ಗೋಪಾಲಕೃಷ್ಣ ಗೋಖಲೆಯ ಸತ್ಯವಂತಿಕೆ

ಗೋಪಾಲಕೃಷ್ಣ ಗೋಖಲೆಯವರು ಪ್ರಸಿದ್ಧ ಸಮಾಜ ಸುಧಾರಕರಾಗಿದ್ದರು. ತಂದೆ ಕೃಷ್ಣರಾವರು ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತುಬದ್ಧ ವ್ಯಕ್ತಿ ಎಂದು ಪ್ರಸಿದ್ದರಾಗಿದ್ದರು. ಮನೆಯ ಪರಿಸ್ಥಿತಿಯಿಂದಾಗಿ ತಮಗೆ ಒಳ್ಳೆಯ ಶಿಕ್ಷಣವನ್ನು ಪಡೆಯಲಾಗಲಿಲ್ಲ ಎಂಬ ದುಃಖವು ಸದಾಕಾಲ ಅವರನ್ನು ಕಾಡುತ್ತಿತು. ಆದುದರಿಂದ ತಮ್ಮ ಇಬ್ಬರೂ ಮಕ್ಕಳು (ಗೋವಿಂದ ಮತ್ತು ಗೋಪಾಲಕೃಷ್ಣ) ಬಹಳ ಓದಬೇಕು ಎಂದು ಬಯಸುತ್ತಿದ್ದರು. ಅವರ ಈ ಇಚ್ಛೆಗನುಸಾರ ಗೋವಿಂದ ಮತ್ತು ಗೋಪಾಲರ ಶಿಕ್ಷಣವು ಪ್ರಾರಂಭವಾಯಿತು.

ಕರವೀರ ಸಂಸ್ಥಾನದಲ್ಲಿ (ಇಂದಿನ ಕೊಲ್ಹಾಪುರ ಜಿಲ್ಲೆ) ಇರುವ ಕಾಗಲ್‌ನಲ್ಲಿ ಕಲಿಯುತ್ತಿರುವಾಗ ಗೋಪಾಲನ ಸತ್ಯ ಪ್ರಿಯತೆಯನ್ನು ತೋರಿಸುವಂತಹ ಒಂದು ಮಹತ್ವಪೂರ್ಣ ಘಟನೆಯು ನಡೆಯಿತು. ಒಮ್ಮೆ ಶಾಲೆಯಲ್ಲಿ ಗಣಿತದ ತರಗತಿಯು ನಡೆಯುತ್ತಿತ್ತು. ಹಿಂದಿನ ದಿನ ಶಿಕ್ಷಕರು ಮಕ್ಕಳಿಗೆ ಮನೆಪಾಠಕ್ಕೆಂದು ಕೆಲವು ಗಣಿತದ ಸಮಸ್ಯೆಗಳನ್ನು ನೀಡಿದ್ದರು. ಗುರುಗಳು ಎಲ್ಲರ ಪುಸ್ತಕಗಳನ್ನ್ನುಪರೀಕ್ಷಿಸಲು ಪ್ರಾರಂಭಿಸಿದರು. ಯಾರೂ ಸರಿಯಾಗಿ ಉತ್ತರವನ್ನು ಬರೆದಿರಲಿಲ್ಲ. ಅವರು ಗೋಪಾಲನ ಬಳಿ ಬಂದರು. ಗೋಪಾಲನು ಗಣಿತದ ಎಲ್ಲ ಸಮಸ್ಯೆಗಳನ್ನು ಸರಿಯಾಗಿ ಬಿಡಿಸಿದ್ದನು. ಅದನ್ನು ನೋಡಿ ಶಿಕ್ಷಕರಿಗೆ ಬಹಳ ಸಂತೋಷ ವಾಯಿತು. ಅವರು ಗೋಪಾಲನಿಗೆ ಶಹಬಾಷ್‌ಗಿರಿಯನ್ನು ನೀಡಿದರು. ಅವನನ್ನು ಮುಂದಿನ ಸಾಲಿನಲ್ಲಿ ಬಂದು ಕುಳಿತುಕೊಳ್ಳುವಂತೆ ಹೇಳಿದರು. ಗುರುಗಳು ತನಗೆ ನೀಡುತ್ತಿರುವ ಸನ್ಮಾನವನ್ನು ನೋಡಿ ಗೋಪಾಲನು ಅಳಲು ಪ್ರಾರಂಭಿಸಿದನು. ಶಿಕ್ಷಕರು ಗೋಪಾಲನ ಬಳಿ ಬಂದು ಏಕೆ ಅಳುತ್ತಿರುವೆ ಎಂದು ಪ್ರಶ್ನಿಸಿದಾಗ ಅವನು, “ಗುರುಗಳೇ ನನ್ನನ್ನು ಕ್ಷಮಿಸಿ, ನಾನು ನಿಮ್ಮ ಬಳಿ ಸುಳ್ಳನ್ನು ಹೇಳಿದ್ದೇನೆ. ಈ ಗಣಿತದ ಸಮಸ್ಯೆಗಳನ್ನು ನಾನು ಬಿಡಿಸಿದ್ದಲ್ಲ. ಆದುದರಿಂದ ನೀವು ನೀಡುತ್ತಿರುವ ಸನ್ಮಾನವು ನನಗೆ ಬೇಡ” ಎಂದು ತಪ್ಪೊಪ್ಪಿಕೊಂಡನು. ಶಿಕ್ಷಕರು ಗೋಪಾಲನ ಸತ್ಯಸಂಧತೆಯನ್ನು ಬಹಳ ಮೆಚ್ಚಿದರು. ಅವರು ಗೋಪಾಲನ ಬೆನ್ನನ್ನು ತಟ್ಟಿ ಸಮಾಧಾನಗೊಳಿಸಿದರು.

