ನಾಮಸ್ಮರಣೆಯ ಮಹಾತ್ಮೆ

ಬಾಲಮಿತ್ರರೇ, ನಿಮಗೆ ತಿಳಿದಿರುವಂತೆ ಪರಮ ಪೂಜ್ಯ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದರು. ಅವರು ಯಾವಾಗಲೂ ತಮ್ಮ ಭಕ್ತರಿಗೆ ತಮ್ಮ ನೆಚ್ಚಿನ ಭಕ್ತರ ಬಗ್ಗೆ, ತಮಗೆ ತಿಳಿದ ಕೆಲವು ಸಾಧುಗಳ ಬಗ್ಗೆ ಹೇಳುತ್ತಿದ್ದರು. ರಾಮಕೃಷ್ಣ ಪರಮಹಂಸರು ಸ್ವತಃ ತುಂಬಾ ಜಿಜ್ಞಾಸು ವೃತ್ತಿಯವರಾಗಿದ್ದರು. ಭಗವಂತನ ಹೆಸರಿನ ಮಹಾತ್ಮೆಯನ್ನು ಅವರು ತಮ್ಮ ಭಕ್ತರಿಗೆ ಹೇಳುತ್ತಿದ್ದರು. ನಾಮಸ್ಮರಣೆಯ ಮಹತ್ವವನ್ನು ಹೇಳಲು, ಅವರು ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಭಕ್ತರಿಗೆ ಹೇಳಿದ್ದರು, ಅದನ್ನು ನಿಮಗೂ ಇವತ್ತು ತಿಳಿಸುತ್ತೇವೆ.

ಒಮ್ಮೆ ರಾಮಕೃಷ್ಣ ಪರಮಹಂಸರ ಗ್ರಾಮಕ್ಕೆ ಓರ್ವ ಸಾಧು ಮಹಾರಾಜರು ಬಂದರು. ಅವರ ಬಳಿ ಕಮಂಡಲ ಮತ್ತು ಧರ್ಮಗ್ರಂಥವನ್ನು ಹೊರತುಪಡಿಸಿ ಬೇರೆ ಯಾವುದೇ ಸ್ವತ್ತು ಇರಲಿಲ್ಲ. ಸಾಧು ಮಹಾರಾಜರಿಗೆ ಅವರ ಬಳಿಯಿದ್ದ ಧರ್ಮಗ್ರಂಥದ ಮೇಲೆ ಅಪಾರ ನಿಷ್ಠೆ ಇತ್ತು. ಅವರು ಪ್ರತಿದಿನ ಕುಂಕುಮ ಮತ್ತು ಹೂವುಗಳೊಂದಿಗೆ ಆ ಗ್ರಂಥವನ್ನು ಪೂಜಿಸುತ್ತಿದ್ದರು. ಅವರಿಗೆ ದೇವರ ನಾಮಸ್ಮರಣೆಯಲ್ಲಿ ಅಪಾರ ಶ್ರದ್ಧೆ ಗೌರವವಿತ್ತು. ಆದ್ದರಿಂದ, ಅವರು ದೇವರ ನಾಮಸ್ಮರಣೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಅವರು ದಿನವಿಡೀ ಗ್ರಂಥವನ್ನು ತೆರೆದಿಟ್ಟುಕೊಂಡೇ ಇರುತ್ತಿದ್ದರು. ರಾಮಕೃಷ್ಣ ಪರಮಹಂಸರು ಜಿಜ್ಞಾಸೆಯಿಂದ ಆ ಗ್ರಂಥವನ್ನು ನೋಡಲು ಬಯಸಿದ್ದರು; ಆದರೆ ಆ ಸಾಧು ಮಹಾರಾಜರೊಂದಿಗೆ ಅವರಿಗೆ ಹೆಚ್ಚು ಪರಿಚಯ ಇರಲಿಲ್ಲ. ಆದ್ದರಿಂದ ಅವರು ತಮ್ಮ ಗ್ರಂಥವನ್ನು ತೋರಿಸುತ್ತಿರಲಿಲ್ಲ. ಕ್ರಮೇಣ ಸಾಧು ಮಹಾರಾಜ ಅವರೊಂದಿಗೆ ರಾಮಕೃಷ್ಣ ಪರಮಹಂಸರ ಅನ್ಯೋನ್ಯತೆ ಹೆಚ್ಚಾಯಿತು. ಆಗ ಪರಮಹಂಸರು ಅವರ ಗ್ರಂಥ ನೋಡಲು ಕೇಳಿದರು. ಸಾಧು ಮಹಾರಾಜರು ಆ ಗ್ರಂಥವನ್ನು ಪರಮಹಂಸರಿಗೆ ನೋಡಲು ಕೊಟ್ಟರು.

