ಮಹಾನ ಸಂತ ಜ್ಞಾನೇಶ್ವರ ಮಹಾರಾಜರು

ಮಕ್ಕಳೇ, ಹಿಂದೆ ಮಹಾರಾಷ್ಟ್ರದ ಆಳಂದಿ ಎಂಬ ಊರಿನಲ್ಲಿ ಕುಲಕರ್ಣಿ ಎಂಬ ಸಭ್ಯ ಗೃಹಸ್ಥರೊಬ್ಬರು ವಾಸಿಸುತ್ತಿದ್ದರು. ಅವರು ಸನ್ಯಾಸ ಸ್ವೀಕರಿಸಿ ತಮ್ಮ ಪತ್ನಿಯನ್ನು ಬಿಟ್ಟು ಗುರುಗಳ ಹತ್ತಿರ ಹೋದರು. ಆದರೆ ಗುರುವಾಜ್ಞೆ ಇದ್ದ ಕಾರಾಣ ಅವರು ಮತ್ತೆ ಗೃಹಸ್ಥಾಶ್ರಮಕ್ಕೆ ಮರಳಿದರು. ಅವರಿಗೆ ನಾಲ್ಕು ಮಕ್ಕಳು, ನಾಲ್ಕು ಮಕ್ಕಳೂ ಭಗವಂತನ ಪರಮಭಕ್ತರು. ಅವರ ಮಕ್ಕಳ ಹೆಸರು ನಿವೃತ್ತಿ, ಜ್ಞಾನೇಶ್ವರ, ಸೋಪಾನ ಮತ್ತು ಮುಕ್ತಾಬಾಯಿ. ಸನ್ಯಾಸದ ನಂತರ ಪುನಃ ಗೃಹಸ್ಥಾಶ್ರಮಕ್ಕೆ ಬಂದರೆಂದು ಊರಿನವರು ಅವರನ್ನು ಬಹಿಷ್ಕರಿಸಿದರು ಅಂದರೆ ಊರಿನವರು ಅವರ ಜೊತೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಅವರನ್ನು ಸನ್ಯಾಸಿ ಮಕ್ಕಳು ಎಂದು ಕರೆದು ಅವಮಾನಿಸುತ್ತಿದ್ದರು. ಊರಿನವರ ಅವಮಾನ ತಾಳದೆ ಕುಲಕರ್ಣಿ ತನ್ನ ಪತ್ನಿಯ ಜೊತೆ ಇಂದ್ರಾಯಣಿ ನದಿಯಲ್ಲಿ ತಮ್ಮ ಜೀವ ಅರ್ಪಿಸಿದರು.

