ಲಾಲ ಬಹಾದೂರ ಶಾಸ್ತ್ರಿಯವರ ಸರಳ ಜೀವನ-ಪದ್ಧತಿ

ಭಾರತದ 2ನೇ ಪ್ರಧಾನಮಂತ್ರಿಗಳಾದ ಲಾಲಬಹಾದೂರ ಶಾಸ್ತ್ರಿಗಳು ಸರಳತನ (ಸಜ್ಜನಿಕೆ) ಹಾಗೂ ಮಹಾನತೆಯ ಒಂದು ಆದರ್ಶ ಉದಾಹರಣೆಯಾಗಿದ್ದಾರೆ. ಅವರ ಜೀವನದ ಅನೇಕ ಪ್ರಸಂಗಗಳು ನಮಗೆ ಪ್ರೇರಣೆಯನ್ನು ನೀಡುವಂತಹವು. ಅವುಗಳಲ್ಲಿ ಒಂದು ಪ್ರಸಂಗವನ್ನು ನಾವಿಂದು ನೋಡೋಣ. ಇದು ಶಾಸ್ತ್ರಿಗಳು ದೇಶದ ಪ್ರಧಾನಮಂತ್ರಿಗಳಾಗಿದ್ದಾಗಿನ ಪ್ರಸಂಗವಾಗಿದೆ.

ಒಂದು ದಿನ ಶಾಸ್ತ್ರಿಗಳು ಬಟ್ಟೆಗಳ ಮಿಲ್ ನೋಡಲು ಹೋಗಿದ್ದರು. ಅವರೊಂದಿಗೆ ಮಿಲ್‌ನ ಮಾಲಿಕರು ಹಾಗೂ ಕೆಲವು ಅಧಿಕಾರಿಗಳೊಂದಿಗೆ ಇತರ ಕೆಲವರು ಇದ್ದರು. ಮಿಲ್‌ನ್ನು ನೋಡಿದ ನಂತರ ಅವರು ಮಿಲ್‌ನ ಗೋದಾಮಿಗೆ ಹೋದರು. ಅಲ್ಲಿ ಅವರು ಸುಂದರವಾದ ಸೀರೆಗಳನ್ನು ತೋರಿಸಲು ಹೇಳಿದರು. ಮಿಲ್‌ನ ಮಾಲಿಕ ಹಾಗೂ ಅಧಿಕಾರಿಗಳು ಅವರಿಗೆ ಅತ್ಯುತ್ತಮ ಸೀರೆಗಳನ್ನು ತೋರಿಸಿದರು. ಶಾಸ್ತ್ರಿಗಳು ಸೀರೆಗಳನ್ನು ನೋಡಿ ಸೀರೆಗಳು ಬಹಳ ಸುಂದರವಾಗಿವೆ, ಇವುಗಳ ಬೆಲೆ ಏನು ? ಎಂದು ಕೇಳಿದರು.

ಮಿಲ್‌ನ ಮಾಲಿಕನು ಒಂದು ಸೀರೆಯ ಬೆಲೆ 800 ರೂ. ಹಾಗೂ ಇನ್ನೊಂದು ಸೀರೆಯ ಬೆಲೆ 1000 ರೂಪಾಯಿ ಎಂದು ಹೇಳಿದನು. (ಇದು 1964ರ ಮಾತಾಗಿದೆ. ಆ ಸಮಯದಲ್ಲಿ 1000 ರೂಪಾಯಿಗೆ ಬಹಳ ಬೆಲೆಯಿತ್ತು.) ಆಗ ಶಾಸ್ತ್ರಿಗಳು ಇದು ಬಹಳ ದುಬಾರಿಯಾಗಿದೆ. ನನಗೆ ಕಡಿಮೆ ಬೆಲೆಯ ಸೀರೆಗಳನ್ನು ತೋರಿಸಿ ಎಂದು ಹೇಳಿದರು.

ಮಿಲ್‌ನ ಮಾಲಿಕನು ಇನ್ನಷ್ಟು ಸೀರೆಗಳನ್ನು ತೋರಿಸಿದನು. ಒಂದರ ಬೆಲೆಯು 500 ರೂಪಾಯಿ ಇತ್ತು ಹಾಗೂ ಇನ್ನೊಂದರ ಬೆಲೆಯು 400 ರೂಪಾಯಿ ಆಗಿತ್ತು. ಆ ಸೀರೆಗಳನ್ನು ನೋಡಿ ಶಾಸ್ತ್ರಿಗಳು ‘ಅರೆ, ಇವುಗಳು ಬಹಳ ದುಬಾರಿಯಾಗಿವೆ. ನನ್ನಂತಹ ನಿರ್ಧನನಿಗೆ ಕಡಿಮೆ ಬೆಲೆಯ ಸೀರೆಗಳನ್ನು ತೋರಿಸಿ, ನನಗೆ ಅವುಗಳನ್ನು ಕೊಳ್ಳಲು ಸಾಧ್ಯವಾಗಲಿ’ ಎಂದು ಹೇಳಿದರು. ಇದನ್ನು ಕೇಳಿ ಮಿಲ್‌ನ ಮಾಲಿಕನು ‘ಸ್ವಾಮಿ, ನೀವು ನಮ್ಮ ಪ್ರಧಾನ ಮಂತ್ರಿಗಳು. ನೀವು ಹೇಗೆ ನಿರ್ಧನರಾಗಿರಬಹುದು ? ಆದರೂ ನಾವು ನಿಮಗೆ ಈ ಸೀರೆಗಳನ್ನು ಉಡುಗೊರೆಯಾಗಿ ನೀಡಲು ಇಚ್ಛಿಸುತ್ತೇವೆ’ ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ಶಾಸ್ತ್ರಿಗಳು ‘ಇಲ್ಲ, ನಾನು ನಿಮ್ಮಿಂದ ಉಡುಗೊರೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ’. ಆಗ ಮಿಲ್‌ನ ಮಾಲಿಕನು ಅಧಿಕಾರದಿಂದ ‘ನಮ್ಮ ಪ್ರಧಾನಮಂತ್ರಿಗಳಿಗೆ ಉಡುಗೊರೆಯನ್ನು ನೀಡಲು ನಮಗೆ ಅಧಿಕಾರವಿಲ್ಲವೇ? ನಾವು ನಿಮಗೆ ಉಡುಗೊರೆಯನ್ನು ಕೊಡುತ್ತೇವೆ’ ಎಂದು ಹೇಳಿದನು.