ರಾಮಕೃಷ್ಣ ಪರಮಹಂಸರು ಅದನ್ನು ತೀವ್ರ ಜಿಜ್ಞಾಸೆಯಿಂದ ತೆರೆದರು; ಆದರೆ ಮಿತ್ರರೇ, ಪರಮಹಂಸರು ಗ್ರಂಥವನ್ನು ನೋಡಿ ಆಶ್ಚರ್ಯಚಕಿತರಾದರು, ಇದರಲ್ಲಿ ಕೇವಲ ಎರಡು ಶಬ್ದಗಳನ್ನು ಒಂದು ತುದಿಯಿಂದ ಇನ್ನೊಂದು ತುದಿಗೆ ಬರೆಯಲಾಗಿತ್ತು ಮತ್ತು ಆ ಪದಗಳೆಂದರೆ ಓಂ ರಾಮಃ ! ಅವರು ಸಾಧು ಮಹಾರಾಜರಲ್ಲಿ ಇದರ ಬಗ್ಗೆ “ಇದರ ಅರ್ಥವೇನು? ದಿನದಲ್ಲಿ ಎಷ್ಟು ಬಾರಿ ನೀವು ಈ ಪುಸ್ತಕವನ್ನು ತೆರೆಯುತ್ತೀರಲ್ಲವೇ? ನೀವು ಇದನ್ನೇ ಪ್ರತಿದಿನ ಪೂಜಿಸುತ್ತೀರಾ?” ಎಂದು ವಿಚಾರಿಸಿದರು. ಆಗ ಸಾಧು ಮಹಾರಾಜರು “ಅನೇಕ ಗ್ರಂಥಗಳನ್ನು ಓದಿದ ನಂತರ ನಾವು ಏನು ಮಾಡಲಿಕ್ಕಿದೆ ? ವೇದಗಳು ಮತ್ತು ಪುರಾಣಗಳು ಈಶ್ವರನಿಂದ ಮಾತ್ರ ಹುಟ್ಟಿಕೊಂಡಿವೆ. ಭಗವಂತ ಮತ್ತು ಅವನ ಹೆಸರು ಎರಡೂ ಒಂದೇ ಆಗಿವೆ; ಆದ್ದರಿಂದ, ನಾಲ್ಕು ವೇದಗಳು, ಆರು ಧರ್ಮಶಾಸ್ತ್ರಗಳು, ಹದಿನೆಂಟು ಪುರಾಣಗಳು, ಅವುಗಳಲ್ಲಿರುವ ಜ್ಞಾನವೆಲ್ಲವೂ ಭಗವಂತನ ಒಂದು ಹೆಸರಿನಲ್ಲಿ ಸಮಾವೇಶಗೊಂಡಿವೆ ! ಅದಕ್ಕಾಗಿಯೇ ನಾವು ಭಗವಂತನ ಹೆಸರನ್ನು ಹಿಡಿದುಕೊಂಡು ಕುಳಿತಿದ್ದೇವೆ. ದೇವರ ನಾಮವೇ ನಮ್ಮನ್ನು ದೇವರೊಂದಿಗೆ ಸೇರಿಸುತ್ತದೆ, ಅವರ ದರ್ಶನ ನೀಡುತ್ತದೆ. ಹಾಗಾದರೆ ದೇವರ ನಾಮವನ್ನು ಬಿಟ್ಟು ನೋಡಲು ಬೇರೆ ಏನಿದೆ? ಬೇರೆನನ್ನು ಏಕೆ ಪೂಜಿಸಬೇಕು? ನಾಮದಲ್ಲಿ ಏಕರೂಪವಾಗಿರುವ ದೇವರನ್ನು ನೆನಪಿಟ್ಟುಕೊಳ್ಳುವುದು ನನ್ನ ಜೀವನದ ಗುರಿಯಾಗಿದೆ”. ಸಾಧು ಮಹಾರಾಜರ ಈ ವಿಚಾರಗಳಿಂದ ಅವರಿಗೆ ದೇವರ ಹೆಸರಿನಲ್ಲಿ(ನಾಮದಲ್ಲಿ)ದ್ದ ಅಚಲವಾದ ನಂಬಿಕೆಯು ಸ್ಪಷ್ಟವಾಗಿ ಗೋಚರಿಸಿತು.

ಈ ರೀತಿಯಾಗಿ, ರಾಮಕೃಷ್ಣ ಪರಮಹಂಸರು ಸಾಧು ಮಹಾರಾಜರ ಉದಾಹರಣೆಯೊಂದಿಗೆ ತಮ್ಮ ಭಕ್ತರಿಗೆ ನಾಮಸ್ಮರಣೆಯ ಮಹತ್ವವನ್ನು ತಿಳಿಸಿದರು. ಮಕ್ಕಳೇ, ಈ ಉದಾಹರಣೆಯ ಮೂಲಕ ನೀವು ನಾಮಸ್ಮರಣೆಯ ಮಹತ್ವವನ್ನು ಅರ್ಥಮಾಡಿಕೊಂಡಿರಬೇಕು. ಪ್ರತಿಯೊಂದು ಕಾರ್ಯವನ್ನು ನಿರ್ವಹಿಸುವಾಗ ಮನಸ್ಸಿನಲ್ಲಿ ನಾಮಸ್ಮರಣೆಯನ್ನು ಮಾಡುವ ಮೂಲಕ, ನಾವು ಭಗವಂತನ ಹತ್ತಿರದಲ್ಲಿಯೇ ಇರುತ್ತೇವೆ.