ರಾಷ್ಟ್ರದ ಸಂಪತ್ತನ್ನು ಮಿತವಾಗಿ ಉಪಯೋಗಿಸುವ ಆಚಾರ್ಯ ಚಾಣಕ್ಯ!

ಮಿತ್ರರೇ, ನಿಮಗೆ ಆಚಾರ್ಯ ಚಾಣಕ್ಯರ ಬಗ್ಗೆ ತಿಳಿದಿದೆಯೇ? ಆಚಾರ್ಯ ಚಾಣಕ್ಯರ ಬಾಲ್ಯದ ಹೆಸರು ವಿಷ್ಣುಗುಪ್ತ ಆಗಿತ್ತು. ಮುಂದೆ ಅವರು ಆಚಾರ್ಯ ಚಾಣಕ್ಯರೆಂದು ಹೆಸರುವಾಸಿಯಾದರು. ಅವರು ವೀರ ಸಾಮ್ರಾಟ ಚಂದ್ರಗುಪ್ತ ಮೌರ್ಯರ ಗುರುವಾಗಿದ್ದರು. ಆಚಾರ್ಯ ಚಾಣಕ್ಯರನ್ನು ಕೌಟಿಲ್ಯ ಹೆಸರಿನಿಂದಲೂ ಗುರುತಿಸಲಾಗುತ್ತದೆ.

ಮಿತ್ರರೇ, ಆಚಾರ್ಯ ಚಾಣಕ್ಯರ ಕಾಲದಲ್ಲಿ ವಿದ್ಯುತ್ ಇರಲಿಲ್ಲ ಅಥವಾ ದೊಡ್ಡ ದೀಪಗಳಿರಲಿಲ್ಲ. ಆ ಸಮಯದಲ್ಲಿ ರಾತ್ರಿ ಬೆಳಕಿಗಾಗಿ ಎಣ್ಣೆಯ ದೀಪವನ್ನು ಉರಿಸಲಾಗುತ್ತಿತ್ತು. ಒಂದು ದಿನ ಸಾಯಂಕಾಲದ ಸಮಯದಲ್ಲಿ ಇಂತಹ ಒಂದು ದೀಪದ ಬೆಳಕಿನಲ್ಲಿ ಆಚಾರ್ಯ ಚಾಣಕ್ಯರು ಒಂದು ಮಹತ್ವಪೂರ್ಣ ಲೇಖನವನ್ನು ಬರೆಯುತ್ತಿದ್ದರು. ಅಲ್ಲಿ ಮತ್ತೊಂದು ದೀಪವನ್ನು ಕೂಡ ಇಡಲಾಗಿತ್ತು; ಆದರೆ ಅದರು ಉರಿಯುತ್ತಿರಲಿಲ್ಲ. ಅದೇ ಸಮಯದಲ್ಲಿ ಆಚಾರ್ಯ ಚಾಣಕ್ಯರನ್ನು ಭೇಟಿಯಾಗಲು ಒಬ್ಬ ಚೀನಿ ಯಾತ್ರಿಕನು ಬಂದನು. ಆಚಾರ್ಯ ಚಾಣಕ್ಯರು ಆ ಯಾತ್ರಿಕನನ್ನು ಸ್ವಾಗತಿಸಿ, ಅವನನ್ನು ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡರು. ಹಾಗೂ ತಮ್ಮ ಮಹತ್ವಪೂರ್ಣ ಲೇಖನದ ಕಾರ್ಯವನ್ನು ಪೂರ್ಣಗೊಳಿಸಿದರು.

