ರುದ್ರಾಕ್ಷಿ


ರುದ್ರಾಕ್ಷಿಧಾರಣೆ

ಶಿವನ ಪೂಜೆಯನ್ನು ಮಾಡುವಾಗ ಕೊರಳಿನಲ್ಲಿ ರುದ್ರಾಕ್ಷಿಮಾಲೆಯನ್ನು ಅವಶ್ಯವಾಗಿ ಹಾಕಿಕೊಳ್ಳಬೇಕು. ನಾಥ ಸಂಪ್ರದಾಯ ಹಾಗೂ ವಾಮ ಸಂಪ್ರದಾಯದವರು ಮತ್ತು ಕಾಪಾಲಿಕರು ರುದ್ರಾಕ್ಷಿಯ ಮಾಲೆಯನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಯೋಗಿಗಳೂ ರುದ್ರಾಕ್ಷಿಯ ಮಾಲೆಯನ್ನು ಧರಿಸುತ್ತಾರೆ.

‘ರುದ್ರಾಕ್ಷ’ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ

‘ರುದ್ರಾಕ್ಷ’ ಎಂಬ ಶಬ್ದವು ‘ರುದ್ರಅಕ್ಷ’ ಎಂಬ ಎರಡು ಶಬ್ದಗಳಿಂದ ರೂಪುಗೊಂಡಿದೆ.

‘ರುದ್ರಾಕ್ಷ’ ಶಬ್ದಕ್ಕೆ ಮುಂದಿನ ಅರ್ಥಗಳಿವೆ

೧. ಅಕ್ಷ ಎಂದರೆ ಕಣ್ಣು. ರುದ್ರ್ಚಅಕ್ಷ ಎಂದರೆ ಯಾವುದು ಎಲ್ಲವನ್ನೂ ನೋಡಬಲ್ಲದೋ ಮತ್ತು ಮಾಡಬಲ್ಲದೋ ಅದು ರುದ್ರಾಕ್ಷ (ಉದಾ.ಮೂರನೆಯ ಕಣ್ಣು). ಅಕ್ಷ ಎಂದರೆ ಅಕ್ಷರೇಖೆ. ಕಣ್ಣು ಒಂದೇ ಅಕ್ಷರೇಖೆಯ ಸುತ್ತಲೂ ತಿರುಗುತ್ತದೆ, ಆದುದರಿಂದ ಅದಕ್ಕೆ ಅಕ್ಷ ಎನ್ನುತ್ತಾರೆ.

೨. ರುದ್ರ ಎಂದರೆ ಅಳುಮುಖದವನು. ‘ಅ’ ಎಂದರೆ ತೆಗೆದುಕೊಳ್ಳುವುದು ಮತ್ತು ‘ಕ್ಷ’ ಎಂದರೆ ಕೊಡುವುದು, ಅಕ್ಷವೆಂದರೆ ತೆಗೆದುಕೊಳ್ಳುವ ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ಅಳುವವನಿಂದ ಅವನ ದುಃಖವನ್ನು ತೆಗೆದುಕೊಳ್ಳುವ ಹಾಗೂ ಅವನಿಗೆ ಸುಖವನ್ನು ಕೊಡುವ ಕ್ಷಮತೆಯಿರುವವನು.

ರುದ್ರವೃಕ್ಷ (ರುಧಿರವೃಕ್ಷ, ರುದ್ರಾಕ್ಷವೃಕ್ಷ)

