ಯೋಗಿ ನಾರಾಯಣಗುರು

ಚೆಲುವಿನ ನಾಡಿನಲ್ಲಿ ಪುಣ್ಯ ಜೀವಿಗಳು

ತಿರುವನಂತಪುರ ಈಶಾನ್ಯಕ್ಕೆ ಸುಮಾರು ಹನ್ನೆರಡು ಮೈಲಿ ದೂರದ ಒಂದು ಹಳ್ಳಿ ಚೆಂಪಾಳಾಂಡಿಯ ವಯ್ಯಾಳ್‌ವಾರಂ ಎಂಬ ರೈತ ಕುಟುಂಬದ ಮಾದನ್ ಆಸನ್ (ಆಚಾರ‍್ಯನ್) ಮತ್ತು ಕುಟ್ಟಿ ಅಮ್ಮ ದಂಪತಿಗೆ ೧೮೫೫ರ ಆಗಸ್ಟ್ ೨೦ರಂದು ಒಂದು ಗಂಡು ಶಿಶು ಜನಿಸಿತು. ಅದಕ್ಕೆ ‘ನಾಣು’ (ನಾರಾಯಣ) ಎಂದು ಹೆಸರಿಟ್ಟರು. ಸಂಸ್ಕೃತ, ಜ್ಯೋತಿಷ್ಯ ಮತ್ತು ಆಯುರ್ವೇದ ವಿದ್ಯೆಗಳನ್ನು ಬಲ್ಲವರಾಗಿದ್ದ ಮಾದನ್ ಆಸನ್ ಬೋಧಕರೂ ಆಗಿದ್ದರು

ನಾಣು ‘ನಾಣು ಆಸನ್ ’ ಆದ

ಬಾಲಕ ನಾಣು ತೆಳ್ಳಗಿದ್ದರೂ ಚುರುಕು, ಜಾಣ. ಅವನು ಆಟ ಮತ್ತು ಪಾಠಗಳೆರಡರಲ್ಲಿಯೂ ಬಹಳ ಆಸಕ್ತಿಯುಳ್ಳವನಾಗಿದ್ದನು. ನಾಣುಗೆ ೧೫ ವರ್ಷವಿದ್ದಾಗ ಅವನ ತಾಯಿ ಕಾಲವಾದಳು. ಇಪ್ಪತ್ತೆಂಟನೆಯ ವಯಸ್ಸಿನಲ್ಲಿ ತಂದೆಯೂ ಕಾಲವಾದನು. ಅವನು ತನ್ನ ಊರಿಗೆ ೫೦ ಮೈಲಿ ದೂರದಲ್ಲಿದ್ದ ಕರುನಾಗಪಲ್ಲಿ ಎಂಬಲ್ಲಿಗೆ ಹೋಗಿ ರಾಮನ್ ಪಿಳ್ಳೈ ಆಸನ್ ಎಂಬ ಗುರುವಿನಲ್ಲಿ ವ್ಯಾಸಂಗ ಮಾಡಿದನು. ನಾಣು ಸಂಸ್ಕೃತದಲ್ಲಿ ಪರಿಣಿತನಾದನು. ವೇದೋಪನಿಷತ್ತುಗಳನ್ನೂ ಅಧ್ಯಯನ ಮಾಡಿದ. ಅವನ ಪರಿಶುದಟಛಿ ಜೀವನ, ಶಾಸ್ತ್ರಜ್ಞಾನ ಎಲ್ಲರ ಮನ್ನಣೆಗೆ ಪಾತ್ರವಾಯಿತು. ಸುತ್ತಮುತ್ತಲ ಪ್ರದೇಶದಲ್ಲಿ ಅವನು ‘ನಾಣು ಆಸನ್’ ಎಂದು ಪ್ರಸಿದ್ಧಿ ಪಡೆದನು.

