ಲಿ ಓರ್ವ ನಂಬೂದ್ರಿ ಬ್ರಾಹ್ಮಣನ ಕುಲದಲ್ಲಿ ಈ ಅಲೌಕಿಕ ಹಾಗೂ ಅಸಾಮಾನ್ಯ ಧರ್ಮಪ್ರವರ್ತಕನ ಜನನವಾಯಿತು. ಅವರ ತಂದೆ ಶಿವಗುರು ಹಾಗೂ ತಾಯಿ ಆರ್ಯಾಂಬಾ. ಚಿಕ್ಕಂದಿನಲ್ಲಿಯೇ ತಂದೆಯು ತೀರಿಕೊಂಡಿದ್ದರಿಂದ ಅವರ ತಾಯಿಯೇ ಅವರನ್ನು ಜೋಪಾನ ಮಾಡಿದರು. ಅಧ್ಯಯನ ಹಾಗೂ ಅಧ್ಯಾಪನ ಮಾಡುವ ಒಂದು ಉಜ್ವಲ ಪರಂಪರೆ ಆ ಮನೆತನದಲ್ಲಿ ನಡೆದು ಬಂದಿತ್ತು.

ವೇದಾಧ್ಯಯನ ಮತ್ತು ಸನ್ಯಾಸ ದೀಕ್ಷೆ

ಶ್ರೀ ಶಂಕರಾಚಾರ್ಯರು ತಮ್ಮ ಎಂಟನೇ ವಯಸ್ಸಿನಲ್ಲಿಯೇ ವೇದಗಳ ಅಧ್ಯಯನ ಪೂರ್ಣಗೊಳಿಸಿದರು ! ತಾಯಿಯಿಂದ ಸನ್ಯಾಸವನ್ನು ಸ್ವೀಕರಿಸಲು ಅನುಮತಿ ಪಡೆದು ಮನೆಯಿಂದ ಹೊರಬಂದರು. ವಿಂಧ್ಯಾದ್ರಿಯ ಬಳಿ ಅವರು ಗೋವಿಂದ ಪೂಜ್ಯಪಾದಾಚಾರ್ಯರನ್ನು ಭೇಟಿಯಾದರು. ಅವರಿಂದ ಉಪದೇಶ ಪಡೆದು ಶಂಕರಾಚಾರ್ಯರು ಸನ್ಯಾಸದೀಕ್ಷೆ ಪಡೆದರು. ಅವರು ತಮ್ಮ ಹದಿನೆರಡನೆಯ ವಯಸ್ಸಿನಲ್ಲಿ ಎಲ್ಲ ಶಾಸ್ತ್ರಗಳಲ್ಲಿ ಪ್ರಾವಿಣ್ಯ ಪಡೆದರು. ಅನಂತರ ಅವರು ಕಾಶಿಗೆ ಹೋಗಿ ಅಲ್ಲಿನ ಪಂಡಿತರೊಂದಿಗೆ ಶಾಸ್ತ್ರಗಳ ವಿಷಯದಲ್ಲಿ ತರ್ಕ ಮಾಡಿ ಅವರನ್ನು ತಮ್ಮ ವಿದ್ವತ್ತಿನಿಂದ ಪ್ರಭಾವಿತಗೊಳಿಸಿದರು; ಅವರನ್ನು ವಾದದಲ್ಲಿ ಗೆದ್ದುದರಿಂದ ಅವರ ಮಹಾನತೆಯೊಂದಿಗೆ ಕೀರ್ತಿಯೂ ಹೆಚ್ಚಿತು.

ಅದ್ವೈತ ಸಿದ್ಧಾಂತ ಸಿದ್ಧಪಡಿಸಿದ ಶ್ರೀ ಶಂಕರಾಚಾರ್ಯರು

ಶ್ರೀ ಶಂಕರಾಚಾರ್ಯರು ಉಪನಿಷತ್ತು, ಗೀತೆ ಹಾಗೂ ವೇದಾಂತಸೂತ್ರಗಳು ಇವುಗಳ ಮೇಲೆ ಭಾಷ್ಯ ಬರೆದರು ಮತ್ತು ತಮ್ಮ ಅದ್ವೈತ ವೇದಾಂತದ ಸಿದ್ಧಾಂತವನ್ನು ಪ್ರಸ್ಥಾಪಿಸಿದರು – ಅದೇ ಶಂಕರಭಾಷ್ಯ. ಅದ್ವೈತ ಅಂದರೆ 'ಜೀವ ಮತ್ತು ಶಿವ (ಈಶ್ವರ) ಇವು ಭಿನ್ನವಲ್ಲ, ಒಂದೇ ಆಗಿವೆ.ಹಾಗೂ ಬ್ರಹ್ಮವು ಚರಾಚರ ಸೃಷ್ಟಿಯನ್ನು ವ್ಯಾಪಿಸಿದೆ'. ಈ ಭಾಷ್ಯದಿಂದ ಹಳೆಯ ವೈದಿಕ ಸಂಸ್ಕೃತಿಯ ಪರಂಪರೆಯು ಪುನರುಜ್ಜೀವಿತಗೊಂಡು ಭಾರತೀಯ ಜೀವನದಲ್ಲಿನ ಅದರ ಸ್ಥಾನವು ಅಖಂಡವಾಗಿ ಉಳಿದಿದೆ.