ಕೋಣನಿಂದ ವೇದಗಳನ್ನು ಹೇಳಿಸಿದ ಜ್ಞಾನೇಶ್ವರರು

ಮಕ್ಕಳು ಊರಿನಲ್ಲಿ ಭಿಕ್ಷೆ ಬೇಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆಗ ಆಳಂದಿಯ ಪಂಡಿತರು ಪೈಠನದ ಪಂಡಿತರಿಂದ ಶುದ್ಧಿಪತ್ರವನ್ನು ತರಲು ಹೇಳಿದರು. ಆದಕಾರಣ ಎಲ್ಲರೂ ಪೈಠನಗೆ  ಹೊರಟರು. ಆ ಕಾಲದಲ್ಲಿ ಒಂದು ಊರಿಂದ ಇನ್ನೊಂದು ಊರಿಗೆ ಹೋಗಲು ಸಾರಿಗೆ ವ್ಯವಸ್ಥೆ ಇರಲಿಲ್ಲ. ಆ ಚಿಕ್ಕ ಮಕ್ಕಳು ಕಾಲ್ನಡಿಗೆಯಲ್ಲಿಯೇ ಪೈಠನಗೆ ತಲುಪಿದರು ಮತ್ತು ಅಲ್ಲಿಯ ಪಂಡಿತರ ಸಭೆಯಲ್ಲಿ ಶುದ್ಧೀಕರಣ ಪತ್ರವನ್ನು ಕೇಳಿದರು. ಪಂಡಿತರು ಅವರಿಗೆ ಶುದ್ಧೀಕರಣ ಪತ್ರವನ್ನು ಕೊಡಲು ನಿರಾಕರಿಸಿದರು. ಆಗ ಜ್ಞಾನೇಶ್ವರರು, ‘ಎಲ್ಲ ಪ್ರಾಣಿಗಳಲ್ಲಿ ಈಶ್ವರನ ಅಸ್ತಿತ್ವ ಇರುತ್ತದೆ’ ಎಂದು ಹೇಳಿದರು. ‘ಇಷ್ಟು ಚಿಕ್ಕ ಹುಡುಗ ನಮಗೆ ಜ್ಞಾನ ನೀಡಲು ಬರುತ್ತಾನೆ’ ಎಂದುಕೊಂಡ ಪಂಡಿತರಿಗೆಲ್ಲ ಇದು ಹಿಡಿಸಲಿಲ್ಲ. ಅವರಿಗೆ ಸಿಟ್ಟು ಬಂತು. ಆ ಸಮಯದಲ್ಲಿ ಒಬ್ಬ ದನಕಾಯುವ ಹುಡುಗನು ಅಲ್ಲಿಂದ ತನ್ನ ಎಮ್ಮೆಗಳನ್ನು ಕರೆದು ಕೊಂಡು ಹೋಗುತ್ತಾ ಇದ್ದನು. ಪೈಠಣದ ವಿದ್ವಾಂಸರಲ್ಲಿ ಒಬ್ಬ, ‘ಅಲ್ಲಿ ಬರುತ್ತಿರುವ ಕೋಣದಲ್ಲಿ ನಿನಗೆ ಈಶ್ವರನು ಕಾಣಿಸುತ್ತಾನೆ ಎಂದಾದರೆ ಆ ಕೋಣದ ಬಾಯಿಂದ ವೇದಗಳನ್ನು ಹೇಳಿಸು’, ಎಂದು ಸವಾಲು ಹಾಕಿದನು. ಜ್ಞಾನೇಶ್ವರರು ಮುಂದೆ ಬಂದು ಆ ಕೋಣದ ತಲೆಯ ಮೇಲೆ ಕೈಯನ್ನು ಇಟ್ಟರು. ತಕ್ಷಣ ಅದು ವೇದಗಳನ್ನು ಉಚ್ಚರಿಸತೊಡಗಿತು. ಈ ಪವಾಡವನ್ನು ನೋಡಿ ಎಲ್ಲ ವಿದ್ವಾಂಸರು ಆಶ್ಚರ್ಯಚಕಿತರಾದರು. ಅವರು ಜ್ಞಾನೇಶ್ವರರಿಗೆ ಶುದ್ಧೀಕರಣ ಪತ್ರವನ್ನು ಕೊಡಲು ಒಪ್ಪಿದರು.

ಪೈಠಣನಲ್ಲಿ ನಡೆದ ಇನ್ನೊಂದು ಚಮತ್ಕಾರ

ಪೈಠಣಗೆ ಶುದ್ಧಿ ಪತ್ರ ತರಲು ಮಕ್ಕಳು ಬಂದಾಗ ಅವರು ಓರ್ವ ಬ್ರಾಹ್ಮಣನ ಮನೆಯಲ್ಲಿ ವಾಸವಾಗಿದ್ದರು. ಆ ದಿನದಂದು ಆ ಬ್ರಾಹ್ಮಣನ ತಂದೆಯ ಶ್ರಾದ್ಧವಿತ್ತು. ಆದರೆ ಶ್ರಾದ್ಧವಿಧಿ ಮಾಡಿಸಲು ಬ್ರಾಹ್ಮಣರು ಸಿಕ್ಕಿರಲಿಲ್ಲ ಇದನ್ನು ಅವರು ಜ್ಞಾನೇಶ್ವರರಿಗೆ ಹೇಳಿದರು. ಅವರು ಸಮಸ್ಯೆಯನ್ನು ಕೇಳಿ ‘ನಾನು ನಿಮ್ಮ ಪಿತೃಗಳನ್ನು ಅರ್ಥಾತ್ ಪೂರ್ವಜರನ್ನು ಊಟಕ್ಕೆ ಕರೆಸುವೆ. ನೀವು ಅಡುಗೆಯ ವ್ಯವಸ್ಥೆ ಮಾಡಿರಿ’ ಎಂದು ಹೇಳಿದರು.