ಶಂಕರನ ಕಣ್ಣುಗಳಿಂದ ಕೆಳಗೆ ಬಿದ್ದ ಅಶ್ರುಗಳಿಂದ ‘ರುದ್ರಾಕ್ಷವೃಕ್ಷ’ವು ತಯಾರಾಗುವುದು :ತಾಡಿನ್‌ಮಾಲಿ, ತಾರಕಾಕ್ಷ ಮತ್ತು ಕಮಲಾಕ್ಷ ಎಂಬ ತಾರಕ ಪುತ್ರರು ಧರ್ಮಾಚರಣೆ ಮತ್ತು ಶಿವಭಕ್ತಿಯನ್ನು ಮಾಡಿ ದೇವತ್ವವನ್ನು ಪ್ರಾಪ್ತಿ ಮಾಡಿಕೊಂಡರು. ಕೆಲವು ಸಮಯದ ನಂತರ ಮತ್ತೆ ಅವರು ಅಧರ್ಮಾಚರಣೆಯನ್ನು ಮಾಡಲು ಪ್ರಾರಂಭಿಸಿದುದನ್ನು ನೋಡಿ ಶಂಕರನು ವಿಷಾದಗ್ರಸ್ತನಾದನು. ಅವನ ನೇತ್ರಗಳು ಅಶ್ರುಗಳಿಂದ ತುಂಬಿದವು,ಕೆಲವು ಹನಿಗಳು ಪೃಥ್ವಿಯ ಮೇಲೆ ಬಿದ್ದವು. ಆ ಅಶ್ರುಗಳಿಂದ ಹುಟ್ಟಿದ ವೃಕ್ಷಗಳಿಗೆ ‘ರುದ್ರಾಕ್ಷವೃಕ್ಷ’ ಎನ್ನುತ್ತಾರೆ. ಅನಂತರ ಶಿವನು ತಾರಕಪುತ್ರರನ್ನು ನಾಶಗೊಳಿಸಿದನು.

– ಗುರುದೇವ ಡಾ.ಕಾಟೇಸ್ವಾಮೀಜಿ

ರುದ್ರವೃಕ್ಷದ ಮಾಹಿತಿ

ಇದು ಸಮುದ್ರದ ಮಟ್ಟದಿಂದ ಮೂರು ಸಾವಿರ ಮೀ. ಎತ್ತರದಲ್ಲಿ ದೊರಕುತ್ತದೆ. ರುದ್ರಾಕ್ಷಿಯ ಗಿಡಗಳು ತಗ್ಗು ಪ್ರದೇಶದಲ್ಲಿ ಬೆಳೆಯುತ್ತವೆ, ಸಮತಟ್ಟ ಪ್ರದೇಶದಲ್ಲಿ ಬೆಳೆಯುವುದಿಲ್ಲ. ಈ ಗಿಡದ ಎಲೆಗಳು ಹುಣಸೆ ಮರದ ಅಥವಾ ಗುಲಗಂಜಿಯ ಎಲೆಯಂತೆ, ಆದರೆ ಸ್ವಲ್ಪ ಉದ್ದವಾಗಿರುತ್ತವೆ. ಈ ಗಿಡಗಳಿಗೆ ಒಂದು ವರ್ಷದಲ್ಲಿ ಒಂದರಿಂದ ಎರಡು ಸಾವಿರ ಹಣ್ಣುಗಳು ಬಿಡುತ್ತವೆ. ಹಿಮಾಲಯದಲ್ಲಿರುವ ಯತಿಗಳು ಕೇವಲ ರುದ್ರಾಕ್ಷಿಫಲಗಳನ್ನೇ ತಿನ್ನುತ್ತಾರೆ. ಈ ಫಲಕ್ಕೆ ಅಮೃತಫಲ ಎಂದೂ ಕರೆಯುತ್ತಾರೆ. ಇವುಗಳನ್ನು ತಿಂದರೆ ಬಾಯಾರಿಕೆಯಾಗುವುದಿಲ್ಲ ಎಂಬ ನಂಬಿಕೆಯಿದೆ.

ರುದ್ರಾಕ್ಷಿ (ರುದ್ರಾಕ್ಷಿ ಹಣ್ಣುಗಳು)