ಶಾಸ್ತ್ರಿಗಳು ಅತ್ಯಂತ ಶಾಂತವಾಗಿ ‘ಹೌದು, ನಾನು ಪ್ರಧಾನಮಂತ್ರಿಯಾಗಿದ್ದೇನೆ. ಹಾಗಿದ್ದರೆ ನನಗೆ ಯಾವ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲವೋ, ಅವುಗಳನ್ನು ಉಡುಗೊರೆಯಾಗಿ ಪಡೆಯಲೇ ? ಉಡುಗೊರೆಯಾಗಿ ದೊರೆತ ಈ ಸೀರೆಗಳನ್ನು ನನ್ನ ಹೆಂಡತಿಗೆ ಹೇಗೆ ತಾನೆ ಕೊಡಲಿ ? ಹೌದು ನಾನು ಪ್ರಧಾನಮಂತ್ರಿಯಾಗಿದ್ದರೂ ನಾನು ನಿರ್ಧನನಾಗಿದ್ದೇನೆ ಅಲ್ಲವೇ ? ತಾವು ನನಗೆ ಕಡಿಮೆ ಬೆಲೆಯ ಸೀರೆಗಳನ್ನು ತೋರಿಸಿ. ನನ್ನ ಕ್ಷಮತೆಯಂತೆ ಸೀರೆಯನ್ನು ಖರೀದಿಸುತ್ತೇನೆ’, ಎಂದು ಹೇಳಿದರು. ಮಿಲ್‌ನ ಮಾಲೀಕರು ವಿನಂತಿ ಮಾಡುತ್ತಿದ್ದರು, ಆದರೂ ದೇಶದ ಪ್ರಧಾನಮಂತ್ರಿಗಳು ಕಡಿಮೆ ಬೆಲೆಯ ಸೀರೆಗಳನ್ನು ಖರೀದಿಸಿದರು ಹಾಗೂ ಅವುಗಳನ್ನು ತಮ್ಮ ಹೆಂಡತಿಗೆ ಕೊಟ್ಟರು.

ಲಾಲ ಬಹಾದೂರ ಶಾಸ್ತ್ರಿಗಳು ಇಷ್ಟೊಂದು ಉಚ್ಚ ಪದವಿಯಲ್ಲಿದ್ದರೂ ಅವರಿಗೆ ಯಾವುದೇ ವಸ್ತುವಿನ ಮೋಹವಿರಲಿಲ್ಲ. ಹಾಗೂ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸುತ್ತಿರಲಿಲ್ಲ. ಅವರು ತಾವು ಪ್ರಧಾನಮಂತ್ರಿಯಾಗಿರುವ ಬಗ್ಗೆ ಯಾವತ್ತೂ ಲಾಭಗಳನ್ನು ತೆಗೆದುಕೊಳ್ಳಲಿಲ್ಲ.

ಇದರಿಂದ ನಾವು ಏನು ಕಲಿತೆವು ? ವ್ಯಕ್ತಿಗಳು ದುಬಾರಿ ಬಟ್ಟೆ ಹಾಗೂ ವಸ್ತುಗಳನ್ನು ಉಪಯೋಗಿಸುವುದರಿಂದ ಶ್ರೇಷ್ಠರಾಗುವುದಿಲ್ಲ. ಬದಲಾಗಿ ಅವರ ಉಚ್ಚ ಆಚಾರ-ವಿಚಾರಗಳಿಂದ ಅವರು ಶ್ರೇಷ್ಠರಾಗುತ್ತಾರೆ. ನಾವೂ ಲಾಲಬಹಾದೂರ ಶಾಸ್ತ್ರಿಗಳಂತೆ ನಮ್ಮ ಜೀವನಶೈಲಿಯನ್ನು ಸರಳವಾಗಿಟ್ಟು ಆದರ್ಶ ಆಚರಣೆಗಳಿಂದ ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸೋಣ.

Leave a Comment