ಶ್ರೀ ಗೋಂದವಲೇಕರ ಮಹಾರಾಜ

ಗೋಂದವಲೇಕರ ಮಹಾರಾಜಬಾಲ್ಯ

ಶ್ರೀ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಜನ್ಮವು ೧೭೬೬ಮಾಘ ಶುಕ್ಲ ದ್ವಾದಶಿ (೧೯ ಫೆಬ್ರವರಿ ೧೮೪೫), ಬುಧವಾರ ಬೆಳಿಗ್ಗೆ ೯೩೦ ಗಂಟೆಗೆ, ಮಾಣ ತಾಲೂಕು, ಸಾತಾರಾ ಜಿಲ್ಲೆಯ ಗೊಂದವಲೇ ಬುದ್ರುಕ್‌ನಲ್ಲಿ ಆಯಿತು. ಅವರ ಮನೆತನದವರು ವಿಠ್ಠಲ ಭಕ್ತರು ಮತ್ತು ಪಂಢರಪುರದ ವಾರಕರಿ ಸಂಪ್ರದಾಯದವರಾಗಿದ್ದು, ಅವರ ಪೂರ್ವಜರು ಸದಾಚಾರ ಸಂಪನ್ನರು ಹಾಗೂ ಸಾತ್ವಿಕ ವೃತ್ತಿಯವರಾಗಿದ್ದರು. ಜನಿಸಿದ ಮಗುವಿಗೆ ಗಣಪತಿ ಎಂದು ನಾಮಕರಣ ಮಾಡಲಾಯಿತು. ಶ್ರೀ ಬ್ರಹ್ಮ ಚೈತನ್ಯರು ಶ್ರೀರಾಮನ ಉಪಾಸಕರಾಗಿದ್ದರು. ಅವರು ತಮ್ಮನ್ನು ಬ್ರಹ್ಮಚೈತನ್ಯ ರಾಮದಾಸಿಯೆಂದು ಕರೆದುಕೊಳ್ಳುತ್ತಿದ್ದರು.

ಗೋಂದವಲೇಕರ ಮಹಾರಾಜಗೆ ಆದಗುರುಕೃಪೆ

ಗಣಪತಿಯು ತನ್ನ ಒಂಬತ್ತನೇ ವಯಸ್ಸಿನಲ್ಲಿ ಗುರುಗಳನ್ನು ಹುಡುಕಿ ಮನೆಯನ್ನು ತ್ಯಜಿಸಿದರು. ಆ ಸಮಯದಲ್ಲಿ ಅವನ ತಂದೆ ಕೋಲ್ಹಾಪುರದಿಂದ ಅವನನ್ನು ಮರಳಿ ಕರೆದುಕೊಂಡು ಬಂದರು. ಸ್ವಲ್ಪ ಸಮಯದ ಬಳಿಕ ಅವನು ಪುನ: ಮನೆಯನ್ನು ತ್ಯಜಿಸಿ ಗುರುಗಳನ್ನು ಹುಡುಕಿ ಪಾದಯಾತ್ರೆಯನ್ನು ಕೈಗೊಂಡರು. ಅನೇಕ ಸಂತರು ಸತ್ಪುರುಷರನ್ನು ಭೇಟಿ ಮಾಡಿದರು. ಕೊನೆಗೆ ಅವರಿಗೆ ಮರಾಠವಾಡೆಯ ನಾಂದೇಡದ ಹತ್ತಿರವಿರುವ ಯೇಳೆಗಾಂವನಲ್ಲಿ 'ಶ್ರೀ ತುಕಾಮಾಯಿ' ಇವರ ಶಿಷ್ಯತ್ವ ಪ್ರಾಪ್ತವಾಯಿತು. ಮಹಾರಾಜರು ಅತ್ಯಂತ ಕಠೋರವಾದ ಸನ್ನಿವೇಶಗಳನ್ನು ಎದುರಿಸುತ್ತ, ಗುರುವಿನ ಆಜ್ಞಾಪಾಲನೆಯನ್ನು ಮಾಡುತ್ತ, ಗುರುಸೇವೆಯನ್ನು ಮಾಡಿದರು. ಆ ಸಮಯದಲ್ಲಿ ಅವರು ಕೇವಲ ೧೪ ವರ್ಷದವರಾಗಿದ್ದರು. ಶ್ರೀ ತುಕಾಮಾಯಿಯವರು ಗಣಪತಿಗೆ ‘ಬ್ರಹ್ಮಚೈತನ್ಯ' ಎನ್ನುವ ಹೆಸರು ನೀಡಿದರು. ರಾಮೋಪಾಸನೆಯನ್ನು ನೀಡಿದರು, ಅನುಗ್ರಹವನ್ನು ನೀಡುವ ಅಧಿಕಾರವನ್ನು ನೀಡಿದರು. ತದನಂತರ ಶ್ರೀ ತುಕಾಮಾಯಿಯವರ ಆದೇಶಾನುಸಾರ ಬಹಳ ಸಮಯದವರೆಗೆ ಮಹಾರಾಜರು ತೀರ್ಥಯಾತ್ರೆಗಳನ್ನು ಮಾಡಿದರು.

