ಮೂರ್ತಿಪೂಜೆಯ ಮಹತ್ವ

ರಾಜನಿಗೆ ಮೂರ್ತಿಪೂಜೆಯ ಮಹತ್ವವನ್ನು ತಿಳಿಸಿಕೊಟ್ಟ ಸ್ವಾಮಿ ವಿವೇಕಾನಂದರು!

ಮಿತ್ರರೇ, ಇದು ಆಗಿನ ಕಾಲದ ವಿಷಯವಾಗಿದೆ. ಸ್ವಾಮಿ ವಿವೇಕಾನಂದರು ಭಾರತವಿಡೀ ಸಂಚರಿಸುತ್ತಿದ್ದರು. ಸ್ವಾಮಿ ವಿವೇಕಾನಂದರು ಒಂದು ಸಲ ಉತ್ತರ ಭಾರತದ ರಾಜಸ್ಥಾನದ ಅಲವಾರ ನಗರ ತಲುಪಿದರು. ಆ ಸಮಯದಲ್ಲಿ ಅಲವಾರನ್ನು ರಾಜಾ ಮಂಗಲಸಿಂಹನು ಆಳುತ್ತಿದ್ದನು. ಸ್ವಾಮಿ ವಿವೇಕಾನಂದರ ಪ್ರವಚನಗಳು ಅತ್ಯಂತ ಪ್ರಭಾವಶಾಲಿಯಾಗಿರುತ್ತಿದ್ದವು. ಅವರ ಪ್ರಭಾವದಿಂದಾಗಿ ಅಲ್ಲಿನ ಜನರು ಅವರ ಭಕ್ತರಾಗುತ್ತಿದ್ದರು. ಸ್ವಾಮಿ ವಿವೇಕಾನಂದರು ಅಲವಾರಗೆ ತಲುಪಿದಾಗ ಅಲ್ಲಿ ಅವರ ಪ್ರವಚನಗಳನ್ನು ಕೇಳಿ ಅಲ್ಲಿನ ಜನರು ಸಹ ಬಹಳ ಪ್ರಭಾವಿತರಾದರು. ಜನರು ಅವರನ್ನು ರಾಜಭವನಕ್ಕೆ ಕರೆ ತಂದರು ಹಾಗೂ ಅವರನ್ನು ರಾಜಾ ಮಂಗಲಸಿಂಹನೊಂದಿಗೆ ಭೇಟಿ ಮಾಡಿಸಿದರು.

ರಾಜನ ಜೀವನವು ಸುಖ ಹಾಗೂ ಭೋಗದಲ್ಲಿಯೇ ಮುಳುಗಿರುತ್ತಿತ್ತು. ವಿಚಾರಧಾರೆಯೂ ಆಂಗ್ಲರಿಂದ ಪ್ರಭಾವಿತವಾಗಿತ್ತು, ಹಾಗಾಗಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅಸಡ್ಡೆಯಿತ್ತು. ಇಷ್ಟು ಮಾತ್ರವಲ್ಲ ಅವರ ಮನಸ್ಸಿನಲ್ಲಿ ಅಧಿಕಾರದ ಅಹಂಕಾರವಿತ್ತು. ಸ್ವಾಮಿ ವಿವೇಕಾನಂದರನ್ನು ನೋಡಿ, ರಾಜನ ಮನಸ್ಸಿನಲ್ಲಿ ‘ಇವರಂತೂ ಯುವ ಸಂನ್ಯಾಸಿಯಾಗಿದ್ದಾರೆ. ಆಂಗ್ಲ ಭಾಷೆಯಲ್ಲಿ ಒಳ್ಳೆಯ ಪ್ರವಚನ ಕೊಡಲು ಗೊತ್ತಿರಬಹುದು ಆದರೆ ಅನುಭವ ಏನೂ ಇರಲಾರದು!’ ಎಂಬ ವಿಚಾರ ಮಾಡಿ ಮನಸ್ಸಿನಲ್ಲಿ ಸ್ವಾಮಿಜಿಯನ್ನು ತನ್ನ ಮಾತಿನಲ್ಲಿ ಸಿಲುಕಿಸುವ ವಿಚಾರ ಮಾಡಿದನು. ರಾಜನು ಸ್ವಾಮಿ ವಿವೇಕಾನಂದರಿಗೆ, ‘ಸ್ವಾಮೀಜಿ ನಾನು ಮೂರ್ತಿಪೂಜೆಯನ್ನು ಪೂರ್ಣವಾಗಿ ಮೂರ್ಖತನ ಎಂದು ತಿಳಿಯುತ್ತಿದ್ದೇನೆ. ಯಾವುದಾದರೊಂದು ಮೂರ್ತಿಗೆ ಹಳದಿ-ಕುಂಕುಮ ಹಚ್ಚಿ ಹೂವು ಏರಿಸಿ ಅದರ ಎದುರು ಕೈಜೋಡಿಸಿ ನಿಲ್ಲುವ ಜನರನ್ನು ನೋಡಿ ಅವರ ವಿಚಾರಪ್ರಕ್ರಿಯೆಯ ಬಗ್ಗೆ ಕರುಣೆ ಬರುತ್ತದೆ. ಇದರ ಬಗ್ಗೆ ನಿಮ್ಮ ವಿಚಾರವೇನು?’ ಎಂದು ಕೇಳುತ್ತಾನೆ.

