ಶ್ರೀ ಗೋರಕ್ಷನಾಥ




ಶ್ರೀ ಮಚ್ಛಿಂದ್ರನಾಥ ತೀರ್ಥಯಾತ್ರೆ ಮಾಡುತ್ತಾ ಮಾಡುತ್ತಾ ಅನೇಕ ದುಃಖಿತ ಪೀಡಿತರಿಗೆ ಸುಖದ ಮಾರ್ಗ ತೋರಿಸುತ್ತಾ ಅವರ ದುಃಖವನ್ನು ದೂರಮಾಡಿ ಅವರು ಪ್ರಸಿದ್ಧರಾದರು. ಅವರು ಒಂದು ಸಲ ಚಂದ್ರಗಿರಿಗೆ ಹೋದರು. ಆ ಊರಿನಲ್ಲಿ ಸರ್ವೋಪದಯಾಳನೆಂಬ ವಿಸಿಷ್ಟಗೋತ್ರಿ ಗೌಡ ಬ್ರಾಹ್ಮಣನಿದ್ದನು. ಅವನ ಪತ್ನಿಯಾದ ಸರಸ್ವತಿಯು ಸದ್ಗುಣಿಯಾಗಿದ್ದಳು. ಅವಳು ಪುತ್ರ ಸಂತಾನವಿಲ್ಲವೆಂದು ದುಃಖಿತಳಾಗಿದ್ದಳು. ಅವಳ ಮನೆಗೆ ಶ್ರೀ ಮಚ್ಛಿಂದ್ರನಾಥ ಭಿಕ್ಷೆ ಬೇಡಲು ಹೋದರು. ಸರಸ್ವತಿ ಅವರಿಗೆ ಭಿಕ್ಷೆ ನೀಡಿ ನಮಸ್ಕರಿಸಿ, ನಮಗೆ ಸಂತತಿಯಿಲ್ಲ ನೀವು ಉಪಾಯ ಹೇಳಿ ಎಂದಳು.

ಶ್ರೀ ಮಚ್ಛಿಂದ್ರನಾಥ ಅವಳಿಗೆ ಸೂರ್ಯಮಂತ್ರದಿಂದ ಮಂತ್ರಿಸಿದ ಭಸ್ಮವನ್ನು ಕೊಟ್ಟು ಹೀಗೆ ಹೇಳಿದರು "ಇದನ್ನು ರಾತ್ರಿ ಮಲಗುವಾಗ ಸೇವಿಸು, ಇದು ಸಾಮಾನ್ಯ ಭಸ್ಮವಲ್ಲ ದಿನನಿತ್ಯ ಉದಯವಾಗುವ ಸಾಕ್ಷಾತ ಹರಿನಾರಾಯಣ, ಅವನು ನಿನ್ನ ಗರ್ಭದಲ್ಲಿ ಜನಿಸುವನು ಮತ್ತು ಸ್ವತಃ ನಾನೇ ಅವನಿಗೆ ಆಕಾರ ಉಪದೇಶ ಮಾಡುವೆನು, ಅವನು ಜಗತ್ತಿನಲ್ಲಿ ಕೀರ್ತಿ ಹೊಂದುವನು. ಸರ್ವಸಿದ್ಧಿ ಅವನ ಆಜ್ಞೆಯಲ್ಲಿರುವುದು" ಎಂದು ಹೇಳಿ ಹೊರಟರು. ಆಗ ಅವಳು "ಮಹಾರಾಜ ನೀವು ಯಾವಾಗ ಮತ್ತೆ ಬರುವಿರಿ",ಎಂದು ಕೇಳಿದಳು. ಆಗ ಅವರು ಹನ್ನೆರಡು ವರ್ಷಗಳ ನಂತರ ಹಿಂತಿರುಗುವೆನು ಎಂದು ಹೇಳಿ ಹೊರಟರು.

ಸರಸ್ವತಿಯು ಭಸ್ಮದ ವಿಷಯವನ್ನು ತನ್ನ ಪಕ್ಕದ ಮನೆಯವರಿಗೆಲ್ಲಾ ಹೇಳಿದಳು ಆಗ ಅವರು " ಭಸ್ಮದಿಂದ ಹೇಗೆ ಸಂತಾನ ಪ್ರಾಪ್ತಿಯಾಗುತ್ತದೆ?", ಎಂದು ಗೇಲಿ ಮಾಡಿದರು. ಆಗ ಸರಸ್ವತಿಯು ಆ ಭಸ್ಮವನ್ನು ಮನೆಯ ಪಕ್ಕದಲ್ಲಿರುವ ಗೋಶಾಲೆಯಲ್ಲಿರುವ ಗೊಬ್ಬರದ ತಿಪ್ಪೆಯಲ್ಲಿ ಹಾಕಿದಳು.