ತಂದೆಯ ಮರಣದ ನಂತರ ಗೋಪಾಲನ ಮನೆಯ ಆರ್ಥಿಕ ಪರಿಸ್ಥಿತಿಯು ತೀರಾ ಕೆಟ್ಟು ಹೋಯಿತು. ಆಗ ಗೋವಿಂದನು ತನ್ನ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿ ಕೆಲಸ ಮಾಡಲಾರಂಭಿಸಿದನು ಮತ್ತು ತನ್ನ ಇಷ್ಟಾನಿಷ್ಟಗಳನ್ನೆಲ್ಲ ಬದಿಗಿರಿಸಿ ಕಷ್ಟಪಟ್ಟಾದರೂ ಗೋಪಾಲನಿಗೆ ಶಿಕ್ಷಣ ನೀಡಬೇಕೆಂದು ನಿರ್ಧರಿಸಿದನು. ಗೋಪಾಲನಿಗೆ ಮನೆಯ ಪರಿಸ್ಥಿತಿಯ ಅರಿವಿತ್ತು. ಆದುದರಿಂದ ಅವನು ಅತ್ಯಂತ ಮಿತವ್ಯಯದಿಂದ ಕೊಲ್ಹಾಪುರದಲ್ಲಿ ಒಂದು ಹೊಟೇಲಿನಲ್ಲಿ ಊಟವನ್ನು ಮಾಡುತ್ತಾ ಓದನ್ನು ಮುಂದುವರಿಸುತ್ತಿದ್ದನು. ಅಲ್ಲಿ ಮೊಸರು ಬೇಕಾದರೆ ಒಂದು ಬಟ್ಟಲಿಗೆ ಎಂಟಾಣೆಯನ್ನು ಹೆಚ್ಚು ನೀಡಬೇಕಾಗುತ್ತಿತ್ತು. ಅದಕ್ಕಾಗಿ ಗೋಪಾಲನು ಯಾವತ್ತೂ ಮೊಸರನ್ನು ತೆಗೆದುಕೊಳ್ಳುತ್ತಿರಲಿಲ್ಲ. ಒಂದು ಬಾರಿ ಗೋಪಾಲನಿಗೆ ಮೊಸರು ತಿನ್ನಬೇಕೆಂದು ಬಹಳ ಆಸೆಯಾಯಿತು. ಮೊಸರನ್ನು ತಿಂದನು. ಆದರೆ ಅದಕ್ಕಾಗಿ ಪ್ರತಿ ಶನಿವಾರ ಉಪವಾಸ ಮಾಡಿ ಉಳಿಸಿದ ಹಣದಿಂದ ಆತನು ಮೊಸರನ್ನು ಖರೀದಿಸಿದ್ದನು. ಚಿಮಿಣಿಗಾಗಿ ತಗಲುವ ಎಣ್ಣೆಯನ್ನು ಉಳಿತಾಯ ಮಾಡಬೇಕೆಂದು ಅವನು ನಗರಪಾಲಿಕೆಯ ದೀಪದ ಬೆಳಕಿನಲ್ಲಿ ಅಧ್ಯಯನ ಮಾಡುತ್ತಿದ್ದನು. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಆತನು ತನ್ನ ಶಿಕ್ಷಣವನ್ನು ಮುಂದುವರಿಸಿದನು.

ಸ್ವಾಭಿಮಾನ, ಸತ್ಯಪ್ರಿಯತೆ, ಕಷ್ಟವನ್ನು ಸಹಿಸುವ ಸ್ವಭಾವ ಇತ್ಯಾದಿ ಗುಣಗಳು ಆತನಲ್ಲಿ ಬಾಲ್ಯದಿಂದಲೇ ಮೈಗೂಡಿದ್ದವು. ಈ ಗುಣದಿಂದಲೇ ಮಹಾತ್ಮಾ ಗಾಂಧಿಯವರು ಗೋಖಲೆಯವರನ್ನು ತಮ್ಮ ಗುರುಗಳೆಂದು ಗೌರವಿಸುತ್ತಿದ್ದರು. ಸತ್ಯಕ್ಕಾಗಿ ಸ್ವತಃ ಹೋರಾಡುವುದು, ಸತ್ಯವಂತನಾಗಿರುವುದು ಮತ್ತು ಸತ್ಯವನ್ನೇ ನುಡಿಯಬೇಕೆಂದು ಆಗ್ರಹಿಸುವುದು ಮುಂತಾದ ತತ್ತ್ವಗಳನ್ನು ಗೋಪಾಲಕೃಷ್ಣ ಗೋಖಲೆಯವರು ತಮ್ಮ ನಡೆ ನುಡಿಯಿಂದ ಜಗತ್ತಿಗೆ ಸಾರಿದರು.

ಮಕ್ಕಳೇ, ನಾವು ಕೂಡ ಈ ಸದ್ಗುಣಗಳನ್ನು ನಾಮಜಪದೊಂದಿಗೆ ನಮ್ಮಲ್ಲಿ ಅಳವಡಿಸಿಕೊಂಡು ಸತ್‌ಪರಂಪರೆಯನ್ನು ಪಾಲಿಸುತ್ತಲಿರೋಣ.
– ಸೌ. ಜಯಂತಿ ಢವಳಿಕರ, ಫೋಂಡಾ, ಗೋವಾ

Leave a Comment