ಸ್ವಾಮಿ ವಿವೇಕಾನಂದರು ಮೊದಲೇ ರಾಜನ ಬಗ್ಗೆ ತಿಳಿದುಕೊಂಡಿದ್ದರು. ಹಾಗಾಗಿ ಅವರು ರಾಜನ ಪ್ರಶ್ನೆಗೆ ನೇರ ಉತ್ತರವನ್ನು ನೀಡಲಿಲ್ಲ. ಅರಮನೆಯ ಯಾವ ಭವನದಲ್ಲಿ ಅವರು ಮತ್ತು ರಾಜನು ಕುಳಿತುಕೊಂಡು ಮಾತನಾಡುತ್ತಿದ್ದರೋ ಆ ಭವನವನ್ನು ಒಂದು ಸಲ ಅವಲೋಕಿಸಿದರು. ಗೋಡೆಯ ಮೇಲೆ ಒಂದು ಚಿತ್ರ ತೂಗಾಡಿಸಿದ್ದು ಅವರಿಗೆ ಕಾಣಿಸಿತು. ಸ್ವಾಮಿಜಿಯವರು ಆ ಚಿತ್ರ ಯಾರದ್ದು ಎಂದು ರಾಜನ ಬಳಿ ವಿಚಾರಿಸಿದರು. ಆಗ ರಾಜನು ಅದು ತೀರಿಹೋಗಿರುವ ತನ್ನ ತಂದೆಯವರದ್ದು ಎಂದು ಉತ್ತರಿಸಿದನು. ಆ ಭವನದಲ್ಲಿ ರಾಜನ ಜೊತೆಗೆ ಅಲವಾರ ರಾಜ್ಯದ ದಿವಾನರು ಸಹ ಉಪಸ್ಥಿತರಿದ್ದರು. ಸ್ವಾಮಿಜಿಯವರು ದಿವಾನರ ಬಳಿ ಅದನ್ನು ತೆಗೆಯಲು ಹೇಳಿದರು. ದಿವಾನರು ಆ ಚಿತ್ರವನ್ನು ಇಳಿಸಿ ತೆಗೆದುಕೊಂಡು ಬಂದರು. ಆಗ ಸ್ವಾಮಿಜಿಯವರು ದಿವಾನರಿಗೆ ಆ ಚಿತ್ರದ ಮೇಲೆ ಉಗುಳುವಂತೆ ಹೇಳಿದರು. ಅದನ್ನು ಕೇಳಿ ದಿವಾನರಿಗೆ ನಡುಕುಂಟಾಯಿತು. ರಾಜನು ಸಹ ಆ ಮಾತನ್ನು ಕೇಳಿ ಸಿಟ್ಟಿನಿಂದ ಕುದಿಯತೊಡಗಿದನು.  ದಿವಾನರು ತಲೆತಗ್ಗಿಸಿ ‘ಸ್ವಾಮೀಜಿ! ನೀವೇನು ಹೇಳುತ್ತಿದ್ದೀರಿ ? ಈ ಚಿತ್ರವು ನಮ್ಮ ಹಿಂದಿನ ರಾಜರದ್ದು’ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರೋ, ‘ದಿವಾನರೇ, ಇದು ಕಪ್ಪು ಮಸಿಯ ಬಣ್ಣದಿಂದ ರಚಿಸಿದ ಒಂದು ದೊಡ್ಡ ಕಾಗದವಲ್ಲವೇ? ಇದರ ಮೇಲೆ ಉಗುಳಲು ನೀವೇಕೆ ಹೆದರುತ್ತೀರಿ? ರಾಜನಿಗೂ ಇದರಲ್ಲಿ ಏನೂ ತಪ್ಪು ಕಾಣಿಸಬಾರದಲ್ಲವೇ?’ ಇಷ್ಟು ಹೇಳಿ ಅವರು ಕೋಪದಿಂದ ಕುದಿಯುತ್ತಿದ್ದ ರಾಜನತ್ತ ತಿರುಗಿ ‘ರಾಜಾ, ಈ ಚಿತ್ರವು ನಿಮ್ಮ ತಂದೆಯವರದ್ದಾಗಿದೆ. ಆದರೆ ಅವರು ಈಗ ಜೀವಂತ ಸಹ ಇಲ್ಲ. ಆದರೂ ಅದು ಕಪ್ಪುಬಣ್ಣದ ಒಂದು ದೊಡ್ಡ ಕಾಗದ ಎಂದು ಹೇಳಿದ ತಕ್ಷಣ ನಿಮಗೆ ಯಾಕೆ ಬಹಳ ಕೆಟ್ಟದೆನಿಸಿತು? ಏಕೆಂದರೆ ಆ ಚಿತ್ರದಲ್ಲಿ ನಿಮ್ಮ ತಂದೆಯನ್ನು ಕಾಣುತ್ತಿದ್ದೀರಲ್ಲವೇ? ಹಾಗಾಗಿ ನಿಮಗೆ ಅದರ ಮೇಲೆ ಉಗುಳುವ ಮಾತನ್ನು ಹೇಳಿದ ತಕ್ಷಣ ಸಿಟ್ಟು ಬಂತು. ಅದೇ ರೀತಿ ನೀವು ದೇವರ ಮೂರ್ತಿಯ ಪೂಜೆಯನ್ನು ಮಾಡುವ ಭಕ್ತರಿಗೆ ಅಜ್ಞಾನಿ ಮತ್ತು ಮೂರ್ಖರೆಂದು ತಿಳಿಯುವುದು ಸಹ ಅಷ್ಟೇ ತಪ್ಪಲ್ಲವೇ? ಶಾಸ್ತ್ರಕ್ಕನುಸಾರ ಯಾವುದೇ ಮೂರ್ತಿಯನ್ನು ದೇವರು ಎಂದು ತಿಳಿದು ಪೂಜೆ ಮಾಡಲಾಗುತ್ತದೆ, ಅದರಲ್ಲಿ ದೇವತೆಯ ತತ್ತ್ವವು ಬರುತ್ತದೆ’.

