೯ ವರ್ಷದ ಜೋರಾವರ ಸಿಂಗ್ ಹಾಗೂ ೭ ವರ್ಷದ ಫತೆಹ ಸಿಂಗ್ ಎಂಬ ಧರ್ಮಯೋಧರು !


ಫತೇಹ ಸಿಂಗ್ ಹಾಗೂ ಜೋರಾವರ ಸಿಂಗ್ ಸಿಖ್ಖರ ೧೦ ನೇ ಗುರುಗಳಾದ ಗುರುಗೋವಿಂದಸಿಂಗ್ ರ ಸುಪುತ್ರರಾಗಿದ್ದರು. ಗುರು ಗೋವಿಂದಸಿಂಗ್ ಮೊಘಲರ ವಿರುದ್ಧ ಘೋಷಿಸಿದ ಸ್ವಾತಂತ್ರ್ಯ ಯುದ್ಧದ ಒಂದು ಯುದ್ಧದಲ್ಲಿ ಫತೇಹಸಿಂಗ್ ಹಾಗೂ ಜೋರಾವರಸಿಂಗ್ ತಂದೆಯಿಂದ ಅಗಲಿದ ನಂತರ ಕ್ರೂರಿಯಾದ ಔರಂಗಜೇಬನ ಸರಹಿಂದನ ಸುಬೇದಾರನಾದ ವಝೀರಖಾನನ ಕೈಗೆ ಸಿಕ್ಕಿಬಿದ್ದರು. ವಝೀರ ಖಾನನು ಅವರಿಗೆ 'ಮುಸಲ್ಮಾನರಾಗಿ ಇಲ್ಲದಿದ್ದರೆ ಕೊಲ್ಲುತ್ತೇನೆ' ಎಂದು ಬೆದರಿಸಿದನು. ಈ ವಾಕ್ಯ ಕೇಳುತ್ತಲೇ ಆ ಮಕ್ಕಳು 'ಪ್ರಾಣ ತೆತ್ತರೂ ಚಿಂತೆಯಿಲ್ಲ, ಆದರೆ ನಾವು ಧರ್ಮವನ್ನು ಬಿಡುವುದಿಲ್ಲ ! ನಮಗೆ ನಮ್ಮ ಧರ್ಮ ಪ್ರಾಣಕ್ಕಿಂತಲೂ ಪ್ರಿಯವಾಗಿದೆ. ನಮ್ಮ ಅಜ್ಜ ಗುರು ತೆಗಬಹಾದುರರು ಧರ್ಮದ ರಕ್ಷಣೆಗಾಗಿಯೇ ಪ್ರಾಣಾರ್ಪಣೆ ಮಾಡದ್ದಾರೆ. ಅವರ ಆದರ್ಶ ನಮ್ಮ ಎದುರಿದೆ' ಎಂದು ಹೇಳಿದರು. ಈ ಖಂಡತುಂಡ ಉತ್ತರದ ಪರಿಣಾಮವು ಏನಾಗಬೇಕಿತ್ತೋ ಅದೇ ಆಯಿತು. ೨೭.೧೨.೧೭೦೪ರಂದು ಈ ಇಬ್ಬರೂ ಸಹೋದರರನ್ನು ಗೋಡೆಯಲ್ಲಿ ಸಮಾಧಿ ಕಟ್ಟಿ ಕೊಲ್ಲಲಾಯಿತು. ಈ ಸಮಯದಲ್ಲಿ ಜೋರಾವರಸಿಂಗ್ ೯ ವರ್ಷ ಹಾಗೂ ಫತೇಹಸಿಂಗ್ ೭ ಪ್ರಾಯದವರಾಗಿದ್ದರು. ಜಗತ್ತಿನ ಯಾವುದೇ ದೇಶದ ಇತಿಹಾಸದಲ್ಲಿ ೯ ಹಾಗೂ ೭ ವರ್ಷದ ಸಿಂಹದ ಮರಿಗಳು ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡಿರುವ ಘಟನೆ ಇಲ್ಲ !

ಮಕ್ಕಳೇ, ನಮ್ಮ ಜನ್ಮವು ಹಿಂದೂ ಧರ್ಮದಲ್ಲಿ ಆಗಿದೆ. ಈ ಧರ್ಮದ ಮೇಲೆ ನಮಗೆ ಪ್ರಾಣಕ್ಕಿಂತಲೂ ಹೆಚ್ಚಿನ ಪ್ರೇಮವಿರಬೇಕು. ನಮಗೆ ಧರ್ಮದ ಮೇಲೆ ಪ್ರೇಮವಿದ್ದಾಗಲೇ ನಾವು ಧರ್ಮಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗುತ್ತೇವೆ !

ಆಧಾರ : ಸನಾತನ ನಿರ್ಮಿತ ಮಕ್ಕಳ ಗ್ರಂಥ 'ಬೋಧಕಥಾ'

Leave a Comment