ಪಾರಿವ್ರಾಜಕ

ತಂದೆ ಕಾಲವಾದ ಮೇಲೆ, ನಾಣು ಆಸನ್ ಅದಕ್ಕೆ ಮೊದಲೇ ಕೈಗೊಂಡಿದ್ದ ಮಧುಕರ ಭಿಕ್ಷ ಜೀವನ ಮುಂದುವರಿಸಿದರು. ಅವರು ಪಾರಿವ್ರಾಜಕರಾಗಿ (ಸಂಚರಿಸುವ ಸನ್ಯಾಸಿ) ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸತೊಡಗಿದರು. ಈ ಸಂಚಾರ ಕಾಲದಲ್ಲಿ ಕುಂಜನ್ ಪಿಳ್ಳೈ ಮತ್ತು ಥಿಕ್ಕಾಡ್ ಅಯ್ಯಾವು ಎಂಬ ಇಬ್ಬರು ಗುರುಗಳು ಅವರ ಮೇಲೆ ಪ್ರಭಾವ ಬೀರಿದರು. ಕುಂಜನ್ ಪಿಳ್ಳೈ ನಾಣುವಿನಿಂದ ಸಂಸ್ಕೃತದಲ್ಲಿ ಕವನ ರಚನೆ ಮಾಡಿಸಿದರು. ‘ನವ ಮಂಜರಿ’ ಎಂಬ ಒಂಬತ್ತು ಶ್ಲೋಕಗಳನ್ನು ರಚಿಸುವಂತೆಯೂ ಪ್ರೋತ್ಸಾಹಿಸಿದರು.

ಯೋಗಿ ನಾಣುವಿನ ಆಶ್ರಮ

ವೇದಶಾಸ್ತ್ರಜ್ಞಾನ, ಯೋಗವಿದ್ಯೆಗಳನ್ನು ಕಲಿತರೂ ನಾಣು ಆಸನ್ ತೃಪ್ತಿ ಹೊಂದಲಿಲ್ಲ. ಅವರು ತಮ್ಮ ಪಾರಿವ್ರಾಜಕ ಸ್ಥಿತಿಯನ್ನು ಮುಂದುವರಿಸಿದರು. ಹೀಗೆ ಅಲೆದಾಡುತ್ತಾ ಅರುವೀಪುರಂ ಎಂಬಲ್ಲಿಗೆ ಬಂದರು. ಅದು ಅರಣ್ಯ ಪ್ರದೇಶವಾಗಿತ್ತು. ಅಲ್ಲಿ ನಾಣು ಧ್ಯಾನಮಗ್ನನಾದರು. ಅಲ್ಲಿಗೆ ಆಗಾಗ ಬರುತ್ತಿದ್ದ ದನಕಾಯುವ ಹುಡುಗರು ಧ್ಯಾನಮಗ್ನನಾದ ಈ ಯೋಗಿಯ ಮುಖದ ತೇಜಸ್ಸಿಗೆ ಬೆರಗಾಗಿ ಸುದ್ದಿಯನ್ನು ಹರಡಿದರು. ಇದನ್ನು ನೋಡಲು ಜನ ತಂಡೋಪತಂಡವಾಗಿ ಬಂದರು. ಯೋಗಿ ನಾಣು ಇದ್ದ ಸ್ಥಳ ಪವಿತ್ರ ಸ್ಥಳವಾಯಿತು. ಅಲ್ಲೊಂದು ಆಶ್ರಮ ಸ್ಥಾಪನೆಯಯಾಯಿತು.