ಬ್ರಾಹ್ಮಣನು ಶ್ರಾದ್ಧದ ಎಲ್ಲ ತಯಾರಿಯನ್ನು ಮಾಡಿದನು. ಜ್ಞಾನೇಶ್ವರರು ತಮ್ಮ ಯೋಗ ಸಾಮರ್ಥ್ಯದಿಂದ ಆ ಬ್ರಾಹ್ಮಣನ ಪಿತೃಗಳನ್ನು ಕರೆದರು. ಪಿತೃಗಳ ಶ್ರಾದ್ಧದ ಭೋಜನದ ಸಂಪೂರ್ಣ ಕಾರ್ಯವು ಸಂಪನ್ನವಾದ ನಂತರ ಜ್ಞಾನೇಶ್ವರರು ‘ಸ್ವಸ್ಥಾನೇ ವಾಸ:’ (ನಿಮ್ಮ ನಿಮ್ಮ ಲೋಕಗಳಿಗೆ ಮರಳಿ) ಎಂದು ಹೇಳಿದರು. ಆವಾಗ ಒಬ್ಬೊಬ್ಬರಾಗಿ ಪಿತೃಗಳು ಅದೃಶ್ಯರಾದರು. ಈ ಸಮಾಚಾರವು ಊರಿನ ತುಂಬಾ ಹರಡಿತು. ಅಲ್ಲಿಯ ಎಲ್ಲ ಬ್ರಾಹ್ಮಣರಿಗೆ ತಮ್ಮ ತಪ್ಪಿನ ಅರಿವಾಗಿ ಅವರು ಪಶ್ಚಾತ್ತಾಪ ಪಟ್ಟು ಜ್ಞಾನೇಶ್ವರರನ್ನು ಸನ್ಮಾನಿಸಿದರು. ‘ನೀವು ಸಾಕ್ಷಾತ್ ಭಗವಂತನ ಅವತಾರವೇ ಆಗಿರುವಿರಿ, ನಿಮಗೆ ಪ್ರಾಯಶ್ಚಿತ್ತದ ಆವಶ್ಯಕತೆಯೇ ಇಲ್ಲ’ ಎಂಬ ಪತ್ರವನ್ನು ಬರೆದು ಕೊಟ್ಟರು.

ವಿಸೋಬಾಗೆ ಪಾಠ ಕಲಿಸುವುದು

ಜ್ಞಾನೇಶ್ವರರ ಅಣ್ಣ ನಿವೃತ್ತಿನಾಥರು ತಂಗಿ ಮುಕ್ತಾಬಾಯಿಗೆ ಹೋಳಿಗೆಯನ್ನು ಮಾಡಲು ಹೇಳಿದರು. ಮುಕ್ತಾಬಾಯಿ ಅದಕ್ಕೆ ಬೇಕಾದ ಪದಾರ್ಥಗಳನ್ನು ತಂದಳು. ಆದರೆ ಅದನ್ನು ಬೇಯಿಸಲು ಮಣ್ಣಿನ ಹಂಚಿನ ಆವಶ್ಯಕತೆ ಇತ್ತು. ಅದನ್ನು ತರಲು ಕುಂಬಾರನಲ್ಲಿಗೆ ಹೋದರೆ ಅಲ್ಲಿ ವಿಸೋಬಾ ಎಂಬವನು ಕುಳಿತಿದ್ದನು. ಅವನು ಈ ನಾಲ್ವರನ್ನು ದ್ವೇಷಿಸುತ್ತಿದ್ದನು. ಅವನು ಮೊದಲೇ ಕುಂಬಾರನಿಗೆ ಅವರಿಗೆ ಹಂಚನ್ನು ಕೊಡಬಾರದು ಎಂದು ಹೇಳಿಟ್ಟಿದ್ದನು. ಕುಂಬಾರನು ವಿಸೋಬಾನ ಮಾತು ಒಪ್ಪಿದನು. ಆದಕಾರಣ ಮುಕ್ತಾಬಾಯಿ ಬರಿಗೈಯಲ್ಲಿ ಮನೆಗೆ ಹಿಂತಿರುಗಿ ಜ್ಞಾನೇಶ್ವರರ ಬಳಿ ಇದನ್ನೆಲ್ಲ ಹೇಳಿದಳು. ಹಂಚು ಇಲ್ಲದೇ ಹೋಳಿಗೆಯನ್ನು ಹೇಗೆ ಮಾಡಲಿ ಎಂದು ದುಃಖಿಸಿದಳು. ಜ್ಞಾನೇಶ್ವರರು ತಕ್ಷಣ ತಮ್ಮ ಜಠರಾಗ್ನಿಯನ್ನು ಪ್ರಜ್ವಲಿಸಿ ‘ನನ್ನ ಬೆನ್ನ ಮೇಲೆ ಹೋಳಿಗೆಯನ್ನು ಕಾಯಿಸಿಕೊ’ ಎಂದರು. ಮುಕ್ತಾಬಾಯಿಯು ಜ್ಞಾನೇಶ್ವರರ ಬೆನ್ನ ಮೇಲೆ ಹೋಳಿಗೆಯನ್ನು ಕಾಯಿಸಿದಳು. ತದನಂತರ ಎಲ್ಲರೂ ಸೇರಿ ಊಟ ಮಾಡಿದರು. ವಿಸೋಬಾ ಈ ದೃಶ್ಯವನ್ನು ದೂರದಿಂದಲೇ ನೋಡುತ್ತಿದ್ದನು. ಇದನ್ನು ನೋಡಿ ಅವನು ಅವರಲ್ಲಿ ಶರಣಾದನು ಮತ್ತು ಜ್ಞಾನೇಶ್ವರರ ಶಿಷ್ಯನಾದನು.

