ತುಳಸೀ ವಿವಾಹ


ತುಳಸಿ ವಿವಾಹದ ವಿಧಿ

ವಿಷ್ಣು (ಬಾಲ ಕೃಷ್ಣನ ಮೂರ್ತಿ) ಮತ್ತು ತುಳಸಿಯ ವಿವಾಹ ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ಹಿಂದಿನ ಕಾಲದಲ್ಲಿ ಬಾಲ ವಿವಾಹದ ಪದ್ಧತಿ ಇತ್ತು. ಈ ವಿಧಿಯನ್ನು ಕಾರ್ತಿಕ ಶುದ್ಧ ಏಕಾದಶಿಯಿಂದ ಹುಣ್ಣಿಮೆಯವರೆಗೆ ನಿಗದಿತ ದಿನ ಮಾಡುತ್ತಾರೆ. ಇದನ್ನು ಮಾಡುವ ಹಿಂದಿನ ದಿವಸ ತುಳಸೀ ವೃಂದಾವನವನ್ನು ಸ್ವಚ್ಚಗೊಳಿಸಿ, ಬಣ್ಣ ಹಚ್ಚಿ ಶೃಂಗರಿಸುತ್ತಾರೆ. ವೃಂದಾವನದಲ್ಲಿ ಕಬ್ಬು, ಚೆಂಡು ಹೂವು, ಹುಣಸೆ ಹಣ್ಣು, ನೆಲ್ಲಿಕಾಯಿ ಇವುಗಳನ್ನು ಇಡುತ್ತಾರೆ. ಈ ವಿವಾಹ ಸಮಾರಂಭವನ್ನು ಸಂಜೆಯ ಸಮಯದಲ್ಲಿ ನೆರವೇರಿಸುತ್ತಾರೆ.

ತುಳಸಿ ಮತ್ತು ಶ್ರೀಕೃಷ್ಣನ ವಿವಾಹಶಾಸ್ತ್ರದ ಭಾವಾರ್ಥ

ತುಳಸಿಯೆಂದರೆ ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕ. ತುಳಸಿ ಮತ್ತು ಶ್ರೀಕೃಷ್ಣನ ವಿವಾಹವಾಗುವುದು ಎಂದರೆ ಈಶ್ವರನಿಗೆ ಜೀವದಲ್ಲಿರುವ 'ಪಾವಿತ್ರ್ಯ' ಎಂಬ ಗುಣವು ಅತಿಯಾಗಿ ಪ್ರಿಯವಾಗಿರುವುದು. ಇದರ ಪ್ರತೀಕವೆಂದು ಶ್ರೀಕೃಷ್ಣನು 'ವೈಜಯಂತಿ ಮಾಲೆಯನ್ನು' ಧರಿಸಿರುತ್ತಾನೆ.

ಮಹತ್ವ : ಈ ದಿನದಿಂದ ಶುಭ ದಿನಗಳು ಅಂದರೆ ಮುಹೂರ್ತಗಳು ಉಳ್ಳ ದಿನಗಳ ಪ್ರಾರಂಭವಾಗುತ್ತದೆ. 'ಈ ವಿವಾಹವು ಭಾರತೀಯ ಸಂಸ್ಕೃತಿಯ ಆದರ್ಶತ್ವವನ್ನು ದರ್ಶಿಸುವ ವಿವಾಹವಾಗಿದೆ' ಎಂದು ನಂಬಿಕೆಯಿದೆ.

ಪದ್ಧತಿ : ಮನೆಯ ಅಂಗಳವನ್ನು ಸೆಗಣಿ ನೀರಿನಿಂದ ಸ್ವಚ್ಚಗೊಳಿಸಬೇಕು. ತುಳಸಿ ಗಿಡವನ್ನು ನೆಟ್ಟಿದ ಮಡಿಕೆ ಅಥವಾ ವೃಂದಾವನಕ್ಕೆ ಬಿಳಿ ಬಣ್ಣವನ್ನು ಹಚ್ಚಬೇಕು. ಈಶ್ವರನ ಕಡೆಯಿಂದ ಪ್ರಕ್ಷೇಪಿಸುವ ಶಕ್ತಿಯನ್ನು ಬಿಳಿ ಬಣ್ಣವು ತನ್ನತ್ತ ಆಕರ್ಷಿಸುತ್ತದೆ. ತುಳಸಿಯ ಸುತ್ತ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ನಂತರ ಭಾವಪೂರ್ಣವಾಗಿ ತುಳಸಿಯ ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡುವಾಗ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು.

