ಪಂಚತಂತ್ರ

ಪಂಚತಂತ್ರ – ಮೂರ್ಖನನ್ನೂ ವ್ಯವಹಾರ ಕುಶಲನನ್ನಾಗಿ ಮಾಡುವ ಸಂಸ್ಕೃತ ಭಾಷೆಯ ಕೊಡುಗೆ!

ಪಂಚತಂತ್ರ, ಈ ಶಬ್ದದ ಉತ್ಪತ್ತಿಯು ಸಂಸ್ಕೃತಭಾಷೆಯಿಂದಾಗಿದೆ. ’ಪಂಚ’ ಎಂದರೆ ಐದು ಮತ್ತು ’ತಂತ್ರ’ ಎಂದರೆ ’ತತ್ವ’. ಪಂಚತಂತ್ರದ ಅರ್ಥ ಐದುತತ್ವಗಳು.

ಈ ಐದುತತ್ವಗಳು ರಾಜನ ಮತ್ತು ಸಾಮನ್ಯವ್ಯಕ್ತಿಯ ದೈನಂದಿನ ಜೀವನಕ್ಕಾಗಿ ಮಾರ್ಗದರ್ಶಕ ತತ್ವಗಳಾಗಿವೆ. ಈ ಗ್ರಂಥದಲ್ಲಿ ರಾಜನು ಹೇಗೆ ರಾಜ್ಯವಾಳಬೇಕು, ಮಿತ್ರತ್ವ ಹೇಗೆ ಮತ್ತು ಯಾರ ಜೊತೆ ಬೆಳಸಬೇಕು ಯಾರ ಜೊತೆ ಮೈತ್ರಿ ಬೆಳೆಸಬಾರದು, ಯೋಗ್ಯ ಮಂತ್ರಿಯನ್ನು ಹೇಗೆ ಆರಿಸಬೇಕು ಮತ್ತು ದೈನಂದಿನ ಜೀವನದಲ್ಲಿ ನಮ್ಮ ಆಚರಣೆ ಹೇಗಿರಬೇಕು ಇದರ ಮಾರ್ಗದರ್ಶನವನ್ನು ಕಥೆಗಳ ಮೂಲಕ ಮಾಡಲಾಗಿದೆ.

ಪಂಚತಂತ್ರದ ನಿರ್ಮಿತಿ

ಪ್ರಾಚೀನಕಾಲದಲ್ಲಿ, ದಕ್ಷಿಣಭಾರತದ ಮಹಿಲಾರೋಪ್ಯ ಪ್ರದೇಶದಲ್ಲಿ ಅಮರಶಕ್ತಿ ಹೆಸರಿನ ಒಬ್ಬ ಪ್ರಜಾಹಿತ ಕಾಪಾಡುವ ಮತ್ತು ಕಾರ್ಯದಕ್ಷ ರಾಜನಿದ್ದನು. ಈ ರಾಜನಿಗೆ ಬಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ ಎಂದು ಮೂರು ಮಕ್ಕಳಿದ್ದರು. ಈ ಮೂವರೂ ಮೂರ್ಖ, ಆಲಸಿ ಮತ್ತು ಬುದ್ಧಿಶೂನ್ಯರಾಗಿದ್ದರು. ಇದೇ ರಾಜನ ಚಿಂತೆಗೆ ಕಾರಣವಾಗಿತ್ತು. ರಾಜನು ವೃದ್ಧನಾಗಿದ್ದನು, ’ನನ್ನ ನಂತರ ಈ ರಾಜ್ಯಭಾರವನ್ನು ಯಾರು ಸಂಭಾಳಿಸುವರು ಎಂಬ ವಿಚಾರವು ರಾಜನಿಗೆ ಸದಾ ಕಾಡುತ್ತಿತ್ತು. ತನ್ನ ಮೂರ್ಖ ಮಕ್ಕಳನ್ನು ನೋಡಿ ಅವನಿಗೆ ಮತ್ತೆ ಮತ್ತೆ ಒಂದೆ ವಚನದ ಸ್ಮರಣೆಯಾಗುತ್ತಿತ್ತು.