ಲೇಖನದ ಕಾರ್ಯ ಪೂರ್ಣಗೊಂಡ ಬಳಿಕ ಆಚಾರ್ಯರು ತಮ್ಮ ಎದುರಿಗೆ ಇದ್ದ ಎರಡು ದೀಪಗಳಲ್ಲಿ ಉರಿಯುತ್ತಿರುವ ದೀಪವನ್ನು ಮೊದಲು ಆರಿಸಿದರು ಹಾಗೂ ಅದರ ಬಳಿಕ ಎರಡನೆಯ ದೀಪವನ್ನು ಉರಿಸಿದರು. ಚೀನಿ ಯಾತ್ರಿಕನಿಗೆ ಬಹಳ ಆಶ್ಚರ್ಯವಾಯಿತು. ಅವನು ಮನಸ್ಸಿನಲ್ಲಿ ಬಹುತೇಕ ಇದು ಭಾರತೀಯ ಪದ್ಧತಿಯಾಗಿರಬೇಕು ಹಾಗೂ ಆಚಾರ್ಯ ಚಾಣಕ್ಯರು ಅದನ್ನು ಪಾಲಿಸುತ್ತಿದ್ದಾರೆ ಎಂದು ವಿಚಾರ ಮಾಡಿದರು. ಚೀನಿ ಯಾತ್ರಿಕನಿಗೆ ಭಾರತದಲ್ಲಿ ಅತಿಥಿಗಳು ಬಂದಾಗ ಜನರು ಹೀಗೆ ಮಾಡುತ್ತಿರಬೇಕು ಎಂದು ಅನಿಸಿತು. ಅವನು ಕುತೂಹಲದಿಂದ ಆಚಾರ್ಯ ಚಾಣಕ್ಯರಿಗೆ ‘ನಿಮ್ಮ ದೇಶದಲ್ಲಿ ಯಾರಾದರೂ ಅತಿಥಿಗಳು ಬಂದಾಗ ಉರಿಯುತ್ತಿರುವ ದೀಪವನ್ನು ಆರಿಸಿ, ಮತ್ತೊಂದು ದೀಪವನ್ನು ಉರಿಸುವ ಯಾವುದಾದರೂ ಪದ್ಧತಿಯಿದೆಯೇ?’ ಎಂದು ಕೇಳಿದನು.

ಅವನ ಮಾತುಗಳನ್ನು ಕೇಳಿ ಆಚಾರ್ಯ ಚಾಣಕ್ಯರು ‘ಅಂತಹದೇನೂ ಇಲ್ಲ. ನಾನು ಈಗ ಯಾವ ದೀಪದ ಬೆಳಕಿನಲ್ಲಿ ಬರೆಯುತ್ತಿದ್ದೆನೋ, ಆ ದೀಪ, ದೀಪದಲ್ಲಿ ತುಂಬಿರುವ ಎಣ್ಣೆ ಹಾಗೂ ನಾನು ಮಾಡುತ್ತಿದ್ದ ಕಾರ್ಯ ಮೂರೂ ನನ್ನ ದೇಶಕ್ಕಾಗಿ ಇತ್ತು. ರಾಷ್ಟ್ರದ ಕಾರ್ಯಕ್ಕಾಗಿ ಆವಶ್ಯಕವಿರುವ ಸಾಮಗ್ರಿ ನನಗೆ ನನ್ನ ರಾಜ್ಯದ ಕೋಶದಿಂದ ದೊರಕುತ್ತದೆ. ಇದರರ್ಥ ಏನೆಂದರೆ ನಾನು ನನ್ನ ರಾಷ್ಟ್ರದ ಕಾರ್ಯವನ್ನು ರಾಷ್ಟ್ರದ ಸಂಪತ್ತಿನಲ್ಲಿ ಮಾಡಿದ್ದೇನೆ. ಈಗ ನಾನು ನಿಮ್ಮೊಂದಿಗೆ ಮಾಡುವ ಚರ್ಚೆಯು ನನ್ನ ರಾಷ್ಟ್ರದ ಕಾರ್ಯವಲ್ಲ. ಅದು ನನ್ನ ವೈಯಕ್ತಿಕ ವಿಷಯ ಹಾಗೂ ಕಾರ್ಯವಾಗಿದೆ. ನನ್ನ ವೈಯಕ್ತಿಕ ಕಾರ್ಯಕ್ಕಾಗಿ ನಾನು ರಾಷ್ಟ್ರದ ಹಣವನ್ನು ಹೇಗೆ ಉಪಯೋಗಿಸಬಹುದು? ನಾನು ಮತ್ತು ನನ್ನಂತಹ ಅನೇಕ ಜನರು ಒಂದು ವೇಳೆ ರಾಷ್ಟ್ರದ ಹಣವನ್ನು ವೈಯಕ್ತಿಕ ಕಾರ್ಯಗಳಲ್ಲಿ ಉಪಯೋಗಿಸತೊಡಗಿದರೆ, ರಾಷ್ಟ್ರದ ಹಣದ ದುರುಪಯೋಗವಾಗುವುದು. ಹಾಗೂ ಇದರಿಂದ ನನ್ನ ರಾಷ್ಟ್ರದ ಹಣದ ಅಪವ್ಯಯವಾಗುವುದು. ವೈಯಕ್ತಿಕ ಚರ್ಚೆಗಾಗಿ ನಾನು ನನ್ನ ರಾಷ್ಟ್ರದ ದೀಪವನ್ನು ಹೇಗೆ ಉಪಯೋಗಸಲಿ? ಅದನ್ನು ಕೇವಲ ರಾಷ್ಟ್ರದ ಕಾರ್ಯಕ್ಕಾಗಿಯೇ ಉಪಯೋಗಿಸಬೇಕು. ಈ ರೀತಿ ನಾನು ರಾಷ್ಟ್ರದ ಸಂಪತ್ತು ಸಾಮಗ್ರಿಗಳನ್ನು ಉಳಿತಾಯ ಮಾಡಿದ್ದೇನೆ. ನಾನು ಈ ಎರಡನೆಯ ದೀಪವನ್ನು ಉರಿಸಲು ಉಪಯೋಗಿಸಿರುವ ಎಣ್ಣೆ ಮತ್ತು ಇತರೆ ಸಾಮಗ್ರಿಗಳು ನನ್ನ ಸ್ವಂತ ಹಣದಿಂದ ತಂದಿದ್ದೇನೆ. ಆದ್ದರಿಂದ ನನ್ನ ವೈಯಕ್ತಿಕ ಕಾರ್ಯಕ್ಕಾಗಿ ಈ ಎರಡನೆಯ ದೀಪವನ್ನು ಉರಿಸಿದ್ದೇನೆ’ ಎಂದು ಹೇಳಿದರು.

