ಗುಜರಾತನಲ್ಲಿರುವ ತೀರ್ಥಕ್ಷೇತ್ರಗಳ ಒಂದು ಪಕ್ಷಿನೋಟ


ಗುಜರಾತ ಇದು ಪುರಾತನ ಕಾಲದಿಂದ ದೇವಸ್ಥಾನಗಳಿಗಾಗಿ ಪ್ರಸಿದ್ಧವಾಗಿದೆ. ಗುಜರಾತನಲ್ಲಿ ಪ್ರಾಚೀನ ಮತ್ತು ಆಧುನಿಕ ಕಾಲದ ಭವ್ಯ-ದಿವ್ಯ, ಐಶ್ವರ್ಯಸಂಪನ್ನ, ಸರ್ವಾಂಗಸಂಪನ್ನ ಮತ್ತು ಅಭಿಜಾತ ಶಿಲ್ಪಕೃತಿಗಳಿಂದ ಅಲಂಕೃತವಾದ ದೇವಸ್ಥಾನಗಳು ದೊಡ್ಡ ಪ್ರಮಾಣದಲ್ಲಿ ಇವೆ. ಅದರ ಮಾಹಿತಿಯನ್ನು ನೀಡುತ್ತಿದ್ದೇವೆ.

ಅಕ್ಷರಧಾಮ ದೇವಸ್ಥಾನ
ಅಹಮದಾಬಾದ ನಗರದಿಂದ ೨೫ ಕಿ.ಮೀ. ದೂರದಲ್ಲಿರುವ ಗಾಂಧಿನಗರ ಜಿಲ್ಲೆಯ ೨೩ ಎಕರೆ ಜಾಗದಲ್ಲಿ ಈ ಸ್ಮಾರಕ ದೇವಸ್ಥಾನವಿದೆ. ಈ ದೇವಸ್ಥಾನವು ೧೦೮ ಅಡಿ ಎತ್ತರವಿದ್ದು ೬ ಸಾವಿರ ಟನ್ ಗುಲಾಬಿ ಅಮೃತ ಶಿಲೆಯಿಂದ ಕಟ್ಟಿದ್ದಾರೆ. ಈ ದೇವಸ್ಥಾನದ ಸಂಪೂರ್ಣ ಕಟ್ಟಡವನ್ನು ಹಿಂದೂ ಧರ್ಮದಲ್ಲಿನ ವಾಸ್ತುಶಾಸ್ತ್ರದ ನಿಯಮಕ್ಕನುಸಾರ ಕಟ್ಟಲಾಗಿದೆ. ಈ ದೇವಸ್ಥಾನದಲ್ಲಿ ಹಿಂದೂ ಧರ್ಮದಲ್ಲಿನ ವೇದ, ಪುರಾಣ ಮತ್ತು ಸನಾತನ ಧರ್ಮದ ಇತಿಹಾಸವನ್ನು ಹೇಳುವ ಭವ್ಯ ಪ್ರದರ್ಶನವಿದೆ.

ದ್ವಾರಕಾ ದೇವಸ್ಥಾನ
ಮೊದಲು ಸೌರಾಷ್ಟ್ರದಲ್ಲಿ ಮತ್ತು ಈಗ ಜಾಮನಗರ ಜಿಲ್ಲೆಯಲ್ಲಿರುವ ದ್ವಾರಕಾ ನಗರವೆಂದರೆ ಭಗವಾನ ಶ್ರೀಕೃಷ್ಣನ ರಾಜಧಾನಿ. ಇಲ್ಲಿನ ದ್ವಾರಕಾಧೀಶ ದೇವಸ್ಥಾನವು ಪ್ರಸಿದ್ಧವಾಗಿದೆ. ಈ ದೇವಸ್ಥಾನದ ಗೋಪುರವು ೧೭೦ ಅಡಿ ಎತ್ತರವಿದೆ. ಈ ಪ್ರದೇಶದಲ್ಲಿ ಹಿಂದೂ ರಾಜರು ಕಟ್ಟಿಸಿರುವ ಅನೇಕ ಐತಿಹಾಸಿಕ ದೇವಸ್ಥಾನಗಳಿವೆ. ಅಂತಹ ದೇವಸ್ಥಾನಗಳಲ್ಲಿ ಮೋಕ್ಷಧಾಮವು ಒಂದಾಗಿದೆ. ಆದಿಶಂಕರಾಚಾರ್ಯರು ಈ ಭಾಗದಲ್ಲಿಯೇ ಶಾರದಾ ಪೀಠದ ಸ್ಥಾಪನೆಯನ್ನು ಮಾಡಿದ್ದಾರೆ. ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ದಾರೂಕವನ ಸ್ಥಾನವು ಇಲ್ಲಿದೆ.

