ಶ್ರೀವಿಷ್ಣುವಿನ ಆರನೆಯ ಅವತಾರ – ಪರಶುರಾಮ

ಪರಶುರಾಮ ಶ್ರೀವಿಷ್ಣುವಿನ ಆರನೆಯ ಅವತಾರ. ಅವರ ಕಥೆಗಳು ರಾಮಾಯಣ, ಮಹಾಭಾರತ ಹಾಗೂ ಕೆಲವು ಪುರಾಣಗಳಲ್ಲಿ ಕಂಡು ಬರುತ್ತವೆ. ಅವರ ಮೊದಲಿನ ಅವತಾರಗಳಂತೆ ಅವರ ಹೆಸರಿನ ಸ್ವತಂತ್ರ ಪುರಾಣಗಳಿಲ್ಲ.

ಪರಶುರಾಮರ ತಂದೆ ತಾಯಿ

ಪರಶುರಾಮರ ತಾಯಿ ರೇಣುಕಾ ಮತ್ತು ತಂದೆ ಭೃಗುಕುಲೋತ್ಪನ್ನ ಋಷಿಗಳಾದ ಜಮದಗ್ನಿ. ಹತ್ತೊಂಭತ್ತನೆಯ ತ್ರೇತಾಯುಗದಲ್ಲಿ (ಮಹಾಭಾರತಕ್ಕನುಸಾರ ತ್ರೇತಾ ಹಾಗೂ ದ್ವಾಪರಯುಗಗಳ ಸಂಧಿಕಾಲದಲ್ಲಿ) ಪರಶುರಾಮರ ಜನನವಾಯಿತು.

ಪರಶುರಾಮರ ಕಾರ್ಯ

ಅಧಮ ಕ್ಷತ್ರಿಯರ ವಧೆ

ವಾಲ್ಮೀಕಿಯು ಪರಶುರಾಮರನ್ನು ‘ರಾಜವಿಮರ್ದನ’ ಎಂದು ಸಂಬೋಧಿಸಿದ್ದಾರೆ. ಇದರಿಂದ ’ಪರಶುರಾಮ ಸಾರಾಸಗಟಾಗಿ ಎಲ್ಲಾ ಕ್ಷತ್ರಿಯರನ್ನು ಸಂಹರಿಸದೆ ದುಷ್ಟ-ದುರ್ಜನ ಕ್ಷತ್ರಿಯ ರಾಜರನ್ನು ಸಂಹರಿಸಿದರು.’ ಎಂದು ಹೇಳಬಹುದು.

ಕಾರ್ತವೀರ್ಯನು ಜಮದಗ್ನಿ ಋಷಿಗಳ ಆಶ್ರಮದಿಂದ ಕಾಮಧೇನು ಹಾಗೂ ಅದರ ಕರುವನ್ನು ಅಪಹರಿಸಿದನು. ಆಗ ಪರಶುರಾಮ ಅಲ್ಲಿ ಇರಲಿಲ್ಲ. ಮರಳಿ ಬಂದ ನಂತರ ಅವರಿಗೆ ಈ ಸಂಗತಿ ತಿಳಿಯುತ್ತಲೇ ಅವರು ಕಾರ್ತವೀರ್ಯನನ್ನು ವಧಿಸುವುದಾಗಿ ಪ್ರತಿಜ್ಞೆಗೈದರು. ನರ್ಮದಾ ನದಿಯ ತೀರದಲ್ಲಿ ಅವರಿಬ್ಬರ ನಡುವೆ ದ್ವಂದ್ವಯುದ್ಧ ನಡೆಯಿತು. ಈ ಯುದ್ಧದಲ್ಲಿ ಪರಶುರಾಮ ಕಾರ್ತವೀರ್ಯನನ್ನು ವಧಿಸಿದರು. ಅನಂತರ ತಂದೆ ಜಮದಗ್ನಿಯ ಆಜ್ಞೆಯಂತೆ ಅವರು ತೀರ್ಥಯಾತ್ರೆ ಹಾಗೂ ತಪಸ್ಸು ಮಾಡಲು ಹೋದರು.