ಪ್ರಾರ್ಥನೆ : ಹೇ ಶ್ರೀ ಕೃಷ್ಣಾ, ಹೇ ತುಳಸಿ ದೇವೀ, ಇಂದಿನ ದಿವಸ ನಿಮ್ಮಿಂದ ನಮಗೆ ದೊರಕುವ ಶಕ್ತಿಯು ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಉಪಯುಕ್ತವಾಗಲಿ. ಆಪತ್ತು ಬಂದಾಗ ನಿರಾಶರಾಗದೆ, ಈಶ್ವರನ ಮೇಲೆ ನಮಗೆ ಅಖಂಡ ಶ್ರದ್ಧೆ ಮತ್ತು ಭಕ್ತಿಯಿರಲಿ.

ನಾಮಜಪ : ಈ ದಿನದಂದು ಕೃಷ್ಣ ತತ್ವವು ಪೃಥ್ವಿಯ ಮೇಲೆ ಹೆಚ್ಚು ಕಾರ್ಯರತವಾಗಿರುತ್ತದೆ. ತುಳಸಿಯ ಗಿಡದಿಂದಲೂ ಹೆಚ್ಚು ಪ್ರಮಾಣದಲ್ಲಿ ಕೃಷ್ಣ ತತ್ವವು ಕಾರ್ಯರತವಾಗಿರುತ್ತದೆ. ಆದುದರಿಂದ ಈ ದಿನ ಶ್ರೀ ಕೃಷ್ಣನ ನಾಮವನ್ನು ಜಪಿಸಬೇಕು. ಪೂಜೆಯಾದ ನಂತರ ವಾತಾವರಣ ತುಂಬಾ ಸಾತ್ವಿಕವಾಗುತ್ತದೆ. ಈ ಸಮಯದಲ್ಲಿ ಶ್ರೀಕೃಷ್ಣನ ನಾಮಜಪ ಮಾಡಬೇಕು.

ತುಳಸಿಯ ವೈಶಿಷ್ಟ್ಯಗಳು : ತುಳಸಿಯು ಸಾತ್ವಿಕವಾಗಿರುವುದರಿಂದ ತುಳಸೀ ಗಿಡದತ್ತ ಈಶ್ವರನ ಶಕ್ತಿಯು ಹೆಚ್ಚು ಪ್ರಮಾಣದಳಲ್ಲಿ ಆಕರ್ಶಿತವಾಗುತ್ತದೆ. ತುಳಸಿಯ ಎಲೆಗಳನ್ನು ಕುಡಿಯುವ ನೀರಿನಲ್ಲಿ ಹಾಕಿದರೆ ಆ ನೀರು ಶುದ್ಧ ಮತ್ತು ಸಾತ್ವಿಕ ಮಾತ್ರವಲ್ಲದೆ ಅದರಲ್ಲಿ ಶಕ್ತಿಯೂ ಸಮ್ಮಿಲಿತವಾಗುತ್ತದೆ.

ದೇವದೀಪಾವಳಿ

ಕುಲದೇವತೆಗಳು, ಇಷ್ಟ ದೇವತೆಗಳ ಹಾಗೆ ಇತರ ದೇವತೆಗಳಿಗೂ ಕೂಡ ವರ್ಷದಲ್ಲಿ ಒಂದು ದಿನ ಪೂಜಿಸಿ, ಸತ್ಕರಿಸಿ ನೈವೇದ್ಯ ಅರ್ಪಿಸುವುದು ಅವಶ್ಯಕವಾಗಿದೆ. ಮಾರ್ಗಶಿರ ಶುಕ್ಲ ಪಕ್ಷ ಪಾಡ್ಯದಂದು ನಮ್ಮ ಕುಲದೇವತೆ, ಇಷ್ಟದೇವತೆ, ಸ್ಥಾನ ದೇವತೆ, ವಾಸ್ತು ದೇವತೆ, ಗ್ರಾಮ ದೇವತೆ ಮತ್ತು ನಮ್ಮ ಊರಿನ ಮುಖ್ಯ ಮತ್ತು ಉಪ ದೇವತೆಗಳಿಗೆ, ಮಹಾ ಪುರುಷರಿಗೆ, ನಿಮ್ನಸ್ತರದ ದೇವತೆಗಳನ್ನು ಸತ್ಕರಿಸಿ ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತಾರೆ. ಈ ದಿನದಂದು ಅನೇಕ ಭಕ್ಷ್ಯಗಳ ಮಹಾನೈವೇದ್ಯವನ್ನು ಅರ್ಪಿಸುತ್ತಾರೆ.