ಶ್ರೀರಾಮನ ಅಖಂಡ ಸೇವೆ

ಗೃಹತ್ಯಾಗದ ೯ ವರ್ಷಗಳ ನಂತರ ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಗೊಂದವಲೇ ಗ್ರಾಮಕ್ಕೆ ಮರಳಿದರು. ಮುಂದೆ, ರಾಮನಾಮ ಪ್ರಸಾರ ಹಾಗೂ ವಿವಿಧೆಡೆಗಳಲ್ಲಿ ರಾಮಮಂದಿರಗಳ ಸ್ಥಾಪನೆಗಾಗಿ ಸಂಪೂರ್ಣ ಆಯುಷ್ಯವನ್ನು ಅರ್ಪಿಸಿದರು. ಗುರುವಿನ ಆಜ್ಞೆಗನುಗುಣವಾಗಿ ಅವರು 'ಗೃಹಸ್ಥಾಶ್ರಮದಲ್ಲಿದ್ದು, ಪ್ರಾಪಂಚಿಕ ವ್ಯವಹಾರವನ್ನು ಮಾಡುತ್ತ ಪರಮಾರ್ಥವನ್ನು ಹೇಗೆ ಸಾಧಿಸಬೇಕು' ಎಂಬುವುದರ ಮಾರ್ಗದರ್ಶನವನ್ನು ಜನಸಾಮಾನ್ಯರಿಗೆ ಮಾಡಿದರು. 'ಯಾವುದೇ ಪರಿಸ್ಥಿತಿಯಲ್ಲಿಯೂ ರಾಮನ ಸ್ಮರಣೆಯನ್ನು ಸತತವಾಗಿ ಮಾಡುತ್ತಿರಬೇಕು. 'ಅವರ' ಇಚ್ಛೆಗನುಗುಣವಾಗಿ ಸುಖದು:ಖವನ್ನು ಭೋಗಿಸಬೇಕು' ಎನ್ನುವುದು ಅವರ ಉಪದೇಶಗಳ ಸಾರವಾಗಿದೆ. ಗೋರಕ್ಷಣೆ ಮತ್ತು ಗೋದಾನ, ಅಖಂಡ ಅನ್ನದಾನ ಹಾಗೂ ವಿವಿಧ ಕಾರಣಗಳಿಂದ ಮಹಾರಾಜರು ಮಾಡಿದ ತೀರ್ಥಯಾತ್ರೆಗಳು ಅವರ ಚರಿತ್ರೆಯಲ್ಲಿ ವಿಶೇಷ ಅಂಗವಾಗಿವೆ. ಒಳ್ಳೆಯವರು, ದುಷ್ಟರು, ಜ್ಞಾನಿಗಳು ಮತ್ತು ಅಜ್ಞಾನಿಗಳು ಇವರೆಲ್ಲರ ಬಗ್ಗೆ ಸಮಭಾವ, ನಿಸ್ಪೃಹತೆ, ಒಳ್ಳೆಯಕಾರ್ಯ, ದೀನ ಅನಾಥರ ಬಗ್ಗೆ ಕಳಕಳಿ, ಸಹನಶೀಲತೆ, ವ್ಯವಹಾರ ಚಾತುರ್ಯ, ಜನಪ್ರಿಯತೆ, ಸುಮಧುರ ಧ್ವನಿ ಇವು ಮಹಾರಾಜರ ಸಹಜಗುಣಗಳಾಗಿದ್ದವು. ಮುಂದಿನ ವ್ಯಕ್ತಿ ಯಾರೇ ಇರಲಿ, ಅವರು ಅವನಿಗೆ ಅರ್ಥವಾಗುವಂತಹ ಸರಳವಾದ ಭಾಷೆಯಲ್ಲಿ ಮತ್ತು ಬಹಳ ಅರ್ಥಪೂರ್ಣವಾಗಿ ಚಾತುರ್ಯದಿಂದ ಮಾರ್ಗದರ್ಶನವನ್ನು ಮಾಡುತ್ತಿದ್ದರು. ಸಾಮಾನ್ಯ ಜನರೊಂದಿಗೆ ಸರಳವಾಗಿ ಆಡುಭಾಷೆಯಲ್ಲಿ ಸಂವಾದವನ್ನು ಮಾಡುತ್ತಿದ್ದರು. ಹಾಗೆಯೇ ವೇದಾಧ್ಯಯನ ಮಾಡಿದ ಜ್ಞಾನಿಗಳೊಂದಿಗೆ ಚರ್ಚೆ ಮಾಡುವ ಪ್ರಸಂಗ ಬಂದರೆ ಅವರಿಗೂ ವೈದಿಕ ಕರ್ಮಗಳೊಂದಿಗೆ ನಾಮಸ್ಮರಣೆಯನ್ನು ಮಾಡುವುದರ ಬಗ್ಗೆ ತಿಳಿಸಿ ಹೇಳುತ್ತಿದ್ದರು.