ಹನ್ನೆರೆಡು ವರ್ಷಗಳ ನಂತರ ಶ್ರೀ ಮಚ್ಛಿಂದ್ರನಾಥರು ಚಂದ್ರಗಿರಿಗೆ ಬಂದು ಸರಸ್ವತಿಯ ಮನೆಯ ಮುಂದೆ ನಿಂತರು. ಆಗ ಸರಸ್ವತಿಯು ಅವರನ್ನು ಗುರುತಿಸಿದಳು. ನಾಥರು ಅವಳಿಗೆ ಮಗನನ್ನು ಕೇಳಿದರು. ಆಗ ಅವಳು "ನನಗೆ ಮಗುವೇ ಆಗಲಿಲ್ಲ ಆ ಭಸ್ಮವನ್ನು ಗೊಬ್ಬರದ ತಿಪ್ಪೆಯಲ್ಲಿ ಎಸೆದೆ, ನೀವು ನನ್ನನ್ನು ಕ್ಷಮಿಸಿ", ಎಂದು ಹೇಳಿದಳು ಮತ್ತು ಭಸ್ಮವನ್ನು ಎಸೆದ ಗೊಬ್ಬರದ ತಿಪ್ಪೆಯನ್ನು ಅವರಿಗೆ ತೋರಿಸಿದಳು.

ಆಗ ಮಚ್ಛಿಂದ್ರನಾಥರು "ಹೇ ಪ್ರತಾಪವಂತ, ಹರಿನಾರಾಯಣ, ಸೂರ್ಯಸುತ ನೀನು ಗೊಬ್ಬರದಲ್ಲಿ ಇರುವುದಾದರೆ ಹೊರಗೆ ಬಾ", ಎಂದು ಕರೆದರು."ಗುರುದೇವ ನಾನು ಇಲ್ಲಿದ್ದೇನೆ, ಬಹಳ ಗೊಬ್ಬರ ಬಿದ್ದಿದೆ. ನೀವು ನನ್ನನ್ನು ಹೊರತೆಗೆಯಿರಿ", ಎಂದು ಹೇಳಿದನು. ತಕ್ಷಣ ಮಚ್ಛಿಂದ್ರನಾಥರು ಗೊಬ್ಬರವನ್ನು ಸರಿಸಿ ಮಗುವನ್ನು ಹೊರತೆಗೆದರು.

ಆ ತೇಜ ಪುತ್ರ ಹೊರಗೆ ಬರುತ್ತಲೆ ಸೂರ್ಯನ ಹಾಗೆ ಪ್ರಾಕಾಶಿಸುತ್ತಿದ್ದನು. ಸರಸ್ವತಿಗೆ ಇದನ್ನು ನೋಡಿ ಪಶ್ಚಾತ್ತಾಪವಾಯಿತು. ಮಚ್ಛಿಂದ್ರನಾಥರು ಆ ಮಗುವನ್ನು ತಮ್ಮ ಜೊತೆಗೆ ಕರೆದುಕೊಂಡು ಹೋದರು. ಅವನಿಗೆ ಗೋರಕ್ಷನಾಥನೆಂದು ನಾಮಕರಣ ಮಾಡಿದರು. ಅವನಿಗೆ ಶಾಬರೀ ವಿದ್ಯೆಯಲ್ಲಿ ಪ್ರವೀಣ ಮಾಡಿದರು. ಅಸ್ತ್ರವಿಧ್ಯೆಯಲ್ಲಿಯೂ ಕುಶಲ ಮಾಡಿದರು.ಗೋರಕ್ಷನಾಥನು ಯೋಗಬಲದಿಂದ ಚಿರಂಜೀವತ್ವವನ್ನು ಪ್ರಾಪ್ತಿ ಮಾಡಿಕೊಂಡನು. ಸಿದ್ಧ ಸಿದ್ಧಾಂತಪದ್ದತಿ, ಅಮನಸ್ಕಯೋಗ, ವಿವೇಕಮಾರ್ತಂಡ, ಗೋರಕ್ಷಬೋಧ, ಗೋರಕ್ಷಶತಕ ಆದಿ ಅನೇಕ ಗ್ರಂಥಗಳು ಪ್ರಸಿದ್ಧಿಯಾಗಿವೆ.

ಶಕ ೧೭೧೦ ವರೆಗೆ ಎಲ್ಲಾ ನವನಾಥರು ಪ್ರಕಟ ರೂಪದಲ್ಲಿದ್ದರು. ಅದರ ನಂತರ ಅವರು ಗುಪ್ತರಾದರು. ಗಿರನಾರ ಪರ್ವತದ ಮೇಲೆ ಶ್ರೀದತ್ತಾತ್ರೇಯರ ಆಶ್ರಯದಲ್ಲಿ ಗೊರಕ್ಷನಾಥರಿದ್ದರು. ಚೌರಾಸಿ ಸಿದ್ಧಿಗಳಿಂದ ನಾಥಪಂಥ ಉತ್ಕರ್ಷವಾಯಿತು. ನೇಪಾಳಿ ಜನರು ಗೋರಕ್ಷನಾಥರನ್ನು ಭಗವಾನ ಪಶುಪತಿನಾಥರ ಅವತಾರವೆಂದು ನಂಬುತ್ತಾರೆ. ನೇಪಾಳದ ಕೆಲವು ಸ್ಥಳಗಳಲ್ಲಿ ಅವರ ಆಶ್ರಮಗಳಿವೆ. ನಾಣ್ಯಗಳಲ್ಲಿ ಒಂದು ಕಡೆ ಅವರ ಹೆಸರನ್ನು ಕಾಣಬಹುದು. ಮಹಾರಾಷ್ಟ್ರದ ಔಂಡಯ ನಾಗನಾಥರ ತಪೋಭೂಮಿ ಎಂದೂ ಹೇಳಲಾಗುತ್ತದೆ.

Leave a Comment