ದೇವಾಲಯದ ಸ್ಥಾಪನೆ-ಹೊಸ ರೀತಿಯಲ್ಲಿ

ಆಶ್ರಮದಲ್ಲಿ ಒಂದು ಕೊರತೆ ಇತ್ತು, ದೇವಾಲಯದ ಅಭಾವ. ಯೋಗಿ ನಾಣುವಿನ ಸಲಹೆಯಂತೆ ಒಂದು ಶಿವ ದೇವಾ ಲಯದ ಸ್ಥಾಪನೆಗೆ ಎಲ್ಲರೂ ಒಪ್ಪಿದರು. ದೇವಾಲಯ ಸ್ಥಾಪನೆಯ ದಿನ ಬಂದಿತು. ಯೋಗಿ ನಾಣು ಬೆಳಗಿನ ಜಾವ ಎದ್ದು ನದಿಯಲ್ಲಿ ಮಿಂದು ಬಂದ. ಇನ್ನೂ ಮುಂಜಾವಿನ ಸಮಯ. ಸಾವಿರಾರು ಜನ ಉತ್ಸುಕರಾಗಿ ಸೇರಿದರು. ಅವರ ಮಧ್ಯೆ ಧ್ಯಾನಮಗ್ನನಾಗಿ ನಿಂತಿದ್ದ ನಾಣು, ಶಿವನ ಪ್ರತೀಕವಾದ ಶಿಲೆಗೆ ಪಂಚಾರತಿ ಬೆಳಗಿದರು. ನಾಣು ಅಂತರಿಕ್ಷದ ಕಡೆ ನೋಡುತ್ತಾ ಮೌನ ಪ್ರಾರ್ಥನೆ ಸಲ್ಲಿಸಿದ. “ಶಿವಕೃಪೆ ಅಧಿಕವಾಗಲಿ. ಬಡವರು ಮತ್ತು ಹಸಿದವರು ಸುಖ ಕಾಣಲಿ. ಅವರು ಅಭಿವೃದ್ಧಿ ಹೊಂದಲಿ. ಅನುದಿನವೂ ಅವರಿಗೆ ತಪ್ಪದೆ ಅನ್ನ ದೊರಕಲಿ. ಎಲ್ಲ ಜನ ಸತ್ಯವಂತರಾಗಲಿ, ಪರಸ್ಪರ ಸಹಕಾರದಿಂದ ಒಬ್ಬರ ಸುಖವನ್ನು ಮತ್ತೊಬ್ಬರು ಹೆಚ್ಚಿಸಲಿ. ದಿನದಿನಕ್ಕೆ ಅವರು ಪರಿಶುದ್ಧರಾಗಲಿ. ದ್ವೇಷ, ಮತ್ಸರ, ಕಣ್ಮರೆಯಾಗಲಿ. ಭಗವಂತನ ಸೃಷ್ಟಿಯಲ್ಲಿ ಅತ್ಯಂತ ಚಿಕ್ಕದನ್ನೂ ಗೌರವಿಸುವ ಬುದ್ಧಿ ಜನಿಸಲಿ. ಪರಸತ್ಯದ ಕನಿಷ್ಠಾಂಶವಾದರೂ ಅವರಲ್ಲಿ ಹುಟ್ಟಿ ಎಲ್ಲರಿಗೂ ಶಾಂತಿ ದೊರಕಲಿ". ಅಂದಿನಿಂದ ಯೋಗಿ ನಾಣು ಆಸನ್ ‘ನಾರಾಯಣಗುರು’ ಆದರು. ಯಾವ ಬಗೆಯ ಆಡಂಬರವೂ ಇಲ್ಲದೆ, ಬೂಟಾಟಿಕೆಯೂ ಇಲ್ಲದೆ, ಶುದ್ಧ ಹೃದಯದಿಂದ ಪೂಜೆ ಮಾಡಿದರೆ ಸಾಕು. ದೇವರ ಎದುರಿನಲ್ಲಿ ಮೇಲು-ಕೀಳು ಎಂಬ ಬೇಧವಿಲ್ಲದೆ ಎಲ್ಲರೂ ಸಮಾನರು ಎಂಬ ಸಹಸ್ರಾರು ವರ್ಷಗಳ ನಿಜ ತತ್ವವನ್ನು ಅವರು ಆಚರಣೆಗೆ ತಂದಿದ್ದರು.

