ಗಂಗಾಸ್ನಾನದಿಂದ ಪಾವನರಾಗಲು ಯಾತ್ರಿಕರಲ್ಲಿ ನಿಜವಾದ ಭಾವವಿರುವುದು ಅವಶ್ಯಕ !

ಒಮ್ಮೆ ಕಾಶಿಯಲ್ಲಿ ಮಹಾನ ತಪಸ್ವಿಗಳಾದ ಶಾಂತಾಶ್ರಮಸ್ವಾಮಿ ಹಾಗೂ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ನಡುವೆ ಮುಂದಿನ ಸಂಭಾಷಣೆ ನಡೆಯಿತು.

ಸ್ವಾಮಿ : ಮಹಾರಾಜರೇ, ಇಷ್ಟೊಂದು ಜನರು ಕಾಶಿಯಲ್ಲಿ ಗಂಗಾಸ್ನಾನವನ್ನು ಮಾಡಿದರೂ ಅವರು ಏಕೆ ಪಾವನರಾಗುವುದಿಲ್ಲ ?

ಗೋಂದವಲೇಕರ ಮಹಾರಾಜರು : ಏಕೆಂದರೆ ಅವರಲ್ಲಿ ನಿಜವಾದ ಭಾವವಿಲ್ಲ !

ಸ್ವಾಮಿ (ಉತ್ತರ ತಿಳಿಯದಿರುವುದರಿಂದ) : ಅವರಲ್ಲಿ ನಿಜವಾದ ಭಾವವಿಲ್ಲದಿದ್ದರೆ ಅವರು ಇಲ್ಲಿಗೆ ಏಕೆ ಬರುತ್ತಿದ್ದರು ?

ಗೋಂದವಲೇಕರ ಮಹಾರಾಜರು : ಅದನ್ನು ಆದಷ್ಟು ಬೇಗ ತೋರಿಸುತ್ತೇನೆ.

೪ ದಿನಗಳ ನಂತರ ಗೋಂದವಲೇಕರ ಮಹಾರಾಜರು ಶಾಂತಾಶ್ರಮಸ್ವಾಮಿಗಳ ಕೈ ಕಾಲುಗಳಿಗೆ ಚಿಂದಿ ಬಟ್ಟೆಯನ್ನು ಸುತ್ತಿ ಅವರಿಗೆ ಮಹಾರೋಗಿಯ ರೂಪ ನೀಡಿದರು ಹಾಗೂ ಅವರನ್ನು ಬಹಳಷ್ಟು ಜನರು ಗಂಗಾಸ್ನಾನಕ್ಕಾಗಿ ಬರುವಲ್ಲಿ ತಂದು ಕೂರಿಸಿದರು. ಮಹಾರಾಜರು ಸ್ವತಃ ಸನ್ಯಾಸಿಯ ರೂಪವನ್ನು ಧರಿಸಿ ಅವರ ಪಕ್ಕದಲ್ಲಿ ನಿಂತರು. ಅಲ್ಲಿ ಕೆಲ ಸಮಯದ ನಂತರ ಬಹಳಷ್ಟು ಜನರು ಸೇರಿದರು. ಸನ್ಯಾಸಿಯು ಉಪಸ್ಥಿತರಿಗೆ 'ಜನರೇ, ಕೇಳಿ ! ಈ ಮಹಾಯೋಗಿಯು ನನ್ನ ತಮ್ಮ. ಕಳೆದ ವರ್ಷ ನಾವಿಬ್ಬರೂ ಮನಃಪೂರ್ವಕವಾಗಿ ವಿಶ್ವೇಶ್ವರನ ಸೇವೆ ಮಾಡಿದ್ದೆವು. ನಮ್ಮ ಸೇವೆಯಿಂದ ಪ್ರಸನ್ನನಾಗಿ ಅವನು ನನ್ನ ತಮ್ಮನಿಗೆ 'ಈ ಗಂಗೆಯಲ್ಲಿ ಸ್ನಾನ ಮಾಡಿದ ನಂತರ ತನ್ನ ಪಾಪವೆಲ್ಲ ಕಳೆದು ತಾನು ಶುದ್ಧನಾದೆನು ಎಂಬ ಭಾವವಿರುವ ಯಾತ್ರಿಕನು ನಿನ್ನನ್ನು ಆಲಂಗಿಸಿದರೆ, ನಿನ್ನ ರೋಗವು ಗುಣವಾಗುವುದು' ಎಂದು ವರ ನೀಡಿದನು. ಇಲ್ಲಿ ನೀವು ಇಷ್ಟು ಜನರಿದ್ದೀರಿ. ಯಾರಾದರೂ ನನ್ನ ತಮ್ಮನಿಗೆ ಇಷ್ಟಾದರೂ ಉಪಕಾರ ಮಾಡುವಿರಾ' ಎಂದು ಕೇಳಿದರು. ಸನ್ಯಾಸಿಯ ಮಾತನ್ನು ಕೇಳಿ ಗುಂಪಿನಿಂದ ೯-೧೦ ಜನ ಮುಂದೆ ಬಂದರು. ಆಗ ಸನ್ಯಾಸಿಯು ಆ ಜನರನ್ನು ತಡೆದು 'ವಿಶ್ವೇಶ್ವರನು ಮುಂದುವರಿದು 'ಯಾವ ಯಾತ್ರಿಕನು ಇವನನ್ನು ಆಲಂಗಿಸುವನೋ ಅವನಿಗೂ ಈ ರೋಗ ತಗುಲುತ್ತದೆ; ಆದರೆ ಅವನ ಭಾವವು ಶುದ್ಧವಾಗಿರುವುದರಿಂದ ಅವನು ಪುನಃ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಅವನು ರೋಗಮುಕ್ತನಾಗುವನು' ಎಂದು ಹೇಳಿದ್ದಾನೆ' ಎಂದು ಹೇಳಿದರು. ಹೀಗೆ ಹೇಳಿದಾಗ ಎಲ್ಲರೂ ಹೊರಟುಹೋದರು. ಆದರೆ ಅಲ್ಲಿನ ಓರ್ವ ತರುಣ ರೈತನು ಹೆಚ್ಚು ವಿಚಾರ ಮಾಡದೇ ಅತ್ಯಂತ ನಿಷ್ಠೆಯಿಂದ ಶಾಂತಾಶ್ರಮಸ್ವಾಮಿಯನ್ನು ಆಲಂಗಿಸಿದನು. ಅನಂತರ ಗೋಂದವಲೇಕರ ಮಹಾರಾಜರು ಸ್ವತಃ ಆ ರೈತನನ್ನು ಆಲಂಗಿಸಿದ 'ನಿನ್ನ ಕಾಶಿಯಾತ್ರೆ ನಿಜವಾಗಿಯೂ ಫಲಕಾರಿಯಾಯಿತು, ನಿನ್ನ ಜೀವನ ಪಾವನವಾಯಿತು!' ಎಂದು ಉದ್ಗರಿಸಿದರು.

ಶಾಂತಾಶ್ರಮಸ್ವಾಮಿಗಳಿಗೆ ಈ ಪ್ರಸಂಗದ ಅರ್ಥ ತಿಳಿಯಿತು !

ಆಧಾರ : ಪೂ. ಬೆಲಸರೆ ಲಿಖಿತ 'ಶ್ರೀ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜ ಚರಿತ್ರೆ ಹಾಗೂ ವಾನ್ಗ್ಮಯ'