ಅಜಾತಮೃತಮೂರ್ಖೇಭ್ಯೋ ಮೃತಜಾತೌ ಸುತೌ ವರಮ್|
ಯತಸ್ತೌ ಸ್ವಲ್ಪದುಃಖಾಯ ಯಾವಜ್ಜೀವಂ ಜಡೋ ದಹೇತ್ ||

ಅರ್ಥ: ಅಜಾತ (ಜನಿಸದ), ಮೃತ ಮತ್ತು ಮೂರ್ಖ ಪುತ್ರರಿಗಿಂತ ಪುತ್ರರು ಜನ್ಮತಾಳದೇ ಇರುವುದು ಉತ್ತಮ, ಏಕೆಂದರೆ ಮೊದಲೆರಡು ಕಾರಣಗಳಿಂದಾಗುವ ದುಖಃ ಅಲ್ಪ ಸಮಯದಾಗಿದ್ದರೆ, ಮೂರ್ಖ ಪುತ್ರನಿಂದ ಮನಸ್ಸು ಸುಟ್ಟಂತಾಗುತ್ತದೆ.


ಆ ರಾಜನ ಆಶ್ರಯದಲ್ಲಿ ೫೦೦ ಪಂಡಿತರಿದ್ದರು. ಒಂದು ದಿನ ರಾಜನು ಪಂಡಿತರನ್ನು ಕರೆದು, ‘ನನ್ನ ಮಕ್ಕಳು ಚತುರರಾಗಲು ಎನಾದರು ಮಾಡಿ’ ಎಂದು ಹೇಳಿದನು. ಆಗ ಪಂಡಿತರು ರಾಜನಿಗೆ ’ವಿಷ್ಣುಶರ್ಮಾ ಎಂಬ ಪಂಡಿತ ಬ್ರಹ್ಮಣನಿರುವನು, ನೀವು ನಿಮ್ಮ ಮಕ್ಕಳನ್ನು ಆ ಪಂಡಿತನಿಗೆ ಒಪ್ಪಿಸಿ. ಅವರು ಮಕ್ಕಳನ್ನು ಚತುರ ಮಾಡುವರು’ ಎಂದು ಸಲಹೆ ನೀಡಿದರು. ರಾಜನು ವಿಷ್ಣುಶರ್ಮಾನನ್ನು ಕರೆಸಿ ತನ್ನ ಇಚ್ಛೆಯನ್ನು ಹೇಳಿದನು, ಮತ್ತು ಅದಕ್ಕೆ ತನ್ನ ರಾಜ್ಯದಲ್ಲಿ ಪಾಲು ನೀಡುವುದಾಗಿ ತಿಳಿಸಿದನು. ವಿಷ್ಣುಶರ್ಮಾ ತನ್ನ ಜ್ಞಾನವನ್ನು ಮಾರಲು ನಿರಾಕರಿಸಿದರು, ಆದರೆ ಮಕ್ಕಳನ್ನು ೬ ತಿಂಗಳಲ್ಲಿ ವ್ಯವಹಾರಕುಶಲ ಮತ್ತು ಜೊತೆಗೆ ದೇವತೆಗಳ ರಾಜ ಇಂದ್ರನನ್ನೂ ಜಯಿಸುವ ಕ್ಷಮತೆಯಿರುವಷ್ಟು ಸಮರ್ಥರನ್ನಾಗಿಸುವ ವಚನ ನೀಡಿದನು. ಆಗ ರಾಜನು ತನ್ನ ಪುತ್ರರನ್ನು ವಿಷ್ಣುಶರ್ಮಾನ ಜೊತೆಗೆ ಕಳುಹಿಸಿದನು. ವಿಷ್ಣುಶರ್ಮಾ ಆ ಮಕ್ಕಳಿಗೆ ವಿವಿಧ ಕಥೆಗಳ ಮಾಧ್ಯಮದಿಂದ ವ್ಯವಹಾರ ಜ್ಞಾನ ಕಲಿಸಿದರು.

ಆರು ತಿಂಗಳ ನಂತರ ರಾಜನು ತನ್ನ ಮಕ್ಕಳನ್ನು ನೋಡಲು, ಅವರು ಪವಾಡಸದೃಶ ಬದಲಾಗಿದ್ದರು. ರಾಜನ ಮಕ್ಕಳು ಆರು ತಿಂಗಳಲ್ಲಿ ವ್ಯವಹಾರ ಕುಶಲರಾಗಿದ್ದರು. ರಾಜನಿಗೆ ಇದನ್ನು ನೋಡಿ ಅತೀ ಆನಂದವಾಯಿತು. ವಿಷ್ಣುಶರ್ಮಾ ರಾಜಪುತ್ರರಿಗೆ ಜ್ಞಾನ ನೀಡುವುದಲ್ಲದೆ, ಪಶು-ಪಕ್ಷಿಗಳ ಮಾಧ್ಯಮದಿಂದ ಆ ಜ್ಞಾನವನ್ನು ಯಾವಾಗ, ಎಲ್ಲಿ ಮತ್ತು ಹೇಗೆ ಉಪಯೋಗಿಸಬೇಕೆಂಬುವುದನ್ನೂ ಕಲಿಸಿದ್ದನು.