ಕರುಣೆಯ ಮೂರ್ತಿ

ಒಮ್ಮೆ ಆಶ್ರಮದಲ್ಲಿ ಶಿವರಾತ್ರಿಯ ಆಚರಣೆಯಂದು ಸಭೆ ನಡೆಯಿತು. ಭಾಷಣಕಾರರು ಗುರುವಿನ ಆದರ್ಶಗಳ ಬಗೆಗೆ ಉದ್ದುದ್ದ ಭಾಷಣ ಮಾಡುತ್ತಿದ್ದರು. ಜನ ಇದನ್ನು ಏಕಮನಸ್ಕರಾಗಿ ಕೇಳುತ್ತಿದ್ದರು. ಅವರ ಪೈಕಿ ಒಂದು ಗುಂಪು ದೂರದಲ್ಲಿ ಪ್ರತ್ಯೇಕವಾಗಿ ಕುಳಿತಿತ್ತು, ಅವರು ‘ಅಸ್ಪೃಶ್ಯರು.’ ಗುರುಗಳ ಕಣ್ಣು ಅತ್ತ ಹರಿಯಿತು. ಅಸ್ಪೃಶ್ಯರ ಗುಂಪಿನಿಂದ ಇಬ್ಬರು ಮಕ್ಕಳನ್ನು ಹತ್ತಿರ ಕರೆದು, ಪ್ರೀತಿಯಿಂದ ಮಾತನಾಡಿಸಿದರು. ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ‘ಎಲ್ಲರಂತೆಯೇ ಇವರೂ ದೇವರ ಮಕ್ಕಳು" ಎಂದರು. ಆ ಗಳಿಗೆಯಿಂದ ಆರಂಭವಾಯಿತು ನಾರಾಯಣ ಗುರುಗಳ ಸಮಾಜ ಸುಧಾರಣೆಯ ಕಾರ್ಯ. ಭಾರತದ ಇತರೆಡೆ ಇದ್ದಂತೆ ತಿರುವಾಂಕೂರಿನಲ್ಲಿಯೂ ಅಸ್ಪೃಶ್ಯತೆ, ಪ್ರಾಣಿವಧೆ, ಮದ್ಯಪಾನ ಇತ್ಯಾದಿ ಪಿಡುಗುಗಳು ಇದ್ದವು. ಇದನ್ನು ಸುಧಾರಣೆ ಮಾಡುವ ಕಾರ‍್ಯ ಸುಲಭವಾಗಿರಲಿಲ್ಲ! ನಾರಾಯಣ ಗುರು ಜನರೊಡನೆ ಸೇರಿ ಅವರ ತಪ್ಪು ಭಾವನೆಗಳನ್ನು ತೋರಿಸಿಕೊಟ್ಟರು. ಅವರೊಡನೆ ಸೌಮ್ಯ ಭಾವದಿಂದ ವಾದಿಸಿ, ಮನಸ್ಸನ್ನು ಒಲಿಸಿಕೊಂಡು ಪ್ರಾಣಿ ವಧೆಯನ್ನು ನಿಲ್ಲಿಸಲು ಶ್ರಮಿಸಿದರು. ಹೀಗೆ ದಯಾಭರಿತರಾದ ನಾರಾಯಣಗುರು ಹದಿನೈದು ವರ್ಷಗಳ ಕಾಲ ಕೇರಳದಾದ್ಯಂತ ಸಂಚರಿಸಿ ಜನರ ಮೂಢನಂಬಿಕೆಗಳನ್ನು ಕಳೆಯಲು ಪ್ರಯತ್ನಿಸುವುದರ ಜತೆಗೆ ಜನ-ಜೀವನ ವಿಧಾನವನ್ನೇ ಪರಿವರ್ತಿಸಲು ಪ್ರಯತ್ನಿಸಿದರು. ಜನರಿಗೆ ಒಳ್ಳೆಯ ರೀತಿಯಲ್ಲಿ ಬದುಕುವುದನ್ನು ಹೇಳಿಕೊಟ್ಟರು.

ಮಹಾ ಸಮಾಧಿ

೧೯೨೮ರ ಸೆಪ್ಟೆಂಬರ್ ೨೦ರಂದು ಗುರು ಸ್ವತಃ ಪುಣ್ಯಭೂಮಿ ಎಂದು ಕರೆಯುತ್ತಿದ್ದ ವರ್ಕಲದಲ್ಲಿ ‘ಮಹಾಸಮಾಧಿ’ ಹೊಂದಿದರು. ಹೀಗೆ ನಾಣು ‘ಆಸನ್’ ಎನಿಸಿಕೊಂಡು, ‘ಯೋಗಿ’ ಎನಿಸಿಕೊಂಡು, ‘ಗುರು’ ಎನಿಸಿಕೊಂಡು ಜೀವನದ ಕೊನೆ ಕಂಡನು. ಆ ಗುರುವಿನ ಮೊರೆಹೊಕ್ಕ ಸಹಸ್ರಾರು ಶಿಷ್ಯರು ಶಾಂತಿ, ಶಕ್ತಿ, ತೃಪ್ತಿಗಳನ್ನು ಕಂಡರು. ಕೃಪೆ: ರಾಷ್ಟ್ರೋತ್ಥಾನ ಪರಿಷತ್

Leave a Comment