ಶ್ರೀ ಗಣೇಶದಾಸ

ಕಾಶಿಕ್ಷೇತ್ರದಲ್ಲಿ ಒಬ್ಬ ಸತ್ಪುರುಷರು ಪುರಾಣ ಮತ್ತು ಉಪನಿಷತ್ತುಗಳ ಪೂರ್ಣ ಅಧ್ಯಯನ ಮಾಡಿದ್ದರು. ಅವರ ಹೆಸರು ’ಗಣೇಶದಾಸ’ ಎಂದು. ಮಹಾರಾಷ್ಟ್ರದಲ್ಲಿ ಹೇಗೆ ಸಮರ್ಥ ರಾಮದಾಸರೋ, ಹಾಗೆ ಕಾಶಿಕ್ಷೇತ್ರದಲ್ಲಿ ಗಣೇಶದಾಸರು. ಹೇಗೆ ರಾಮದಾಸರು "ಈ ರಾಮಕಥೆಯನ್ನು ಬ್ರಹ್ಮಾಂಡ ಬೇಧ ಮಾಡಿ ಅದರ ಆಚೆಗೆ ತಲುಪಿಸುವೆನು" ಎಂದು ಪ್ರತಿಜ್ಞೆ ಮಾಡಿದ್ದರೋ, ಹಾಗೆ ಗಣೇಶದಾಸರು "ಬ್ರಹ್ಮಾಂಡ ಭೇದ ಮಾಡಿ ಗಣೇಶಕಥೆಯನ್ನು ಅದರ ಆಚೆಗೆ ತಲುಪಿಸುವೆನು" ಎಂದು ಪ್ರತಿಜ್ಞೆ ಮಾಡಿದ್ದರು. ಅತ್ಯಂತ ಸತ್ಪುರುಷರಾದ ಗಣೇಶದಾಸರಿಗೆ ಚರಾಚರ ವಸ್ತುಗಳಲ್ಲಿ ಶ್ರೀಗಣೇಶನ ದರ್ಶನವಾಗುತ್ತಿತ್ತು. ಆದ್ದರಿಂದ ಅವರಿಗೆ ಗಣೇಶದಾಸ ಎನ್ನುತ್ತಿದ್ದರು. ಅವರು ಅತ್ಯಂತ ಸತ್ಪಾತ್ರ, ಅಂತರ ಬಾಹ್ಯ ಶುಧ್ಧರಾದ ನಿರ್ಮೋಹಿ ಮಹಾತ್ಮರಾಗಿದ್ದರು.

ಗಣೇಶದಾಸರು ಒಂದು ಸಲ ಕಾಶಿ-ವಾರಣಾಸಿಯ ಮಣಿಕರ್ಣಿಗುಡ್ಡದಲ್ಲಿ ತಿರುಗಾಡುತ್ತಿದ್ದರು. ಸಂಜೆ ಮುಗಿದು ರಾತ್ರಿ ಆಯಿತು. ಆ ಸಮಯ ಕೆಲವು ಕಳ್ಳರು ಅಲ್ಲಿಗೆ ಬಂದು ಅವರಿಗೆ, "ನೀನು ಯಾರು?" ಎಂದು ಕೇಳಿದರು. ಆಗ ಗಣೇಶದಾಸರು ನಗುತ್ತಿದ್ದರು ಮತ್ತು ಅವರು ಉನ್ಮನಿ (ಉನ್ಮನಿ ಎಂದರೆ ಆನಂದದ ಪರಮಾವಸ್ಥೆ) ಅವಸ್ಥೆಯಲ್ಲಿ ಇದ್ದರು. ಅವರಿಗೆ ಎಲ್ಲ ಕಡೆ ಗಜಾನನ ಕಾಣಿಸಿದರು. ಅವರು ಕಳ್ಳರಿಗೆ "ನೀವು ಹೇಗೋ ನಾನು ಹಾಗೆ" ಎಂದರು. ಇದನ್ನು ಕೇಳಿ ಅವರು, ಇವನು ನಮ್ಮ ಜಾತಿಯವನೆ, ಒಳ್ಳೆಯದಾಯಿತು ಎಂದು ತಮ್ಮ ಜೊತೆಗೆ ಕಳ್ಳತನ ಮಾಡಲು ಕರೆದುಕೊಂಡು ಹೊರಟರು. ಕಳ್ಳರು ಒಂದು ದೊಡ್ಡ ಮನೆಗೆ ಕಣ್ಣು ಹಾಕಿದರು. ಗಣೇಶದಾಸರು ಹೊಸಬರು ಮತ್ತು ಅವರಲ್ಲಿ ಬರಿ ಒಂದೇ ಜೋಳಿಗೆ ಇದೆ ಅದರಲ್ಲಿ ಸ್ವಲ್ಪ ಚಿನ್ನ ತುಂಬ ಬಹುದು ಮತ್ತೇನು ಉಪಯೋಗವಿಲ್ಲವೆಂದು ಅವರನ್ನು ಮನೆಯ ಬಾಗಿಲಿನ ಮುಂದೆ ನಿಲ್ಲಿಸಿದರು. ತಾವು ಮನೆಯ ಒಳಗೆ ಹೋಗುವಾಗ, "ನಾವು ಕಳ್ಳತನ ಮಾಡಲು ಹೊರಟಿದ್ದೇವೆ ಯಾರಾದರು ಕಂಡರೆ ಅಥವಾ ಬರುವ ಸದ್ದು ಕೇಳಿದರೆ ನಮಗೆ ತಿಳಿಸು" ಎಂದು ಹೇಳಿದರು. ಗಣೇಶದಾಸರು ಒಪ್ಪಿಕೊಂಡು ಅಲ್ಲೆ ನಿಂತಾರು. ಆಗ ಅವರಿಗೆ ಎಲ್ಲ ಕಡೆಯಲ್ಲಿ ಗಣೇಶನ ಪ್ರಕಾಶ ಮತ್ತು ಶ್ರೀ ಗಣೇಶ ಕಾಣಿಸುತ್ತಿದ್ದರು.

