ಸಂತ ನಿವೃತ್ತಿನಾಥ

ಸಂತ ನಿವೃತ್ತಿನಾಥರು ಸಂತ ಜ್ಞಾನೇಶ್ವರರ ಹಿರಿಯ ಸಹೋದರ ಹಾಗೂ ಗುರುಗಳಾಗಿದ್ದರು. ಸಂಸಾರದಲ್ಲಿ ಮನಸ್ಸು ಒಲಿಯದ ಕಾರಣವಾಗಿ ನಿವೃತ್ತಿನಾಥರ ತಂದೆ ವಿಠ್ಠಲಪಂತರು ಒಂದು ದಿನ ಮನೆಯನ್ನು ತ್ಯಜಿಸಿ ನೇರವಾಗಿ ಕಾಶಿಗೆ ಹೊರಟು ಹೋದರು. ಅಲ್ಲಿ ರಾಮಾನಂದರೆಂಬ ಸದ್ಗುರುಗಳಿದ್ದರು. ವಿಠ್ಠಲಪಂತರು ಅವರಿಂದ ಸನ್ಯಾಸ ದೀಕ್ಷೆಯನ್ನು ಪಡೆದು ಅವರೊಂದಿಗೆ ಅಧ್ಯಯನ ಮಾಡುತ್ತ, ಅವರ ಸೇವೆ ಮಾಡುತ್ತ ಅಲ್ಲಿಯೇ ವಾಸಿಸತೊಡಗಿದರು.

ಮುಂದೆ ಗುರುಗಳ ಆಜ್ಞೆಯಂತೆ ವಿಠ್ಠಲಪಂತರು ಆಳಂದಿಗೆ ಬಂದು ಪುನಃ ಸಂಸಾರವನ್ನು ಪ್ರಾರಂಭಿಸಿದರು. ಅನಂತರ ವಿಠ್ಠಲಪಂತರಿಗೆ ನಾಲ್ಕು ಮಕ್ಕಳಾದರು. ಅವರಲ್ಲಿ ಮೊದಲನೆಯವರು ನಿವೃತ್ತಿನಾಥರು, ಎರಡನೆಯವರು ಜ್ಞಾನೇಶ್ವರರು, ಮೂರನೆಯವರು ಸೋಪಾನದೇವ ಹಾಗೂ ನಾಲ್ಕನೆಯವರು ಮುಕ್ತಾಬಾಯಿ. ವಿಠ್ಠಲಪಂತರು ತಮ್ಮ ಮಕ್ಕಳಿಗೆ ಕಾಲಾನುಸಾರ ಎಲ್ಲವನ್ನೂ ಕಲಿಸಿದರು.