ತಾಯಿಗೆ ಶ್ರೀಕೃಷ್ಣನ ದರ್ಶನ ಭಾಗ್ಯ!

ಶ್ರೀ ಶಂಕರಾಚಾರ್ಯರ ತಾಯಿಯು ಕಾಯಿಲೆ ಬಿದ್ದರು. ಅವರು ಆಚಾರ್ಯರ ದಾರಿ ಕಾಯುತ್ತಿದ್ದರು. ಶಂಕರಾಚಾರ್ಯರಿಗೆ ಈ ಸುದ್ದಿ ತಿಳಿಯುತ್ತಲೇ ಅವರು ಕಾಲಡಿಯತ್ತ ಪಯಣಿಸಿ ತಾಯಿಯನ್ನು ಭೇಟಿಯಾದರು. ತಾಯಿಗೆ ಬಹಳ ಆನಂದವಾಯಿತು. ತಾಯಿಯು 'ಶಂಕರಾ, ನನಗೆ ಶ್ರೀಕೃಷ್ಣನ ಪ್ರತ್ಯಕ್ಷ ದರ್ಶನ ಮಾಡಿಸು' ಎಂಬ ಇಚ್ಛೆ ವ್ಯಕ್ತಪಡಿಸುತ್ತಲೇ ಶ್ರೀಶಂಕರಾಚಾರ್ಯರು ಶ್ರೀಕೃಷ್ಣನ ಸ್ತುತಿ ಮಾಡಿದರು. ಶಂಖ, ಚಕ್ರ, ಗದಾ, ಪದ್ಮಗಳನ್ನು ಧರಿಸಿದ ಶ್ರೀಕೃಷ್ಣನು ಪ್ರಕಟನಾದನು. ಶ್ರೀಕೃಷ್ಣನ ದರ್ಶನದಿಂದ ಅವರ ತಾಯಿಯು ಕೃತಾರ್ಥಳಾದಳು.

ಅದ್ವೈತ ತತ್ತ್ವಜ್ಞಾನದ ಪ್ರಸಾರ

ಮುಂದೆ ಶ್ರೀ ಶಂಕರಾಚಾರ್ಯರು ಸಂಪೂರ್ಣ ಭಾರತದಾದ್ಯಂತ ಸಂಚರಿಸಿ ಅಲ್ಲಿನ ಪಂಡಿತರ ವಿರುದ್ಧಗೆದ್ದರು. ಅದರಲ್ಲಿ ಕುಮಾರಿಲ್ ಭಟ್ಟರ ಶಿಷ್ಯರಾದ ಮಂಡನಮಿಶ್ರರೊಂದಿಗೆ ಅವರ ವಾದವಾಯಿತು. ಅಲ್ಲಿಯೂ ಅವರು ವಿಜಯಿಯಾದರು. ಮಂಡನಮಿಶ್ರರ ಪತ್ನಿ ಸರಸ್ವತಿ ಇವರು ಈ ವಾದದಲ್ಲಿ ಪ್ರಮುಖರಾಗಿದ್ದರು. ಇದರಿಂದ ಆ ಕಾಲದ ಸ್ತ್ರೀಯರ ವಿದ್ವತ್ತಿನ ಹಾಗೂ ಸಾಮಾಜಿಕ ಮಟ್ಟದ ಬಗ್ಗೆ ಅರಿವಾಗುತ್ತದೆ.