ಪರಶುರಾಮ ಹೋದನಂತರ ಕಾರ್ತವೀರ್ಯನ ವಧೆಯ ಸೇಡು ತೀರಿಸಿಕೊಳ್ಳಲು ಹೈಹಯ ಜಮದಗ್ನಿ ಋಷಿಗಳ ಶಿರಚ್ಛೇದನಗೊಳಿಸಿ ಅವರ ಹತ್ಯೆಗೈದನು. ಇದು ತಿಳಿಯುತ್ತಲೇ ಪರಶುರಾಮ ತಕ್ಷಣ ಆಶ್ರಮಕ್ಕೆ ಧಾವಿಸಿದರು. ಜಮದಗ್ನಿಯ ಶರೀರದ ಮೇಲಿನ ಇಪ್ಪತ್ತೊಂದು ಗಾಯಗಳನ್ನು ಕಂಡು ಅವರು ತಕ್ಷಣ ’ಹೈಹಯ ಹಾಗೂ ಇತರ ಕ್ಷತ್ರೀಯ ಅಧಮರು ಮಾಡಿದ ಈ ಬ್ರಹ್ಮಹತ್ಯೆಯ ಶಿಕ್ಷೆ ಎಂದು ’ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯಗೊಳಿಸುವೆನು’ ಎಂದು ಪ್ರತಿಜ್ಞೆ ಮಾಡಿದರು. ಈ ಪ್ರತಿಜ್ಞೆಗನುಸಾರ ಅವರು ಮದೋನ್ಮತ್ತರಾದ ಕ್ಷತ್ರಿಯರನ್ನು ನಾಶಗೊಳಿಸುವುದು, ಯುದ್ಧದ ನಂತರ ಮಹೇಂದ್ರ ಪರ್ವತದ ಮೇಲೆ ಹೋಗುವುದು, ಕ್ಷತ್ರಿಯರು ಸೊಕ್ಕಿನಿಂದ ವರ್ತಿಸಿದರೆ ಪುನಃ ಅವರನ್ನು ನಾಶಗೊಳಿಸುವುದು, ಹೀಗೆ ಇಪ್ಪತ್ತೊಂದು ಬಾರಿ ದಂಡೆತ್ತಿ ಹೋದರು. ಸಮಂತಪಂಚಕದಲ್ಲಿ ಕೊನೆಯ ಯುದ್ಧ ಮಾಡಿ ರಕ್ತದಿಂದ ಕೊಳೆಯಾದ ತನ್ನ ಪರಶುವನ್ನು ತೊಳೆದು ಶಸ್ತ್ರಗಳನ್ನು ಕೆಳಗಿಟ್ಟರು.

ಕ್ಷೇತ್ರಪಾಲ ದೇವತೆಗಳ ಸ್ಥಾನಗಳನ್ನು ಪ್ರತಿಷ್ಠಾಪಿಸುವುದು

ಪರಶುರಾಮ ೨೧ ಬಾರಿ ಪೃಥ್ವಿಯ ಪ್ರದಕ್ಷಿಣೆ ಮಾಡುವಾಗ ೧೦೮ ಶಕ್ತಿಪೀಠಗಳನ್ನು, ತೀರ್ಥಕ್ಷೇತ್ರಗಳನ್ನು, ಅಂದರೆ ಕ್ಷೇತ್ರಪಾಲ ದೇವತೆಗಳ ಸ್ಥಾನಗಳನ್ನು ಪ್ರತಿಷ್ಠಾಪಿಸಿದರು.

ಪರಶುರಾಮರ ವೈಶಿಷ್ಟ್ಯಗಳು

ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |

ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||

ಅರ್ಥ : ನಾಲ್ಕು ವೇದಗಳು ಮುಖೋದ್ಗತವಾಗಿವೆ, ಅಂದರೆ ಪೂರ್ಣ ಜ್ಞಾನವಿದೆ ಹಾಗೂ ಬೆನ್ನ ಮೇಲೆ ಬಾಣದೊಂದಿಗೆ ಧನುಷ್ಯವಿದೆ, ಅಂದರೆ ಶೌರ್ಯವಿದೆ; ಅಂದರೆ ಇಲ್ಲಿ ಬ್ರಾಹ್ಮತೇಜ ಹಾಗೂ ಕ್ಷಾತ್ರತೇಜ ಹೀಗೆ ಎರಡು ತೇಜಗಳಿವೆ. ಯಾರು ವಿರೋಧಿಸುವರೋ, ಅವರನ್ನು ಪರಶುರಾಮ ಶಾಪದಿಂದ ಅಥವಾ ಬಾಣದಿಂದ ಸೋಲಿಸಬಲ್ಲರು.