ಸೋಮನಾಥ ದೇವಸ್ಥಾನ
ಸೋಮೇಶ್ವರ ಮಹಾದೇವರ ಈ ದೇವಸ್ಥಾನವು ಜುನಾಗಡ ಜಿಲ್ಲೆಯಲ್ಲಿದೆ. ಈ ದೇವಸ್ಥಾನವನ್ನು ಏಳು ಸಲ ಕಟ್ಟಲಾಗಿದೆ. ಸತ್ಯಯುಗದಲ್ಲಿ ಚಂದ್ರದೇವನು ಚಿನ್ನದಿಂದ, ತ್ರೇತಾಯುಗದಲ್ಲಿ ರಾವಣನು ಬೆಳ್ಳಿಯಿಂದ, ದ್ವಾಪಾರಯುಗದಲ್ಲಿ ಶ್ರೀಕೃಷ್ಣನು ಕಟ್ಟಿಗೆಯಿಂದ ಮತ್ತು ಕಲಿಯುಗದಲ್ಲಿ ರಾಜಾ ಭೀಮದೇವನು ಕಲ್ಲಿನಿಂದ ಈ ದೇವಸ್ಥಾನವನ್ನು ಕಟ್ಟಿದ್ದಾನೆ. ಸದ್ಯ ಅಸ್ತಿತ್ವದಲ್ಲಿರುವ ದೇವಸ್ಥಾನವನ್ನು ೧೯೫೦ ರಲ್ಲಿ ಕಟ್ಟಲಾಗಿದೆ.

ಅಂಬಾಜಿ ದೇವಸ್ಥಾನ
ಇಲ್ಲಿ ಆದಿಶಕ್ತಿ ಅಂಬಾದೇವಿಯ ದೇವಸ್ಥಾನವಿದೆ. ಈ ದೇವಸ್ಥಾನವು ೬೪ ಶಕ್ತಿಪೀಠಗಳಲ್ಲಿ ಒಂದಾಗಿದೆ. ಇದರ ಹೊರತಾಗಿ ಕೈರಾ ಜಿಲ್ಲೆಯಲ್ಲಿನ ಡಾಕೋರವು ಶ್ರೀಕೃಷ್ಣಸ್ಥಾನ, ಜುನಾಗಡ ಜಿಲ್ಲೆಯಲ್ಲಿನ ಗಿರನಾರ ಪರ್ವತದ ಮೇಲಿನ ಶ್ರೀ ಅಂಬಾಮಾತೆ, ಗೋರಖನಾಥ, ಔಗಧ, ಗುರು ದತ್ತಾತ್ರೇಯ ಮತ್ತು ಕಾಲಿಕಾದೇವಿಯ ಪ್ರಸಿದ್ಧ ದೇವಸ್ಥಾನಗಳು, ಕಚ್ ಜಿಲ್ಲೆಯಲ್ಲಿನ ಪವಿತ್ರ ನಾರಾಯಣ ಸರೋವರ, ಭಾವನಗರ ಜಿಲ್ಲೆಯಲ್ಲಿನ ಪಾಲಿಟಾನಾದಲ್ಲಿನ ವಿವಿಧ ದೇವಸ್ಥಾನಗಳು ಮತ್ತು ಪವನಗಡದಲ್ಲಿನ ಶಕ್ತಿಸ್ಥಳಗಳೂ ತೀರ್ಥಯಾತ್ರೆಗಾಗಿ ಪ್ರಸಿದ್ಧವಾಗಿವೆ.