ಒಮ್ಮೆ ವಿಠ್ಠಲಪಂತರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ತ್ರ್ಯಂಬಕೇಶ್ವರದ ಪಕ್ಕದ ಬೆಟ್ಟದ ಮೇಲೆ ಹೋದರು. ಆ ಬೆಟ್ಟದ ಮೇಲೆ ದಟ್ಟವಾದ ಅರಣ್ಯವಿತ್ತು. ಬೆಟ್ಟದ ಮೇಲೆ ಸುತ್ತಾಡುವಾಗ ಒಂದು ಹುಲಿಯು ಅವರ ಬಳಿ ಧಾವಿಸಿ ಬಂತು. ಅದನ್ನು ನೋಡಿ ಎಲ್ಲರೂ ಗಾಬರಿಗೊಂಡರು. ವಿಠ್ಠಲಪಂತರು ಪತ್ನಿ ಹಾಗೂ ಮಕ್ಕಳೊಂದಿಗೆ ಓಡಿ ಆ ಅರಣ್ಯದಿಂದ ಹೊರಬಂದರು, ಆಗ ಅವರಿಗೆ ಹೋದ ಜೀವ ಬಂದಂತಾಯಿತು; ಆದರೆ ನಿವೃತ್ತಿನಾಥ ಎಲ್ಲಿಯೂ ಕಾಣಿಸಲಿಲ್ಲ! ಸಾಕಷ್ಟು ಹುಡುಕಿದರೂ ನಿವೃತ್ತಿನಾಥ ಸಿಗಲಿಲ್ಲ. ಹೀಗೆ ಏಳು ದಿನಗಳು ಕಳೆದವು ಹಾಗೂ ಎಂಟನೆಯ ದಿನ ನಿವೃತ್ತಿನಾಥ ‘ದತ್ತ’ ಎನ್ನುತ್ತ ಎದುರಿಗೆ ಬಂದು ನಿಂತರು. ಎಲ್ಲರಿಗೂ ಬಹಳ ಆನಂದವಾಯಿತು. ಅವರು ಬಹಳ ತೇಜಸ್ವಿಯಾಗಿ ಕಾಣುತ್ತಿದ್ದರು. ವಿಠ್ಠಲಪಂತರು ಅವರಿಗೆ ’ಇಷ್ಟು ದಿನ ನೀನು ಎಲ್ಲಿ ಹೊರಟು ಹೋಗಿದ್ದೆ ?’ ಎಂದು ವಿಚಾರಿಸಿದರು. ಆಗ ನಿವೃತ್ತಿನಾಥ ’ಅಪ್ಪಾಜಿ, ಹುಲಿಗೆ ಹೆದರಿ ಓಡುವಾಗ ನಾನೊಂದು ಗುಹೆಯಲ್ಲಿ ಹೊಕ್ಕೆನು. ಅಲ್ಲಿ ಓರ್ವ ಸ್ವಾಮಿ ಕುಳಿತಿದ್ದರು. ಆ ಕತ್ತಲು ತುಂಬಿದ ಗುಹೆಯಲ್ಲಿಯೂ ನನಗೆ ಅವರ ಕಾಂತಿಯು ಸ್ಪಷ್ಟವಾಗಿ ಕಾಣುತ್ತಿತ್ತು. ಅವರ ಹೆಸರು ಗಹಿನಿನಾಥ ಎಂದಾಗಿತ್ತು. ಅವರು ನನಗೆ ಯೋಗವನ್ನು ಕಲಿಸಿದರು ಹಾಗೂ ’ಈಗ ಜಗತ್ತಿನಲ್ಲಿರುವ ನೊಂದ ಜೀವಿಗಳನ್ನು ನೀನು ಸುಖಿಗೊಳಿಸು’, ಎಂದು ಅವರು ಹೇಳಿದರು” ಎಂದು ಹೇಳಿದರು.

ನಂತರ ಮಕ್ಕಳ ಉಪನಯನ ಮಾಡಿಸುವ ಸಮಯ ಬಂತು. ವಿಠ್ಠಲಪಂತರು ಉಪನಯನ ಮಾಡಲು ಮಕ್ಕಳನ್ನು ಆಳಂದಿಗೆ ಕರೆದುಕೊಂಡು ಬಂದರು; ಆದರೆ ಆಳಂದಿಯ ನಿಷ್ಠುರ ಜನರು ಅವರಿಗೆ ’ನೀವು ಸನ್ಯಾಸದಿಂದ ಮರಳಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿದ್ದೀರಿ. ನಿಮಗೆ ಸಾವಿನ ಪ್ರಾಯಶ್ಚಿತ್ತದ ಹೊರತು ಬೇರೆ ಪ್ರಾಯಶ್ಚಿತ್ತವೇ ಇಲ್ಲ. ಅದನ್ನು ನೀವು ಸ್ವೀಕರಿಸಿದರೆ ಮಾತ್ರ ನಿಮ್ಮ ಮಕ್ಕಳ ಉಪನಯನವಾಗುವುದು’ ಎಂದು ಹೇಳಿದರು. ಈ ಉತ್ತರವನ್ನು ಕೇಳಿ ವಿಠ್ಠಲಪಂತರು ಮನೆಗೆ ಬಂದರು. ವಿಠ್ಠಲಪಂತರು ಹಾಗೂ ರುಕ್ಮಿಣಿಬಾಯಿ ಮಕ್ಕಳು ಗಾಢ ನಿದ್ರೆಯಲ್ಲಿರುವಾಗ ಮನೆ ಬಿಟ್ಟು ನೇರವಾಗಿ ಪ್ರಯಾಗಕ್ಕೆ ಹೋದರು ಹಾಗೂ ಅಲ್ಲಿ ಗಂಗಾನದಿಯಲ್ಲಿ ಜಲಸಮಾಧಿ ಪಡೆದರು.

