ಸಂಸ್ಕೃತವು ಅಮರವಾಗಿದೆ!

ಕೆಲವು ಸಾಹಿತಿಗಳು ಮತ್ತು ರಾಜಕಾರಣಿಗಳು ಸಂಸ್ಕೃತವನ್ನು ಹಿಯಾಳಿಸಲು ಅದನ್ನು ಮೂರುವರೆ ಶೇಕಡಾದವರ (ಬ್ರಾಹ್ಮಣರ) ಭಾಷೆ ಎನ್ನುತ್ತಾರೆ. ದೇವವಾಣಿ ಸಂಸ್ಕೃತವು ಮೃತವತ್ ಮತ್ತು ಕಾಲಬಾಹ್ಯವಾಗಿದೆ ಎಂಬ ತಿಳುವಳಿಕೆ ನೀಡಿ ಅದರಲ್ಲಿಯೇ ಆನಂದ ಪಡೆಯುತ್ತಿದ್ದಾರೆ. ಆದರೆ ‘ಪಾಲಿ’ ಮತ್ತು ‘ಅರ್ಧಮಾಗಧೀ’ ಭಾಷೆಗಳು ಸಂಸ್ಕೃತದ ಸಹೋದರ ಮತ್ತು ಬ್ರಾಹ್ಮಣೇತ್ತರ ಸಮಾಜದ ಭಾಷೆಯಾಗಿದ್ದರೂ ಅವು ನಾಶವಾಗಿ ಹೋದವು. ಇದನ್ನು ಮಾತ್ರ ಅವರು ಬೇಕೆಂದೇ ನಿರ್ಲಕ್ಷ್ಯಿಸುತ್ತಾರೆ. ಈ ಸಂಸ್ಕೃತದ್ವೇಷಿಗಳು ಗಮನದಲ್ಲಿಡಬೇಕಾದುದೇನೆಂದರೆ ದೇವವಾಣಿಯ ಧ್ವಜವಿಂದು ಜಾಗತಿಕ ಸ್ತರಕ್ಕೆ ತಲುಪಿದ್ದು ಅದರ ಎಲ್ಲ ಶ್ರೇಯಸ್ಸು ಮೂರುವರೆ ಶೇಕಡಾದವರದ್ದೇ ಆಗಿದೆ. ಯಾರು ಎಷ್ಟು ಮೂಗು ಮುರಿದರೂ ಎಲ್ಲ ಭಾಷೆಗಳ ಜನನಿಯಾಗಿರುವ ಸಂಸ್ಕೃತವು ಪೌರ್ವಾತ್ಯರನ್ನು ಮಾತ್ರವಲ್ಲ, ಪಾಶ್ಚಿಮಾತ್ಯರನ್ನೂ ಆಕರ್ಷಿಸುತ್ತಿದೆ. ಭಾರತದ ಮಾತ್ರವಲ್ಲ, ಜಗತ್ತಿನ ಮೂಲ ಭಾಷೆಯೇ ಸಂಸ್ಕೃತವಾಗಿದೆ ಮತ್ತು ಅದರಿಂದಲೇ ನಿರ್ಮಾಣವಾದ ಇತರ ಎಲ್ಲ ಭಾಷೆಗಳು ಪ್ರಾಕೃತವಾಗಿವೆ. ಸಂಸ್ಕೃತವು ದೇವಭಾಷೆಯಾಗಿರುವುದರಿಂದಲೇ ಅದರಲ್ಲಿ ಅಪಾರ ಚೈತನ್ಯವಿದೆ. ಇದು ಅಮರವಾಗಿದೆ.