ಚಲಿಸುವ ಗೋಡೆ ಮತ್ತ ಚಾಂಗದೇವರ ಗರ್ವಭಂಗ

ಚಾಂಗದೇವ ಎಂಬ ಶ್ರೇಷ್ಠ ಯೋಗಿಯೊಬ್ಬರಿದ್ದರು. ಅವರು ಆತ್ಮವನ್ನು ಬ್ರಹ್ಮಾಂಡದಲ್ಲಿ ಕರೆದುಕೊಂಡು ಹೋಗುವ ಯೋಗ ವಿದ್ಯೆಯನ್ನು ಕಲಿತಿದ್ದರು. ಈ ವಿದ್ಯೆಯ ಬಲದಿಂದ 1400 ವರ್ಷ ಜೀವಂತವಾಗಿದ್ದರು. ತನ್ನನ್ನು ತಾನು ತುಂಬಾ ಸಾಮರ್ಥ್ಯಶಾಲಿ ಎಂದುಕೊಂಡಿದ್ದರು. ಅವರಿಗೆ ತಮ್ಮ ಸಾಮರ್ಥ್ಯದ ಅಹಂಕಾರವಾಗಿತ್ತು. ಜ್ಞಾನೇಶ್ವರರ ಮಹಾನತೆಯ ಕೀರ್ತಿ ಅವರ ವರೆಗೂ ತಲುಪಿತ್ತು. ಅವರಿಗೆ ಪತ್ರ ಬರೆಯುವ ವಿಚಾರ ಬಂದಿತ್ತು. ಅವರು ಬರೆಯಲು ಪ್ರಾರಂಭಿಸಿದರು. ಆದರೆ ಹೇಗೆ ಆರಂಭಿಸಬೇಕು ಎಂಬ ಗೊಂದಲಕ್ಕೆ ಸಿಲುಕಿದರು. ಆರಂಭದಲ್ಲಿ ತೀರ್ಥರೂಪ ಎಂದು ಬರೆದರೆ ಅವರಿಗಿಂತ ಚಿಕ್ಕವರಾಗಿದ್ದ ಜ್ಞಾನೇಶ್ವರರಿಂದ ಆತ್ಮಜ್ಞಾನ ಪಡೆಯಬೇಕು. ಚಿರಂಜೀವಿ ಎಂದು ಬರೆದು ಜ್ಞಾನೇಶ್ವರರ ಸಂತತ್ವಕ್ಕೆ ಅವಮಾನ ಕೂಡ ಮಾಡಲು ಸಾಧ್ಯವಿಲ್ಲ. ಆದಕ್ಕೆ ಬಿಳಿಯ ಹಾಳೆಯಲ್ಲಿ ಏನೂ ಬರೆಯುದೇ ಹಾಗೆ ಇಟ್ಟು ತನ್ನ ಶಿಷ್ಯರ ಮುಖಾಂತರ ಜ್ಞಾನೇಶ್ವರರಿಗೆ ತಲುಪಿಸಿದರು. ಆ ಬಿಳಿಯ ಹಾಳೆಯನ್ನು ನೋಡಿ ಜ್ಞಾನೇಶ್ವರರು ಹೇಳಿದರು, ‘ಗುರು ಪ್ರಾಪ್ತಿ ಇಲ್ಲದ ಕಾರಣ ಚಾಂಗದೇವ 1400 ವರ್ಷವಾದರೂ ಬಿಳಿ ಹಳೆಯ ಹಾಗೆ ಬರಿದಾಗಿಯೇ ಇದ್ದಾರೆ’. ಅದೇ ಶಿಷ್ಯರ ಮುಖಾಂತರ ಪತ್ರದ ಉತ್ತರವನ್ನು ಕಳುಹಿಸಿದರು. ಅದರಲ್ಲಿ ಅವರು ‘ಸಂಪೂರ್ಣ ವಿಶ್ವದ ಸಂಚಾಲಕನೇ ನಿಮ್ಮ ಹತ್ತಿರ ಇದಾನೆ. ಅವನಲ್ಲಿ ಚಿಕ್ಕವರು ದೊಡ್ಡವರು (ಮೇಲು ಕೀಳು) ಎಂಬ ಭೇದವಿಲ್ಲ’ ಎಂದು ಬರೆದು ಕಳಿಸಿದರು. ಜ್ಞಾನೇಶ್ವರರ ಉತ್ತರವನ್ನು ಶಿಷ್ಯರು ಚಾಂಗದೇವರಿಗೆ ತೋರಿಸಿದರು.

