ಗೋವತ್ಸದ್ವಾದಶಿ/ಗುರುದ್ವಾದಶಿ




ಗೋವತ್ಸದ್ವಾದಶಿ ವ್ರತ

ಆಶ್ವಯುಜ ಕೃಷ್ಣ ದ್ವಾದಶಿಯನ್ನು ಗೋವತ್ಸದ್ವಾದಶಿ ಅಥವಾ ಗುರುದ್ವಾದಶಿ ಎಂದು ಹೇಳುತ್ತಾರೆ. ಸಮುದ್ರ ಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎಂಬ ಕಥೆಯಿದೆ. ಅದರಲ್ಲಿ ’ನಂದಾ’ ಎಂಬ ಹೆಸರಿನ ಕಾಮಧೇನುವನ್ನು ಉದ್ದೇಶಿಸಿ ಈ ವ್ರತವನ್ನು ಆಚರಿಸಲಾಗುತ್ತದೆ. ಈ ದಿನದಂದು ಸೌಭಾಗ್ಯವತಿ ಸ್ತ್ರೀಯರು ಏಕಭುಕ್ತರಾಗಿದ್ದು ಬೆಳಿಗ್ಗೆ ಅಥವಾ ಸಂಜೆ ಕರುವಿನೊಂದಿಗೆ ಗೋವಿನ ಪೂಜೆಯನ್ನು ಮಾಡುತ್ತಾರೆ.

ಗೋವತ್ಸದ್ವಾದಶಿಯ ಮಹತ್ವ

೧. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಬಹಳ ಮಹತ್ವವಿದೆ. ಅವಳಿಗೆ ಮಾತೆ ಎಂದೂ ಕರೆಯುತ್ತಾರೆ. ಅವಳು ಸಾತ್ತ್ವಿಕವಾಗಿರುವುದರಿಂದ ಎಲ್ಲರೂ ಈ ಪೂಜೆಯ ಮಾಧ್ಯಮದಿಂದ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸಬೇಕಿದೆ.

೨. ಈ ದಿನದಂದು, ತನ್ನ ಸಹವಾಸದಿಂದ ಇತರರನ್ನು ಪಾವನಗೊಳಿಸುವ, ತನ್ನ ಹಾಲಿನಿಂದ ಸಮಾಜವನ್ನು ಬಲಿಷ್ಟಗೊಳಿಸುವ, ತನ್ನ ಅಂಗ ಪ್ರತ್ಯಂಗವನ್ನು ಅರ್ಪಿಸಿ ಸಮಾಜಕ್ಕೆ ಉಪಯೋಗಿಯಾಗುವ, ತನ್ನ ಸೆಗಣಿಯಿಂದ ಹೊಲಕ್ಕೆ ಗೊಬ್ಬರವನ್ನು ನೀಡಿ ಪೌಷ್ಟಿಕಾಂಶವನ್ನು ನೀಡುವ, ಹೊಲವನ್ನು ಉಳಲು ಉಪಯುಕ್ತವಾಗಿರುವ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ಅವಳಲ್ಲಿ ವಾಸಿಸುವಷ್ಟು ಯೋಗ್ಯತೆಯುಳ್ಳ, ಸತ್ತ್ವಗುಣಿ ಗೋಮಾತೆಯನ್ನು ಪೂಜಿಸುತ್ತಾರೆ. ಯಾವ ಜಾಗದಲ್ಲಿ ಗೋಮಾತೆಯ ಸಂರಕ್ಷಣೆ ಸಂವರ್ಧನೆಯಾಗಿ ಅವಳಿಗೆ ಪೂಜ್ಯ ಭಾವನೆಯಿಂದ ಪೂಜಿಸಲಾಗುತ್ತದೆಯೋ ಆ ಜಾಗ, ಆ ವ್ಯಕ್ತಿ, ಆ ಸಮಾಜ, ಆ ರಾಷ್ಟ್ರ ಸಂಪದ್ಭರಿತವಾಗದೇ ಇರಲಾರದು. ಇಂತಹ ಗೋಮಾತೆಯನ್ನು ಅವಳ ಕರುಗಳೊಂದಿಗೆ ಪೂಜಿಸಿ ದೀಪೋತ್ಸವವನ್ನು ಪ್ರಾರಂಭಿಸಲಾಗುತ್ತದೆ.

ಗುರುದ್ವಾದಶಿ

ಈ ದಿನದಿಂದು ಶಿಷ್ಯರು ಗುರುಗಳ ಪೂಜೆಯನ್ನು ಮಾಡುವುದರಿಂದ ಈ ತಿಥಿಯನ್ನು ಗುರುದ್ವಾದಶಿ ಎಂದೂ ಹೇಳಲಾಗುತ್ತದೆ.
ಅ. ಗುರುದ್ವಾದಶಿಯ ದಿನದಂದು ಬ್ರಹ್ಮಾಂಡದಲ್ಲಿ ಗುರುತತ್ತ್ವವು ಪ್ರಕ್ಷೇಪಿತವಾಗುವುದು
ಆ. ಮಹತ್ತ್ವ : ಪ್ರತಿಯೊಬ್ಬ ಸಾಧಕ ಅಥವಾ ಶಿಷ್ಯನಿಗೆ ’ಗುರುದ್ವಾದಶಿ’ಯು ದೀಪಾವಳಿಯ ಇತರ ದಿನಗಳಿಗಿಂತ ಅತ್ಯಂತ ಮಹತ್ತ್ವದ ದಿನವಾಗಿದೆ.

೧. ಈ ದಿನದಂದು ಶಿಷ್ಯನು ತನ್ನ ಗುರುಗಳನ್ನು ತಳಮಳದಿಂದ ಕರೆದರೆ ಅದು ಗುರುಗಳವರೆಗೆ ತಲುಪುತ್ತದೆ; ಏಕೆಂದರೆ ಈ ದಿನದಂದು ವಾತಾವರಣವು ಗುರುತತ್ತ್ವಮಯವಾಗಿರುತ್ತದೆ.
೨. ಈ ದಿನದಂದು ಗುರುಗಳು ಶಿಷ್ಯಪದವಿಯನ್ನು ಸಮೀಪಿಸಿದ ಪ್ರತಿಯೊಬ್ಬ ಸಾಧಕನಿಗೆ ಶಿಷ್ಯತ್ವವನ್ನು ಪ್ರದಾನಿಸುತ್ತಾರೆ.