ಕಳ್ಳರು ಯಾರದರು ಕಂಡರೆ ಅಥವಾ ಸದ್ದಾದರೆ ನಮಗೆ ಸೂಚಿಸು ಅಂತ ಹೇಳಿರುವ ಮಾತು ಗಣೇಶದಾಸರಿಗೆ ನೆನಪಾಯಿತು. ತಕ್ಷಣ ಅವರು ಜೋಳಿಗೆಯಲ್ಲಿ ಇದ್ದ ಶಂಖವನ್ನು ಹೊರಗೆ ತೆಗೆದು ಊದಿದರು. ಆಗ ಆ ಮನೆಯ ಸದಸ್ಯರೆಲ್ಲರಿಗೂ ಎಚ್ಚರವಾಯಿತು. ಎದ್ದು ನೋಡಿದರೆ ಕಳ್ಳರು ಕಂಡರು. ಆಗ ಕಳ್ಳರು ಹೆದರಿದರು ಮತ್ತು ತಮ್ಮ ಜೊತೆಗೆ ಗಣೇಶದಾಸರನ್ನು ಕರೆದುಕೊಂಡು ಹೋದರು. ಕಳ್ಳರು ಅವರಿಗೆ "ಎಂಥಾ ಹುಚ್ಚಾ! ನಮ್ಮ ಜಾತಿಯವನೆಂದು ಜೊತೆಗೆ ಕರೆದುಕೊಂಡು ಹೋದರೆ, ನೀನು ಏನು ಮಾಡಿದಿ? ಶಂಖವನ್ನು ಯಾಕೆ ಊದಿದೆ?" ಎಂದು ಕೇಳಿದರು. ಆಗ ಗಣೇಶದಾಸರು, "ನೀವು ಹೇಳಿದ್ದನ್ನೇ ಮಾಡಿದ್ದೇನೆ, ನೀವು ಒಳಗೆ ಹೋದಾಗ ಎಲ್ಲಾ ಕಡೆ ಗಣೇಶ ಕಂಡರು ಮತ್ತು ಅವರ ದರ್ಶನವಾಯಿತು. ಆ ಸಮಯದಲ್ಲಿ ನನ್ನ ಭಾವ ಜಾಗೃತವಾಯಿತು ಮತ್ತೆ ನಾನು ಅವರ ಸ್ವಾಗತಕ್ಕೆ ಶಂಖ ಊದಿದೆನು" ಎಂದರು. ಇದನ್ನು ಕೇಳಿ ಕಳ್ಳರಿಗೆ ಭಾವ ಜಾಗೃತಿ ಆಯಿತು. ಆಗ ಅವರು ತಮ್ಮ ಕೈಯಲ್ಲಿ ಇರುವ ಶಸ್ತ್ರಗಳನ್ನು ಒಗೆದು ಗಣೇಶದಾಸರ ಚರಣಗಳಲ್ಲಿ ಶರಣಾಗಿ ಅವರ ಶಿಷ್ಯರಾದರು.