ಶ್ರೀರಾಮನೊಂದಿಗೆ ಅವರಿಗಿದ್ದ ಅನನ್ಯಭಾವ ಮತ್ತು ದೃಢ ಶ್ರದ್ಧೆ ಅವರ ನಡವಳಿಕೆಯಿಂದ ಸ್ಪಷ್ಟವಾಗುತ್ತಿತ್ತು. ಈ ಯುಗದಲ್ಲಿ ನಾಮಸ್ಮರಣೆಯ ಮಹತ್ವವನ್ನು ಅವರು ಕಳಕಳಿಯಿಂದ ಮತ್ತು ವಿವಿಧ ಮಾರ್ಗಗಳಿಂದ ಮಾರ್ಮಿಕವಾಗಿ ದಾಖಲೆಗಳೊಂದಿಗೆ ತಿಳಿಸಿ ಹೇಳಿದರು. || ಶ್ರೀರಾಮ ಜಯ ರಾಮ ಜಯ ಜಯ ರಾಮ || ಎನ್ನುವ ಈ ಹದಿಮೂರು ಅಕ್ಷರಗಳ ಮಂತ್ರದ ಮಹತ್ವವನ್ನು ಸಾರುವ ಸಲುವಾಗಿ ಅವರು ಭಜನೆ, ಕೀರ್ತನೆ, ಪ್ರವಚನಗಳು, ಚರ್ಚೆ, ಶಂಕಾನಿರಸನ (ಪ್ರಶ್ನೆಗಳಿಗೆ ಸಮಾಧಾನ) ಮುಂತಾದ ಮಾರ್ಗಗಳನ್ನು ಅವಲಂಬಿಸಿದರು. ಶ್ರೀರಾಮನ ಇಚ್ಛೆಯ ವಿರುದ್ಧವಾಗಿ ಯಾವುದೂ ನಡೆಯುವುದಿಲ್ಲ. ಅಖಂಡವಾಗಿ ರಾಮನಾಮವನ್ನು ಜಪಿಸಿದವರಿಗೆ ಆನಂದ ಲಭಿಸುತ್ತವೆ ಎಂದು ಮಹಾರಾಜರು ಹೇಳುವ ಅನುಭವವು ಅವರ ಸಹವಾಸದಲ್ಲಿ ಬಂದಂತಹ ಪ್ರತಿಯೊಬ್ಬ ಸಾಧಕರೂ ಪಡೆದುಕೊಂಡಿದ್ದಾರೆ.