ದೇವಸ್ಥಾನದಲ್ಲಿ ದೇವರ ದರ್ಶನವನ್ನು ಪಡೆದುಕೊಳ್ಳುವ ಯೋಗ್ಯ ಪದ್ಧತಿ


 • ದೇವಸ್ಥಾನವನ್ನು ಪ್ರವೇಶಿಸುವ ಮೊದಲು ಕಾಲುಗಳನ್ನು ತೊಳೆದುಕೊಳ್ಳಬೇಕು.
 • ದೇವಸ್ಥಾನದ ಪ್ರಾಂಗಣದಿಂದ (ಆವರಣದಿಂದ) ಕಲಶಕ್ಕೆ ನಮಸ್ಕಾರ ಮಾಡಬೇಕು.
 • ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ಬಲಗೈ ಬೆರಳುಗಳಿಂದ ಮೆಟ್ಟಿಲುಗಳನ್ನು ಸ್ಪರ್ಶಿಸಿ ನಮಸ್ಕಾರ ಮಾಡಬೇಕು.
 • ಘಂಟೆಯನ್ನು ಅತ್ಯಂತ ಮೆಲುಧ್ವನಿಯಲ್ಲಿ ‘ದೇವತೆಯನ್ನು ಜಾಗೃತಗೊಳಿಸುತ್ತಿದ್ದೇವೆ’ ಎಂಬ ಭಾವದಿಂದ ಬಾರಿಸಬೇಕು.
 • ದೇವತೆಯ ಮೂರ್ತಿ ಮತ್ತು ಮೂರ್ತಿಯ ಎದುರಿನಲ್ಲಿರುವ ಆಮೆಯ (ಶಿವನ ದೇವಸ್ಥಾನದಲ್ಲಿ ನಂದಿಯ) ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ, ಮೂರ್ತಿಯ ಬದಿಯಲ್ಲಿ ನಿಂತುಕೊಂಡು ಕೈಗಳನ್ನು ಜೋಡಿಸಿ ನಮ್ರತೆಯಿಂದ ದರ್ಶನವನ್ನು ಪಡೆಯಬೇಕು.
 • ಮೊದಲು ದೇವತೆಯ ಚರಣಗಳಲ್ಲಿ ದೃಷ್ಟಿಯನ್ನು ಇಟ್ಟು ಲೀನರಾಗಬೇಕು, ಅನಂತರ ದೇವತೆಯ ಎದೆಯ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು. ಕೊನೆಗೆ ದೇವತೆಯ ಕಣ್ಣುಗಳತ್ತ ನೋಡಿ ಅವರ ರೂಪವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು.
 • ದೇವತೆಗೆ ಅರ್ಪಿಸುವ ವಸ್ತುಗಳನ್ನು (ಉದಾ. ಹೂವು) ದೇವತೆಯ ಮೈಮೇಲೆ ಎಸೆಯದೇ ಅವರ ಚರಣಗಳಲ್ಲಿ ಅರ್ಪಿಸಬೇಕು. ಮೂರ್ತಿಯು ದೂರದಲ್ಲಿದ್ದರೆ ಆ ವಸ್ತುಗಳನ್ನು ದೇವತೆಯ ಎದುರಿನಲ್ಲಿರುವ ತಟ್ಟೆಯಲ್ಲಿಡಬೇಕು.
 • ಪ್ರದಕ್ಷಿಣೆಗಳನ್ನು ಎರಡೂ ಕೈಗಳನ್ನು ಜೋಡಿಸಿ ಭಾವಪೂರ್ಣವಾಗಿ ನಾಮಜಪ ಮಾಡುತ್ತಾ ಮಧ್ಯಮ ಗತಿಯಲ್ಲಿ ಹಾಕಬೇಕು. ದೇವರಿಗೆ ಸಮ ಸಂಖ್ಯೆಯಲ್ಲಿ (even numbers) ಮತ್ತು ದೇವಿಗೆ ವಿಷಮ ಸಂಖ್ಯೆಯಲ್ಲಿ (odd numbers) ಪ್ರದಕ್ಷಿಣೆಗಳನ್ನು ಹಾಕಬೇಕು.
 • ದೇವಸ್ಥಾನದಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ನಾಮಜಪ ಮಾಡಬೇಕು. ಪ್ರಸಾದವನ್ನು ಆದಷ್ಟು ದೇವಸ್ಥಾನದಲ್ಲಿಯೇ ಕುಳಿತುಕೊಂಡು ಸೇವಿಸಬೇಕು.
