ಸಹೋದರ ಬಿದಿಗೆ (ಯಮದ್ವಿತೀಯಾ)

ಅರ್ಥ

ಶರದ್ ಋತುವಿನ ಕಾರ್ತಿಕ ಮಾಸದ ದ್ವಿತೀಯ ದಿನವಿದು. ದ್ವಿತೀಯದ ಚಂದ್ರನು ಆಕರ್ಷಕ ಮತ್ತು ವೃದ್ಧಿಯ ಸಂಕೇತವಾಗಿದ್ದಾನೆ. ವರ್ಧಿಸುವ ಚಂದ್ರನ ಹಾಗೆ ಬಂಧುಗಳಿಗಿರುವ ಪ್ರೀತಿಯಲ್ಲಿಯೂ ವೃದ್ಧಿಯಾಗಬೇಕು. ಆದುದರಿಂದ ನಮ್ಮ ಮನಸ್ಸಿನಲ್ಲಿರುವ ದ್ವೇಷ ಮತ್ತು ಅಸೂಯೆಯ ದುರ್ಗುಣಗಳ ನಾಶವಾದರೆ ಎಲ್ಲೆಡೆ ಸಹೋದರತ್ವದ ಪರಿಕಲ್ಪನೆ ಜಾಗೃತವಾಗುತ್ತದೆ, ಎಂಬ ಉದ್ದೇಶದಿಂದ ಸಹೋದರ ಬಿದಿಗೆಯನ್ನು ಆಚರಿಸುತ್ತೇವೆ. ಸಹೋದರ ಸಹೋದರಿಯ ಪ್ರೇಮವನ್ನು ಹೆಚ್ಚಿಸಲು ಇರುವ ದಿನವಿದು. ಯಾವ ಸಮಾಜದಲ್ಲಿ ಭಗಿನಿಯರು ನಿರ್ಭಯತೆಯಿಂದ ಓಡಾಡುತ್ತಾರೆ, ಮತ್ತು ಅವರನ್ನು ಎಲ್ಲ ಪುರುಷರು ಸಹೋದರಿಯರೆಂದು ತಿಳಿದುಕೊಂಡು ಅವರ ರಕ್ಷಣೆಗೆ ಮುಂದಾಗುತ್ತಾರೆಯೋ, ಅಂತಹ ಸಮಾಜದಲ್ಲಿ ದೀಪಾವಳಿಯ ಸಹೋದರ ಬಿದಿಗೆಯನ್ನು ಆಚರಿಸುವುದು ಅತ್ಯಂತ ಗೌರವದ ವಿಷಯವಾಗಿದೆ.

ಯಮದ್ವಿತೀಯಾ ಕಥೆ

ಕಾರ್ತಿಕ ಶುಕ್ಲ ಬಿದಿಗೆಗೆ ಯಮದ್ವಿತೀಯಾ ಎಂಬ ಹೆಸರಿದೆ. ಈ ದಿನವು ಸಹೋದರ ಬಿದಿಗೆ ಎನ್ನುವ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಈ ದಿನ ಯಮನು ತನ್ನ ತಂಗಿ ಯಮಿಯ ಮನೆಗೆ ಭೋಜನಕ್ಕೆ ಹೋಗಿದ್ದನು. ಆದುದರಿಂದ ಈ ದಿನಕ್ಕೆ ಯಮದ್ವಿತೀಯಾ ಎನ್ನುವ ಹೆಸರು ಬಂದಿದೆ. ಈ ದಿನ ಯಾವುದೇ ಪುರುಷನು ತನ್ನ ಪತ್ನಿಯು ತಯಾರಿಸಿದ ಅಡುಗೆಯ ಊಟ ಮಾಡಬಾರದು. ಸಹೋದರಿಯ ಮನೆಗೆ ಹೋಗಿ ಅವಳಿಗೆ ವಸ್ತ್ರಾಲಂಕಾರಗಳನ್ನು ಕೊಟ್ಟು ಅವಳ ಮನೆಯಲ್ಲಿ ಭೋಜನ ಮಾಡಬೇಕು ಎಂಬ ನಂಬಿಕೆಯಿದೆ. ಸ್ವಂತ ಸಹೋದರಿ ಇಲ್ಲದಿದ್ದರೆ ಸಹೋದರ ಸಂಬಂಧಿಯ ಮನೆಯಲ್ಲಿ ಅಥವಾ ಬೇರೆ ಸ್ತ್ರೀಯನ್ನು ಸಹೋದರಿಯೆಂದು ಪರಿಗಣಿಸಿ ಅವಳ ಮನೆಯಲ್ಲಿ ಭೋಜನ ಮಾಡಬೇಕು ಎಂದು ಹೇಳಲಾಗಿದೆ.

ಈ ದಿನ ಯಮರಾಜನು ತನ್ನ ಸಹೋದರಿಯಾದ ಯಮಿಯ ಮನೆಗೆ ಭೋಜನಕ್ಕೆ ಹೋಗುತ್ತಾನೆ ಮತ್ತು ಆ ದಿನ ನರಕದಲ್ಲಿ ಒದ್ದಾಡುತ್ತಿರುವ ಎಲ್ಲರನ್ನೂ ಒಂದು ದಿನಕ್ಕಾಗಿ ಮುಕ್ತಗೊಳಿಸುತ್ತಾನೆ ಎಂಬ ನಂಬಿಕೆಯಿದೆ. ಯಾರಾದರೊಳೊಬ್ಬ ಸ್ತ್ರೀಗೆ ಸಹೋದರ ಇಲ್ಲದಿದ್ದರೆ ಅವಳು ಇತರ ಪುರುಷನನ್ನು ಸಹೋದರನೆಂದು ತಿಳಿದು ಅವನಿಗೆ ಆರತಿ ಬೆಳಗಬೇಕು. ಅದು ಆಗದಿದ್ದರೆ ಚಂದ್ರನನ್ನೇ ಸಹೋದರನೆಂದು ತಿಳಿದು ಆರತಿ ಬೆಳಗುತ್ತಾರೆ.

ಅಪಮೃತ್ಯುವು ಬರಬಾರದೆಂದು ಧನತ್ರಯೋದಶಿ, ನರಕ ಚತುರ್ದಶಿ ಮತ್ತು ಯಮದ್ವಿತೀಯಾ ಈ ದಿನಗಳಂದು ಮೃತ್ಯುವಿನ ದೇವನಾದ ಯಮಧರ್ಮನ ಪೂಜೆ ಮಾಡಿ ಅವನ ಹದಿನಾಲ್ಕು ಹೆಸರುಗಳಿಂದ ತರ್ಪಣ ಮಾಡಲು ಹೇಳಲಾಗಿದೆ. ಹೀಗೆ ಮಾಡುವುದರಿಂದ ಅಪಮೃತ್ಯು ಬರುವುದಿಲ್ಲ. ಅಪಮೃತ್ಯು ನಿವಾರಣಾರ್ಥವಾಗಿ ‘ಶ್ರೀ ಯಮಧರ್ಮಪ್ರೀತ್ಯರ್ಥಂ ಯಮತರ್ಪಣಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ ತರ್ಪಣ ಕೊಡಬೇಕು ಎಂದು ಶಾಸ್ತ್ರಗಳಿಂದ ತಿಳಿದುಬರುತ್ತದೆ.