ಬಲಿಪಾಡ್ಯಮಿ (ಕಾರ್ತಿಕ ಶುದ್ಧ ಪ್ರತಿಪದಾ)

ನರಕಚತುರ್ದಶಿಯ ಎರಡನೇ ದಿವಸ ಬಲಿಪಾಡ್ಯಮಿ. ಈ ದಿವಸ ಜನರೆಲ್ಲರೂ ಬಲೀಂದ್ರ ಪೂಜೆಯನ್ನು ಮಾಡುತ್ತಾರೆ. ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದ. ಆತನು ಮಹಾ ವಿಷ್ಣುಭಕ್ತ. ಆತನ ಮಗ ವಿರೋಚನ. ವಿರೋಚನನ ಪುತ್ರನೇ ಬಲಿಚಕ್ರವರ್ತಿ. ಈತನು ಕೂಡಾ ವಿಷ್ಣುಭಕ್ತನೇ. ಈತನ ರಾಜ್ಯವು ಸುಭಿಕ್ಷವಾಗಿತ್ತು. ಅವನು ರಾಕ್ಷಸ ಕುಲದಲ್ಲಿ ಹುಟ್ಟಿಯೂ ಕೂಡ ಸಾತ್ವಿಕನಾಗಿದ್ದನು. ಮಹಾ ದಾನಿಯಾಗಿದ್ದ ರಾಜನು, ಜನರ ಸೇವೆಯೇ ವಿಷ್ಣುವಿನ ಸೇವೆಯೆಂದು ರಾಜ್ಯವನ್ನು ಆಳುತ್ತಿದ್ದನು. ಅಂದರೆ, ಮನುಷ್ಯನು ಮೊದಮೊದಲಿಗೆ ಅಜ್ಞಾನದಿಂದ ತಪ್ಪುಗಳನ್ನು ಮಾಡಿದರೂ ಕೂಡ ಮುಂದೆ ಜ್ಞಾನ ಸಂಪಾದನೆ ಮತ್ತು ಈಶ್ವರನ ಕೃಪೆಯಿಂದ ದೇವತ್ವದೆಡೆಗೆ ಹೋಗಬಹುದು ಎಂಬುದಕ್ಕೆ ಬಲಿರಾಜನು ಒಂದು ಉದಾಹರಣೆ.

ಬಲಿರಾಜನ ಕಥೆ

ಮೂರುವರೆ ಶುಭ ಮುಹೂರ್ತಗಳಲ್ಲಿ ಇದು 'ಅರ್ಧ' ಮುಹೂರ್ತು. ಅವನ ಕಥೆ ಮುಂದಿನಂತಿದೆ. ಬಲಿರಾಜನು ಅತ್ಯಂತ ದಾನಶೂರನಾಗಿದ್ದಾನೆ. ಯಾರೇ ಬರಲಿ, ಏನೆ ಯಾಚಿಸಲಿ ಬಂದವರಿಗೆಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡುತ್ತಿದ್ದನು. ಇತ್ತ ಶುಕ್ರಚಾರ್ಯರು ಈತನಿಗೆ ಈ ಕೆಲಸ ಮಾಡಬೇಡ ಎಂಬುದಾಗಿ ಸಲಹೆಯಿತ್ತರು. ಏಕೆಂದರೆ, ದಾನ ಮಾಡುವುದ ಶ್ರೇಷ್ಠ ಆದರೆ ಅಪಾತ್ರ ದಾನ ಪಾಪವಾಗಿದೆ. ಆದರೆ ಅವರ ಈ ಮಾತಿಗೆ ಬಲಿಚಕ್ರವರ್ತಿ ಬೆಲೆ ಕೊಡಲಿಲ್ಲ, ಅಪಾತ್ರರಿಗೆ ತನ್ನ ಸಂಪತ್ತನ್ನು ದಾನ ಮಾಡುತ್ತಾ ಹೋದನು. ಅಶ್ವಮೇಧ ಯಾಗ ನಡೆಯುತ್ತಿತ್ತು. ಬಂದವರಿಗೆಲ್ಲಾ ದಾನ ನೀಡಲಾಯಿತು. ಇದೇ ಸಮಯದಲ್ಲಿ ವಾಮನ ರೂಪವನ್ನು ತಾಳಿ ಶ್ರೀ ವಿಷ್ಣು ಯಾಗ ನಡೆಯುವ ಸ್ಥಳಕ್ಕೆ ಬಂದನು. ಬಂದವನೇ ತನಗೆ ದಾನ ನೀಡಬೇಕೆಂದು ಕೇಳಿಕೊಂಡನು.