ರುದ್ರಾಕ್ಷದ ಹಣ್ಣುಗಳು ಗಿಡದ ಮೇಲೆ ಹಣ್ಣಾಗಿ ಚಳಿಗಾಲದಲ್ಲಿ ಕೆಳಗೆ ಬೀಳುತ್ತವೆ. ಅನಂತರ ಒಳಗಿನ ಬೀಜಗಳು ಒಣಗುತ್ತವೆ. ಒಂದು ಹಣ್ಣಿನಲ್ಲಿ ಹದಿನೈದು-ಹದಿನಾರು ಬೀಜಗಳು (ರುದ್ರಾಕ್ಷಿಗಳು) ಇರುತ್ತವೆ. ಒಂದು ಹಣ್ಣಿನಲ್ಲಿ ಬೀಜಗಳು ಎಷ್ಟು ಹೆಚ್ಚಿರುತ್ತವೆಯೋ, ಆ ಬೀಜಗಳ ಆಕಾರವು ಅಷ್ಟು ಕಡಿಮೆಯಿರುತ್ತದೆ. ಚಿಕ್ಕ ರುದ್ರಾಕ್ಷಿಗಳನ್ನು ಬಿಡಿಬಿಡಿಯಾಗಿ ಬಳಸದೆ ಒಂದು ಮಾಲೆಯಲ್ಲಿ ಪೋಣಿಸುತ್ತಾರೆ ಮತ್ತು ಅವುಗಳೊಂದಿಗೆ ಒಂದು ದೊಡ್ಡ ರುದ್ರಾಕ್ಷಿಯನ್ನೂ ಪೋಣಿಸುತ್ತಾರೆ. ರುದ್ರಾಕ್ಷಿಗೆ ಮೊದಲಿನಿಂದಲೇ ಒಂದು ರಂದ್ರವಿರುತ್ತದೆ, ಅದನ್ನು ಮಾಡಬೇಕಾಗುವುದಿಲ್ಲ. ಆ ರಂದ್ರಕ್ಕೆ ವಾಹಿನಿ ಎನ್ನುತ್ತಾರೆ. ರುದ್ರಾಕ್ಷಿಯ ಬಣ್ಣವು ನಸುಗೆಂಪಾಗಿರುತ್ತದೆ. ಅದರ ಆಕಾರವು ಮೀನಿನಂತೆ ಚಪ್ಪಟೆಯಾಗಿರುತ್ತದೆ. ಅದರ ಮೇಲೆ ಹಳದಿ ಬಣ್ಣದ ಪಟ್ಟೆಗಳಿರುತ್ತವೆ. ಅದರ ಒಂದು ಬದಿಯಲ್ಲಿ ತೆರೆದಿರುವಂತೆ ಬಾಯಿ ಇರುತ್ತದೆ.

ರುದ್ರಾಕ್ಷಿ ವೈಶಿಷ್ಟ್ಯಗಳು

ಅ. ಭಾರವಾದ ಮತ್ತು ಸತೇಜ.

ಆ. ಮುಖಗಳು ಸ್ಪಷ್ಟವಾಗಿರುವ.

ಇ. ಓಂ, ಶಿವಲಿಂಗ, ಸ್ವಸ್ತಿಕ ಇತ್ಯಾದಿ ಶುಭಚಿಹ್ನೆಗಳಿರುವ.

ಈ. ‘ರುದ್ರಾಕ್ಷಿಯು ಆದಷ್ಟು ದೊಡ್ಡದಿರಬೇಕು ಮತ್ತು ಸಾಲಿಗ್ರಾಮವು ಆದಷ್ಟು ಚಿಕ್ಕದಿರಬೇಕು.’ (ಮೇರುತಂತ್ರ)

ಉ. ತೆಕ್ಕೆಯಲ್ಲಿ ಹಿಡಿಸದಂತಹ ಕಾಂಡವಿರುವ, ಅಂದರೆ ಹಳೆಯ ಮರದ ರುದ್ರಾಕ್ಷಿ.

ಊ. ಸಮುದ್ರದ ಮಟ್ಟಕ್ಕಿಂತಲೂ ಹೆಚ್ಚು ಎತ್ತರದಲ್ಲಿರುವ ಗಿಡದ ರುದ್ರಾಕ್ಷಿ ಮತ್ತು ಒಂದೇ ಗಿಡದ ಆದಷ್ಟು ಮೇಲಿನ ಕೊಂಬೆಯ ಮೇಲಿರುವ ರುದ್ರಾಕ್ಷಿ, ಎತ್ತರದಲ್ಲಿರುವ ರುದ್ರಾಕ್ಷಿಗಳಿಗೆ ಮೇಲಿನಿಂದ ಬರುವ ಸತ್ತ್ವಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಲಭಿಸುತ್ತವೆ. ಆದುದರಿಂದ ಅವು ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ.