ಮಿತ್ರರೇ, ನಮ್ಮ ಆಚಾರ್ಯರ ಉನ್ನತ ವಿಚಾರ ಹಾಗೂ ಅವರ ಕಾರ್ಯವನ್ನು ನೋಡಿ ನಮ್ಮ ಮನಸ್ಸು ಆಶ್ಚರ್ಯಚಕಿತವಾಗುತ್ತದೆ. ಇಷ್ಟು ಉನ್ನತ ವಿಚಾರ ಹಾಗೂ ಇಷ್ಟು ಎತ್ತರಕ್ಕೆ ತಲುಪಿರುವ ವ್ಯಕ್ತಿಗಳ ವ್ಯವಹಾರ ಹಾಗೂ ಆಚರಣೆಯನ್ನು ನಾವು ಸ್ವಲ್ಪಮಟ್ಟಿಗಾದರೂ ಅನುಸರಿಸಲೇ ಬೇಕು. ಹೌದಲ್ಲವೇ? ಸ್ವಲ್ಪ ವಿಚಾರ ಮಾಡಿ, ಅವರ ವರ್ತನೆ, ಆಚಾರ, ಮನಸ್ಸು, ಚಿತ್ತ ಹಾಗೂ ಅಂತಃಕರಣ ಎಷ್ಟು ಶುದ್ಧವಾಗಿರಬಹುದು. ರಾಷ್ಟ್ರದ ಹಣವು ಯಾವುದೇ ರೀತಿಯಲ್ಲಿ ದುರುಪಯೋಗವಾಗಬಾರದು ಎಂದು ಅವರು ಎಷ್ಟು ಗಮನಹರಿಸುತ್ತಿದ್ದರು ಅಲ್ಲವೇ? ನೀವೂ ಕೂಡ ವಿಚಾರ ಮಾಡಿರಿ ಇಂತಹ ಆಚಾರ್ಯರಿಗೆ ಯಾವ ಪದವಿಯನ್ನು ನೀಡಬೇಕು? ಇಷ್ಟು ಉನ್ನತ ವಿಚಾರವನ್ನು ಹೊಂದಿರುವ ಆಚಾರ್ಯರನ್ನು ಏನೆಂದು ಕರೆಯಬೇಕು? ಇವರಿಂದ ಕಲಿತಿರುವ ವಿಚಾರಗಳನ್ನು ಒಂದು ವೇಳೆ ನಾವು ಆಚರಣೆಯಲ್ಲಿ ತಂದರೆ ನಮ್ಮ ಜೀವನ ಖಂಡಿತವಾಗಿಯೂ ಆದರ್ಶವಾಗುವುದು. ಹಾಗಿದ್ದರೆ ನಮ್ಮ ನಡವಳಿಕೆ ಕೂಡ ಇದೇ ರೀತಿ ಆದರ್ಶಗೊಳಿಸೋಣ ಅಲ್ಲವೇ ?

Leave a Comment