ದಾನ ನೀಡುವ ಮೊದಲು ಸಂಪ್ರೋಕ್ಷಣೆ ಬಿಡುವ ಪದ್ಧತಿಯಿದೆ. ಅಂದರೆ ತಮ್ಮ ಕಮಂಡಲದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ದಾನ ಕೊಡುವವರ ಕೈಗೆ ಹಾಕಲಾಗುವುದು. ಈ ಸಮಯದಲ್ಲಿ ಶುಕ್ರಾಚಾರ್ಯರು ಬಲಿಚಕ್ರವರ್ತಿಯನ್ನು ಉಳಿಸುವ ಸಲುವಾಗಿ ಕಪ್ಪೆರೂಪ ತಾಳಿ ಕಮಂಡಲದ ರಂಧ್ರದಲ್ಲಿ ಸೇರಿಕೊಂಡರು. ಹಾಗಾಗಿ ಸಂಪ್ರೋಕ್ಷಣೆ ಮಾಡಬೇಕಾದರೆ ನೀರು ಬೀಳುತ್ತಿರಲಿಲ್ಲ. ಶುಕ್ರಾಚಾರ್ಯರ ಉಪಾಯವನ್ನು ಅರಿತ ವಿಷ್ಣು ಪರಮಾತ್ಮ ದರ್ಭೆಯನ್ನು ತೆಗೆದುಕೊಂಡು ಬಲಿಚಕ್ರವರ್ತಿಯಲ್ಲಿ ಏನೋ ಕಸ ಸಿಕ್ಕಿಕೊಂಡಂತಿದೆ ಅದನ್ನು ತೆಗೆಯುತ್ತೇನೆ ಎಂದು ಕಮಂಡಲದ ನಾಳಕ್ಕೆ ಚುಚ್ಚಿದನು. ಅದು ಕಪ್ಪೆಯ ಕಣ್ಣನ್ನು ಚುಚ್ಚಿತು. ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು. ಸಂಪ್ರೋಕ್ಷಣೆ ಸರಾಗವಾಗಿ ನೆರವೇರಿತು.

ಮುಂದೆ ಬಲಿಚಕ್ರವರ್ತಿ ತಮಗೇನು ನೀಡಬೇಕೆಂದು ವಾಮನನಲ್ಲಿ ಕೇಳಿಕೊಂಡನು. ಆಗ ವಾಮನನು ನನಗೆ ಮೂರು ಹೆಜ್ಜೆ ಜಾಗ ನೀಡಿದರೆ ಸಾಕು ಎಂದು ಹೇಳಿದನು. ಸರಿ ಎಂದು ಬಲಿಚಕ್ರವರ್ತಿ ನಿನ್ನ ಜಾಗವನ್ನು ತೆಗೆದುಕೋ ಎಂದನು. ಬಲಿಯು ಹೇಳಿದ ನಂತರ ವಾಮನನು ನೋಡುತ್ತಿದ್ದಂತೆ ತ್ರಿವಿಕ್ರಮನಾದನು. ತ್ರಿವಿಕ್ರಮ ಎಂದರೆ ಬಹಳ ಅಗಲವಾದ ಪಾದಗಳುಳ್ಳವ ಎಂದರ್ಥ. ತ್ರಿವಿಕ್ರಮನ ಒಂದನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ಬೇರೇನೂ ತೋಚದ ಬಲಿ, ತನ್ನ ತಲೆಯ ಮೇಲಿಡುವಂತೆ ಕೇಳಿಕೊಂಡನು. ಮೂರನೇ ಹೆಜ್ಜೆಯನ್ನು ಆತನ ತಲೆ ಮೇಲಿಟ್ಟು ತ್ರಿವಿಕ್ರಮನು ಬಲಿಚಕ್ರವರ್ತಿಯನ್ನು ಪಾತಾಳಲೋಕಕ್ಕೆ ತಳ್ಳಿದನು.