ತನ್ನ ಮನಸ್ಸಿನ ಸ್ಥಿತಿಯನ್ನು ಅರಿತು ಈ ರೀತಿಯ ಪ್ರಗಲ್ಭ ಉತ್ತರ ನೀಡಿದ ಜ್ಞಾನೇಶ್ವರರನ್ನು ಭೇಟಿಯಾಗಲು ಚಾಂಗದೇವರು ತಮ್ಮ ಶಿಷ್ಯವೃಂದವನ್ನು ಕರೆದುಕೊಂಡು ಹೊರಟರು. ಅವರು ತನ್ನ ಯೋಗ ಸಾಮರ್ಥ್ಯವನ್ನು ತೋರಿಸಲು ಹುಲಿಯ ಮೇಲೆ ಕುಳಿತು ಚಾವಟಿಯೆಂದು ಕೈಯಲ್ಲಿ ಹಾವನ್ನು ಹಿಡಿದಿದ್ದರು. ಜ್ಞಾನೇಶ್ವರ, ನಿವೃತ್ತಿನಾಥ, ಸೋಪಾನ, ಮುಕ್ತಾಬಾಯಿ ಒಂದು ಗೋಡೆಯ ಮೇಲೆ ಕುಳಿತಿದ್ದರು. ಚಾಂಗದೇವರು ಅವರಿಗೆ ಸಂದೇಶವನ್ನು ಕಳುಹಿಸಿದರು, ‘ನಾನು ನನ್ನ ವಾಹನವಾದ ಹುಲಿಯ ಮೇಲೆ ಬರುತ್ತಿದ್ದೇನೆ ನೀವು ನಿಮ್ಮ ವಾಹನದಲ್ಲಿ ನನ್ನನ್ನು ಭೇಟಿಯಾಗಲು ಬನ್ನಿ’. ಜ್ಞಾನೇಶ್ವರ ಮಹಾರಾಜರು ಯಾವ ಗೋಡೆಯ ಮೇಲೆ ಕುಳಿತಿದ್ದರೋ ಅದಕ್ಕೆ ಅವರು ಹೊರಡಲು ಆಜ್ಞಾಪಿಸಿದರು, ಆಶ್ಚರ್ಯವೆಂದರೆ ಆ ನಿರ್ಜೀವ ಗೋಡೆಯು ಚಲಿಸಿ ಮುನ್ನಡೆಯಿತು.

ಈ ಅದ್ಭುತ ಚಮತ್ಕಾರವನ್ನು ನೋಡಿ ಚಾಂಗದೇವರ ಅಹಂ ಭಂಗವಾಯಿತು. ಅವರು ಜ್ಞಾನೇಶ್ವರರಿಗೆ ಶರಣಾದರು. ಅವರಿಂದ ಉಪದೇಶವನ್ನು ಪಡೆದರು.

ಮಕ್ಕಳೇ, ಜ್ಞಾನೇಶ್ವರರು ತಮ್ಮ 15ನೆಯ ವಯಸ್ಸಿನಲ್ಲಿಯೇ ಜ್ಞಾನೇಶ್ವರಿ ಎಂಬ ಗ್ರಂಥವನ್ನು ಬರೆದರು. ಅದರಲ್ಲಿ ಭಗವದ್ಗೀತಿಯ ಸಾರವಿದೆ. ಅವರು ಭಾಗವತ ಸಂಪ್ರದಾಯವನ್ನು ಸ್ಥಾಪಿಸಿದರು. ಸಂತ ಜ್ಞಾನೇಶ್ವರರು ಕೇವಲ 21ನೇ ವಯಸ್ಸಿನಲ್ಲಿಯೇ ಆಳಂದಿ ಇಂದ್ರಾಯಣಿ ನದಿಯ ಪಾವನವಾದ ತೀರದಲ್ಲಿ ಸಜೀವ ಸಮಾಧಿಯನ್ನು ತೆಗೆದುಕೊಂಡರು.