ಧನತ್ರಯೋದಶಿ (ಆಶ್ವಯುಜ ಕೃಷ್ಣ ತ್ರಯೋದಶಿ)

ಧನತ್ರಯೋದಶಿಯನ್ನು ಆಡು ಭಾಷೆಯಲ್ಲಿ ಧಂತೇರಾ ಎಂದು ಕರೆಯುತ್ತಾರೆ. ಈ ದಿನದಂದು ವ್ಯಾಪಾರಿಗಳು ತಮ್ಮ ಖಜಾನೆಯ ಪೂಜೆಯನ್ನು ಮಾಡುತ್ತಾರೆ. ವ್ಯಾಪಾರಿಗಳ ಆರ್ಥಿಕ ವರ್ಷ ದೀಪಾವಳಿಯಿಂದ ದೀಪಾವಳಿಯವರೆಗೆ ಇರುತ್ತದೆ. ಹೊಸ ವರ್ಷಕ್ಕೆ ಸಂಬಂಧಿಸಿದ ಲೆಕ್ಕ ಪುಸ್ತಕಗಳನ್ನು ಇಂದು ತರುತ್ತಾರೆ.

ಧನ್ವಂತರಿ ಜಯಂತಿ

ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ. ವೈದ್ಯರು ಈ ದಿನ ಧನ್ವಂತರಿಯನ್ನು (ದೇವರ ವೈದ್ಯ) ಪೂಜಿಸುತ್ತಾರೆ. ಬೇವಿನ ಎಲೆಯ ಮತ್ತು ಸಕ್ಕರೆಯನೈವೇದ್ಯವನ್ನು ತಯಾರಿಸಿ, ಪ್ರಸಾದವೆಂದು ಕೊಡುತ್ತಾರೆ. ಇದಕ್ಕೆ ಬಹಳ ಅರ್ಥವಿದೆ. ಸಮುದ್ರ ಮಂಥನದ ಸಮಯದಲ್ಲಿ ಬೇವಿನ ಉತ್ಪತ್ತಿಯು ಅಮೃತದಿಂದಲೇ ಆಯಿತು ಎಂದು ಹೇಳುತ್ತಾರೆ. ಧನ್ವಂತರಿಯು ಅಮೃತತ್ತ್ವವನ್ನು ಕೊಡುವವನಾಗಿದ್ದಾನೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದುದರಿಂದ ಈ ದಿನ ಬೇವನ್ನು ಧನ್ವಂತರಿಯ ಪ್ರಸಾದವೆಂದು ಕೊಡುತ್ತಾರೆ.

ಯಮದೀಪದಾನ

ಪ್ರಾಣಹರಣ ಮಾಡುವ ಅಧಿಕಾರವು ಯಮರಾಜನದ್ದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಸಾಧ್ಯವಿಲ್ಲ. ಆದರೆ ಅಕಾಲ ಮೃತ್ಯು ಬರಬಾರದೆಂದು ಯಮಧರ್ಮರಾಯನ ಪ್ರೀತ್ಯರ್ಥವಾಗಿ ಧನತ್ರಯೋದಶಿಯಂದು ಗೋಧಿಹಿಟ್ಟಿನ ಕಣಕದಿಂದ ಹದಿಮೂರು ಎಣ್ಣೆಯ ದೀಪಗಳನ್ನು ತಯಾರಿಸಿ ಸಾಯಂಕಾಲದ ಸಮಯದಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿ ಇಡುತ್ತಾರೆ. ಸಾಮಾನ್ಯವಾಗಿ ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡುತ್ತಾರೆ. ಮುಂದಿನ ಮಂತ್ರದಿಂದ ಪ್ರಾರ್ಥನೆ ಮಾಡುತ್ತಾರೆ :

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಸಹ |
ತ್ರಯೋದಶ್ಯಾಂದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ ||

ಅರ್ಥ: ಈ ಹದಿಮೂರು ದೀಪಗಳನ್ನು ನಾನು ಸೂರ್ಯಪುತ್ರನಿಗೆ ಅರ್ಪಿಸುತ್ತೇನೆ. ಆತನು ನನ್ನನ್ನು ಮೃತ್ಯು ಪಾಶದಿಂದ ಬಿಡಿಸಲಿ ಮತ್ತು ನನ್ನ ಕಲ್ಯಾಣ ಮಾಡಲಿ.

Leave a Comment