 • ಹಿಂದಿರುಗುವಾಗ ದೇವತೆಗೆ ನಮಸ್ಕರಿಸಿ ‘ನಿನ್ನ ಕೃಪಾದೃಷ್ಟಿ ಸದಾಕಾಲ ನನ್ನ ಮೇಲಿರಲಿ’, ಎಂದು ಪ್ರಾರ್ಥನೆ ಮಾಡಬೇಕು.
 • ದೇವಸ್ಥಾನದಿಂದ ಹೊರಬರುವಾಗ ನಮ್ಮ ಬೆನ್ನು ದೇವತೆಯ ಕಡೆಗೆ ಆಗದಂತೆ ಕಾಳಜಿ ವಹಿಸಬೇಕು.
 • ದೇವಸ್ಥಾನದಿಂದ ಹೊರಬಂದ ನಂತರ ಪ್ರಾಂಗಣದಿಂದ (ಆವರಣದಿಂದ) ಮತ್ತೊಮ್ಮೆ ಕಲಶಕ್ಕೆ ನಮಸ್ಕಾರ ಮಾಡಿಯೇ ಹೊರಡಬೇಕು.
 • ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ.
 • ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿರುವಾಗ ಪರಸ್ಪರರೊಂದಿಗೆ ಹರಟೆ ಹೊಡೆಯದೇ ಸತತವಾಗಿ ನಾಮಜಪ ಮತ್ತು ಪ್ರಾರ್ಥನೆ ಮಾಡಿರಿ ಅಥವಾ ಸ್ತೋತ್ರ ಪಠಿಸುತ್ತಿರಿ.
 • ತೆಂಗಿನಕಾಯಿಯ ನೀರು, ಎಣ್ಣೆ, ಬೆಲ್ಲ, ಸಕ್ಕರೆಯಂತಹ ವಸ್ತುಗಳನ್ನು ಗರ್ಭಗುಡಿಯಲ್ಲಿ ಅಥವಾ ಸಭಾಮಂಟಪದಲ್ಲಿ ಸಿಂಪಡಿಸಬೇಡಿರಿ ಮತ್ತು ಸಿಂಪಡಿಸಿದ್ದರೆ ಒರೆಸಿ ತೆಗೆಯಿರಿ.
 • ಬಾಳೆಹಣ್ಣಿನ ಸಿಪ್ಪೆ, ತೆಂಗಿನಕಾಯಿ ಗೆರಟೆ, ಪ್ಲಾಸ್ಟಿಕ್ ಚೀಲ ಮತ್ತು ಆವರಣದೊಳಗೆ ಬಿದ್ದಿರುವ ಇತರ ಕಸಕಡ್ಡಿಗಳನ್ನು ಎತ್ತಿ ಕಸದಬುಟ್ಟಿಯಲ್ಲಿ ಹಾಕಿರಿ ಮತ್ತು ದೇವಸ್ಥಾನದ ಆವರಣವನ್ನು ಸದಾಕಾಲ ಸ್ವಚ್ಛವಾಗಿಡಿರಿ.
 • ದೇವಸ್ಥಾನದ ಆವರಣದಲ್ಲಿ ಪಾದರಕ್ಷೆಗಳನ್ನು ಧರಿಸಬೇಡಿ ಹಾಗೆಯೇ ಈ ವಿಷಯದಲ್ಲಿ ಇತರರಿಗೂ ಪ್ರಬೋಧನೆ ಮಾಡಿರಿ.
 • ದೇವಸ್ಥಾನದ ಆವರಣದಲ್ಲಿ ದೊಡ್ಡ ಸ್ವರದಲ್ಲಿ ಮಾತನಾಡುವುದು, ಚಲನಚಿತ್ರಗೀತೆಗಳನ್ನು ಆಲಿಸುವುದು, ಇಸ್ಪೀಟ್ ಆಡುವುದು ಮುಂತಾದ ಪ್ರವಾಸಕ್ಕೆ ಬಂದಂತೆ ಮಾಡುವ ಕೃತಿಗಳು ಹಾಗೂ ಧೂಮಪಾನ, ಮದ್ಯಪಾನ ಮುಂತಾದ ಅನುಚಿತ ಕೃತ್ಯಗಳನ್ನು ಮಾಡದಿರಿ.

ಈ ನಿಯಮಗಳನ್ನು ಪಾಲಿಸಿ ದೇವರ ಕೃಪೆಗೆ ಪಾತ್ರರಾಗಿ, ದೇವಸ್ಥಾನದ ಪಾವಿತ್ರ್ಯತೆ, ಸಾತ್ತ್ವಿಕತೆಯನ್ನು ಕಾಪಾಡಿ ಮತ್ತು ಹೆಚ್ಚು ಹೆಚ್ಚು ಲಾಭವನ್ನು ಪಡೆಯಿರಿ.