ರಾಮನೊಳಗೆ ತೇಜವನ್ನು ಸಂಕ್ರಮಿತ ಗೊಳಿಸುವುದು

ಒಮ್ಮೆ ಶ್ರೀರಾಮನ ಕೀರ್ತಿಯನ್ನು ಕೇಳಿ ಪರಶುರಾಮ ಅವರ ಪರಾಕ್ರಮವನ್ನು ಪರೀಕ್ಷಿಸಲು ಅವರ ದಾರಿಯಲ್ಲಿ ಅಡ್ಡ ಬಂದು ತನ್ನ ಧನಸ್ಸನ್ನು ರಾಮನ ಕೈಯಲ್ಲಿ ಕೊಟ್ಟು ಅದನ್ನು ಬಗ್ಗಿಸಿ ಅದಕ್ಕೆ ಬಾಣವನ್ನು ಹಚ್ಚಿ ತೋರಿಸಲು ಹೇಳಿದರು. ಶ್ರೀರಾಮ ಹಾಗೆ ಮಾಡಿ ತೋರಿಸಿ ’ಈ ಬಾಣವನ್ನು ನಾನು ಎಲ್ಲಿ ಬಿಡಲಿ’ ಎಂದು ಕೇಳಿದರು. ಪರಶುರಾಮರು ‘ನನ್ನ ಈ (ಕಾಶ್ಯಪಿ) ಭೂಮಿಯ ಮೇಲಿನ ಗತಿಯನ್ನು ನಿಲ್ಲಿಸು’ ಎಂದು ಹೇಳಿದಾಗ ಶ್ರೀರಾಮ ಹಾಗೆ ಮಾಡಿದರು. ಈ ಪ್ರಸಂಗದಲ್ಲಿ ಪರಶುರಾಮ ತನ್ನ ಧನಸ್ಸನ್ನು ಶ್ರೀರಾಮನಿಗೆ ನೀಡಿ, ತನ್ನ ಕ್ಷಾತ್ರತೇಜವನ್ನು ರಾಮನೊಳಗೆ ಸಂಕ್ರಮಿತಗೊಳಿಸಿದರು.

ಸರ್ವೋತ್ತಮ ಧನುರ್ವಿದ್ಯಾ ಶಿಕ್ಷಕ

ಒಮ್ಮೆ ಶಸ್ತ್ರವನ್ನು ಕೆಳಗಿಟ್ಟ ನಂತರ ಪರಶುರಾಮರು ಕ್ಷತ್ರಿಯರ ಮೇಲಿನ ವೈರಿಭಾವವನ್ನು ತ್ಯಜಿಸಿದರು ಹಾಗೂ ಬ್ರಾಹ್ಮಣ, ಕ್ಷತ್ರಿಯರೆಲ್ಲರಿಗೂ ಸಮಭಾವದಿಂದ ಶಸ್ತ್ರವಿದ್ಯೆಯನ್ನು ಕಲಿಸಲಾರಂಭಿಸಿದರು. ಮಹಾಭಾರತದಲ್ಲಿ ಭೀಷ್ಮಾಚಾರ್ಯರು, ದ್ರೋಣಾಚಾರ್ಯರು ಮುಂತಾದ ಹಿರಿಯ ಯೋಧರು ಪರಶುರಾಮರ ಶಿಷ್ಯರೇ ಆಗಿದ್ದರು.

ದಾನಶೂರ

ಪರಶುರಾಮರು ಕ್ಷತ್ರಿಯರನ್ನು ವಧಿಸಲು ದಂಡೆತ್ತಿ ಹೋದುದರಿಂದ ಸಂಪೂರ್ಣ ಪೃಥ್ವಿಯು ಅವರ ಸ್ವಾಮಿತ್ತ್ವದಲ್ಲಿ ಬಂದಿತು. ಆದುದರಿಂದ ಅವರಿಗೆ ಅಶ್ವಮೇಧಯಜ್ಞ ಮಾಡುವ ಅಧಿಕಾರ ಪ್ರಾಪ್ತಿಯಾಗಿ ಅವರು ಅಶ್ವಮೇಧ ಯಜ್ಞ ಮಾಡಿದರು. ಯಜ್ಞದ ಕೊನೆಯಲ್ಲಿ ಪರಶುರಾಮರು ಆ ಯಜ್ಞದ ಪೌರೋಹಿತ್ಯ ವಹಿಸಿದ (ಅಧ್ವರ್ಯು) ಕಶ್ಯಪನಿಗೆ ಭೂಮಿಯನ್ನು ದಾನವಾಗಿ ನೀಡಿದರು.

