ಸಂತ ಚೋಖಾಮೇಳಾರ ವಿಠಲ ಭಕ್ತಿ!

ಮಂಗಳವೇಢಾದ ಸಂತ ಚೋಖಾಮೇಳಾರಿಗೆ ವಿಠಲನ ಮೇಲೆ ಅಪಾರ ಭಕ್ತಿಯಿತ್ತು. ಅವರು ಸತತ ವಿಠಲನ ನಾಮಸ್ಮರಣೆಯಲ್ಲಿಯೇ ಮೈ ಮರೆಯುತ್ತಿದ್ದರು. ಆದರೆ ಊರಿನ ಕೆಲವು ದುಷ್ಟರು ಅವರಿಗೆ ಬಹಳ ತೊಂದರೆ ಕೊಡುತ್ತಿದ್ದರು. ಒಂದು ದಿನ ಚೋಖಾಮೇಳಾರವರು ಈ ತೊಂದರೆಯಿಂದ ಬೇಸತ್ತು ಊರು ಬಿಟ್ಟು ತಮ್ಮ ಪತ್ನಿ ಸೋಯರಾಳೊಂದಿಗೆ ಪಂಢರಪುರಕ್ಕೆ ಬಂದರು.

ಚೋಖಾಮೇಳಾರವರು ಪಂಢರಪುರದಲ್ಲಿ ಒಂದು ಗುಡಿಸಲನ್ನು ಕಟ್ಟಿದರು. ಅವರ ವಿಠಲ-ಉಪಾಸನೆ ನಡೆಯುತ್ತಲೇ ಇತ್ತು. ವಿಠಲ ದರ್ಶನದ ಬಗ್ಗೆ ಅವರಲ್ಲಿರುವ ತೀವೃ ತಳಮಳದಿಂದ ಒಮ್ಮೆ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿದ್ದರೂ ಅವರು ತಾನಾಗಿಯೇ ವಿಠಲನ ಚರಣಗಳವರೆಗೆ ತಲುಪಿದರು. ಅಂದಿನಿಂದ ಅಲ್ಲಿನ ಪೂಜಾರಿಗಳು ದೇವಸ್ಥಾನದಲ್ಲಿ ಕಾವಲು ಇಟ್ಟರು. ಆದರೆ ವಿಠಲನ ಭೇಟಿಯ ಅವರ ತೀವ್ರ ತಳಮಳವನ್ನು ಕಂಡು ದೇವರೇ ಅವರ ಮನೆಗೆ ಅವರನ್ನು ಭೇಟಿಯಾಗಲು ಹೋಗತೊಡಗಿದರು. ಈಗ ಚೋಖಾಮೇಳಾ ತಮ್ಮ ಮನೆಯಲ್ಲಿಯೇ ತೃಪ್ತ ಮನಸ್ಸಿನಿಂದ ವಿಠಲನ ಸೇವೆಯಲ್ಲಿ ಮಗ್ನರಾಗತೊಡಗಿದರು.

ಒಮ್ಮೆ ವಿಠಲನು ಚೋಖಾಮೇಳಾರಿಗೆ ‘ನಾನು ನಿನ್ನ ಮನೆಗೆ ಭೋಜನಕ್ಕೆ ಬರುವೆನು’, ಎಂದು ಹೇಳಿದನು. ಇದನ್ನು ತಿಳಿದು ಸೋಯರಾಗೆ ಬಹಳ ಆನಂದವಾಯಿತು. ದೇವರಿಗೆ ಭೋಜನದಲ್ಲಿ ಏನು ಮಾಡಿ ಬಡಿಸಲಿ, ಎಂಬ ವಿಚಾರದಲ್ಲಿಯೇ ನದಿಯ ದಂಡೆಯಲ್ಲಿ ಭೇಟಿಯಾದ ಓರ್ವ ಹೆಂಗಸಿನ ಬಳಿ ಕೆಲವು ಪದಾರ್ಥಗಳನ್ನು ಬೇಡಿದಳು. ಮಾತು ಮಾತಿನಲ್ಲಿಯೇ ಅವಳು ಸಾಕ್ಷಾತ ವಿಠಲನು ತಮ್ಮ ಮನೆಗೆ ಭೋಜನಕ್ಕೆ ಬರಲಿದ್ದಾನೆ ಎಂಬ ಸಂಗತಿಯನ್ನು ಹೇಳಿದಳು. ಇದನ್ನು ಕೇಳಿದ ಆ ಹೆಂಗಸಿಗೆ ಆಶ್ಚರ್ಯವಾಯಿತು. ನೋಡುನೋಡುತ್ತಿದಂತೆಯೇ ಈ ವಾರ್ತೆ ಊರಿನಲ್ಲಿ ಹಬ್ಬಿತು. ಅನೇಕರು ಈ ಮಾತಿನ ಚೇಷ್ಟೆ ಮಾಡಿದರು. ಈ ಬಗ್ಗೆ ಯಾರೂ ನಂಬಲಿಲ್ಲ.

