ಶಿವನ ಪರಮ ಭಕ್ತ ವಿಠೋಬಾ

ಹಿಂದೆ ಸಂತ ನಾಮದೇವ ಎಂಬ ಒಬ್ಬ ಮಹಾನ್ ವಿಠ್ಠಲ ಭಕ್ತರಿದ್ದರು, ಒಮ್ಮೆ ಅವರ ಕನಸಿನಲ್ಲಿ ಶಿವನು ಬಂದು ನೀನು ನನ್ನ ಇನ್ನೊಬ್ಬ ಪರಮ ಭಕ್ತ ವಿಠೋಬಾನನ್ನು ದೇವಸ್ಥಾನದಲ್ಲಿ ನೋಡಿ ಅವನಿಂದ ಏನು ಕಲಿತೆ ಎಂದು ಹೇಳು ಎಂದನು. ಕೂಡಲೇ ಸಂತ ನಾಮದೇವರು ದೇವಸ್ಥಾನಕ್ಕೆ ಬಂದು ಅಲ್ಲಿ ಹುಡುಕಿದರು. ಆದರೆ ಯಾರೂ ಕಾಣಿಸಲಿಲ್ಲ. ಆಗ ಶಿವಲಿಂಗದ ಮೇಲೆ ಕಾಲಿಟ್ಟು ಕುಳಿತ್ತಿದ್ದ ಮುದುಕನೊಬ್ಬನನ್ನು ಕಂಡು ಇವರು ಸಿಡಿಮಿಡಿಗೊಂಡರು. ಅಲ್ಲಿನ ಅರ್ಚಕರು ಮುದುಕನೇ ವಿಠೋಬನೆಂದು ಹೇಳಿದರು.

ಈತನಾವ ಶಿವಭಕ್ತ? ಶಿವನಿಗೆ ಅತ್ಯಲ್ಪ ಮರ್ಯಾದೆಯನ್ನೂ ಕೊಡದವ ಎಂದು ನಾಮದ್ವರು ಮನದಲ್ಲೇ ವಿಚಾರಮಾಡಿದರು. ಆಗ ವಿಠೋಬನು ನೋಡಪ್ಪಾ ನನಗೆ ತುಂಬಾ ವಯಸ್ಸಾಯಿತು, ಕಾಲನ್ನು ಆಡಿಸಲೂ ಆಗದು ನೀನೇ ದಯಮಾಡಿ ಶಿವನಿಲ್ಲದ ಜಾಗದಲ್ಲಿ ನನ್ನ ಕಾಲನ್ನು ಇಡು ಎಂದನು. ನಾಮದೇವರು ಮುದುಕನ ಕಾಲನ್ನು ಎತ್ತಿ ಎಲ್ಲೆ ಇಟ್ಟರೂ ಅಲ್ಲಿ ಶಿವಲಿಂಗ ಉದ್ಭವಿಸಿತು, ಆಗ ಶಿವನಿಲ್ಲದ ಜಾಗವೇ ಇಲ್ಲಾ ಎಂದು ನಾಮದೇವರಿಗೆ ಜ್ಞಾನೋದಯವಾಯಿತು. ನಾಚಿಕೆಯಿಂದ ತಲೆತಗ್ಗಿಸಿ ವಿಠೋಬನ ಕಾಲಿಗೆ ನಮಸ್ಕರಿಸಿದರು ಹಾಗೂ ಜಗತ್ತಿನಲ್ಲಿ ಎಲ್ಲಾ ಕಡೆ, ಎಲ್ಲರಲ್ಲಿ ಶಿವನಿದ್ದಾನೆ ಎಂದು ಮನಗಂಡರು.

ನೀತಿ: ಜಗತ್ತಿನಲ್ಲಿ ಎಲ್ಲಾ ವಸ್ತು, ವ್ಯಕ್ತಿ, ಪ್ರಾಣಿ ಪಕ್ಷಿಗಳಲ್ಲಿಯೂ ಶಿವನಿದ್ದಾನೆ, ಅದಕ್ಕೆ ಎಲ್ಲರನ್ನು ಎಲ್ಲವನ್ನು ಪ್ರೀತಿಯಿಂದ ಕಾಣಬೇಕು. ಯಾವುದೇ ಕೆಲಸ ಮಾಡುವಾಗ ಶ್ರದ್ಧಾ ಭಕ್ತಿಗಳಿಂದ ಮಾಡಬೇಕು. ಉದಾಹರಣೆಗೆ ಊಟ ಮಾಡುವಾಗ ಅನ್ನಪೂರ್ಣೇಶ್ವರಿಯ ನಾಮಸ್ಮರಣೆಯೊಂದಿಗೆ ಮಾಡಿದರೆ ಪ್ರತಿ ತುತ್ತು ನಮಗೆ ಒಳ್ಳೆಯ ಶಕ್ತಿಯನ್ನೇ ಕೊಡುತ್ತದೆ.