ಮಾರನೆಯ ದಿನ ಮಕ್ಕಳು ಎದ್ದಾಗ ಅವರಿಗೆ ತಮ್ಮ ತಂದೆ-ತಾಯಿಯರು ಮನೆಬಿಟ್ಟು ಹೊರಟು ಹೋದ ಸಂಗತಿ ತಿಳಿಯಿತು. ಅವರಿಗಿದ್ದ ಆಧಾರವೇ ವಿಧಿ ಕಸಿದುಕೊಂಡಿತ್ತು. ಎಲ್ಲ ಭಾರವು ನಿವೃತ್ತಿನಾಥರ ಮೇಲೆ ಬಂದಿತು. ನಿವೃತ್ತಿನಾಥರು ಜ್ಞಾನದೇವ, ಸೋಪಾನದೇವ ಹಾಗೂ ಮುಕ್ತಾಯಿಯರನ್ನು ತಂದೆ ತಾಯಿಯಂತೆ ವಾತ್ಸಲ್ಯದಿಂದ ಬೆಳೆಸಿದರು.

ಮುಂದೆ ಗುರು ನಿವೃತ್ತಿನಾಥರ ಆಜ್ಞೆಯಂತೆ ಜ್ಞಾನೇಶ್ವರರು ಸಂಸ್ಕೃತ ಭಾಷೆಯ ಶ್ರೀಮದ ಭಗವದ್ಗೀತೆಯನ್ನು ಸಂಮಾನ್ಯ ಜನರಿಗೆ ತಿಳಿಯುವಂತೆ ಮರಾಠಿ ಭಾಷೆಯಲ್ಲಿ ‘ಜ್ಞಾನೇಶ್ವರಿ’ ಎಂಬ ಅಪ್ರತಿಮವಾದ ಗ್ರಂಥವನ್ನು ಬರೆದರು. ಅನಂತರ ಅವರು ‘ಅಮೃತಾನುಭವ’ಎಂಬ ಗ್ರಂಥವನ್ನು ಬರೆದರು. ಇದರಲ್ಲಿ ಹತ್ತು ಅಧ್ಯಾಯಗಳಿದ್ದು ಸುಮಾರು ಏಳರಿಂದ ಎಂಟುನೂರು ಸಾಲುಗಳಿವೆ; ಆದರೆ ಅದರಲ್ಲಿ ಗಹನವಾದ ಆಧ್ಯಾತ್ಮಿಕ ಅನುಭವ ತುಂಬಿದೆ. ಇದು ಜಗತ್ತಿನ ತತ್ತ್ವಜ್ಞಾನದಲ್ಲಿನ ಒಂದು ಅಪೂರ್ವ ಗ್ರಂಥವಾಗಿದೆ.

ಮಕ್ಕಳೇ, ಚಿಕ್ಕ ವಯಸ್ಸಿನಲ್ಲಿಯೇ ನಿವೃತ್ತಿನಾಥರ ತಂದೆ ತಾಯಿ ಮನೆ ಬಿಟ್ಟು ಹೊರಟು ಹೋದರು. ಆದರೂ ಅವರು ತಮ್ಮ ತಮ್ಮ-ತಂಗಿಯರನ್ನು ತಂದೆ ತಾಯಿಯ ವಾತ್ಸಲ್ಯದಿಂದ ಜೋಪಾನ ಮಾಡಿದರು. ಇದು ಕೇವಲ ಸಾಧನೆಯಬಲದಿಂದಲೇ ಸಾಧ್ಯವಾಯಿತು. ಇದರಿಂದ ’ಸಾಧನೆ ಮಾಡುವುದು ಎಷ್ಟು ಅವಶ್ಯಕವಾಗಿದೆ’ ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು.

Leave a Comment