ಸ್ವಾಮಿಜಿಯವರು ಮುಂದೆ ‘ಮೂರ್ತಿ ದೇವತೆಯಲ್ಲ, ಇದು ಮೂರ್ತಿ ಪೂಜೆ ಮಾಡುವ ಜ್ಞಾನಿ ಭಕ್ತರಿಗೆ ಸಹ ಗೊತ್ತಿದೆ. ಆದರೆ ನಿರ್ಗುಣ, ನಿರಾಕಾರ ಪರಮೇಶ್ವರನ ಧ್ಯಾನ-ಧಾರಣೆ ಮಾಡುವುದು ಸಾಮಾನ್ಯ ಮನುಷ್ಯನಿಗೆ ಸುಲಭವಲ್ಲ. ಹಾಗಾಗಿ ಮೂರ್ತಿಪೂಜೆ ಭಕ್ತನಿಗೆ ಈಶ್ವರಭಕ್ತಿಯ ಪ್ರಾಥಮಿಕ ಹಂತ ಎಂದು ಹೇಳಲಾಗಿದೆ. ಈ ಮೂರ್ತಿಪೂಜಕನು ಮುಂದೆ ಇದೇ ಮಾಧ್ಯಮದಿಂದ ಪರಮೇಶ್ವರನೊಂದಿಗೆ ಏಕರೂಪವಾಗುವ ಧ್ಯೇಯವನ್ನು ಸಾಧ್ಯ ಮಾಡಬಲ್ಲನು’ ಎಂದು ವಿವರಿಸಿದರು. ಇದನ್ನು ಕೇಳಿ ರಾಜನಿಗೆ ತನ್ನ ತಪ್ಪಿನ ಅರಿವಾಯಿತು ಹಾಗೂ ಅವನಿಗೆ ಮೂರ್ತಿಪೂಜೆಯ ಮಹತ್ವವು ತಿಳಿಯಿತು.