ಓರ್ವ ಗ್ರಹಸ್ಥನು ರಾತ್ರಿಯ ಹೊತ್ತು ಕದ್ದು ಮುಚ್ಚಿ ಚೋಖಾಮೇಳಾರ ಗುಡಿಸಲಿನ ಬಳಿ ಬಂದು ಒಳಗೆ ಇಣುಕಿ ನೋಡಿದನು, ಅದೆಂತಹ ಆಶ್ಚರ್ಯ ! ವಿಠಲ ಮೂರ್ತಿಯ ಚರಣದಲ್ಲಿ ಚೋಖಾಮೇಳಾರು ಕುಳಿತಿದ್ದರು. ಸಮೀಪದಲ್ಲಿಯೇ ಸೋಯರಾ ನಮ್ರತೆಯಿಂದ ನಿಂತುಕೊಂಡಿದ್ದಳು. ಚೋಖಾಮೇಳಾರು ‘ನೋಡಿದಿಯಾ ಸೋಯರಾ ! ಪ್ರೇಮಮಯಿ, ಭಕ್ತವತ್ಸಲನಾದ ಭಗವಂತನು ಭಕ್ತರಿಗಾಗಿ ಏನು ಮಾಡಲೂ ಸಿದ್ಧನಿದ್ದಾನೆ’ ಎಂದು ಹೇಳುತ್ತಿದ್ದರು. ಸೋಯರಾಳು ವಿಠಲನ ಚರಣಗಳಲ್ಲಿ ನಮಸ್ಕಾರ ಮಾಡಿದಳು. ಅವಳ ಕಣ್ಣುಗಳಲ್ಲಿ ಅಶ್ರು ಹರಿಯುತ್ತಿತ್ತು. ಭಗವಂತನು ಅವಳನ್ನು ಎಬ್ಬಿಸಿ ‘ನನಗೂ ನಿಮ್ಮ ಭೇಟಿಯ ತಳಮಳವಾಗುತ್ತಿತ್ತು.’ ಎಂದು ಹೇಳಿದನು. ಆ ಗ್ರಹಸ್ಥನು ಇದೆಲ್ಲವನ್ನು ನೋಡುತ್ತಿದ್ದನು. ಅನಂತರ ಸೋಯರಾಳು ಭೋಜನಕ್ಕೆ ಎಲೆಯಿಟ್ಟು ಊಟ ಬಡಿಸಿದಳು. ವಿಠಲನು ಭೋಜನ ಪ್ರಾರಂಭಿಸಿದನು. ಆ ಗ್ರಹಸ್ಥನಿಗೆ ದೇವರ ಮೂರ್ತಿಯ ಚಲಿಸುತ್ತಿರುವ ಕೈಗಳು ಕಾಣಿಸುತ್ತಿದ್ದವು. ಅದೇ ಸಮಯಕ್ಕೆ ಚೋಖಾಮೇಳಾರ ‘ನಿಧಾನ, ನಿಧಾನ ! ಇದೇನು ! ದೇವರ ಪೀತಾಂಬರದ ಮೇಲೆ ಮಜ್ಜಿಗೆ ಚೆಲ್ಲಿದೆಯಲ್ಲ !’ ಎಂದು ಹೇಳುವುದು ಅವನ ಕಿವಿಗೆ ಬಿತ್ತು,

ಇದೆಲ್ಲಾ ನೋಡಿ ಆ ಗ್ರಹಸ್ಥನು ಅಲ್ಲಿಂದ ಹೊರಟನು. ನೋಡಿದ ನಿಜ ಸಂಗತಿಯನ್ನು ಅವನು ದಾರಿಯಲ್ಲಿ ಸಿಕ್ಕ ಎಲ್ಲರಿಗೂ ಹೇಳುತ್ತ ಹೊರಟನು. ಜನರು ಸೇರಿದರು. ಈ ಸಂಗತಿಯು ದೇವಸ್ಥಾನದ ಪೂಜಾರಿಗಳ ವರೆಗೆ ತಲುಪಿತು. ಸತ್ಯ ಸಂಗತಿಯನ್ನು ತಿಳಿಯಲು ಎಲ್ಲರೂ ದೇವಸ್ಥಾನದ ಬಾಗಿಲು ತೆರೆದು ನೋಡಿದರು ಹಾಗೂ ಅಲ್ಲಿನ ದೃಷ್ಯವನ್ನು ಕಂಡು ಆಶ್ಚರ್ಯಚಕಿತರಾದರು. ಎಂದಿನಂತೆಯೇ ವಿಠಲನ ಮೂರ್ತಿಯು ಪೀಠದ ಮೇಲೆ ನಿಂತಿತ್ತು. ವಸ್ತ್ರ, ಆಭೂಷಣಗಳೂ ಹಾಗೆಯೇ ಇದ್ದವು; ಆದರೆ ತೊಡಸಿದ ಪೀತಾಂಬರದ ಮೇಲೆ ಮಜ್ಜಿಗೆ ಚೆಲ್ಲಿತ್ತು. ನೆಂಟನಾಗಿ ಸಾಕ್ಷಾತ ವಿಠಲನು ನಿಜಕ್ಕೂ ತನ್ನ ಸಗುಣ ರೂಪದಲ್ಲಿ ಚೋಖಾಮೇಳಾರ ಮನೆಗೆ ಹೋಗಿ ಭೋಜನ ಮಾಡಿದನು. ಇದನ್ನು ನೋಡಿ ಪೂಜಾರಿಯ ಸಹಿತ ಎಲ್ಲರೂ ಆ ಹಿರಿಯ ಸಂತ ಚೋಖಾಮೇಳಾರ ಕಾಲು ಹಿಡಿದರು.

ಬಾಲಮಿತ್ರರೇ, ನೋಡಿ! ತಮ್ಮ ಅಪಾರವಾದ ವಿಠಲಭಕ್ತಿಯಿಂದ ಚೋಖಾಮೇಳಾರು, ಸಂತ ಚೋಖಾಮೇಳಾ ಆದರು. ಅವರ ಮನೆಗೆ ಸಾಕ್ಷಾತ್ ವಿಠಲನು ಅವರನ್ನು ಭೇಟಿಯಾಗಲು ಹೋಗುತ್ತಿದ್ದನು.