'ಅದ್ವೈತವೇ ಸತ್ಯ' ಎಂಬುದನ್ನು ಶ್ರೀಶಂಕರಾಚಾರ್ಯರು ಸಿದ್ಧ ಮಾಡಿದರು; ಅಂದರೆ 'ಸರ್ವವ್ಯಾಪಿ, ನಿರ್ಗುಣ, ನಿರಾಕಾರ ಬ್ರಹ್ಮ ಎಲ್ಲೆಡೆಯೂ ತುಂಬಿಕೊಂಡಿದ್ದು, ಆ ಶಕ್ತಿಯಿಂದ ಮಾಯೆಯನ್ನೊಳಗೊಂಡ ಸೃಷ್ಟಿ ಉತ್ಪನ್ನವಾಗಿದೆ. ಜೀವಾತ್ಮನು ಆ ಬ್ರಹ್ಮನ ಅಂಶವಾಗಿದ್ದಾನೆ ಹಾಗೂ ನಿಜ ಜ್ಞಾನವಾದ ನಂತರ ಜೀವಾತ್ಮನು ಆ ಪರಮಾತ್ಮನಲ್ಲಿ ಏಕರೂಪವಾಗಿ ಹೋಗುತ್ತಾನೆ'. ಶ್ರೀಶಂಕರಾಚಾರ್ಯರು ಇದೇ ಅರ್ಥವನ್ನು ಒಂದು ಸಂಸ್ಕೃತ ಶ್ಲೋಕದಲ್ಲಿ ಹೇಳಿರುವರು.

ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ |

ಶ್ರೀ ಶಂಕರಾಚಾರ್ಯರು ಮಧ್ಯಾರ್ಜುನದ ಶಿವಮಂದಿರದಲ್ಲಿ ನಡೆದ ದೊಡ್ಡ ಸಭೆಯಲ್ಲಿ ಈ ಸಿದ್ಧಾಂತವನ್ನು ಮಂಡಿಸಿದರು, ಆಗ ಶಿವಲಿಂಗದಿಂದ ಶಿವಶಂಕರನು ಪ್ರಕಟನಾದನು ಹಾಗೂ ಬಲಗೈಯನ್ನು ಎತ್ತಿ 'ಅದ್ವೈತವೇ ಸತ್ಯ' ಎಂದು ಘೋಷಿಸಿದನು. ಉಪಸ್ಥಿತ ಜನರಿಗೆ ಅದ್ವೈತ ಸಿದ್ಧಾಂತದ ಬಗ್ಗೆ ಮನವರಿಕೆ ಆಯಿತು.

ಈ ನಂತರ ಶ್ರೀ ಶಂಕರಾಚಾರ್ಯರು ಆಸ್ಸಾಂ, ಉಜ್ಜಯನಿ, ಕಾಶ್ಮೀರ ಮುಂತಾದ ಅನೇಕ ಸ್ಥಳಗಳಿಗೆ ಹೋಗಿ ಅಲ್ಲಿನ ಪಂಡಿತರನ್ನು ವಾದದಲ್ಲಿ ಗೆದ್ದರು. ಎಲ್ಲೆಡೆ ಪ್ರವಾಸ ಮಾಡಿ ಅವರು ತಮ್ಮ ತತ್ವಜ್ಞಾನದ ಪ್ರಚಾರ ಮಾಡಿದರು. ಅವರ ತತ್ವಜ್ಞಾನವು ಇದು ಭೌತಿಕ ಸುಖ ದುಃಖದ ಕಲ್ಪನೆಗಿಂತ ಮಿಗಿಲಾದ ಆನಂದದ ಠೇವಣೆಯಾಗಿದೆ. ತಮ್ಮ ಕಾರ್ಯವು ಅಖಂಡವಾಗಿ ಮುನ್ನಡೆಯಬೇಕೆಂದು ಅವರು ಪಶ್ಚಿಮದಲ್ಲಿ ದ್ವಾರಕಾ, ಪೂರ್ವದಲ್ಲಿ ಜಗನ್ನಾಥಪುರಿ, ಉತ್ತರದಲ್ಲಿ ಬದ್ರಿಕೇದಾರ ಹಾಗೂ ದಕ್ಷಿಣದಲ್ಲಿ ಶೃಂಗೇರಿಯಲ್ಲಿ ಶಂಕರತತ್ವಜ್ಞಾನದ ಪೀಠಗಳನ್ನು ಸ್ಥಾಪಿಸಿದರು. ಶ್ರೀ ಶಂಕರಾಚಾರ್ಯರು ಪಂಚಾಯತನ ಪೂಜೆಯನ್ನು ಪ್ರಾರಂಭಿಸಿದರು.

ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಶಂಕರಾಚಾರ್ಯರು ಹಿಮಾಲಯದ ಕೇದಾರನಾಥಕ್ಕೆ ಹೋಗಿ, ಬ್ರಹ್ಮನಲ್ಲಿ ವಿಲೀನವಾದರು.