ವಿಷ್ಣುಶರ್ಮಾರವರು ಕಲಿಸಿದ ಕಥೆಗಳನ್ನು ಐದು ಭಾಗಗಳಾಗಿ ವಿಭಜಿಸಲಾಗಿದೆ. ಇವುಗಳನ್ನು ಐದು ತಂತ್ರಗಳು ಎಂದೂ ಕರೆಯಬಹುದು, ಆದುದರಿಂದ ಈ ಕಥೆಗಳನ್ನು ಒಟ್ಟಾಗಿ ಪಂಚತಂತ್ರವೆಂದು ಕರೆಯುತ್ತಾರೆ.

೧. ಮಿತ್ರಭೇದ – ಯಾರೊಂದಿಗೆ ಮೈತ್ರಿ ಬೆಳೆಸಬಾರದು

೨. ಮಿತ್ರಪ್ರಾಪ್ತಿ – ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು.

೩. ಕಾಕೋಲುಕೀಯಮ್ – ಕಾಗೆ ಮತ್ತು ಗೂಬೆಯ ವೈರತ್ವದ ಕಥೆ.

೪. ಲಬ್ಧಪ್ರಣಾಶನಮ್ – ಪ್ರಾಪ್ತ ಧನದ ನಾಶ ಹೇಗಾಗುತ್ತದೆ.

೫. ಅಪರೀಕ್ಷಿತಕಾರಕಮ್ – ಸಮಗ್ರ ವಿಚಾರ ಮಾಡದೆ ನಡೆಸಿದ ಕೃತಿಯ ಪರಿಣಾಮವೇನಾಗುತ್ತದೆ.

ಮಾನವ ಜೀವನದ ಉನ್ನತ ಮೌಲ್ಯಗಳ
ಪರಿಚಯ ಮಾಡಿಕೊಳ್ಳಲು ಉತ್ತಮ ವಿಧಾನ

ಪಂಚತಂತ್ರಗಳನ್ನು ಸರಿಸುಮಾರು ೨೦೦೦ ವರ್ಷಗಳ ಪೂರ್ವ ಬರೆಯಲಾಗಿದೆ, ಆದರೆ ಅದರಲ್ಲಿರುವ ಮೌಲಿಕ ಜ್ಞಾನದಿಂದ ಅದು ಇಂದಿಗೂ ಲೋಕಪ್ರಿಯ ಮತ್ತು ಮಾರ್ಗದರ್ಶಕವಾಗಿದೆ. ಮೂಲತಃ ಸಂಸ್ಕೃತದಲ್ಲಿ ರಚಿಸಲ್ಪಟ್ಟ ಪಂಚತಂತ್ರ ಈಗ ವಿಶ್ವದ ಅನೇಕ ಭಾಷೆಗಳಲ್ಲಿ ಉಪಲಬ್ಧವಿದೆ. ಪಂಚತಂತ್ರದಲ್ಲಿ ಒಟ್ಟು ೮೭ ಕಥೆಗಳಿವೆ. ಪ್ರತಿಯೊಂದು ಕಥೆಯಲ್ಲಿ ಒಂದು ಬಹುಮೂಲ್ಯ ನೀತಿಯು ಅಡಗಿದೆ. ಮಾನವನ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಪರಿಚಯಿಸಲು ಪಂಚತಂತ್ರ ಒಂದು ಉತ್ತಮ ವಿಧಾನವಾಗಿದೆ. ಈ ಕಥೆಗಳ ಮೂಲಕ ಮನೋವಿಜ್ಞಾನ, ವ್ಯಾವಹಾರಿಕ ಮತ್ತು ರಾಜನೀತಿಯ ಸಿದ್ಧಾಂತಗಳ ಪರಿಚಯ ಆಗುತ್ತದೆ. ಸಂಸ್ಕೃತ ಸಾಹಿತ್ಯದಲ್ಲಿ ಪಂಚತಂತ್ರಗಳಿಗೆ ಪ್ರಮುಖಸ್ಥಾನ ಪ್ರಾಪ್ತವಾಗಿದೆ.

Leave a Comment