ಹೊಸಭೂಮಿಯ ನಿರ್ಮಿತಿ

ಎಲ್ಲಿಯವರೆಗೆ ಪರಶುರಾಮನು ಈ ಭೂಮಿಯಲ್ಲಿ ಇರುವನೋ ಅಲ್ಲಿಯವರೆಗೆ ಕ್ಷತ್ರಿಯರ ಕುಲದ ಉನ್ನತಿಯಾಗುವಂತಿಲ್ಲ, ಎಂದು ತಿಳಿದು ಕಶ್ಯಪನು ಪರಶುರಾಮನಿಗೆ ‘ಈಗ ಈ ಭೂಮಿಯ ಮೇಲೆ ನನ್ನ ಅಧಿಕಾರವಿದೆ. ನಿನಗೆ ಇಲ್ಲಿ ಉಳಿಯುವ ಅಧಿಕಾರವಿಲ್ಲ.’ ಎಂದು ಹೇಳಿದರು. ಅನಂತರ ಪರಶುರಾಮರು ಸಮುದ್ರವನ್ನು ಸರಿಸಿ ಸ್ವಂತದ ಕ್ಷೇತ್ರವನ್ನು ನಿರ್ಮಿಸಿದರು. ವೈತರಣಾದಿಂದ ಕನ್ಯಾಕುಮಾರಿಯವರೆಗೆ ಇರುವ ಈ ಭೂಭಾಗಕ್ಕೆ ‘ಪರಶುರಾಮ ಕ್ಷೇತ್ರ’ ಎಂದು ಕರೆಯಲಾಗುತ್ತದೆ.

ಪರಶುರಾಮರು ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿದ್ದಾರೆ.

ಪರಶುರಾಮಕ್ಷೇತ್ರಗಳು

ಸಹ್ಯಾದ್ರಿ ಪರ್ವತಗಳ ಉತ್ತರ ತುದಿಯಲ್ಲಿ ಸಾಲ್ಹೇರದ ಬೆಟ್ಟದ ಮಧ್ಯಯುಗದ ಕೋಟೆಯಲ್ಲಿ, ಪಂಜಾಬಿನ ಕಾಂಗಡಾ ಜಿಲ್ಲೆಯಲ್ಲಿ, ಕೊಂಕಣದಲ್ಲಿ ಚಿಪಳುಣನಿಂದ ಐದು ಮೈಲು ದೂರದಲ್ಲಿರುವ ಒಂದು ಬೆಟ್ಟದಲ್ಲಿ, ಹಾಗೆಯೇ ಗೋಮಂತಕದ ಕಾಣಕೋಣದಲ್ಲಿ ಕರ್ನಾಟಕದ ಸೌಂದತ್ತಿಯ ಶ್ರೀ ರೇಣುಕಾದೇವಿಯ ಮಡಿಲಲ್ಲಿ ಪರಶುರಾಮನ ಒಂದು ಪ್ರಾಚೀನ ಮಂದಿರವಿದೆ.

ಮೂರ್ತಿ

ನೋಡಲು ಭೀಮಕಾಯ ದೇಹವುಳ್ಳ, ಜಟಾಧಾರಿ, ಹೆಗಲಿಗೆ ಧನುಷ್ಯ ಹಾಗೂ ಕೈಯಲ್ಲಿ ಪರಶು – ಪರಶುರಾಮ ಮೂರ್ತಿ ಹೀಗೆ ಇರುತ್ತದೆ.

ಪೂಜಾವಿಧಿ

ಪರಶುರಾಮರು ಶ್ರೀವಿಷ್ಣುವಿನ ಅವತಾರವಾಗಿರುವುದರಿಂದ ಅವರು ಉಪಾಸ್ಯದೇವತೆಯಂದು ಪೂಜಿಸಲಾಗುತ್ತದೆ. ವೈಶಾಖ ಶುಕ್ಲ ಪಕ್ಷ ತೃತಿಯಾ (ಅಕ್ಷಯ ತದಿಗೆ) ದಂದು ಬರುವ ಪರಶುರಾಮ ಜಯಂತಿಯನ್ನು ಒಂದು ಉತ್ಸವವೆಂದೂ ಆಚರಿಸಲಾಗುತ್ತದೆ.