ಎ. ಬಿಳಿಯ ಬಣ್ಣದ ರುದ್ರಾಕ್ಷಿಯು ಎಲ್ಲಕ್ಕಿಂತಲೂ ಉತ್ತಮ, ಅದಕ್ಕಿಂತ ಕನಿಷ್ಟ ರುದ್ರಾಕ್ಷಿಗಳೆಂದರೆ ಅನುಕ್ರಮವಾಗಿ ಕೆಂಪು, ಹಳದಿ ಮತ್ತು ಕಪ್ಪು ಬಣ್ಣದ ರುದ್ರಾಕ್ಷಿಗಳು. ಬಿಳಿ ಹಾಗೂ ಹಳದಿ ಬಣ್ಣದ ರುದ್ರಾಕ್ಷಿಗಳು ಸಾಮಾನ್ಯವಾಗಿ ಸಿಗುವುದಿಲ್ಲ. ಕೆಂಪು ಹಾಗೂ ಕಪ್ಪು ಬಣ್ಣದ ರುದ್ರಾಕ್ಷಿಗಳು ಎಲ್ಲೆಡೆಗಳಲ್ಲಿ ಸಿಗುತ್ತವೆ.

ರುದ್ರಾಕ್ಷಿಯ ಪಾವಿತ್ರ್ಯ ಉಳಿಸಿಕೊಳ್ಳುವುದು

ರುದ್ರಾಕ್ಷಿಯನ್ನು ಧರಿಸಿದ ನಂತರ ಅದರ ಪಾವಿತ್ರ್ಯ ಉಳಿಸಿಕೊಳ್ಳುವುದು ಮಹತ್ವದ್ದಾಗಿದೆ. ಅದಕ್ಕಾಗಿ ಮುಂದಿನ ನಿಯಮಗಳನ್ನು ಪಾಲಿಸುವ ಅವಶ್ಯಕತೆಯಿರುತ್ತದೆ.

ಅ. ಭಸ್ಮಧಾರಣೆ

ಆ. ಶಿವಲಿಂಗಪೂಜೆ : ಶಿವಲಿಂಗ ಅಥವಾ ರುದ್ರಾಕ್ಷಿಯ ಪೂಜೆಯನ್ನು ಮಾಡುವುದು ಮಹತ್ವದ್ದಾಗಿದೆ.

ಇ. ಶಿವಸ್ಮರಣೆ :ಬೆಳಗ್ಗೆ ಎದ್ದನಂತರ ಮತ್ತು ಸಂಜೆ ಮಲಗುವ ಮೊದಲು ಶಿವಸ್ಮರಣೆಯನ್ನು ಮಾಡಬೇಕು.

ಈ. ಶುಚಿತ್ವ :ಬೇರೆ ಯಾರಿಗೂ ರುದ್ರಾಕ್ಷಿಯನ್ನು ಸ್ಪರ್ಶಿಸಲು ಬಿಡಬಾರದು. ಯಾರಾದರೂ ತಪ್ಪಿ ಅದನ್ನು ಸ್ಪರ್ಶಿಸಿದರೆ ಆ ರುದ್ರಾಕ್ಷಿಯನ್ನು ಗೋಮೂತ್ರ ಅಥವಾ ತೀರ್ಥಜಲದಿಂದ ಶುದ್ಧಪಡಿಸಿಕೊಳ್ಳಬೇಕು.

ಉ. ನಿಷಿದ್ಧ ಪದಾರ್ಥಗಳು :ರುದ್ರಾಕ್ಷಿಯನ್ನು ಧರಿಸುವವನು ಮದ್ಯ, ಮಾಂಸ, ನೀರುಳ್ಳಿ, ಬೆಳ್ಳುಳ್ಳಿಗಳನ್ನು ಸೇವಿಸಬಾರದು.

– ಗುರುದೇವ ಡಾ.ಕಾಟೇಸ್ವಾಮೀಜಿ

Leave a Comment