ವಿಷ್ಣು ಭಕ್ತನಾದ ಬಲಿಚಕ್ರವರ್ತಿಗೆ ವಿಷ್ಣುವು ಒಂದು ವರ ನೀಡಿದನು. ಅದೇನೆಂದರೆ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಈ ಮೂರು ದಿನಗಳು ಯಾವ್ಯಾವುವು? ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ. ಇದನ್ನು ಬಲಿರಾಜ್ಯವೆಂದು ಹೇಳುತ್ತಾರೆ. ಈ ಸಮಯದಲ್ಲಿ ಧರ್ಮಶಾಸ್ತ್ರದಲ್ಲಿ ನಿಷಿದ್ಧ ಕಾರ್ಯಗಳನ್ನು ಬಿಟ್ಟು, ಮನುಷ್ಯರು ತಮ್ಮ ಮನಸ್ಸಿಗೆ ಬಂದ ವಿಚಾರಗಳನ್ನು ಮುಕ್ತವಾಗಿ ಮಾಡಬಹುದು ಎಂದು ಹೇಳಲಾಗಿದೆ. ಆದುದರಿಂದ ಶಾಸ್ತ್ರಗಳಲ್ಲಿ ಪರವಾನಿಗೆ ಸಿಕ್ಕಿದೆ ಎಂದು ಅನೇಕರು ಮೋಜು ಮಾಡುತ್ತಾರೆ ! ಬಲಿಪಾಡ್ಯಮಿಯಂದು ಪಂಚರಂಗದ ರಂಗೋಲಿಯ ಬಲಿ ಚಕ್ರವರ್ತಿ ಮತ್ತು ಅವನ ಪತ್ನಿ ವಿದ್ಯಾವಲೀಯ ಚಿತ್ರಗಳನ್ನು ನೆಲದ ಮೇಲೆ ಬಿಡಿಸ ಅವರನ್ನು ಪೂಜಿಸುತ್ತಾರೆ. ಅವರಿಗೆ ನೈವೇದ್ಯವನ್ನು ಆರ್ಪಿಸುತ್ತಾರೆ. ನಂತರ ಬಲಿಪ್ರೀತ್ಯರ್ಥ ದೀಪ ಮತ್ತು ವಸ್ತ್ರದ ದಾನವನ್ನು ಮಾಡುತ್ತಾರೆ.

ಈ ದಿನ, ಸ್ತ್ರೀಯು ಪ್ರಾತಃಕಾಲದಲ್ಲಿ ಎದ್ದು, ಅಭ್ಯಂಗ ಸ್ನಾನ ಮಾಡಿ ತನ್ನ ಗಂಡನಿಗೆ ಆರತಿಯನ್ನು ಬೆಳಗುತ್ತಾಳೆ. ನಂತರ ವಿಶೇಷ ಊಟದ ವ್ಯವಸ್ಥೆ ಇರುತ್ತದೆ. ದೀಪಾವಳಿಯ ದಿನಗಳಲ್ಲಿ ಇದೊಂದು ಪ್ರಮುಖ ದಿನವಾಗಿದೆ. ಈ ದಿನದಂದು ಜನರು ಹೊಸ ಹೊಸ ಬಟ್ಟೆಗಳನ್ನು ಖರೀದಿಸಿ ಹಾಕಿಕೊಳ್ಳುತ್ತಾರೆ. ಈ ದಿನದಂದು ಗೋವರ್ಧನ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಸೆಗಣಿಯ ಪರ್ವತವನ್ನು ಮಾಡಿ ಅದರ ಮೇಲೆ ದೂರ್ವೆ ಹೂವುಗಳನ್ನು ಆಲ್ಲಲ್ಲಿ ಸಿಕ್ಕಿಸಿ, ಅದರ ಸುತ್ತ ಕೃಷ್ಣ, ಗೋಪ-ಗೋಪಿಯರ, ಇಂದ್ರ, ಹಸುಗಳ, ಕರುಗಳ ಚಿತ್ರಗಳನ್ನು ಜೋಡಿಸ ಇಡುತ್ತಾರೆ ಮತ್ತು ಮೆರವಣಿಗೆಗಳನ್ನು ಮಾಡುತ್ತಾರೆ.

Leave a Comment